ಒಂದಾನೊಂದು ಊರಿನಲ್ಲಿ ಇಬ್ಬರು ಅಣ್ಣ-ತಮ್ಮಂದಿರಿದ್ದರು. ಅವರಿಬ್ಬರೂ ತಮ್ಮ ತಂದೆಯಿಂದ ಬಂದ ಭೂಮಿಯನ್ನು ಸಮಪಾಲು ಮಾಡಿಕೊಂಡು ಗೇಯ್ಮೆ ಮಾಡುತ್ತಿದ್ದರು. ಅಣ್ಣ ಮದುವೆಯಾಗಿ ಸಂಸಾರ ಹೂಡಿದ. ಅವನಿಗೆ ಆರು ಮಕ್ಕಳಾದರು. ತಮ್ಮ ಸಂಸಾರಿಯಾಗದೆ ಒಬ್ಬನೇ ಉಳಿದ. ಇಬ್ಬರೂ ತಂತಮ್ಮ ಜಮೀನಿನಲ್ಲಿ ಕೆಲಸ ಮಾಡಿಕೊಂಡು ನೆಮ್ಮದಿಯಾಗಿಯೇ ಇದ್ದರು.
ಒಂದು ರಾತ್ರಿ ಮಲಗಿದ್ದಾಗ ತಮ್ಮನಿಗೊಂದು ಯೋಚನೆ ಬಂತು. ʻನಾವಿಬ್ಬರೂ ಅಪ್ಪನಿಂದ ಬಂದ ಭೂಮಿಯನ್ನು ಸಮಪಾಲು ಮಾಡಿಕೊಂಡಿದ್ದೇವೆ. ಆದರೆ ಅಣ್ಣನಿಗೆ ಹೆಂಡತಿ ಮತ್ತು ಆರು ಮಕ್ಕಳಿದ್ದಾರೆ. ಪಾಪ, ಅವನಿಗೆ ಇನ್ನೂ ಹೆಚ್ಚಿನ ಧಾನ್ಯದ ಅಗತ್ಯವಿದೆʼ ಎಂದು ಭಾವಿಸಿದ ಆತ, ರಾತೋರಾತ್ರಿ ತನ್ನ ಉಗ್ರಾಣದಿಂದ ದೊಡ್ಡ ಹೊರೆ ಧಾನ್ಯವನ್ನು ಹೊತ್ತು, ಯಾರಿಗೂ ಗೊತ್ತಾಗದಂತೆ ಅಣ್ಣನ ಉಗ್ರಾಣಕ್ಕೆ ಹಾಕಿ ಬಂದ. ಸಂತೋಷದಿಂದ ಮಲಗಿದ.
ಆ ರಾತ್ರಿ ಅಣ್ಣನಿಗೂ ಮಲಗಿದ್ದಾಗ ಇಂಥದ್ದೇ ಯೋಚನೆ ಬಂತು. ʻಅಪ್ಪನಿಂದ ಬಂದ ಭೂಮಿಯನ್ನು ನಾವಿಬ್ಬರೂ ಸಮಪಾಲು ಮಾಡಿಕೊಂಡಿದ್ದೇವೆ. ಆದರೆ ನನಗೆ ವಯಸ್ಸಾದ ಕಾಲಕ್ಕೆ ನೋಡಿಕೊಳ್ಳುವುದಕ್ಕೆ ಆರು ಮಕ್ಕಳಿದ್ದಾರೆ, ಮೊಮ್ಮಕ್ಕಳೂ ಇರುತ್ತಾರೆ. ಪಾಪ, ತಮ್ಮನಿಗೆ ಯಾರೂ ಇಲ್ಲ. ಈಗಲೇ ಆತ ಒಂದಿಷ್ಟು ಹೆಚ್ಚು ಧಾನ್ಯಗಳನ್ನು ಮಾರಿಕೊಂಡರೆ ಹಣ ಕೂಡಿಟ್ಟುಕೊಳ್ಳಬಹುದು. ಕೈಲಾಗದ ಕಾಲಕ್ಕೆ ಕುಳಿತು ಉಣ್ಣಬಹುದುʼ ಎಂದು ಭಾವಿಸಿದ ಆತ, ರಾತೋರಾತ್ರಿ ತನ್ನ ಉಗ್ರಾಣದಿಂದ ದೊಡ್ಡ ಹೊರೆ ಧಾನ್ಯವನ್ನು ಹೊತ್ತು, ಯಾರಿಗೂ ಗೊತ್ತಾಗದಂತೆ ತಮ್ಮನ ಉಗ್ರಾಣಕ್ಕೆ ಹಾಕಿ ಬಂದ. ಸಂತೋಷದಿಂದ ಮಲಗಿದ.
ಇದನ್ನೂ ಓದಿ: ಮಕ್ಕಳ ಕಥೆ: ಮೊಸಳೆಗೆ ಹೆಂಡತಿ ಹುಡುಕಿದ ನರಿ
ಬೆಳಗ್ಗೆ ಎದ್ದು ಇಬ್ಬರೂ ತಮ್ಮ ಉಗ್ರಾಣಕ್ಕೆ ಹೋಗಿ ನೋಡಿದರೆ, ಅರೆ! ಧಾನ್ಯ ಇದ್ದಷ್ಟೇ ಇದೆ! ಇದು ಹೇಗೆ ಸಾಧ್ಯ ಎಂಬುದು ಇಬ್ಬರಿಗೂ ತಿಳಿಯಲಿಲ್ಲ. ಅಂದಿನ ರಾತ್ರಿ ಇಬ್ಬರೂ ಆ ಕೆಲಸವನ್ನು ಮತ್ತೆ ಮಾಡಲು ನಿರ್ಧರಿಸಿದರು, ಮತ್ತೆ ಮಾಡಿದರು. ಬೆಳಗ್ಗೆ ನೋಡಿದರೆ…! ಇದೇನಾಗುತ್ತಿದೆ ಎಂಬುದೇ ಇಬ್ಬರಿಗೂ ಅರ್ಥವಾಗಲಿಲ್ಲ. ತಾನು ಧಾನ್ಯವನ್ನು ಸಹೋದರನ ಉಗ್ರಾಣಕ್ಕೆ ಹಾಕಿದರೂ, ತನ್ನ ಉಗ್ರಾಣದಲ್ಲಿ ಹೇಗೆ ಮತ್ತು ಯಾಕೆ ಕಡಿಮೆಯಾಗುತ್ತಿಲ್ಲ ಎಂಬುದು ಇಬ್ಬರಿಗೂ ಬಗೆಹರಿಯಲಿಲ್ಲ.
ಇಂದಿನ ರಾತ್ರಿ ಯಾವುದೇ ತಪ್ಪಾಗದಂತೆ ಅದನ್ನು ಪುನರಾವರ್ತಿಸಲು ಇಬ್ಬರೂ ನಿರ್ಧರಿಸಿದ್ದರು. ದೊಡ್ಡ ಗಾಡಿಯೊಂದನ್ನು ತಂದು, ಅದರ ತುಂಬಾ ಧಾನ್ಯವನ್ನು ಹೇರಿಕೊಂಡು, ನಿಧಾನವಾಗಿ ಎಳೆಯುತ್ತಾ ಗಾಡಿಯ ದಾರಿಯಲ್ಲಿ ಇಬ್ಬರೂ ಬರುತ್ತಿರುವಾಗ ಒಬ್ಬರಿಗೊಬ್ಬರು ಎದುರಾದರು. ಫಕ್ಕನೆ ಗುರುತು ಹತ್ತಲಿಲ್ಲ. ಕತ್ತಲೆಯಲ್ಲಿ ಒಂದು ಕ್ಷಣ ಕಣ್ಣರಳಿಸಿ ನೋಡಿದರೆ… ಅರೆ ಇವನು! ಎಂದುಕೊಂಡರು ಇಬ್ಬರೂ. ತಕ್ಷಣವೇ ತಮ್ಮ ಉಗ್ರಾಣದಲ್ಲಿ ಧಾನ್ಯ ಯಾಕೆ ಮತ್ತು ಹೇಗೆ ಕಡಿಮೆಯಾಗುತ್ತಿಲ್ಲ ಎಂಬುದು ಇಬ್ಬರಿಗೂ ಅರ್ಥವಾಯಿತು. ಸಂತೋಷದಿಂದ ಒಬ್ಬರನ್ನೊಬ್ಬರು ಅಪ್ಪಿಕೊಂಡರು.
ಇದನ್ನೂ ಓದಿ: ಮಕ್ಕಳ ಕಥೆ | ಕಾಗದದ ಒಳಗೆ ಬೆಂಕಿ, ಗಾಳಿ, ಸಂಗೀತ ಹಿಡಿದಿಟ್ಟಳಾ ಹುಡುಗಿ!