Site icon Vistara News

ಮಕ್ಕಳ ಕಥೆ: ಚತುರ ನರಿ ಮತ್ತು ಪೆದ್ದ ಹೆಗ್ಗಣ

fox and mouse

ಈ ಕಥೆಯನ್ನು ಇಲ್ಲಿ ಓದಿ:

https://vistaranews.com/wp-content/uploads/2023/03/ChaturaNariPeddaHeggana.mp3

ನರಿಯೊಂದು ಹೊಸದಾಗಿ ಮನೆ ಕಟ್ಟಿಕೊಂಡಿತ್ತು. ಮನೆ ಕಟ್ಟುವುದಕ್ಕಾಗಿ ಪ್ರಶಸ್ತವಾದ ಸ್ಥಳವನ್ನೂ ಅದು ಆರಿಸಿಕೊಂಡಿದ್ದರಿಂದ ಮನೆಯೊಳಗೆ ಗಾಳಿ, ಬೆಳಕು ಎಲ್ಲವೂ ಚೆನ್ನಾಗಿತ್ತು- ನೀರೊಂದು ಹೊರತು ಪಡಿಸಿ. ಹೌದು, ನೀರು ತರುವುದಕ್ಕೆ ಬಿಂದಿಗೆ ಹಿಡಿದು ಅರ್ಧ ಮೈಲು ದೂರ ನಡೆಯಬೇಕಿತ್ತು ನರಿಗೆ. ಹೋಗುವಾಗ ಖಾಲಿ ಬಿಂದಿಗೆ ಹಿಡಿದು ನಡೆದುಬಿಡುವುದು ಕಷ್ಟವಲ್ಲ. ಬರುವಾಗ ತುಂಬಿದ ಬಿಂದಿಗೆ ಹೊತ್ತು ತರಬೇಕಲ್ಲ! ಛೇ… ಈ ನೀರಿನ ಸಮಸ್ಯೆಗೆ ಏನು ಮಾಡುವುದು ಎಂದು ಯೋಚಿಸಿತು ನರಿ. ಅದಕ್ಕೊಂದು ಉಪಾಯ ಹೊಳೆಯಿತು- ಬಾವಿ ತೋಡಿದರಾಯ್ತು!

ಹಾರೆ, ಗುದ್ದಲಿಯಂಥ ಸಲಕರಣೆಗಳನ್ನೆಲ್ಲಾ ತಂದ ನರಿ, ಬಾವಿ ತೋಡುವ ಜಾಗವನ್ನೂ ಗುರುತು ಮಾಡಿಕೊಂಡಿತು. ಬೆಳಗಿನಿಂದ ಸಂಜೆಯವರೆಗೆ ತೋಡಿದರೂ, ಬಾವಿಯಲ್ಲ- ಚಿಕ್ಕದೊಂದು ಹೊಂಡವೂ ಸೃಷ್ಟಿಯಾಗಲಿಲ್ಲ. ಹಠ ಬಿಡದ ನರಿ, ಮಾರನೇ ದಿನ ಮತ್ತದರ ಮಾರನೇ ದಿನವೂ ಬಾವಿ ತೋಡಿತು. ಊಹುಂ, ಒಂದು ನರಿ ಮುಳುಗುವಷ್ಟು ಆಳವನ್ನೂ ತೋಡಲಾಗಲಿಲ್ಲ ಅದಕ್ಕೆ. ʻಈಗೇನಪ್ಪಾ ಮಾಡುವುದು? ಬಾವಿ ತೋಡಲೇ ಆಗುತ್ತಿಲ್ಲ. ಆದರೆ ನೀರಿಗಂತೂ ವ್ಯವಸ್ಥೆಯಾಗಬೇಕು. ದಿನವೂ ಅಷ್ಟು ದೂರದಿಂದ ನೀರು ಹೊತ್ತು ತರಲಾಗದು. ಅಥವಾ ಅದಕ್ಕಾಗಿ ಈ ಮನೆಯನ್ನು ಎತ್ತಿಕೊಂಡು ಹೋಗಿ ನದಿಯ ದಂಡೆಯ ಮೇಲೆ ಇಡುವುದೂ ಅಸಾಧ್ಯವಾದ ಮಾತು. ಏನು ಮಾಡ್ಲಿʼ ಎಂದು ಚಿಂತಿಸುತ್ತಾ ಕುಳಿತಿತ್ತು ನರಿ. ಆಗಲೇ ಅದರ ಕಣ್ಣಿಗೊಂದು ಹೆಗ್ಗಣ ಕಂಡಿತು.

ಏನನ್ನೋ ತುಂಬಾ ಗಡಿಬಿಡಿಯಿಂದ ಆ ಹೆಗ್ಗಣ ಹುಡುಕುತ್ತಿತ್ತು. ಒಮ್ಮೆ ಆಚೆ, ಮತ್ತೆ ಈಚೆ, ಹಿಂದೆ, ಮುಂದೆ- ತಲೆ ಕೆಳಗಾಗಿ ಉರುಳುತ್ತಿತ್ತು. ʻಏನಾಯ್ತು ಹೆಗ್ಗಣ್ಣಾ? ಯಾಕಿಂಗಾಡ್ತಿದ್ದೀಯ? ಏನಾದರೂ ಕಳೆದು ಹೋಯಿತಾ?ʼ ಕೇಳಿತು ನರಿ. ʻಹೌದು ನರಿಯಣ್ಣ. ಅಲ್ಲ, ಬೆಳಗಿನಿಂದ ನನ್ನ ಜೊತೆಗೇ ಇತ್ತಪ್ಪ. ಈಗ ನೋಡಿದರೆ ಇಲ್ಲ! ಎಲ್ಲಿ ಹುಡುಕಿದರೂ ಕಾಣಿಸ್ತಿಲ್ಲʼ ಎಂದು ಮತ್ತೆ ಹುಡುಕತೊಡಗಿತು ಹೆಗ್ಗಣ.

ʻಅದೇನು ಸರಿಯಾಗಿ ಹೇಳಬಾರದೇ ಹೆಗ್ಗಣ್ಣ. ಹುಡುಕೋದಕ್ಕೆ ಬೇಕಿದ್ರೆ ನಾನೂ ಸಹಾಯ ಮಾಡ್ತೀನಿʼ ಎಂದಿತು ನರಿ.

ʻಬೆಳಗಿನಿಂದ ನನ್ನ ಜೊತೆಗೇ ಇದ್ದ ನೆರಳು, ಈಗ ಸ್ವಲ್ಪ ಹೊತ್ತಿನಲ್ಲಿ ಕಳೆದುಹೋಯ್ತು! ಎಲ್ಲಿ ಹುಡುಕಿದರೂ ಸಿಗ್ತಿಲ್ಲ. ಅದಿಲ್ಲದೆ ಮನೆಗೆ ಹೋಗುವುದು ಹೇಗೆ ನರಿಯಣ್ಣಾ? ಬಿಟ್ಟು ಬಂದ್ರೆ ಅಮ್ಮ ಬೈತಾಳೆʼ ಎಂದು ಅಳು ಮುಖ ಮಾಡಿತು ಹೆಗ್ಗಣ. ಅದರ ಮಾತಿಗೆ ಮೊದಲಿಗೆ ನರಿಗೆ ನಗು ಬಂತು. ನಡುಮಧ್ಯಾಹ್ನದ ಹೊತ್ತಿನಲ್ಲಿ ನೆರಳು ಕಾಣುವುದಿಲ್ಲ ಎಂಬುದೂ ಈ ಹೆಗ್ಗಣಕ್ಕೆ ತಿಳಿಯಬಾರದೇ ಎಂದು ಯೋಚಿಸಿತು ನರಿ. ಆದರೆ ಅದರ ಮನದಲ್ಲೊಂದು ಉಪಾಯವೂ ಹೊಳೆಯಿತು.

ಇದನ್ನೂ ಓದಿ: ಮಕ್ಕಳ ಕಥೆ: ವರ್ತಕ ಮತ್ತು ಜಾಣ ಗಿಳಿ

ʻಅಯ್ಯೋ ಹೆಗ್ಗಣ್ಣಾ! ಅದನ್ನ ಅಷ್ಟೆಲ್ಲಾ ಹುಡುಕುತ್ತಾ ಇದ್ದೀಯ? ನೇರ ಬಂದು ನನ್ನನ್ನೇ ಕೇಳಿದ್ರೆ ಹೇಳಿರತಿದ್ದೆ. ನೋಡು, ಅಲ್ಲೊಂದು ಹೊಂಡ ಕಾಣ್ತಿದೆಯಲ್ವಾ? ಅದರ ಒಳಗೆ ಬಿದ್ದೋಗಿದೆ ನಿನ್ನ ನೆರಳು. ಆ ಹೊಂಡ ಪೂರ್ತಿ ಅಗೆದು ಅದನ್ನು ಹೊರಗೆ ತೆಗೀಬೇಕು. ಬೇಕಿದ್ರೆ ನಾನೂ ಸಹಾಯ ಮಾಡ್ತೀನಿ ನಿಂಗೆ. ಬಾʼ ಎನ್ನುತ್ತಾ ತಾನು ಬಾವಿ ತೋಡಲು ಪ್ರಯತ್ನಿಸುತ್ತಿದ್ದ ಹೊಂಡದ ಬಳಿಗೆ ಹೆಗ್ಗಣವನ್ನು ನರಿ ಕರೆದೊಯ್ದಿತು.

ಹಿಂದೆ ಮುಂದೆ ಆಲೋಚನೆ ಮಾಡದ ಹೆಗ್ಗಣ, ನೇರ ಗುಂಡಿಯೊಳಗೆ ಬಿತ್ತು! ಪುರುಸೊತ್ತಿಲ್ಲದಂತೆ ಗುಂಡಿಯನ್ನು ಆಳಕ್ಕೆ ತೋಡತೊಡಗಿತು. ನರಿಯೂ ತನ್ನ ಗುದ್ದಲಿಯೊಂದಿಗೆ ಬಂತು. ಎರಡೂ ಸೇರಿ ತೋಡ್ತಾ ತೋಡ್ತಾ, ಮಧ್ಯಾಹ್ನದಿಂದ ಸಂಜೆಯಾಗುತ್ತಾ ಬಂತು. ಬಾವಿ ಸುಮಾರು ಆಳಕ್ಕೆ ಹೋಗಿತ್ತು.

ʻಹೆಗ್ಗಣ್ಣಾ, ನೀನೀಗ ಈ ಬಾವಿಯ ಮೇಲೆ ಹೋದರೆ ಅಲ್ಲಿ ಸಿಗುತ್ತದೆ ನಿನಗೆ ನೆರಳು. ಬೇಕಿದ್ರೆ ನೀನೇ ನೋಡುʼ ಎನ್ನುತ್ತಾ ಬಾವಿಯ ಮೇಲೆ ಹತ್ತಿತು ನರಿ. ಹೆಗ್ಗಣವೂ ಮೇಲೆ ಬಂತು. ನೋಡಿದರೆ- ಹೌದು! ನೆರಳು ಮತ್ತೆ ತನ್ನ ಪಕ್ಕದಲ್ಲೇ ಇದೆ. ತನ್ನ ನೆರಳು ತನಗೆ ಮರಳಿ ದೊರಕಿದ್ದಕ್ಕೆ ಹೆಗ್ಗಣದ ಸಂತೋಷಕ್ಕೆ ಪಾರವೇ ಇಲ್ಲ. ʻಧನ್ಯವಾದಗಳು ನರಿಯಣ್ಣ. ನಿನ್ನಿಂದಾಗಿ ಇವತ್ತು ನಮ್ಮಮ್ಮನತ್ರ ಒದೆ ತಿನ್ನೋದು ಉಳೀತುʼ ಎನ್ನುತ್ತಾ ಖುಷಿಯಿಂದ ಮನೆಗೆ ತೆರಳಿತು ಹೆಗ್ಗಣ.

ಮಾರನೇ ದಿನಕ್ಕೆ ನರಿ ತಾನೊಬ್ಬನೇ ಬಾವಿಯನ್ನು ಇನ್ನಷ್ಟು ಆಳಕ್ಕೆ ತೋಡುವಷ್ಟರಲ್ಲಿ ನೀರು ಬಂತು. ನೀರಿಗಾಗಿ ದೂರ ಹೋಗುವುದು ತಪ್ಪಿದ್ದಕ್ಕೆ ನೆಮ್ಮದಿಯಿಂದ ನರಿ ತನ್ನ ಮನೆಯಲ್ಲಿ ವಾಸಮಾಡತೊಡಗಿತು.

ಇದನ್ನೂ ಓದಿ: ಮಕ್ಕಳ ಕಥೆ: ಧೈರ್ಯವಂತ ರಾಜಕುಮಾರಿ

Exit mobile version