Site icon Vistara News

ಮಕ್ಕಳ ಕಥೆ: ಬೀರಬಲ್ಲನ ಕಥೆ: ನಿಜವಾದ ರಾಜ ಯಾರು?

birbal story

ಚಕ್ರವರ್ತಿ ಅಕ್ಬರನ ಜಾಣ ಮಂತ್ರಿಯಾದ ಬೀರಬಲ್ಲನ ಕಥೆಯಿದು. ಯಾವುದೋ ರಾಜಕಾರಣದ ಮೇಲೆ ಪಕ್ಕದ ರಾಜ್ಯದ ರಾಜನನ್ನು ಭೇಟಿ ಮಾಡುವುದಕ್ಕೆ ಬೀರಬಲ್ಲನನ್ನು ಅಕ್ಬರ್ ಕಳುಹಿಸಿದ್ದ. ಆ ರಾಜ್ಯದಲ್ಲೂ ಬೀರಬಲ್ಲನ ಬುದ್ಧಿವಂತಿಕೆಯ ಬಗ್ಗೆ ಮಾತುಗಳು ಹರಡಿದ್ದವು. ತಮ್ಮ ರಾಜ್ಯಕ್ಕೆ ಬರುವ ಆತನನ್ನು ನೋಡಬೇಕು ಎಂಬ ಆಸೆಯಿಂದ, ಆ ರಾಜ್ಯದ ಹಲವೆಡೆಗಳಿಂದ ಜನರು ರಾಜಧಾನಿಯತ್ತ ಬರಲು ಆರಂಭಿಸಿದ್ದರು. ತನ್ನ ರಾಜ್ಯದಲ್ಲೂ ಬೀರಬಲ್ಲನ ಜನಪ್ರಿಯತೆಯನ್ನು ಕಂಡು ನೆರೆಯ ರಾಜನಿಗೆ ಅಸೂಯೆಯಾಯಿತು. ʻಅಬ್ಬ! ರಾಜ್ಯ ನನ್ನದು, ಪ್ರಜೆಗಳು ನನ್ನವರು, ಆದರೆ ನನಗಿಂತ ಇವನ ಜನಪ್ರಿಯತೆಯೇ ದೊಡ್ಡದು. ಹೇಗಾದರೂ ಮಾಡಿ ಈ ಬೀರಬಲ್ಲನಿಗಿಂತ ನಾನೇ ಜಾಣನೆಂದು ಜನರೆದುರು ಸಾಬೀತು ಪಡಿಸಬೇಕುʼ ಎಂದು ಯೋಚಿಸಿದ ನೆರೆಯ ರಾಜ. ʼ

ಆತನ ಆಸ್ಥಾನಕ್ಕೆ ಬೀರಬಲ್ಲ ಬರುವ ದಿನ, ಇಡೀ ಸಭೆಯನ್ನು ಸುಂದರವಾಗಿ ಸಜ್ಜುಗೊಳಿಸಲಾಗಿತ್ತು. ಸಭೆಯೊಳಗೆ ಬಂದ ಬೀರಬಲ್ಲ ಒಂದು ಕ್ಷಣ ಕಕ್ಕಾಬಿಕ್ಕಿಯಾದ. ರಾಜನ ಸಭೆಯಲ್ಲಿ ಒಂದೇ ರೀತಿಯ ಎಂಟು ಮಂದಿ ಸಾಲಾಗಿ ಕುಳಿತಿದ್ದರು. ಎಲ್ಲರೂ ರಾಜನಂತೆಯೇ ಪೊಷಾಕು ಹಾಕಿಕೊಂಡಿದ್ದರು. ಅಷ್ಟೇ ದಪ್ಪ-ಎತ್ತರ-ಬಣ್ಣದಲ್ಲಿದ್ದರು. ಇವರಲ್ಲಿ ನಿಜವಾದ ರಾಜ ಯಾರು, ತಾನೀಗ ಯಾರಿಗೆ ವಂದಿಸಬೇಕು ಎಂಬುದೇ ತಿಳಿಯಲಿಲ್ಲ ಬೀರಬಲ್ಲನಿಗೆ. ನೆರೆ ರಾಜ್ಯದ ಅರಸನನ್ನು ಬೀರಬಲ್ಲ ಈವರೆಗೆ ನೋಡಿಯೇ ಇರಲಿಲ್ಲ. ತನ್ನನ್ನು ಪರೀಕ್ಷೆ ಮಾಡುವುದಕ್ಕೆಂದೇ ಈ ಕೆಲಸವನ್ನು ಮಾಡಲಾಗಿದೆ ಎಂಬುದು ಆತನಿಗೆ ತಿಳಿಯಿತು. ಆ ರಾಜ್ಯದ ಪ್ರಜೆಗಳಿಗೂ ಗೊಂದಲ ಆಗುವಂತಿತ್ತು ಈ ದೃಶ್ಯ.

ಇದನ್ನೂ ಓದಿ: ಮಕ್ಕಳ ಕಥೆ | ಇದು ಬುದ್ಧ ಹೇಳಿದ್ದು; ನಾವು ಕೊಟ್ಟಿದ್ದು ಯಾರಿಗೆ ಸಲ್ಲುತ್ತದೆ?

ಈಗ ಈ ಪರೀಕ್ಷೆಯನ್ನು ಎದುರಿಸಲು ಬೀರಬಲ್ಲ ಸಜ್ಜಾದ. ನೋಡಿದರೆ ಎಲ್ಲರೂ ಒಂದೇ ರೀತಿಯಲ್ಲಿದ್ದಾರೆ… ಅದೂ, ಬರೋಬ್ಬರಿ ಎಂಟು ಮಂದಿ! ಎಲ್ಲರನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಬಂದ ಬೀರಬಲ್ಲ. ಕೆಲವರು ಆತನೊಂದಿಗೆ ದೃಷ್ಟಿ ಸೇರಿಸಲಿಲ್ಲ. ಅಂದರೆ ಒಂದೋ ಆಚೀಚೆ ನೋಡಿದರು ಅಥವಾ ದೃಷ್ಟಿ ತಗ್ಗಿಸಿದರು. ಇನ್ನು ಕೆಲವರು ಪೇಲವ ನಗೆ ಬೀರಿದರು. ಒಬ್ಬಾತ ಮಾತ್ರ ದೃಢ ನಗುವಿನೊಂದಿಗೆ ಖಚಿತವಾಗಿ ದೃಷ್ಟಿ ಕೂಡಿಸಿದ್ದ. ನೇರ ಆತನ ಎದುರು ನಿಂತ ಬೀರಬಲ್ಲ, ʻಬಾದ್ಷಾ ಅಕ್ಬರ್ ಅವರ ಪ್ರತಿನಿಧಿಯಾಗಿ ದೆಹೆಲಿಯಿಂದ ಬಂದಿರುವ ನಾನು, ಬೀರಬಲ್ಲ, ನಿಮಗೆ ವಂದಿಸುತ್ತಿದ್ದೇನೆ ಮಹಾಪ್ರಭೂʼ ಎಂದು ಕೈ ಮುಗಿದ. ಧಡಕ್ಕನೇ ಕುರ್ಚಿಯಿಂದ ಎದ್ದ ಆ ವ್ಯಕ್ತಿ, ʻಶಹಬ್ಬಾಸ್!ʼ ಎಂದು ಖುಷಿಯಿಂದ ಬೀರಬಲ್ಲನನ್ನು ಆಲಂಗಿಸಿಕೊಂಡು, ಕುಳಿತುಕೊಳ್ಳಲು ಆಸನ ತೋರಿದ. ನಿಜಕ್ಕೂ ಆತನೇ ನೆರೆಯ ರಾಜ್ಯದ ರಾಜನಾಗಿದ್ದ!

ಬೀರಬಲ್ಲ ದೆಹೆಲಿಯಿಂದ ಬಂದಿದ್ದ ಕೆಲಸ ಪೂರ್ಣಗೊಂಡಿತ್ತು. ಆತ ದೆಹಲಿಗೆ ಮರಳುವ ಹಿಂದಿನ ದಿನ, ವಿಶೇಷ ಔತಣವನ್ನು ರಾಜ ಏರ್ಪಡಿಸಿದ್ದ. ಈ ಸಂದರ್ಭದಲ್ಲಿ ಆತ ಬೀರಬಲ್ಲನೊಂದಿಗೆ ಕೇಳಿದ- ʻಮಂತ್ರಿಗಳೇ, ನಿಮ್ಮ ಚಾಣಾಕ್ಷತನದ ಬಗ್ಗೆ ನಾವು ಬಹಳ ಕೇಳಿದ್ದೆವು. ಆದರೆ ನೋಡಿರಲಿಲ್ಲ. ಆ ದಿನ ನನ್ನನ್ನು ಹೇಗೆ ಪತ್ತೆ ಮಾಡಿದಿರಿ ನೀವು?ʼ ಎಂದು ಕೇಳಿದ ರಾಜ.

ʻಮಹಾರಾಜ, ಮೋಡ ಎಷ್ಟೇ ಮುಸುಕಿದ್ದರೂ ಸೂರ್ಯನ ಪ್ರಭೆಯನ್ನು ಬಚ್ಚಿಡುವುದಕ್ಕೆ ಹೇಗೆ ಸಾಧ್ಯ? ಹಾಗೆಯೇ ಕಲ್ಲುಗಳ ನಡುವಿನಿಂದ ರತ್ನವನ್ನು ಹೆಕ್ಕುವುದು ಕಷ್ಟವಲ್ಲ. ತಮ್ಮ ಮುಖದ ತೇಜಸ್ಸೇ ಹಾಗಿತ್ತುʼ ಎಂದು ಹೇಳಿದ ಬೀರಬಲ್ಲ. ಅವನ ಮಾತಿನ ಜಾಣತನಕ್ಕೆ ತಲೆದೂಗಿದ ರಾಜ, ತನ್ನ ಹಳೆಯ ಅಸೂಯೆಯನ್ನು ಬಿಟ್ಟು ಮುಕ್ತ ಮನದಿಂದ ಬೀರಬಲ್ಲನನ್ನು ಹೊಗಳಿದ.

ಇದನ್ನೂ ಓದಿ: ಮಕ್ಕಳ ಕಥೆ | ಏಳು ಬೀಳು ಕಂಡ ವರ್ತಕ

Exit mobile version