ಈ ಕಥೆಯನ್ನು ಇಲ್ಲಿ ಕೇಳಿ:
ಇಲ್ಲಿನ ಪರ್ವತದ ತಪ್ಪಲೊಂದರಲ್ಲಿ ಕಿನ್ನರಿಯೊಬ್ಬಳು ವಾಸಿಸುತ್ತಿದ್ದಳು. ಚಂದದ ತೊರೆಯ ಪಕ್ಕದಲ್ಲಿ ಸುಂದರ ಅರಮನೆಯೊಂದನ್ನು ಕಟ್ಟಿಕೊಂಡಿದ್ದ ಆಕೆ, ದೊಡ್ಡದೊಂದು ಕುರಿಯ ಹಿಂಡನ್ನು ಹೊಂದಿದ್ದಳು. ಆ ಕುರಿಗಳು ಗಾತ್ರದಲ್ಲಿ ಸಾಕಷ್ಟು ದೊಡ್ಡದಾಗಿದ್ದವು. ಮಾತ್ರವಲ್ಲ, ಕೆಲವೊಂದು ಅತಿ ದೊಡ್ಡ ಗಾತ್ರದ ಟಗರುಗಳೂ ಆಕೆಯ ಬಳಿಯಿದ್ದವು. ಆಕೆ ತನ್ನ ಪುಟ್ಟ ಗಾಡಿಯಲ್ಲಿ ಎಲ್ಲಿಗೇ ಹೋಗಬೇಕಾದರೂ ಈ ಟಗರು ಇಲ್ಲವೇ ಕುರಿಗಳೇ ಕುದುರೆಯ ಕೆಲಸವನ್ನೂ ಮಾಡುತ್ತಿದ್ದವು. ಈ ಎಲ್ಲಾ ಕುರಿಗಳ ವಿಶೇಷತೆ ಎಂದರೆ ಅವಲ್ಲವಕ್ಕೂ ಬಂಗಾರ ಬಣ್ಣದ ತುಪ್ಪಳವಿತ್ತು. ಮಿರಿಮಿರಿ ಮಿಂಚುವ ಈ ತುಪ್ಪಳಗಳು ರೇಷ್ಮೆಯಂತೆ ನಯವಾಗಿಯೂ ಇದ್ದವು.
ಒಮ್ಮೆ ಎಂದಿನ ಹಾಗೆ ಕಿನ್ನರಿ ತನ್ನ ಗಾಡಿಯಲ್ಲಿ ವಿಹಾರಕ್ಕಂತ ಹೊರಟಿದ್ದಳು. ಎರಡು ಬಂಗಾರ ಬಣ್ಣದ ಕುರಿಗಳು ಆಕೆಯ ಗಾಡಿಯನ್ನು ಎಳೀತಾ ಇದ್ದವು. ಇದ್ದಕ್ಕಿದ್ದಂತೆ ಜೋರಾದ ಗಾಳಿ ಅದೆಲ್ಲಿಂದಲೋ ಬೀಸಲು ಆರಂಭಿಸಿತು. ಆ ಗಾಳಿಯ ರಭಸಕ್ಕೆ ಕುರಿಗಳು ತಮ್ಮನ್ನು ಬಿಗಿದಿದ್ದ ಗಾಡಿಯಿಂದ ತಪ್ಪಿಸಿಕೊಂಡುಬಿಟ್ಟವು. ಗಾಳಿಯ ಅಬ್ಬರವೆಲ್ಲ ಮುಗಿಯುವಷ್ಟರಲ್ಲಿ ಈ ಕುರಿಗಳು ಅಲ್ಲೇ ಸಮೀಪದಲ್ಲಿದ್ದ ಹೊಲವೊಂದಕ್ಕೆ ಬಂದಿದ್ದವು. ಆ ಹೊಲದಲ್ಲಿ ಇಬ್ಬರು ಅಣ್ಣ-ತಮ್ಮ ಕೆಲಸ ಮಾಡುತ್ತಿದ್ದರು. ಬಂಗಾರ ಬಣ್ಣದಿಂದ ಮಿರಿಮಿರಿ ಮಿಂಚುವ ಕುರಿಗಳನ್ನು ಕಂಡು ಮೋಜಿಗಾಗಿ ಅವುಗಳನ್ನು ಹಿಡಿದರು. ನಯವಾದ ಅವುಗಳ ತುಪ್ಪಳದ ಚಂದಕ್ಕೆ ಇಬ್ಬರೂ ಮಾರು ಹೋಗಿದ್ದರು. ಆದರೆ ಇವುಗಳ ಒಡೆಯರು ಯಾರೇ ಇದ್ದರೂ, ಹುಡುಕಿಕೊಂಡು ಬರುವುದಂತೂ ಖಚಿತ ಎಂದು ಮಾತಾಡಿಕೊಳ್ಳುತ್ತಿದ್ದಂತೆಯೇ, ಹೊಲಕ್ಕೆ ಕಿನ್ನರಿ ಆಗಮಿಸಿದಳು.
ʻನನ್ನ ಕುರಿಗಳು ಸುರಕ್ಷಿತವಾಗಿರುವುದನ್ನು ಕಂಡು ಬಹಳ ಸಂತೋಷವಾಯ್ತು. ನೀವು ಹಿಡಿದುಕೊಂಡಿರುವ ಕುರಿಗಳನ್ನು ನೀವೇ ಇರಿಸಿಕೊಳ್ಳಬಹುದು. ಆದರೆ ಒಂದು ಶರತ್ತು. ಎಂದಾದರೂ ನಿಮ್ಮ ಕುರಿಗಳು ನಿಮ್ಮಿಂದ ತಪ್ಪಿಸಿಕೊಂಡರೆ, ಅವು ಮರಳಿ ನನ್ನಲ್ಲಿಗೇ ಬರುತ್ತವೆ. ಆಗ ನೀವು ಬಂದು ನಿಮ್ಮ ಕುರಿಯನ್ನು ಸರಿಯಾಗಿ ಗುರುತಿಸಿದರೆ ಮಾತ್ರ ಮರಳಿ ತೆಗೆದುಕೊಳ್ಳಬಹುದು. ಇಲ್ಲದಿದ್ದರೆ ನೀವದನ್ನು ಕಳೆದುಕೊಂಡಂತೆʼ ಎಂದ ಕಿನ್ನರಿ ಹೊರಟುಹೋದಳು.
ಇದನ್ನೂ ಓದಿ: ಮಕ್ಕಳ ಕಥೆ: ಸೌಂದರ್ಯ ಎಂದರೇನು?
ಅಣ್ಣ-ತಮ್ಮನಿಗೆ ತಮ್ಮ ಅದೃಷ್ಟವನ್ನು ನಂಬಲೇ ಆಗಲಿಲ್ಲ. ಈ ದೊಡ್ಡ ಕುರಿಗಳ ಅದ್ಭುತವಾದ ತುಪ್ಪಳವನ್ನು ಮಾರಿದರೆ ಸಿಗುವ ಹಣವೆಷ್ಟು ಎಂಬುದು ಅವರಿಗೆ ಅಂದಾಜಿಸಲೂ ಆಗುತ್ತಿರಲಿಲ್ಲ. ತಂತಮ್ಮ ಕುರಿಯೊಂದಿಗೆ ಮನೆಗೆ ಮರಳಿದರು. ಯಾವುದೇ ಕಾಲಕ್ಕೂ ಈ ಕುರಿಯನ್ನು ಕಳೆದುಕೊಳ್ಳಬಾರದು ಎಂದು ಇಬ್ಬರೂ ತೀರ್ಮಾನಿಸಿದ್ದರು. ಅಣ್ಣ ತನ್ನ ಕುರಿಯ ಕಿವಿಗಳಿಗೆ ಬಣ್ಣದ ಗುರುತು ಮಾಡಿ, ಒಂದೊಮ್ಮೆ ಇದು ತಪ್ಪಿಸಿಕೊಂಡರೆ ಗುರುತಿಸಲು ಸುಲಭ ಎಂದು ಲೆಕ್ಕ ಹಾಕಿದ. ಮಾತ್ರವಲ್ಲ ಅದನ್ನು ಎರಡು ಹಗ್ಗಗಳಿಂದ ಬಂಧಿಸಿ, ಇಬ್ಬರನ್ನು ಅದರ ಕಾವಲಿಗೆಂದೇ ಇರಿಸಿದ. ಇದರ ಅಪೂರ್ವವಾದ ತುಪ್ಪಳವನ್ನು ಮಾರಿದರೆ ದೊರೆಯಬಹುದಾದ ಹಣವೆಷ್ಟು ಎಂಬುದನ್ನು ಆತ ಲೆಕ್ಕ ಹಾಕುತ್ತಿದ್ದ. ಹೊಲದ ಕೆಲಸದ ಬಗ್ಗೆ ಆಸಕ್ತಿ ಕಳೆದುಕೊಂಡ.
ಇತ್ತ ತಮ್ಮ ಆ ಕುರಿಯನ್ನು ಕಾಯುವುದಕ್ಕೆ ತಾನೇ ಮುಂದಾದ. ತಾನು ಹೋದಲ್ಲೆಲ್ಲಾ ಅದನ್ನು ಹಗ್ಗ ಹಾಕಿ ಕರೆದೊಯ್ಯುತ್ತಿದ್ದ . ತಾನೇ ಮೇಯಿಸುತ್ತಿದ್ದ, ಅದರ ಮೈ ತೊಳೆಯುತ್ತಿದ್ದ, ಮೇವು ಹಾಕುತ್ತಿದ್ದ, ಅದರೊಂದಿಗೆ ಪ್ರತಿ ದಿನ ತಾಸುಗಟ್ಟಲೆ ಮಾತಾಡುತ್ತಿದ್ದ. ಮೊದಲಿಗೆ ಆತನಿಂದ ದೂರವೇ ಇರುತ್ತಿದ್ದ ಕುರಿ, ಕ್ರಮೇಣ ಅವನಿಗೆ ಒಗ್ಗಿಕೊಳ್ಳತೊಡಗಿತು. ಯಾವುದೇ ಹಗ್ಗವಿಲ್ಲದಿದ್ದರೂ, ಆತ ಕರೆದಲ್ಲಿಗೆ ಹೋಗತೊಡಗಿತು. ಅವನೆಲ್ಲಾದರೂ ದಣಿವಾರಿಸಿಕೊಳ್ಳಲು ಕೂತರೆ ಮಧುರವಾಗಿ ಹಾಡುತ್ತಿದ್ದ. ಆಗ ಅವನ ಬೆನ್ನಿಗೆ ಅಂಟಿಕೊಂಡೇ ತಾನೂ ಕುಳಿತುಕೊಳ್ಳುತ್ತಿತ್ತು ಕುರಿ. ಆತ ಹೊಲದಲ್ಲಿ ದುಡಿಯುವಾಗ ಅವನ ಜೊತೆಯಲ್ಲೇ ತಾನೂ ಇರುತ್ತಿತ್ತು, ತೊರೆಯಲ್ಲಿ ನೀರು ಕುಡಿಯಲು ಹೋದರೆ, ಅವನೊಂದಿಗೆ ಚಿನ್ನಾಟವಾಡುತ್ತಿತ್ತು.
ಇದನ್ನೂ ಓದಿ: ಮಕ್ಕಳ ಕಥೆ: ಸಿಟ್ಟಿನ ಕೈಗೆ ಬುದ್ಧಿ ಕೊಟ್ಟರೇನಾಗುತ್ತದೆ?
ಕುರಿಗಳ ತುಪ್ಪಳಗಳು ಚೆನ್ನಾಗಿ ಬೆಳೆದಿದ್ದವು. ಅಣ್ಣ-ತಮ್ಮ ಇಬ್ಬರೂ ತಂತಮ್ಮ ಕುರಿ ತುಪ್ಪಳ ತೆಗೆದರು. ಅಣ್ಣ ಮರುದಿನವೇ ತುಪ್ಪಳವನ್ನು ಮಾರಾಟ ಮಾಡಿದ. ಹತ್ತು ವರ್ಷ ಹೊಲದಲ್ಲಿ ದುಡಿದರೂ ದೊರೆಯದಷ್ಟು ಬೆಲೆ ಕುರಿಯ ರೇಷ್ಮೆಯಂಥ ಬಂಗಾರ ವರ್ಣದ ತುಪ್ಪಳಕ್ಕೆ ದೊರೆಯಿತು. ತಮ್ಮ ಆ ತುಪ್ಪಳದಿಂದ ನೂಲು ತೆಗೆದು, ನೂಲನ್ನು ಮಾರಾಟ ಮಾಡಿದ. ಅಣ್ಣನಿಗಿಂತಲೂ ಹೆಚ್ಚಿನ ಹಣ ತಮ್ಮನಿಗೆ ದೊರೆಯಿತು. ಇಬ್ಬರೂ ತಂತಮ್ಮ ಮನೆಗಳನ್ನು ದೊಡ್ಡದಾಗಿ ಕಟ್ಟಿಸಿಕೊಂಡರು. ತಮಗೆ ಮತ್ತು ತಮ್ಮ ಸಂಸಾರಕ್ಕೆಲ್ಲ ಒಳ್ಳೆಯ ವಸ್ತ್ರಗಳನ್ನು ಖರೀದಿಸಿದರು. ಬದುಕು ಸಮೃದ್ಧವಾಯಿತು. ಮುಂದಿನ ನಾಲ್ಕಾರು ವರ್ಷಗಳಲ್ಲಿ ಇಬ್ಬರೂ ಸುತ್ತಲಿನ ಹತ್ತೂರುಗಳಲ್ಲೇ ಶ್ರೀಮಂತರು ಎನಿಸಿದರು. ಅಣ್ಣ ಹೊಲದಲ್ಲಿ ದುಡಿಯುವುದನ್ನು ಮರೆತಿದ್ದ. ಕುರಿಯ ಕಾವಲಿಗೆ ಇನ್ನೂ ಇಬ್ಬರನ್ನು ಇರಿಸಿದ್ದ. ತಮ್ಮ ಮಾತ್ರ ಇನ್ನೂ ಹೊಲದ ಕೆಲಸ ಮಾಡುತ್ತಿದ್ದ, ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದ. ಕುರಿಯನ್ನು ತಾನೇ ಪ್ರೀತಿಯಿಂದ ಮೇಯಿಸುತ್ತಿದ್ದ, ಹಾಡುತ್ತಾ ಅದರ ಮೈ ತೊಳೆಯುತ್ತಿದ್ದ. ಆದರೆ ಕಾಲ ಹೀಗೆಯೇ ಇರುವುದಿಲ್ಲವಲ್ಲ.
ಮುಂದೇನಾಯ್ತು… ನಿರೀಕ್ಷಿಸಿ!