ಈ ಕಥೆಯನ್ನು ಇಲ್ಲಿ ಕೇಳಿ:
ಹಲವಾರು ವರ್ಷಗಳ ಹಿಂದಿನ ಕಥೆಯಿದು. ನಾರ್ವೆ ದೇಶದ ಪರ್ವತದ ತಪ್ಪಲಿನಲ್ಲಿ ಒಂದೂರು. ಊರಂಚಿನ ಮನೆಯಲ್ಲಿ ಗಂಡ-ಹೆಂಡತಿ ತಮ್ಮ ಪುಟ್ಟ ಮಗುವಿನೊಂದಿಗೆ ವಾಸಿಸುತ್ತಿದ್ದರು. ಕೃಷಿ ಕೆಲಸವೇ ಅವರ ಕಸುಬಾಗಿತ್ತು. ಮನೆಯ ಸಮೀಪದಲ್ಲಿ ದೊಡ್ಡದೊಂದು ಹೊಲ, ಮನೆಯ ಸುತ್ತ ಒಂದಿಷ್ಟು ಕೋಳಿಗಳು, ಹಸು, ಬೆಕ್ಕು, ನಾಯಿಗಳನ್ನೆಲ್ಲಾ ಸಾಕಿಕೊಂಡಿದ್ದರು. ಮನೆ ಮತ್ತು ಮನೆಯ ಸುತ್ತಲ ಪ್ರಾಣಿಗಳನ್ನು ಹೆಂಡತಿ ನೋಡಿಕೊಂಡರೆ, ಗಂಡನದ್ದು ಹೊಲದ ಕೆಲಸ.
ಒಂದು ಸಂಜೆ ಹೊಲದ ಕೆಲಸದಿಂದ ಮರಳಿ ಮನೆಗೆ ಬಂದ ಪತಿ. ಬಂದವ ನೋಡುತ್ತಾನೆ- ಅಂಬೆಗಾಲಿಡ್ತಾ ಇದ್ದ ಮಗು, ಆಟಿಕೆಗಳನ್ನೆಲ್ಲಾ ಚೆಲ್ಲಿ ಹಾಕಿತ್ತು. ಸ್ವೆಟರ್ ನೇಯುವುದಕ್ಕೆ ಅಂತ ಇರಿಸಿಕೊಂಡಿದ್ದ ಉಣ್ಣೆಯ ಚೆಂಡಿನೊಂದಿಗೆ ಆಟವಾಡಿದ ಬೆಕ್ಕು ಅದನ್ನು ಮನೆಯೆಲ್ಲಾ ಉರುಳಾಡಿಸಿತ್ತು. ಮನೆಯೊಳಗೆ ಕಾಲಿಡುತ್ತಿದ್ದ ಹಾಗೆ, ಮನೆಯೆಲ್ಲಾ ಕೊಳಕಾಗಿದೆ ಅಂತ ಅನಿಸಿತು ಆತನಿಗೆ. ʻಇದೇನಿದು, ಮನೆಯೋ… ಕಸದ ಗುಂಡಿಯೊ?ʼ ಎಂದು ಮುಖ ಕಿವುಚಿದ ಪತಿ.
ʻಮಗು, ಬೆಕ್ಕು- ಯಾವುದಕ್ಕೂ ಹೇಳಿದ್ದು ತಿಳಿಯುವುದಿಲ್ಲʼ ಎಂದಳು ಮಡದಿ ನಗುತ್ತಾ.
ʻನಿನಗಾದರೂ ತಿಳಿಯಬೇಡವೇ? ಇದೀಗ ಆನೆ ಹೊಕ್ಕ ಅಂಗಳದಂತೆ ಕಾಣುತ್ತಿದೆ ನಮ್ಮ ಮನೆʼ ಎಂದ ಪತಿ ಇನ್ನಷ್ಟು ಕೋಪದಿಂದ.
ʻಇದೊಳ್ಳೆ ಮಾತು ನಿಮ್ಮದು! ಮನೆಯೆಲ್ಲಾ ಚೆಲ್ಲಾಡಿಕೊಂಡಿರುವುದು ಇದೇ ಮೊದಲೇನಲ್ಲವಲ್ಲ. ಸ್ವಚ್ಛ ಮಾಡಿದರಾಯ್ತು ಬಿಡಿʼ ಎಂದಳು ಪತ್ನಿ.
ʻಅದೆಲ್ಲಾ ಆಗದು! ನಾನು ಮನೆಗೆ ಬರುವಷ್ಟರಲ್ಲಿ ಮನೆ ಸ್ವಚ್ಛವಾಗಿರಬೇಕು. ಬೆಳಗ್ಗೆ ಬೇಗ ಕೆಲಸಕ್ಕೆ ಹೋಗುವುದಿಲ್ಲವೇ ನಾನುʼ ಎಂದು ಸಿಡುಕಿದ ಪತಿ.
ʻನಿಮಗಿಂತ ಮೊದಲೇ ಎದ್ದು, ಕೋಳಿಗೂಡಿಗೆ ಹೋಗಿ, ನೀವು ಏಳುವಷ್ಟರಲ್ಲಿ ಬಿಸಿಯಾದ ಮೊಟ್ಟೆ ಮತ್ತು ಬ್ರೆಡ್ ತಯಾರು ಮಾಡುವುದು ಯಾರು?ʼ ಕೇಳಿದಳು ಪತ್ನಿ.
ʻಅಷ್ಟೆ ತಾನೇ! ಆದರೆ ಬಿಸಿಯಾದ ಬ್ರೆಡ್ ಜೊತೆಗೆ ತಾಜಾ ಬೆಣ್ಣೆ ಹಾಕಿಕೊಂಡು ತಿಂದು ಎಷ್ಟು ದಿನವಾಯ್ತು ನೆನಪಿದೆಯೇ?ʼ ಕೇಳಿದ ಪತಿ.
ʻಬೆಣ್ಣೆ ತಯಾರು ಮಾಡುವುದಕ್ಕೆ ಸಮಯ ಬೇಕು. ಅಷ್ಟು ಬೆಳಗಿಗೆ ಅದೆಲ್ಲಾ ಆಗುವುದಲ್ಲ. ಈಗ ಬಿಸಿ ಸೂಪಿಗೆ ಬೆಣ್ಣೆ ಉಂಟಲ್ಲ ನಿಮಗೆʼ ಎಂದಳು ಮಡದಿ.
ʻಅದೇನು ಕೆಲಸ ಮಾಡುತ್ತೀಯೋ ನೀನಂತೂ! ಇರುವುದೊಂದು ಮಗು, ಒಂದು ಬೆಕ್ಕು, ಒಂದು ನಾಯಿ, ಒಂದು ಹಸು, ಒಂದಿಷ್ಟು ಕೋಳಿಗಳು, ಒಂದು ಮನೆ- ಇದಿಷ್ಟು ನೋಡಿಕೊಳ್ಳುವುದಕ್ಕೆ ನಿನ್ನಿಂದಾಗದುʼ ಎಂದು ಮೂದಲಿಸಿದ ಗಂಡ.
ʻನಾಳೆಯಿಂದ ನೀವೇ ಮನೆವಾಳ್ತೆ ನೋಡಿ. ನಾನೇ ಹೊಲಕ್ಕೆ ಹೋಗುತ್ತೇನೆʼ ಎಂದು ನಗುತ್ತಾ ನುಡಿದಳು ಪತ್ನಿ. ʻಅಯ್ಯೊ! ಅದರಲ್ಲೇನಂತೆ? ಖಂಡಿತಾ ಮಾಡುತ್ತೇನೆ. ನನ್ನ ಕೆಲಸವನ್ನು ನೀನು ಮಾಡುʼ ಎಂದ ಪತಿ. ʻಸರಿ, ನನಗೂ ಒಂದಿಷ್ಟು ಬಿಡುವು ದೊರೆತ ಹಾಗಾಯ್ತುʼ ಎಂದು ನೆಮ್ಮದಿಯಿಂದ ಮಲಗಿದಳು ಪತ್ನಿ.
ಮರುದಿನ ಬೆಳಗಾಯ್ತು. ಕತ್ತಿಯೊಂದನ್ನು ಹಿಡಿದ ಪತ್ನಿ, ಗಂಡನ ಬದಲಿಗೆ ತಾನೇ ಹೊಲದತ್ತ ಸಾಗಿದಳು. ಮಡದಿ ಹೊರಗೆ ಹೋಗುತ್ತಿದ್ದಂತೆ, ಕೋಳಿಗೂಡಿಗೆ ಹೋಗಿ ಮೊಟ್ಟೆಗಳನ್ನು ತಂದು ಬೇಯುವುದಕ್ಕೆ ಇಟ್ಟ ಪತಿ. ʻಮೊದಲು ಮೊಸರು ಕಡೆದು ಬೆಣ್ಣೆ ತೆಗೆಯುತ್ತೇನೆ. ತೋರಿಸುತ್ತೇನೆ ಇವಳಿಗೆʼ ಎಂದುಕೊಂಡ ಪತಿ, ಕಡಗೋಲೊಂದನ್ನು ಮಡಿಕೆಗೆ ಸಿಕ್ಕಿಸಿ ಕಡೆಯಲು ಕೂತ. ಒಂದಿಷ್ಟು ಹೊತ್ತು ಮೊಸರು ಕಡೆಯುತ್ತಿದ್ದಂತೆಯೇ, ಅಂಗಳದಲ್ಲೇನೋ ಶಬ್ದವಾಗಿ ಕೋಳಿಗಳೆಲ್ಲಾ ಕೂಗಾಡುತ್ತಿದ್ದವು. ʻಅರೆರೆ! ಕೋಳಿಗೂಡಿನ ಬಾಗಿಲು ಮುಚ್ಚುವುದನ್ನೇ ಮರೆತೆʼ ಎನ್ನುತ್ತಾ ಹೊರಗೋಡಿದ ಆತ. ಕೋಳಿಗೂಡಿನೊಳಗೆ ಇವರ ನಾಯಿ ನುಗ್ಗಿ ಧಾಂದಲೆ ಎಬ್ಬಿಸುತ್ತಿತ್ತು. ʻಹಚ್, ಹಚ್… ಈ ಹಾಳು ನಾಯಿಗೆ ಬೇರೆ ಕೆಲಸವೇ ಇಲ್ಲʼ ಎಂದು ನಾಯಿಯನ್ನು ಓಡಿಸಿ, ಹೊರಗೆಲ್ಲಾ ಕುಣಿದು ಕುಪ್ಪಳಿಸುತ್ತಿದ್ದ ಕೋಳಿಗಳನ್ನು ಮತ್ತೆ ಗೂಡು ಸೇರಿಸುವಷ್ಟರಲ್ಲಿ ಸಾಕೋಸಾಕಾಯಿತು.
ಅವುಗಳಿಗೆ ಬೈಯ್ಯುತ್ತಾ ಮನೆಯೊಳಗೆ ಬಂದರೆ, ಮೊಸರಿನ ಮಡಿಕೆಯನ್ನು ಉರುಳಿಸಿದ ಬೆಕ್ಕು, ನೆಲಕ್ಕೆ ಚೆಲ್ಲಿದ್ದನ್ನೆಲ್ಲಾ ನೆಕ್ಕುತ್ತಾ ಕುಳಿತಿತ್ತು. ʻದರಿದ್ರ ಬೆಕ್ಕೇ! ತೊಲಗಿಲ್ಲಿಂದʼ ಎಂದು ಕಿರುಚುತ್ತಾ ಕೈಗೆ ಸಿಕ್ಕಿದ್ದರಲ್ಲಿ ಬೆಕ್ಕಿಗೆ ಬಡಿದು, ಮಡಿಕೆಯನ್ನು ಎತ್ತಿಕೊಂಡರೆ ಕೆಳಗೆ ಇನ್ನೂ ಸ್ವಲ್ಪ ಮೊಸರು ಉಳಿದಿತ್ತು. ಅದನ್ನಾದರೂ ಕಡೆದು ಬೆಣ್ಣೆ ತೆಗೆದರಾಯ್ತು ಎಂದುಕೊಂಡ. ಆದರೆ ಈ ಎಲ್ಲಾ ಗದ್ದಲಗಳಿಂದಾಗಿ ತೊಟ್ಟಿಲಲ್ಲಿ ಮಲಗಿದ್ದ ಮಗು ಎದ್ದು ಅಳತೊಡಗಿತ್ತು. ಅದನ್ನೆತ್ತಿಕೊಂಡು ಸಮಾಧಾನ ಮಾಡುವಷ್ಟರಲ್ಲಿ, ಅಡುಗೆ ಮನೆಯಿಂದ ಏನೋ ಸೀದ ವಾಸನೆ ಮೂಗಿಗೆ ಬಡಿದಂತಾಯಿತು. ಹೋಗಿ ನೋಡಿದರೆ, ಬೇಯಲೆಂದು ಇಟ್ಟಿದ್ದ ಮೊಟ್ಟೆ ಕರೀ ಮಸಿಯಂತಾಗಿತ್ತು! ʻಛೇ! ಇವತ್ತು ಸೀದ ಮೊಟ್ಟೆಯನ್ನೇ ತಿನ್ನಬೇಕಲ್ಲʼ ಎಂದು ಬೇಸರವಾಯ್ತು ಆತನಿಗೆ. ಅಷ್ಟರಲ್ಲೇ ನೆನಪಾಗಿದ್ದು ಅಳುತ್ತಿರುವ ಮಗುವಿಗೆ ಹಾಲು ಕುಡಿಸಬೇಕು. ಆದರೆ ಬೆಳಗಿನಿಂದ ಹಸುವಿನ ಹಾಲೇ ಕರೆದಿಲ್ಲ. ಮಾತ್ರವಲ್ಲ, ಅದಕ್ಕೆ ಹುಲ್ಲು, ನೀರನ್ನೂ ಹಾಕಿಲ್ಲ ಎಂದು.
ಮಗುವನ್ನು ಪುನಃ ತೊಟ್ಟಿನಲ್ಲೇ ಮಲಗಿಸಲು ಹೋದರೆ ಅದು ಹಸಿವಾಗಿ ಕಿರುಚತೊಡಗಿತು. ಅದಕ್ಕೊಂದು ಆಟಿಕೆಯನ್ನು ಕೊಟ್ಟು ನೆಲದ ಮೇಲೆಯೇ ಬಿಟ್ಟು ಹಸುವಿನತ್ತ ತೆರಳಿದ ಪತಿ. ಅದಕ್ಕೆ ಹುಲ್ಲು ತಂದು ಹಾಕುವ ಸುಲಭ ಉಪಾಯ ಯಾವುದು ಅಂತ ಯೋಚಿಸಿದಾಗ ಆತನಿಗೆ ಕಂಡಿದ್ದು, ಅವರ ಮನೆಯ ಮಾಡಿನ ಮೇಲೆ ಬೆಳೆದ ಹುಲ್ಲು. ಅಂದಿನ ಕಾಲದಲ್ಲಿ ಆ ದೇಶದ ಪುಟ್ಟ ಮರದ ಮನೆಗಳ ಮಾಡು ಸಾಕಷ್ಟು ತಗ್ಗಾಗಿಯೇ ಇರ್ತಾ ಇತ್ತು. ಹಾಗಾಗಿ ಆ ಮಾಡಿಗೊಂದು ಅಗಲವಾದ ಹಲಗೆಯನ್ನು ಜಾರುಬಂಡೆಯಂತೆ ಸಾಚಿ, ಹಸುವನ್ನು ಅದರ ಮೇಲೆ ಹತ್ತಿಸುವ ಉಪಾಯ ಮಾಡಿದ. ಆದರೆ ಅದಕ್ಕೂ ಮೊದಲು ಹಸುವಿಗೆ ನೀರು ಕುಡಿಸಬೇಕಿತ್ತು. ಇನ್ನೀಗ ನೀರು ಸೇದುವುದಕ್ಕೆ ಬಾವಿಗೆ ಹೋದರೆ ಮೊಸರಿನ ಗಡಿಗೆಯನ್ನು ಮಗು ಉರುಳಿಸುತ್ತದೆ ಎಂದು ಲೆಕ್ಕಹಾಕಿದ ಆತ, ಆ ಗಡಿಗೆಯನ್ನು ಬೆನ್ನಿಗೆ ಕಟ್ಟಿಕೊಂಡು ಬಿಂದಿಗೆಯೊಂದಿಗೆ ಬಾವಿಗೆ ತೆರಳಿದ. ಬಿಂದಿಗೆಯನ್ನು ಬಾವಿಗೆ ಬಿಟ್ಟು, ನೀರು ತುಂಬಿತೇ ಎಂದು ಬಗ್ಗಿ ನೋಡುವಷ್ಟರಲ್ಲಿ ಮಡಿಕೆಯಲ್ಲಿದ್ದ ಮೊಸರು ಇವನ ಮೇಲೆಯೇ ಸುರಿಯಿತು.
ಇದನ್ನೂ ಓದಿ: ಮಕ್ಕಳ ಕಥೆ: ಚಿನ್ನದ ನಾಣ್ಯದ ಕಳ್ಳನಿಗೆ ಕತ್ತೆ ಬಾಲದ ಪರೀಕ್ಷೆ!
ʻಇವತ್ತು ಎದ್ದ ಘಳಿಗೆಯೇ ಸರಿಯಿಲ್ಲʼ ಎಂದು ತನಗೆ ತಾನೇ ಬೈಯ್ದುಕೊಳ್ಳುತ್ತಾ, ನೀರು ಸೇದಿಕೊಂಡು ಬಂದು ಹಸುವಿಗೆ ಕುಡಿಸಿದ. ಹಾಗೆಯೇ ಮಾಡಿಗೆ ಸಾಚಿದ್ದ ಜಾರುಬಂಡೆಯಂಥ ಹಲಗೆಯ ಮೇಲೆ ಹಸುವನ್ನು ಹತ್ತಿಸಿದ. ಹಸಿದಿದ್ದ ಹಸು, ಹೆಚ್ಚು ಯೋಚಿಸದೆ ಹುಲ್ಲು ಕಂಡಲ್ಲಿ ಹೋಯಿತು. ಒಂದೊಮ್ಮೆ ಹಸು ಬಿದ್ದುಬಿಟ್ಟರೆ…? ಎಂಬ ಯೋಚನೆ ಆತನಿಗೆ ಬರುತ್ತಿದ್ದಂತೆಯೇ, ಅದರ ಹೊಟ್ಟೆಗೊಂದು ಬಾವಿಯ ಹಗ್ಗವನ್ನು ಬಿಗಿದು, ಆ ಹಗ್ಗವನ್ನು ಹೊಗೆ ಉಗುಳಲೆಂದು ಇರಿಸಿದ್ದ ಚಿಮಣಿಯ ಒಳಗೆ ಬಿಟ್ಟ. ಮನೆಯೊಳಗೆ ಹೋದವನೇ ಆ ಹಗ್ಗದ ಇನ್ನೊಂದು ತುದಿಯನ್ನು ತನ್ನ ಕಾಲಿಗೆ ಕಟ್ಟಿಕೊಂಡ. ಅಷ್ಟರಲ್ಲಾಗಲೇ ನಡು ಮಧ್ಯಾಹ್ನವಾಗಿತ್ತು. ತಾನಿನ್ನೂ ಸೀದ ಮೊಟ್ಟೆಯನ್ನು ತಿಂದಿಲ್ಲ, ಮಗುವಿಗೆ ಹಾಲೂ ಕುಡಿಸಿಲ್ಲ. ಜೊತೆಗೆ ಮಧ್ಯಾಹ್ನಕ್ಕೆ ಬ್ರೆಡ್ ಸಿದ್ಧವಾಗಬೇಕು ಎಂದು ಗಡಿಬಿಡಿಯಿಂದ ಮನೆಯೆಲ್ಲಾ ಓಡಾಡುತ್ತಾ ಕೆಲಸ ಮಾಡತೊಡಗಿದ. ಈ ಗಡಿಬಿಡಿಯಲ್ಲಿ ಕಾಲಿಗೆ ಕಟ್ಟಿಕೊಂಡಿದ್ದ ಹಗ್ಗ ಯಾವುದೋ ಕುರ್ಚಿಗೆ ತಾಗಿ ಜಗ್ಗಿದಂತಾಯ್ತು. ಆ ಹಗ್ಗದ ಇನ್ನೊಂದು ತುದಿಯಲ್ಲಿ ಹುಲ್ಲು ಮೇಯುತ್ತಿದ್ದ ಪಾಪದ ಹಸುವೂ ಜಗ್ಗಿದಂತಾಗಿ ಆಯ ತಪ್ಪಿತು- ಆದರೆ ಕೆಳಗೆ ಬೀಳದೆ ಗಾಳಿಯಲ್ಲಿ ನೇತಾಡತೊಡಗಿತು. ಹಸುವಿನ ಭಾರಕ್ಕೆ ನೇರವಾಗಿ ಚಿಮಣಿಯತ್ತ ಜಗ್ಗಿದ ಪತಿಯೂ ಗಾಳಿಯಲ್ಲಿ ತಲೆ ಕೆಳಗಾಗಿ ನೇತಾಡತೊಡಗಿದ. ಮಗುವಿಗಂತೂ ಈ ದೃಶ್ಯ ಕಂಡು ಖುಷಿಯೋ ಖುಷಿ! ಇದೇ ಹೊತ್ತಿನಲ್ಲಿ ಬಿಸಿಲಲ್ಲಿ ದುಡಿದು ದಣಿದು ಊಟಕ್ಕೆಂದು ಮಡದಿ ಮನೆಗೆ ಬಂದಳು.
ಮನೆ ಚಿಮಣಿಗೆ ಸಿಕ್ಕಿ ಹಸು ನೇತಾಡುತ್ತಾ ಬೊಬ್ಬೆ ಹಾಕುವುದನ್ನು ಕಂಡು, ಏನಾಗುತ್ತಿದೆ ಎಂದು ಅರ್ಥವಾಗುವ ಮೊದಲೇ ಹಸುವಿನ ಹಗ್ಗ ಕತ್ತರಿಸಿದಳು. ಆ ಹಗ್ಗದ ಇನ್ನೊಂದು ತುದಿಯಲ್ಲಿ ನೇತಾಡುತ್ತಿದ್ದ ಪಾಪದ ಪತಿರಾಯ ಮೇಲಿಂದ ಜರಿದು ಬಿದ್ದ. ಒಳಗಿನಿಂದ ಕೇಳಿಬಂದ ಬೊಬ್ಬೆಗೆ ಹೆದರಿ ಕಂಗಾಲಾದ ಮಡದಿ ಓಡೋಡುತ್ತಾ ಒಳಗೆ ಬಂದರೆ- ಮೊಸರು ಮೆತ್ತಿಕೊಂಡು ಮಗುಚಿ ಬಿದ್ದಿದ್ದ ಪತಿ! ಅವನನ್ನೆಬ್ಬಿಸಿ ಉಪಚರಿಸಿದಳು. ಪ್ರತಿ ದಿನ ಇಷ್ಟೊಂದು ಕೆಲಸಗಳನ್ನು ತನ್ನ ಪತ್ನಿಯೊಬ್ಬಳೇ ಮಾಡುವಾಗ, ಅವೆಲ್ಲಾ ಇಷ್ಟೊಂದು ಕಷ್ಟವೆಂದು ಅನಿಸಿರಲೇ ಇಲ್ಲವಲ್ಲ ಎಂದು ಪತಿಗೆ ಸೋಜಿಗವಾಯ್ತು. ʻದಿನವೂ ಇವನ್ನೆಲ್ಲಾ ಹೇಗೆ ಸುಧಾರಿಸುತ್ತೀಯೋ ನೀನು! ಈ ಹಾಳು ಮನೆಗೆಲಸ ನನ್ನಿಂದಂತೂ ಸಾಧ್ಯವಿಲ್ಲʼ ಎಂದು ದುಗುಡದಿಂದ ಹೇಳಿದ ಪತಿ.
ʻಯಾವುದು ಅಗತ್ಯವೋ ಅದನ್ನು ಮೊದಲು ಮಾಡುತ್ತೇನೆ ನಾನು. ಈಗ ಎಲ್ಲರೂ ಹಸಿದಿದ್ದೇವೆ. ಮೊದಲು ಅಡುಗೆ ಆಗಬೇಕುʼ ಎನ್ನುತ್ತಾ ಒಳಗೆ ನಡೆದಳು ಆಕೆ. ಅಂದಿನಿಂದ ಯಾರೂ ಇನ್ನೊಬ್ಬರ ಕೆಲಸದ ಬಗ್ಗೆ ಕೇವಲವಾಗಿ ಮಾತಾಡಲಿಲ್ಲ.
ಇದನ್ನೂ ಓದಿ: ಮಕ್ಕಳ ಕಥೆ: ಯೂಕಿಯ ಸಮಯಪ್ರಜ್ಞೆ