Site icon Vistara News

ಮಕ್ಕಳ ಕಥೆ: ತೇಜಸ್ವಿಯ ಗಿಡ ಏನಾಯಿತು?

children story tejaswi

ಭಾಗ- 2

ಈ ಕಥೆಯನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/05/TejaswiyaGida-Part2-1.mp3

ಮೊದಲಿಗೆ ಕುಂಡದ ಮಣ್ಣು ಸರಿಯಿಲ್ಲ ಎಂದು ಬೇರೆ ಮಣ್ಣು, ಗೊಬ್ಬರಗಳನ್ನು ಹಾಕಿ ಇನ್ನೊಂದು ಕುಂಡದಲ್ಲಿ ಬೀಜವನ್ನು ಬಿತ್ತಿದ ತೇಜಸ್ವಿ. ಒಂದು ವಾರ ಸರಿದರೂ ಬೀಜ ಮೊಳಕೆ ಒಡೆಯುವ ಸುದ್ದಿಯೇ ಇಲ್ಲ. ಅಷ್ಟರಲ್ಲಿ ಊರಿನ ಬಹುತೇಕ ಪೋರರು ತಂತಮ್ಮ ಗಿಡಗಳನ್ನು ತೋರಿಸಿಕೊಂಡು ಮೆರೆದಾಡುತ್ತಿದ್ದರು. ʻಇದೇನೋ ತೇಜೂ, ಒಂದು ಗಿಡ ಬೆಳೆಯೋದಕ್ಕೆ ಬರಲ್ವಾ ನಿನಗೆ?ʼ ಎಂದು ಕೆಲವರು ಚುಚ್ಚಿದರೆ, ʻನಿನ್ನ ಮುಖಕ್ಕೆ ಅರಮನೆ ಬೇರೆ ಕೇಡು!ʼ ಎಂದು ಇನ್ನು ಕೆಲವರು ನಕ್ಕರು. ಅರಮನೆ ಇಲ್ಲದಿದ್ದರೆ ಹೋಗಲಿ, ಆದರೆ ಇಷ್ಟೊಂದು ಕೈತೋಟ ಮಾಡಿರುವ ತನಗೆ ಇದೊಂದು ಬೀಜದ ಆರೈಕೆ ಮಾಡಲಾಗದಿದ್ದರೆ ಹೇಗೆ ಎಂದು ಭಾವಿಸಿ, ಆ ಬೀಜವನ್ನೇ ಹೊರ ತೆಗೆದು ಮೊಳಕೆ ಕಟ್ಟಲು ಯತ್ನಿಸಿದ. ಹಿಂದೆಲ್ಲಾ ಎಷ್ಟೊಂದು ಬೀಜಗಳನ್ನು ಹೀಗೆಯೇ ಮಾಡಿ ಆತ ಬಿತ್ತಿದ್ದ. ಆದರೆ ಈ ಬಾರಿ ಯಾವುದೂ ಕೆಲಸ ಮಾಡಲಿಲ್ಲ. ʻಛೇ! ತನ್ನ ಅದೃಷ್ಟವೇ ಹೀಗೆʼ ಎಂದು ಬೇಸರ ಮಾಡಿದ್ದೇ ಬಂತು ಬಿಟ್ಟರೆ, ಇನ್ನೇನೂ ಆಗಲಿಲ್ಲ.

ಈ ಕಥೆಯ ಮೊದಲ ಭಾಗ ಇಲ್ಲಿದೆ: ಮಕ್ಕಳ ಕಥೆ: ತೇಜಸ್ವಿಯ ಗಿಡ ಏನಾಯಿತು?

ನೋಡುನೋಡುತ್ತಲೇ ನಾಲ್ಕು ವಾರಗಳು ಪೂರ್ಣಗೊಂಡವು. ರಾಜ ಸೂಚಿಸಿದ ದಿನ ಬಂತು. ಎಲ್ಲರೂ ಸಿಕ್ಕಾಪಟ್ಟೆ ನೀರು-ಗೊಬ್ಬರಗಳನ್ನು ಹಾಕಿ, ಗಿಡಗಳು ಸಾಕಷ್ಟು ಪುಷ್ಟಿಯಿಂದಲೇ ಬೆಳೆದಿದ್ದವು. ತಮ್ಮ ಕುಂಡಗಳಿಗೂ ಆ ಮಕ್ಕಳು ಸಾಕಷ್ಟು ಅಲಂಕಾರ ಮಾಡಿದ್ದರು. ಕೆಲವರು ಬಣ್ಣದ ರಂಗೋಲಿಗಳಿಂದ ಕುಂಡವನ್ನು ಅಲಂಕರಿಸಿದ್ದರೆ, ಇನ್ನೂ ಕೆಲವರು ಕಾಗದ- ಕಸೂತಿನೆಲ್ಲಾ ಮಾಡಿದ್ದರು. ಈಗ ಮತ್ತೆ ಅರಮನೆಯತ್ತ ಊರಿನ ಮಕ್ಕಳ ದಂಡು ಮೆರವಣಿಗೆ ಹೊರಟಿತು. ಕೆಲವರಂತೂ ರಾಜಪೋಷಾಕನ್ನೇ ತೊಟ್ಟು, ಇನ್ನೊಬ್ಬರ ಕೈಯಲ್ಲಿ ಗಿಡವನ್ನು ಹೊರಿಸಿಕೊಂಡು ಹೊರಟರು. ರಾಜಕುಮಾರನಂತಿರುವುದು ಅಭ್ಯಾಸವಾಗಬೇಡವೇ! ಎಲ್ಲರೂ ಇನ್ನೊಬ್ಬರ ಕೈ-ಕಾಲು ತಮ್ಮ ಗಿಡಕ್ಕೆ ಸೋಂಕದಂತೆ, ಒಂದೆಲೆ ಉದುರದಂತೆ ಎಚ್ಚರಿಕೆಯಿಂದ ಅದನ್ನು ಹಿಡಿದು ಹೊರಟಿದ್ದರು.

ಅಂದು ಬೆಳಗ್ಗೆ ಏಳುತ್ತಿದ್ದಂತೆ ತೇಜಸ್ವಿಯ ಕಣ್ಣಲ್ಲಿ ಧಾರಾಕಾರ ನೀರು. ಅವನ ಅಪ್ಪ-ಅಮ್ಮ ಎಷ್ಟೇ ಸಮಾಧಾನ ಮಾಡಿದರೂ, ಅವನ ಅಳು ನಿಲ್ಲಲಿಲ್ಲ. ಎಷ್ಟೆಲ್ಲಾ ಗಿಡಗಳನ್ನು ಬೆಳೆದಿದ್ದೇನೆ. ಇಡೀ ಊರಿನ ಮಕ್ಕಳು ಈವರೆಗೆ ಬೆಳೆಯದಿರುವಷ್ಟು ಗಿಡಗಳನ್ನು ತಾನೊಬ್ಬನೇ ಬೆಳೆದಿದ್ದೇನೆ. ಅಂಥದ್ದರಲ್ಲಿ ಹೇಗೆ ಪ್ರಯತ್ನಿಸಿದರೂ ಇದೊಂದು ಬೀಜ ಮೊಳಕೆ ಒಡೆಯಲೇ ಇಲ್ಲವಲ್ಲ. ತನ್ನ ಇಷ್ಟೂ ಅನುಭವ ವ್ಯರ್ಥ. ಮಾತ್ರವಲ್ಲ, ಇದನ್ನೀಗ ಅರಮನೆಗೆ ತೆಗೆದುಕೊಂಡು ಹೋಗುವುದು ಹೇಗೆ? ಅಯ್ಯೋ, ಇದೆಂಥ ಅವಮಾನ ಎಂದು ಗೋಳಾಡಿದ. ಅಂತೂ ಖಾಲಿ ಕುಂಡವನ್ನು ಹಿಡಿದು, ಹನಿಗಣ್ಣಾಗಿ, ಕೊಳಕು ವಸ್ತ್ರ, ಕೆದರಿದ ತಲೆಯಲ್ಲೇ ಅಪ್ಪ-ಅಮ್ಮನೊಂದಿಗೆ ತೇಜಸ್ವಿ ಅರಮನೆಗೆ ಹೊರಟ.

ನೂರಾರು ಮಕ್ಕಳು ಅರಮನೆಯ ಅಂಗಳದಲ್ಲಿ ನೆರೆದಿದ್ದರು. ಎಲ್ಲರೂ ತಂತಮ್ಮಲ್ಲೇ ಗುಜುಗುಜು ಮಾತಾಡಿಕೊಳ್ಳುತ್ತಿದ್ದರು. ಅರಸೊತ್ತಿಗೆಯ ಉತ್ತರಾಧಿಕಾರಿ ಯಾರು ಎಂಬ ಕುತೂಹಲ ತಣಿಸಿಕೊಳ್ಳಲು ಇನ್ನೂ ನೂರಾರು ಮಂದಿ ಅಲ್ಲಿ ಸೇರಿದ್ದರು. ರಾಜಾಂಗಣಕ್ಕೆ ಮಹಾಪ್ರಭುಗಳು ಆಗಮಿಸುತ್ತಿದ್ದಂತೆ ಎಲ್ಲ ಕಡೆ ಮೌನ ಆವರಿಸಿತು. ಎಲ್ಲರೂ ತಂತಮ್ಮ ಗಿಡಗಳನ್ನು ತಮ್ಮ ಮುಂದಿರಿಸಿಕೊಂಡು ನಿಂತಿದ್ದರು. ರಾಜ ಎಲ್ಲರ ಗಿಡಗಳನ್ನೂ ಪರಿಶೀಲಿಸುತ್ತಾ ಬಂದ. ಗಿಡಗಳು ಎಷ್ಟೇ ಚೆನ್ನಾಗಿ ಬೆಳೆದಿದ್ದರೂ, ಆತನ ಮುಖದಲ್ಲಿ ಮೆಚ್ಚುಗೆ ಬರಲಿಲ್ಲ. ಎಲ್ಲರಿಗಿಂತ ಕಡೆಯದಾಗಿ ನಿಂತಿದ್ದವ ತೇಜಸ್ವಿ.

ಆತನ ಎದುರಿಗೆ ಬರುವಷ್ಟರಲ್ಲಿ ಎದುರಿಗಿದ್ದ ಖಾಲಿ ಹೂಕುಂಡ ರಾಜನ ಕಣ್ಣಿಗೆ ಬಿತ್ತು. ʻಏನಿದು? ಇದರಲ್ಲಿ ಗಿಡವೆ ಇಲ್ಲವಲ್ಲ!ʼ ಎನ್ನುತ್ತಾ ತೇಜಸ್ವಿಯ ಮುಖ ನೋಡಿದ ಅರಸ. ʻಮಹಾಪ್ರಭೂ, ಪ್ರಮಾಣ ಮಾಡಿ ಹೇಳುತ್ತೇನೆ. ಗಿಡ ಬೆಳೆಯುವ ಎಲ್ಲಾ ಪ್ರಯತ್ನಗಳನ್ನೂ ಮಾಡಿದ್ದೇನೆ. ಆದರೆ ಬೀಜ ಮೊಳಕೆ ಒಡೆಯಲೇ ಇಲ್ಲʼ ಎಂದು ಬೇಸರದಿಂದ ತನ್ನ ಕಥೆಯನ್ನು ಹೇಳಿದ ತೇಜಸ್ವಿ. ಆತನ ಕುಂಡವನ್ನು ಎತ್ತಿ ಹಿಡಿದ ಅರಸ, ʻಈ ಕುಂಡದಲ್ಲಿ ಬೀಜ ಬಿತ್ತಿದ ಬಾಲಕನನ್ನು ನನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸುತ್ತಿದ್ದೇನೆʼ ಎಂದು ಸಾರಿದ.

ಎಲ್ಲ ಕಡೆ ಗೊಂದಲ, ಗುಜುಗುಜು ಆರಂಭವಾಯಿತು. ʻಎಲ್ಲರೂ ಶಾಂತರಾಗಬೇಕು. ಇದಕ್ಕೆ ಕಾರಣವನ್ನೂ ತಿಳಿಸುತ್ತೇನೆ. ಅರಸನಿಗೆ ಇರಬೇಕಾದ ಪ್ರಮುಖ ಗುಣಗಳಲ್ಲಿ ಶ್ರಮ, ತಾಳ್ಮೆ ಮತ್ತು ಪ್ರಾಮಾಣಿಕತೆ ಮುಖ್ಯವಾದವು. ಬೀಜ ಗಿಡವಾಗಲೆಂದು ಈ ಬಾಲಕ ತಾಳ್ಮೆಯಿಂದ, ಶ್ರಮವಹಿಸಿ, ಪ್ರಾಮಾಣಿಕವಾದ ಪ್ರಯತ್ನ ಮಾಡಿದ್ದಾನೆ. ಇವನದ್ದಲ್ಲ, ಯಾರಿಗೆ ಕೊಡಲಾದ ಬೀಜವೂ ಗಿಡವಾಗಲು ಸಾಧ್ಯವಿಲ್ಲ. ಕಾರಣ, ಎಲ್ಲವೂ ಬೇಯಿಸಿ, ಒಣಗಿಸಲಾದ ಬೀಜಗಳು! ಉಳಿದವರೆಲ್ಲ ಬೀಜಗಳು ಮೊಳಕೆ ಬಂದಿದ್ದು ಹೇಗೆ?ʼ ಎಂಬ ರಾಜನ ಮಾತಿಗೆ ಎಲ್ಲರೂ ತಲೆ ತಗ್ಗಿಸಿದರು. ತೇಜಸ್ವಿಯ ಮುಖದ ತೇಜಸ್ಸು ಮಾತ್ರ ಇಮ್ಮಡಿಯಾಗಿತ್ತು.

ಈ ಕಥೆಯನ್ನೂ ಓದಿ: ಮಕ್ಕಳ ಕಥೆ: ಸ್ವೀಡನ್‌ ದೇಶದ ಜನಪದ ಕಥೆ: ಕಿನ್ನರಿಯ ಕುರಿಗಳು: ಭಾಗ 2

Exit mobile version