ಈ ಕಥೆಯನ್ನು ಇಲ್ಲಿ ಕೇಳಿ:
ಒಂದೂರಿನಲ್ಲಿ ಅಮ್ಮ, ಅಪ್ಪ, ಅಣ್ಣ ಮತ್ತು ತಂಗಿಯ ಕುಟುಂಬವೊಂದು ವಾಸಿಸುತ್ತಿತ್ತು. ಅಣ್ಣ ಮತ್ತು ತಂಗಿ ನೋಡುವುದಕ್ಕೆ ಒಂದೇ ರೀತಿಯಲ್ಲಿ ಕಾಣುತ್ತಿದ್ದರು. ಆದರೆ ತಂಗಿಯ ಕೆನ್ನೆಯ ಮೇಲೆ ದೊಡ್ಡದಾದ ಕೆಂಪು ಮಚ್ಚೆಯೊಂದಿತ್ತು. ಒಂದು ದಿನ ಸಂತೆಯಿಂದ ಬರುವಾಗ ತಂದೆ ಬಣ್ಣದ ಕನ್ನಡಿಯೊಂದನ್ನು ತಂದರು. ಎಲ್ಲರೂ ಅದರಲ್ಲಿ ತಂತಮ್ಮ ಮುಖವನ್ನು ನೋಡಿ ಸಂಭ್ರಮಿಸುತ್ತಿದ್ದರು. ತನ್ನ ಚರ್ಮ ಸುಕ್ಕಾಗುತ್ತಿದೆ ಎಂದು ತಾಯಿಗೆ ಅನಿಸಿದರೆ, ತಲೆಯಲ್ಲಿ ಬಿಳಿಕೂದಲು ಬರುತ್ತಿದೆ ಎನ್ನುವುದು ತಂದೆಗೆ ತಿಳಿಯಿತು. ತನ್ನ ಚರ್ಮ ಹೊಳೆಯುತ್ತಿದೆ ಎಂದು ಅಣ್ಣ ಸಂಭ್ರಮಿಸಿದರೆ, ತನ್ನ ಮುಖದ ಅಂದಗೆಡಿಸುವಂಥ ದೊಡ್ಡದಾದ ಮಚ್ಚೆಯೊಂದಿದೆ ಎನ್ನುವುದು ತಂಗಿಗೆ ಕಂಡಿತು.
ʻಛೇ! ಇದೇನು ನನ್ನ ಮುಖ ಹೀಗಿದೆ, ಕೆಂಪು ಮಚ್ಚೆಯಿಂದ ಕುರೂಪವಾಗಿದೆʼ ಎಂದು ತಂಗಿ ಮಂಕಾಗಿ ಕುಳಿತಳು. ಆದರೆ ಅಣ್ಣ ಮಾತ್ರ ಪದೇಪದೆ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡು ಸಂಭ್ರಮಿಸುತ್ತಿದ್ದ. ತಂಗಿಯೆದುರು ತನ್ನ ಚಂದವನ್ನು ಹಾಡಿ ಹೊಗಳಿಕೊಳ್ಳುತ್ತಿದ್ದ. ಮೊದಲೇ ಬೇಸರದಲ್ಲಿದ್ದ ತಂಗಿ ಈಗ ಕೋಪಿಸಿಕೊಂಡು ಕನ್ನಡಿಯನ್ನೇ ಒಡೆದುಹಾಕಿ ಅಳುತ್ತಾ ಹೊರಟುಹೋದಳು. ಅಣ್ಣನಿಗೆ ಮೊದಲಿಗೆ ಸಿಟ್ಟು ಬಂದರೂ, ಅಳುತ್ತಾ ಕುಳಿತ ತಂಗಿಯನ್ನು ಕಂಡು ಕನಿಕರವೆನಿಸಿತು. ಅವಳ ಈ ಅವಸ್ಥೆಯ ಬಗ್ಗೆ ತಂದೆ-ತಾಯಿಯರಲ್ಲಿ ಮಾತನಾಡಿದ.
ʻಅವಳ ಬೇಸರ ಹೆಚ್ಚಾಗುವಂತೆ ಅವಳೆದುರು ನೀನು ವರ್ತಿಸಬಾರದಿತ್ತು. ಹಾಗಾಗಿಯೇ ಅವಳು ಕನ್ನಡಿ ಒಡೆದು ಹಾಕಿದಳುʼ ಎಂದರು ಅಮ್ಮ. ಅಣ್ಣನಿಗೆ ಹೌದೆನಿಸಿತು. ʻತಾನು ಚಂದವೇ ಇಲ್ಲ ಎಂದು ಅವಳಿಗನ್ನಿಸಿದೆ. ಆದರೆ ಆಕೆ ಬಹಳ ಒಳ್ಳೆಯ ಮನಸ್ಸಿನ ಹುಡುಗಿʼ ಎಂದರು ಅಪ್ಪ. ಅಣ್ಣನಿಗೆ ಅದೂ ಹೌದೆನಿಸಿತು. ʻಹಾಗಾದರೆ, ಅವಳ ಒಳ್ಳೆಯತನವನ್ನು ತೋರಿಸುವ ಇನ್ನೊಂದು ಕನ್ನಡಿಯನ್ನು ತರೋಣವೇ ಸಂತೆಯಿಂದ?ʼ ಕೇಳಿದ ಅಣ್ಣ. ಅಮ್ಮ-ಅಪ್ಪನಿಗೆ ಈ ಸಲಹೆ ಒಪ್ಪಿಗೆಯಾಯಿತು. ಚಂದದ ಬದಲು ಗುಣವನ್ನು ತೋರಿಸುವ ಕನ್ನಡಿಯನ್ನೇ ಅರಸುತ್ತಾ ಎಲ್ಲರೂ ಸಂತೆಗೆ ತೆರಳಿದರು.
ಸಂತೆಯ ಮೂಲೆಯ ಜಾಗದಲ್ಲಿ ಅಜ್ಜಿಯೊಬ್ಬಳು ಹತ್ತಾರು ಕನ್ನಡಿಗಳೊಂದಿಗೆ ಕುಳಿತಿದ್ದಳು. ಅವಳ ಜೊತೆಗೊಂದು ಕೋತಿಯೂ ಇತ್ತು. ಅದು ಆಗಾಗ ಕನ್ನಡಿಯೊಂದರಲ್ಲಿ ಇಣುಕಿ ನೋಡಿ ಕೇಕೆ ಹಾಕುತ್ತಿತ್ತು. ಕುತೂಹಲದಿಂದ ಅದನ್ನೆತ್ತಿಕೊಂಡು ಇಣುಕಿ ನೋಡಿದ ಅಣ್ಣ. ಮೊದಲಿಗೆ ಅದರಲ್ಲಿ ತನ್ನ ಬಿಂಬ ಮಾತ್ರವೇ ಕಾಣಿಸಿತು ಆತನಿಗೆ. ಅಷ್ಟರಲ್ಲಿ ಆತ ಚಿಕ್ಕವನಿದ್ದಾಗ ತಂಗಿಗೆ ಹೊಡೆಯುವುದು, ಅವಳಿಗೆ ಪಾಠ ಅರ್ಥವಾಗದಿದ್ದರೆ ಪ್ರೀತಿಯಿಂದ ಹೇಳಿಕೊಡುವುದು- ಇಂಥವೆಲ್ಲಾ ಕಾಣತೊಡಗಿದವು. ʻಇದೇ… ಇದೇ ಕನ್ನಡಿ ನಮಗೆ ಬೇಕಾದ್ದುʼ ಎಂದು ಖುಷಿಯಿಂದ ನುಡಿದ ಅಣ್ಣ. ಅಪ್ಪ ಅದನ್ನು ಖರೀದಿಸಿದರು.
ಇದನ್ನೂ ಓದಿ: ಮಕ್ಕಳ ಕಥೆ: ಉಪಾಯ ಚತುರರಾದ ನಾಲ್ವರು ಗೆಳೆಯರು
ಎಲ್ಲರೂ ಸಂಭ್ರಮದಿಂದ ಆ ಕನ್ನಡಿಯನ್ನು ಮನೆಗೆ ತಂದು ತಂಗಿಯ ಮುಂದಿರಿಸಿದರು. ಅದನ್ನಾಕೆ ಕಣ್ಣೆತ್ತಿಯೂ ನೋಡಲಿಲ್ಲ. ʻಎಲ್ಲಾ ಕನ್ನಡಿಗಳೂ ತೋರಿಸುವುದು ಅದನ್ನೇ. ಸುಮ್ಮನೆ ಇದನ್ನೇಕೆ ಖರೀದಿ ಮಾಡಿದಿರಿ?ʼ ಎಂದು ಆಕೆ ಬೇಸರದಿಂದ ನುಡಿದಳು. ʻಎಲ್ಲವೂ ಒಂದೇ ಅಲ್ಲ ಮಗಳೇ. ಈ ಕನ್ನಡಿಯನ್ನೊಮ್ಮೆ ನೋಡುʼ ಎಂದರು ತಂದೆ. ಒಲ್ಲದ ಮನಸ್ಸಿನಿಂದ ಆ ಕನ್ನಡಿಯನ್ನೆತ್ತಿಕೊಂಡಳು ತಂಗಿ. ಮೆಲ್ಲನೊಮ್ಮೆ ಇಣುಕಿ ನೋಡಿದಳು. ಅದರಲ್ಲಿ ಕಂಡಿದ್ದು ಅವಳ ಅದೇ ಮಚ್ಚೆ ಇದ್ದ ಮುಖ. ಆದರೆ ಅಷ್ಟೇ ಅಲ್ಲ-
ಒಂದೂ ಆಟಿಕೆಯೇ ಇಲ್ಲದ ತನ್ನ ಗೆಳತಿಗೆ ತನ್ನದೇ ಆಟಿಕೆಯನ್ನು ಆಡಲು ಕೊಡುತ್ತಿದ್ದ ತಂಗಿ, ಲೆಕ್ಕ ತಪ್ಪಿ ಹೆಚ್ಚಿನ ಚಿಲ್ಲರೆ ಕೊಟ್ಟಿದ್ದ ಅಂಗಡಿಯವನ ಹಣವನ್ನು ಹಿಂದಿರುಗಿಸುತ್ತಿದ್ದ ತಂಗಿ, ರೆಕ್ಕೆ ಮುರಿದಿದ್ದ ಹಕ್ಕಿಯ ಆರೈಕೆ ಮಾಡುತ್ತಿದ್ದ ತಂಗಿ- ಹೀಗೆ ಅವಳದ್ದೇ ಹಲವಾರು ಬೇರೆಬೇರೆ ಬಿಂಬಗಳು ಅದರಲ್ಲಿ ಕಾಣುತ್ತಿದ್ದವು. ನಂಬಲಾರದೆ ಆಕೆ ಮತ್ತೆ ಆ ಕನ್ನಡಿಯಲ್ಲಿ ಇಣುಕಿದಳು. ಈಗ ಅವಳ ಮೊದಲಿನ ಮುಖವೇ ಕಾಣುತ್ತಿತ್ತು- ಆದರೆ ಆ ಮುಖವೀಗ ಕಳೆಯಿಂದ ಹೊಳೆಯುತ್ತಿತ್ತು, ಮಚ್ಚೆ ಇದ್ದರೂ ಮುಖ ಸುಂದರವಾಗಿಯೇ ಕಾಣುತ್ತಿತ್ತು. ಇದು ಹೇಗೆ ಸಾಧ್ಯ ಎಂಬ ಗೊಂದಲದಲ್ಲೇ ಇದ್ದಳು ತಂಗಿ.
ʻಸೌಂದರ್ಯ ಎಂದರೆ ಮೇಲ್ನೋಟದ ಚಂದ ಮಾತ್ರವೇ ಅಲ್ಲ, ನಮ್ಮ ವ್ಯಕ್ತಿತ್ವದ ಘನತೆಯಿಂದಲೂ ಮುಖದ ತೇಜಸ್ಸು ಹೊಳೆಯುತ್ತದೆ. ನಿನ್ನ ಮನಸ್ಸು ಒಳ್ಳೆಯದು ಮಗೂ, ಹಾಗಾಗಿ ಕನ್ನಡಿಯ ಬಿಂಬ ಸುಂದರವಾಗಿಯೇ ಕಾಣುತ್ತಿದೆʼ ಎಂದರು ಅಮ್ಮ. ತಂಗಿಯ ಮುಖ ಇನ್ನಷ್ಟು ಕಾಂತಿಯಿಂದ ಮಿನುಗುತ್ತಿತ್ತು.
ಇದನ್ನೂ ಓದಿ: ಮಕ್ಕಳ ಕಥೆ: ಪ್ರಾಮಾಣಿಕ ಅಜ್ಜಿ ಮತ್ತು ಧೂರ್ತ ಸಹಾಯಕ