ಈ ಕಥೆಯನ್ನು ಇಲ್ಲಿ ಕೇಳಿ:
ಒಂದೂರಿನಲ್ಲಿ ಶ್ರೀಮಂತನೊಬ್ಬನಿದ್ದ. ಆತನ ಮನೆಯಲ್ಲಿ ತರಹೇವಾರಿ ಪಾತ್ರೆಗಳಿದ್ದವು. ಸಣ್ಣದು, ಪುಟ್ಟದು, ದೊಡ್ಡದು, ಬೃಹತ್ತಾದ್ದು, ಅಗಲವಾದದ್ದು, ಗಿಡ್ಡ, ಮೋಟ, ಡುಮ್ಮ, ಉದ್ದದ ತಟ್ಟೆಗಳು, ಲೋಟಗಳು, ವಾಟಿಗಳು, ಚಮಚ, ಸೌಟು, ಚೊಂಬು, ಡಬರಿ, ಪರಾತ, ಹರಿವಾಣ, ತಪ್ಪಲೆ, ಕಡಾಯಿ, ಬಿಂದಿಗೆ, ಬಕೆಟ್ಟು- ಹೀಗೆ ನಾನಾ ಥರದ ಸಿಕ್ಕಾಪಟ್ಟೆ ಪಾತ್ರೆಗಳಿದ್ದವು. ಅವನಿಗೆ ಮನೆಯಲ್ಲಿ ಬೇಕಾಗುವುದಕ್ಕಿಂತ ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಪಾತ್ರೆಗಳು ಇದ್ದಿದ್ದರಿಂದ, ಊರಿನ ಜನರೆಲ್ಲ ಅವರ ಮನೆಯ ಶುಭಕಾರ್ಯಗಳಿಗೆ ಅದನ್ನು ಎರವಲು ಪಡೀತಾ ಇದ್ದರು. ಈತನೂ ಖುಷಿಯಿಂದಲೇ ಪಾತ್ರೆಗಳನ್ನು ಕೊಡತಾ ಇದ್ದ.
ಆದರೆ ಈತನಿಗೆ ಒಂದು ದುರಭ್ಯಾಸ ಇತ್ತು. ಯಾರಾದ್ರೂ ತೆಗೆದುಕೊಂಡ ಪಾತ್ರೆಗಳನ್ನು ಹಿಂದಿರುಗಿಸುವುದಕ್ಕೆ ಬಂದರೆ, ʻಐದೇ ಚೊಂಬುಗಳು ಹಿಂದಕ್ಕೆ ಬಂದಿವೆಯಲ್ಲ; ಆರು ತಗೊಂಡು ಹೋಗಿದ್ರಿ! ಇನ್ನೊಂದು ನಾಳೆ-ನಾಡಿದ್ರಲ್ಲಿ ತಂದುಕೊಟ್ಟುಬಿಡಿʼ ಅಂತ ತಾಕೀತು ಮಾಡ್ತಿದ್ದ. ತಾವು ಕಡ ತಗೊಂಡಿದ್ದು ಆರಲ್ಲ, ಐದೇ ಚೊಂಬುಗಳು ಅಂತ ಹೇಳಿದ್ರೂ ಆತ ಕೇಳತಿರಲಿಲ್ಲ. ಕೆಲವೊಮ್ಮೆ ಸೌಟುಗಳು ಕಡಿಮೆ ಇದೆ, ಇನ್ನು ಕೆಲವು ಬಾರಿ ತಟ್ಟೆಗಳು ಕಡಿಮೆ ಇದೆ- ಹೀಗೆ ಒಂದೊಂದು ಸಾರಿ ಒಂದೊಂದು ವಾಪಾಸ್ ಬಂದಿದ್ದು ಕಡಿಮೆ ಆಗಿದೆ ಅಂತ ತಕರಾರು ತೆಗೀತಾ ಇದ್ದ. ಆದರೆ ಇಡೀ ಊರಲ್ಲಿ ಈತನನ್ನು ಬಿಟ್ಟು ಇನ್ಯಾರ ಬಳಿಯೂ ಇಷ್ಟೊಂದು ಪಾತ್ರೆಗಳು ಇರಲಿಲ್ಲ. ಹಾಗಾಗಿ ಅವನಲ್ಲಿ ಪಾತ್ರೆ ಕಡ ತಗೊಳ್ಳೋದು ಊರಿನವರಿಗೆ ಅನಿವಾರ್ಯ ಆಗಿತ್ತು. ಗೊಣಗಾಡುತ್ತಲೇ ಈ ಕಿರಿಕಿರಿಯನ್ನ ಸಹಿಸಿಕೊಳ್ತಾ ಇದ್ದರು.
ಒಂದು ಸಾರಿ ಹೀಗಾಯ್ತು. ತನ್ನ ತಂಗಿಯ ಮದುವೆಗೆ ಅಂತ ಗಿರೀಶ ಈ ಸಾಹುಕಾರನಿಂದ ಸುಮಾರಷ್ಟು ಪಾತ್ರೆಗಳನ್ನು ಕಡ ಪಡೆದಿದ್ದ. ತಂಗಿಯ ಮದುವೆ ಮುಗೀತು; ಪಾತ್ರೆಗಳನ್ನು ಮರಳಿ ಕೊಡೋದಕ್ಕೆ ಅಂತ ಗಿರೀಶ ಶ್ರೀಮಂತನ ಮನೆಗೆ ಬಂದ. ʻಏನಪ್ಪಾ ಗಿರೀಶ, ಅಂತೂ ತಂಗಿ ಮದುವೆಯನ್ನು ಭರ್ಜರಿಯಾಗಿ ಮಾಡಿದೆ, ಸಂತೋಷ. ಆದರೆ… ನೀನು ತಗೊಂಡಿದ್ದ ಪಾತ್ರೆಗಳಲ್ಲಿ ಒಂಭತ್ತು ಕಡಾಯಿಗಳಿದ್ದವು, ಈಗ ಎಂಟೇ ವಾಪಸ್ ಬಂದಿವೆಯಲ್ಲ! ಅದೊಂದನ್ನು ನಾಳೆ-ನಾಡಿದ್ರಲ್ಲಿ ತಂದು ಕೊಟ್ಟುಬಿಡಪ್ಪʼ ಎಂದ ಸಾಹುಕಾರ. ಆದರೆ ಗಿರೀಶನಿಗೆ ಖಾತ್ರಿಯಾಗಿ ನೆನಪಿತ್ತು, ತೆಗೆದುಕೊಂಡಿದ್ದು ಎಂಟೇ ಕಡಾಯಿಗಳು ಎಂಬುದು. ಇವನಿಗೊಂದು ಬುದ್ಧಿ ಕಲಿಸಲೇಬೇಕು ಎಂದು ತೀರ್ಮಾನಿಸಿದ ಗಿರೀಶ.
ಮಾರನೇ ದಿನ ತನ್ನ ಮನೆಯದ್ದೇ ಒಂದು ಹಳೆಯ ಕಡಾಯಿಯ ಜೊತೆಗೆ ಇನ್ನೆರಡು ಹೊಸ ಪುಟ್ಟ-ಪುಟ್ಟ ಕಡಾಯಿಗಳನ್ನು ಖರೀದಿಸಿ ತಂದು ಶ್ರೀಮಂತನಿಗೆ ನೀಡಿದ. ಇವುಗಳನ್ನು ಕಂಡು ಅಚ್ಚರಿಯಿಂದ ಹುಬ್ಬೇರಿಸಿದ ಸಾಹುಕಾರ. ʻನೋಡಿ ಯಜಮಾನ್ರೇ, ನಿಮ್ಮ ಕಡಾಯಿಗಳು ಮರಿ ಹಾಕಿವೆ! ಈ ಮರಿ-ಕಡಾಯಿಗಳು ನಮ್ಮನೆಯಲ್ಲೆಲ್ಲೊ ಓಡಾಡಿಕೊಂಡಿದ್ದವು. ಅವುಗಳನ್ನು ಹುಡುಕಿ ತಗೊಂಡು ಬಂದಿದ್ದೀನಿʼ ಎಂದು ಹೇಳಿದ ಗಿರೀಶ. ಈತನ ಮಾತುಗಳನ್ನು ಕೇಳಿ ಸಾಹುಕಾರನಿಗೆ ನಗು ಬಂದರೂ ತೋರಿಸಿಕೊಳ್ಳದೆ, ʻಆಗಲಿ ಆಗಲಿ, ಒಳ್ಳೇದಾಯ್ತುʼ ಎನ್ನುತ್ತಾ ಅವುಗಳನ್ನು ಎತ್ತಿಟ್ಟುಕೊಂಡ. ಪಾತ್ರೆಗಳ ಮೇಲೆ ಅವನಿಗೆ ಅತಿಯಾಸೆ ಇದ್ದಿದ್ದೇ, ಈಗಂತೂ ಇನ್ನಷ್ಟು ಖುಷಿಯಾಗಿತ್ತು.
ಇದನ್ನೂ ಓದಿ: ಮಕ್ಕಳ ಕಥೆ: ಕುರಿ ಮತ್ತು ಮೇಕೆಯ ಜಗತ್ ಪರ್ಯಟನೆ
ಇದಾದ ಸ್ವಲ್ಪ ದಿನಗಳಲ್ಲಿ ಗಿರೀಶನ ಮನೆಯಲ್ಲಿ ಏನೋ ವಿಶೇಷವಿತ್ತು. ಅದಕ್ಕಾಗಿ ಒಂದಿಷ್ಟು ಪಾತ್ರೆಗಳನ್ನು ಆತ ಮತ್ತೆ ಕಡ ತೆಗೆದುಕೊಂಡಿದ್ದ. ಈ ಬಾರಿ ಅವುಗಳನ್ನು ಹಿಂದಿರುಗಿಸುವಾಗ ನಾಲ್ಕು ಪಾತ್ರೆಗಳನ್ನು ಉದ್ದೇಶಪೂರ್ವಕವಾಗಿಯೇ ಕಡಿಮೆ ಕೊಟ್ಟಿದ್ದ ಗಿರೀಶ. ಇದನ್ನು ಕಂಡು ಹೌಹಾರಿದ ಸಾಹುಕಾರ, ಕೂಡಲೇ ಹಿಂದಿರುಗಿಸುವಂತೆ ತಾಕೀತು ಮಾಡಿದ. ʻಅಯ್ಯೋ ಏನು ಹೇಳಲಿ ಯಜಮಾನ್ರೆ! ಎರಡು ಡಬರಿಗಳು ಹುಷಾರಿಲ್ಲದೆ ಸತ್ತೋದವು. ಇನ್ನೆರಡು ಪರಾತಗಳು ನಮ್ಮೆನೆಯಿಂದ ತಪ್ಪಿಸಿಕೊಂಡು ಪರಾರಿಯಾಗಿವೆ, ಊರೆಲ್ಲಾ ಹುಡುಕಿದ್ರೂ ಸಿಗಲಿಲ್ಲʼ ಎಂದು ಗೋಳಾಡಿದ ಗಿರೀಶ. ಸಾಹುಕಾರ ಕೆಂಡಾಮಂಡಲವಾದ.
ʻಯಾರಿಗೆ ಈ ಕಥೆಯನ್ನೆಲ್ಲಾ ಹೇಳ್ತಾ ಇರುವುದು ನೀನು? ಇದನ್ನೆಲ್ಲಾ ನಂಬೋದಕ್ಕೆ ನಾನೇನು ಎಳೇ ಮಗೂನಾ? ಜೀವ ಇಲ್ಲದಿರುವ ಪಾತ್ರೆಗಳು ಸಾಯೋದು ಅಂದ್ರೇನು? ಮನೆಯಿಂದ ಓಡೋಗೋದು ಅಂದ್ರೇನು?ʼ ಎಂದೆಲ್ಲ ಕೂಗಾಡಿದ ಸಾಹುಕಾರ. ʻಯಾಕೆ ಯಜಮಾನ್ರೇ, ನಿಮ್ಮ ಕಡಾಯಿಗಳು ಮರಿ ಹಾಕಿದೆ ಅಂದಾಗ ಇದೆಲ್ಲ ಅನುಮಾನ ಬರಲಿಲ್ಲವಲ್ಲ ನಿಮಗೆ! ಜೀವ ಇಲ್ಲದ ಕಡಾಯಿಗಳು ಮರಿ ಹಾಕುತ್ತವೆ ಅಂತಾದ್ರೆ, ಸಾಯೋದಕ್ಕೆ ಸಾಧ್ಯ ಇಲ್ಲವೇ?ʼ ಕೇಳಿದ ಗಿರೀಶ. ಉತ್ತರ ಹೇಳೋದಕ್ಕೆ ಸಾಹುಕಾರನ ಬಳಿ ಏನೂ ಇರಲಿಲ್ಲ. ತನ್ನ ತಪ್ಪಿಗಾಗಿ ಕ್ಷಮೆ ಕೇಳಿದ ಶ್ರೀಮಂತ, ತನ್ನ ಕಣ್ಣು ತೆರೆಸಿದ ಗಿರೀಶನ ನಡವಳಿಕೆಯನ್ನು ಶ್ಲಾಘಿಸಿದ.
ಇದನ್ನೂ ಓದಿ: ಮಕ್ಕಳ ಕಥೆ: ಯುದ್ಧವನ್ನೇ ಮಾಡದ ಸಮರ ಗುರು ಸೋತಿದ್ದು ಹೇಗೆ?