Site icon Vistara News

ಮಕ್ಕಳ ಕಥೆ : ಬಾತ್ಕೋಳಿ ಮರಿಗಳ ಕಾಡಿನ ವಾಕಿಂಗ್

Duck
http://vistaranews.com/wp-content/uploads/2023/08/WhatsApp-Audio-2023-08-06-at-5.38.09-PM.mp3

ಅದು ಆ ಬಾತುಕೋಳಿ ಮರಿಗಳ ಮೊದಲ ಕಾಡು ಪಯಣ. ಅಂದರೆ ಸದಾ ಕಾಲ ಅಮ್ಮನ ಸುತ್ತಮುತ್ತ ಮತ್ತು ತಮ್ಮ ಕೊಳದ ಆಚೀಚೆ ಮಾತ್ರವೇ ಸುತ್ತುತ್ತಿದ್ದ ಆ ಮೂರು ಮರಿಗಳು ಇದೇ ಮೊದಲ ಬಾರಿಗೆ ಬಾತಮ್ಮನೊಂದಿಗೆ ಕಾಡು ಸುತ್ತಲು ಹೊರಟಿದ್ದವು. ಈ ಮರಿಗಳಲ್ಲಿ ಒಂದು ಹೆಣ್ಣು ಮತ್ತು ಎರಡು ಗಂಡು ಮರಿಗಳಿದ್ದವು. ಆ ಹೆಣ್ಣು ಮರಿಯ ಹೆಸರು ಚುಮ್ಮು ಎಂದಾಗಿದ್ದರೆ, ಸಪೂರ ಮರಿಯ ಹೆಸರು ತಿಮ್ಮು. ಗುಂಡುಗುಂಡಕ್ಕಿದ್ದ ಮರಿಯ ಹೆಸರು ಡುಮ್ಮು ಎಂದಾಗಿತ್ತು. ಹೀಗೆ ಚುಮ್ಮು, ತಿಮ್ಮು ಹಾಗೂ ಡುಮ್ಮುವಿನೊಂದಿಗೆ ಬಾತಮ್ಮ ವಾಕಿಂಗ್‌ ಹೊರಟಿತ್ತು. ಅಮ್ಮ ಮುಂದೆಮುಂದೆ. ಮರಿಗಳು ಹಿಂದೆಹಿಂದೆ!

ʻಕಾಡೂಂದ್ರೆ ಏನಂದ್ಕಂಡ್ರಿ ಮಕ್ಕಳೇ! ಅಮ್ಮನ್ನ ಬಿಟ್ಟು ಎಲ್ಲೆಲ್ಲೋ ಹೋಗಬಾರದು, ಸವೆದಿರೋ ದಾರಿ ಬಿಟ್ಟು ಸಿಕ್ಕಸಿಕ್ದಲ್ಲಿ ಅಲೀಬಾರದು, ದಾರಿ ತಪ್ಪೋಗತ್ತೆ. ಸಂದಿ-ಮೂಲೆಗಳಲ್ಲಿ ಅಪಾಯಗಳು ಕಾದಿರತ್ತೆ. ತುಂಬಾ ಎಚ್ಚರಿಕೆಯಿಂದ ಕಾಲಿಡುವ ಮೊದಲು ಕಣ್ಣಿಡಬೇಕು…ʼ ಅಂತೆಲ್ಲಾ ಬಾತಮ್ಮ ಮಕ್ಕಳಿಗೆ ಹೇಳ್ಕೊಂಡು ಹೋಗ್ತಾ ಇತ್ತು. ಆದರೆ ತಡವಾಗಿತ್ತು! ಅಷ್ಟರಲ್ಲಾಗಲೇ ಮಕ್ಕಳಿಗೆ ದಾರಿ ತಪ್ಪಿ ಆಗಿತ್ತು.

ಏನಾಯ್ತೂಂದ್ರೆ, ದೊಡ್ಡದೊಂದು ಚಿಟ್ಟೆ ತನ್ನ ಬಣ್ಣಬಣ್ಣದ ರೆಕ್ಕೆಗಳನ್ನು ಬಡೀತಾ ಇವರ ಸುತ್ತಾನೇ ಹಾರಾಡ್ತಿತ್ತು. ಇವು ಹಿಡಿಯೋದಕ್ಕೆ ಪ್ರಯತ್ನಿಸಿದ್ರೆ, ಒಂದು ಹೂವಿನತ್ರ ಹೋಯ್ತು. ಮತ್ತೆ ಇನ್ನೊಂದಕ್ಕೆ, ಹಾಗೆ ಮತ್ತೊಂದಕ್ಕೆ ಅಂತ ಚಿಟ್ಟೆ ಮುಂದೆ ಮುಂದೆ ಹೋಗ್ತಾನೇ ಇತ್ತು. ಚುಮ್ಮು, ತಿಮ್ಮು ಮತ್ತು ಡುಮ್ಮು ಅದರ ಹಿಂದೆ ಹಿಂದೆ ಹೋಗ್ತಾನೇ ಇದ್ದವು. ಈ ಕಡೆ ಅಮ್ಮ ಬಾತುಕೋಳಿಗೆ ತನ್ನ ಮಕ್ಕಳು ತನ್ನ ಹಿಂದೆ ಬರ್ತಾನೇ ಇಲ್ಲ ಅನ್ನೋದು ಗೊತ್ತೇ ಆಗದೆ, ತನ್ನಷ್ಟಕ್ಕೆ ಅವರಿಗೆ ಬುದ್ಧಿ ಹೇಳ್ತಾ ಹೋಗ್ತಾ ಇತ್ತು. ಸುಮಾರು ಹೊತ್ತಾದ ಮೇಲೆ ʻಹೇಳಿದ್ದು ಕೇಳಿಸ್ತಾ ಎಲ್ರಿಗೂ?ʼ ಅಂತ ಹಿಂದೆ ತಿರುಗಿ ನೋಡಿದ್ರೆ… ಯಾರೂ ಇಲ್ಲ! ಅರೆ! ಎಲ್ಲಾ ಎಲ್ಲೋದ್ವು?

ಈ ಕಡೆ ಮರಿಗಳಿಗೂ ಮೊದಲು ತಾವು ಹೋಗ್ತಾ ಇದ್ದಿದ್ದು ಅಮ್ಮನ ಹಿಂದಲ್ಲ, ಚಿಟ್ಟೆ ಹಿಂದೆ ಅನ್ನೋದು ತಿಳೀಲೇ ಇಲ್ಲ. ಅದು ಗೊತ್ತಾಗುವಷ್ಟರಲ್ಲಿ ತುಂಬಾ ದೂರ ಕಾಡೊಳಗೇ ಬಂದುಬಿಟ್ಟಿದ್ದರು. ಆಚೀಚೆ ಎಲ್ಲಿ ನೋಡಿದರೂ ಅಮ್ಮ ಕಾಣಲಿಲ್ಲ, ʻಅಮ್ಮಾ…ʼ ಕರೆದವು ಮಕ್ಕಳು. ಊಹುಂ, ಅಮ್ಮ ಉತ್ತರಿಸಲಿಲ್ಲ. ʻಅಮ್ಮಾ… ಅಮ್ಮಾ… ಎಲ್ಲಿದ್ದೀಯ?ʼ ಎಂದೆಲ್ಲಾ ಕರೆದವು. ಅಲ್ಲಿನ ಪೊದೆಗಳ ಸಂದಿಯನ್ನೆಲ್ಲಾ ಹುಡುಕಾಡಿದವು. ತಾವೆಲ್ಲಿದ್ದೇವೆ, ಯಾವ ಜಾಗ ಇದು ಎಂಬುದೇ ಅವಕ್ಕೆ ಅರ್ಥ ಆಗಲಿಲ್ಲ. ಅಷ್ಟರಲ್ಲೇ ಆ ನೆಲ ನಡುಗುವ ಶಬ್ದ ಕೇಳಬೇಕೆ? ಎಲ್ಲರೂ ಬೆಚ್ಚಿಬಿದ್ದು ಸಿಕ್ಕಸಿಕ್ಕ ಪೊದೆ, ಬಂಡೆಗಳ ಸಂದಿಯಲ್ಲಿ ಬಚ್ಚಿಟ್ಟುಕೊಂಡರು.

ಇವರು ಬಂದ ಕಾಡಿನ ಭಾಗದಲ್ಲಿ ಆನೆಯೊಂದು ವಾಸಿಸುತ್ತಿತ್ತು. ಅದಕ್ಕೆ ಯಾವತ್ತಾದರೂ ತೀರಾ ಖುಷಿಯಾಗಿಬಿಟ್ಟರೆ ಹೀಗೆ ಲೆಫ್ಟ್‌-ರೈಟ್‌-ಲೆಫ್ಟ್‌-ರೈಟ್‌ ಮಾಡುತ್ತಾ ಓಡಾಡಿಬಿಡುತ್ತಿತ್ತು. ಈಗಾಗಿದ್ದೂ ಅದೇ. ಆನೆಯೊಂದು ಕಾಲು ಬಡಿಯುತ್ತಾ ಲೆಫ್ಟ್‌-ರೈಟ್‌ ಮಾಡಿಬಿಟ್ಟರೆ ನೆಲ ನಡುಗದೇ ಇರತ್ಯೇ? ಅದೆಲ್ಲಾ ನಮ್ಮ ಪುಟ್ಟ ಚುಮ್ಮು, ತಿಮ್ಮು, ಡುಮ್ಮುಗೆ ಹೇಗೆ ತಾನೇ ಗೊತ್ತಾಗಬೇಕು. ಅವು ಹೆದರಿ ನಡಗ್ತಾ ಇದ್ದವು. ಇವರಿದ್ದ ಬಂಡೆಯ ಹತ್ತಿರವೇ ಬಂದ ಆನೆ, ತಾನೇ ಈ ಕಾಡಿನ ರಾಜ ಅನ್ನುವ ಹಾಗೆ ಬಂಡೆಯ ಮೇಲೆ ಕೂತ್ಕೊಂಡ್ತು. ಕಾಲು ಮೇಲೆ ಕಾಲು ಹಾಕಿ ಕೂತ್ಕೊಳ್ಳುವ ಪ್ರಯತ್ನದಲ್ಲಿದ್ದಾಗ ಬಂಡೆಯ ಮೇಲಿಂದ ಜರ್‌…ನೇ ಜಾರಿ ಬಿತ್ತು ಆನೆ. ಹೆದರಿ ನಡಗ್ತಾ ಇದ್ದ ಮೂವರಿಗೂ ಈಗ ನಗು ತಡೆಯೋದಕ್ಕಾಗಲಿಲ್ಲ.

ʻಅಯ್ಯೋ… ಅಮ್ಮಾʼ ಅಂತ ನರಳ್ತಾ ಇದ್ದ ಆನೆಗೆ ಇದ್ದಕ್ಕಿದ್ದ ಹಾಗೆ ಸಣ್ಣ ದನಿಗಳು ನಗ್ತಾ ಇರೋದು ಕೇಳಿಸ್ತು. ʻಯಾರು? ಯಾರದು ನಗೋದು?ʼ ಕೇಳಿತು ಆನೆ. ಅಷ್ಟರಲ್ಲಾಗಲೇ ಆನೆಯ ಬಗೆಗಿನ ಹೆದರಿಕೆ ಕಡಿಮೆ ಆಗಿತ್ತು ಬಾತು ಮರಿಗಳಿಗೆ. ʻನಾನು ಚುಮ್ಮು, ನಾನು ತಿಮ್ಮು, ನಾನು… ಡುಮ್ಮುʼ ಅಂತು ಮೂರೂ ಮರಿಗಳು ಮೂರು ಪೊದೆಗಳಿಂದ ಹೊರಬಂದವು. ಬಂದ ಮೇಲೂ ಆನೆ ಜರಿದು ಬಿದ್ದಿದ್ದನ್ನು ನೆನಪಿಸಿಕೊಂಡು ಕುಪ್ಪಳಿಸಿಕೊಂಡು ನಗುತ್ತಿದ್ದವು. ಆನೆಗೂ ಇವರನ್ನು ಕಂಡು ಮೋಜೆನಿಸಿತು.

ʻಹುಂ… ಚುಂ, ತಿಂ, ಡುಂ! ಇಲ್ಯಾಕೆ ಬಂದ್ರಿ ನೀವು?ʼ ವಿಚಾರಿಸಿಕೊಂಡಿತು ಆನೆ. ʻನಾವು ಶ್ರೀಮತಿ ಬಾತಮ್ಮನೊಂದಿಗೆ ವಾಕಿಂಗ್‌ ಹೊರಟವರು. ಈಗ ಕಳೆದುಹೋಗಿದ್ದೇವೆ!ʼ ಹೇಳಿಕೊಂಡಿತು ತಿಮ್ಮು. ʻನೀವೆಲ್ಲಿ ಕಳೆದೋಗಿದ್ದೀರಿ! ಇದ್ದೀರಲ್ಲಾ ನನ್ನೆದುರಿಗೇ!ʼ ಆನೆಗೆ ಸೋಜಿಗವಾಯ್ತು. ʻಹಂಗಲ್ಲ, ನಾವು ಬಾತಮ್ಮನವರ ಜೊತೆಗಿರಬೇಕಿತ್ತು. ಈಗ ಬೇರೆಯಾಗಿದ್ದೇವೆ ಅಂದಿದ್ದುʼ ಸ್ಪಷ್ಟಪಡಿಸಿತು ಚುಮ್ಮು. ʻಓಹ್!‌ ಹಂಗಾಯ್ತಾ! ಸರಿ. ನಿಮ್ಮಮ್ಮ ಬರೋತಂಕ ನಂಜೊತೆಗಿರಿʼ ಅಂತು ಆನೆ. ʻನಮ್ಮಮ್ಮ ಬರೋತಂಕ ನೀನೇಕೆ ನಮಗೆ ಅಮ್ಮ ಆಗಿರಬಾರದು?ʼ ಕೇಳಿತು ಡುಮ್ಮು.
ಆನೆಗೆ ಆಶ್ಚರ್ಯ. ಹೀಗೂ ಆಗಬಹುದೆಂದರೆ! ಇಲ್ಲಿರುವ ಚುಂ, ತಿಂ, ಡುಂ ಎಂಬ ಬಾತು ಮರಿಗಳಿಗೆ ನಾನು ಅಮ್ಮ. ʻಆದರೆ… ನಾನೀಗ ಆನೆಯಮ್ಮ ಆಗಬೇಕೋ ಬಾತಮ್ಮನೋ?ʼ ಗೊಂದಲದಿಂದ ಕೇಳಿತು ಆನೆ. ʻನೀನು ಬಾತಮ್ಮನೇ ಆಗುʼ ಎಲ್ಲವೂ ಒಕ್ಕೊರಲಿನಿಂದ ಹೇಳಿದವು.

ಸರಿ, ಆನೆಯೆಂಬುದು ತಾತ್ಕಾಲಿಕವಾಗಿ ಬಾತಮ್ಮನಾಯಿತು. ಅಮ್ಮ ಅಂದ್ರೆ ಸುಮ್ನೇನಾ? ಮಕ್ಕಳಿಗೆ ಎಲ್ಲವನ್ನೂ ಹೇಳಿಕೊಡಬೇಕು ತಾನೇ! ʻನೋಡಿ ಮಕ್ಕಳೇ, ಶ್ರೀಮತಿ ಬಾತಮ್ಮನವರ ಚಿರಂಜೀವಿಗಳಾದಂಥ ನೀವು ಹೀಗೆ ಕೂಗಬೇಕುʼ ಎಂದು ಹೇಳಿ ಸುಂಡಿಲೆತ್ತಿ ಜೋರಾಗಿ ಕೂಗಿತು. ಥೇಟ್‌ ಆನೆ ಘೀಳಿಡುವ ಶಬ್ದವೇ ಬಂತು. ಆ ಶಬ್ದ ಎಬ್ಬಿಳಿದ ಗಾಳಿಗೆ ಬಾತು ಮರಿಗಳು ಒಮ್ಮೆ ಹಾರಾಡಿ ಕೆಳಗೆ ಬಿದ್ದವು; ಬಿದ್ದೂಬಿದ್ದು ನಗತೊಡಗಿದವು. ಎಲ್ಲವೂ ಒಟ್ಟಿಗೇ ಕ್ವಾಕ್‌… ಕ್ವಾಕ್‌ ಎಂದು ಕೂಗಿದವು. ಅರೆ! ಇದೇನೋ ಬೇರೆ ಶಬ್ದ ಬಂತಲ್ಲಾ ಎಂದು ಆನೆಗೆ ಮತ್ತೆ ಗೊಂದಲವಾಯಿತು.
ʻಸರಿ, ಬಾತು ಮರಿಗಳಾದ್ದರಿಂದ ನೀವು ಹಾರುವುದನ್ನೂ ಕಲಿಯಬೇಕು. ನೋಡಿ, ಹೀ….ಗೆʼ ಎನ್ನುತ್ತಾ ಅಲ್ಲಿದ್ದ ದೊಡ್ಡ ಬಂಡೆಯನ್ನು ಹತ್ತಿ. ಅಲ್ಲಿಂದ ತನ್ನ ಕೈ-ಕಾಲು-ಸುಂಡಿಲು-ಕಿವಿಗಳನ್ನೆಲ್ಲಾ ಬಡಿಯುತ್ತಾ ಗಾಳಿಯಲ್ಲಿ ಜಿಗಿಯಿತು. ಅಷ್ಟೇ! ಮೇಲಿಂದ ಧೊಪ್ಪನೆ ಮುಖ ಅಡಿಯಾಗಿ ಬಿತ್ತು ಪಾಪದ್ದು. ಆನೆ ಬಿದ್ದರೆ ಆಗುವ ಅನಾಹುತವೇನು ಸಾಮಾನ್ಯವೇ? ಸುತ್ತಲಿನ ಗಿಡ-ಮರಗಳೆಲ್ಲಾ ಒಮ್ಮೆ ಜೋರಾಗಿ ತೂಗಾಡಿದವು. ಹತ್ತಿರದ ಕೊಳದ ನೀರೆಲ್ಲಾ ಒಮ್ಮೆ ಉಕ್ಕಿದಂತಾಯ್ತು. ಉಕ್ಕಿ ಬರುತ್ತಿದ್ದ ನಗುವನ್ನು ತಡೆದುಕೊಳ್ಳಲು ಪ್ರಯತ್ನಿಸುತ್ತಿದ್ದ ಬಾತು ಮರಿಗಳು ಹಾರಿ-ಹಾರಿ ಬೀಳುತ್ತಿದ್ದವು.

ಇದನ್ನೂ ಓದಿ : ಮಕ್ಕಳ ಕಥೆ: ದರ್ಜಿ ಮತ್ತು ರಾಜಕುಮಾರಿ

ʻಏನಿದು ಇಷ್ಟೊಂದು ಶಬ್ದ?ʼ ಎನ್ನುತ್ತಾ ಶಬ್ದದ ಮೂಲವನ್ನೇ ಅರಸುತ್ತಾ ಬಾತಮ್ಮ ಅಲ್ಲಿಗೆ ಬಂತು. ʻಆಗಲಿಂದ ಈ ದಿಕ್ಕಿಗೇ ಭೂಕಂಪವಾದಂಥ ಶಬ್ದ ಬರುತ್ತಿತ್ತು. ಹಾಗಾಗಿ ಇತ್ತಲೇ ಹುಡುಕುತ್ತಾ ಬಂದೆʼ ಎಂದಿತು ಬಾತಮ್ಮ. ಮರಿಗಳೆಲ್ಲಾ ಓಡೋಡಿ ಬಂದು ಅಪ್ಪಿಕೊಂಡವು ಅಮ್ಮನನ್ನು. ಅಮ್ಮನ ಅನುಪಸ್ಥಿತಿಯಲ್ಲಿ ತಾನು ಈ ಮರಿಗಳಿಗೆ ಅಮ್ಮನಾಗುವುದಕ್ಕೆ ಹೋಗಿ ಆದ ಅನಾಹುತವನ್ನೆಲ್ಲಾ ಬಣ್ಣಿಸಿತು ಆನೆ. ʻಕ್ಷಮಿಸು ಬಾತಮ್ಮ. ನಿನ್ನಷ್ಟು ಒಳ್ಳೆಯ ಅಮ್ಮನಾಗುವುದಕ್ಕೆ ನನಗೆ ಆಗಲೇ ಇಲ್ಲʼ ಎಂದು ಬೇಸರಿಸಿಕೊಂಡಿತು. ʻಛೇ! ಎಲ್ಲಾದರೂ ಉಂಟೇ. ನನ್ನ ಮಕ್ಕಳು ಯಾವುದೇ ಅಪಾಯಕ್ಕೆ ಸಿಲುಕದಂತೆ ಅವರನ್ನು ಇಷ್ಟೂ ಹೊತ್ತು ಕಾಪಾಡಿಕೊಂಡಿದ್ದಕ್ಕೆ ನಿನಗೆ ಧನ್ಯವಾದಗಳು. ಎಲ್ಲಾ ಅಮ್ಮಂದಿರು ಮಾಡುವುದೂ ಇದನ್ನೇʼ ಎಂದಿತು ಬಾತಮ್ಮ. ಚುಂ, ತಿಂ, ಡುಂ ತಮ್ಮ ಅಮ್ಮನ ಬೆನ್ನಿಗೆ ನಡೆಯುತ್ತಾ ಆನೆಗೆ ಟಾಟಾ ಮಾಡಿ ನಕ್ಕವು.

Exit mobile version