Site icon Vistara News

ಮಕ್ಕಳ ಕಥೆ: ಮುಗ್ಧ ಶಿಷ್ಯರು ಮತ್ತು ಕುದುರೆ ಮೊಟ್ಟೆ

children story horse egg

ಈ ಕಥೆಯನ್ನು ಇಲ್ಲಿ ಕೇಳಿ:

http://vistaranews.com/wp-content/uploads/2023/03/WhatsApp-Audio-2023-03-25-at-111.mp3

ಗುರುವೊಬ್ಬ ನದಿಯಂಚಿನಲ್ಲಿ ಆಶ್ರಮ ನಿರ್ಮಿಸಿಕೊಂಡಿದ್ದ. ಆತನ ಬಳಿ ಹಲವಾರು ಶಿಷ್ಯರು ವಿದ್ಯೆ ಕಲಿಯುವುದಕ್ಕಾಗಿ ಅಂತೆವಾಸಿ (ಆಶ್ರಮವಾಸಿ)ಗಳಾಗಿದ್ದರು. ಹಲವಾರು ವರ್ಷಗಳ ಕಾಲ ಅವರೆಲ್ಲ ಅಲ್ಲಿಯೇ ತಂಗಿ ವಿದ್ಯೆ ಕಲಿಯುತ್ತಿದ್ದರೂ, ಕಲಿಯುವಲ್ಲಿ ಶಿಷ್ಯರ ಗಮನ ಸಾಲದು ಎಂದು ಗುರುವಿಗೆ ಪದೇಪದೆ ಅನಿಸುತ್ತಿತ್ತು.

ಒಮ್ಮೆ ಆ ಶಿಷ್ಯರಿಗೆ ತಮ್ಮ ಗುರುವಿಗಾಗಿ ಏನಾದರೂ ವಿಶೇಷವಾದ ವಸ್ತುವೊಂದನ್ನು ತರಬೇಕು ಎಂದು ಬಯಕೆಯಾಯಿತು. ಬಾಲ್ಯದಲ್ಲೇ ಆಶ್ರಮಕ್ಕೆ ಬಂದಿದ್ದ ಹೆಚ್ಚಿನವರು, ಸುತ್ತಲಿನ ನದಿ, ಕಾಡು, ಕಾಡಂಚಿನ ಒಂದೆರಡು ಊರುಗಳನ್ನು ಬಿಟ್ಟು ಹೆಚ್ಚು ಪ್ರಪಂಚ ನೋಡಿದವರೇ ಅಲ್ಲ. ಹಾಗಾಗಿ ಅವರಲ್ಲೇ ಸ್ವಲ್ಪ ಅನುಭವಿಯಾದ ಇಬ್ಬರು ಶಿಷ್ಯರನ್ನು ತಮ್ಮ ಮುಖಂಡರೆಂದು ಉಳಿದೆಲ್ಲಾ ಶಿಷ್ಯರು ಆರಿಸಿ, ಗುರುವಿಗೆ ವಿಶೇಷ ಕಾಣಿಕೆ ತರುವ ಹೊಣೆಯನ್ನು ವಹಿಸಿದರು. ಆ ಇಬ್ಬರು ಶಿಷ್ಯರು ಕಾಣಿಕೆಯನ್ನು ಅರಸುತ್ತಾ ಹೊರಟರು.

ಹತ್ತಾರು ಊರುಗಳನ್ನು ಸುತ್ತಿದರೂ ಅವರಿಗೆ ಬೇಕಾದ ವಸ್ತುಗಳು ದೊರೆಯಲಿಲ್ಲ. ಅದಕ್ಕಿಂತ ದೊಡ್ಡ ಸಮಸ್ಯೆಯೆಂದರೆ, ತಮಗೇನು ಬೇಕು- ತಾವೇನನ್ನು ಅರಸುತ್ತಿದ್ದೇವೆ ಎಂಬುದೇ ಅವರಿಗೆ ಸರಿಯಾಗಿ ಗೊತ್ತಿರಲಿಲ್ಲ. ಹಾಗಾಗಿ ಹುಡುಕುವುದು ಇನ್ನಷ್ಟು ಕಷ್ಟವಾಗುತ್ತಿತ್ತು. ಯಾವುದೋ ಒಂದೂರಿನ ಒಂದು ಸಂತೆಗೆ ಹೋದಾಗ ಅವರಿಗೆ ಬೃಹತ್‌ ಗಾತ್ರದ ಕುಂಬಳ ಕಾಯೊಂದು ಕಣ್ಣಿಗೆ ಬಿತ್ತು. ಅವರ ಪಾಲಿಗೆ ಕುಂಬಳ ಕಾಯಿಯೇ ಹೊಸ ತರಕಾರಿಯಾಗಿತ್ತು. ಅದರಲ್ಲೂ ಇಷ್ಟು ದೊಡ್ಡ ಗಾತ್ರದ ಯಾವುದೇ ತರಕಾರಿಯನ್ನೂ ಅವರು ನೋಡಿರಲಿಲ್ಲ. ಗುರುವಿನ ಆಶ್ರಮದ ಹಿತ್ತಲಲ್ಲಿ ಬೆಳೆಯುವ ಒಂದಿಷ್ಟು ತರಕಾರಿಗಳು ಮಾತ್ರವೇ ಅವರಿಗೆ ಪರಿಚಿತವಾಗಿದ್ದವು. ತಮ್ಮತಮ್ಮಲ್ಲೇ ಎಷ್ಟು ಚರ್ಚಿಸಿದರೂ ಅಷ್ಟು ದೊಡ್ಡ ಗಾತ್ರದ್ದು ಏನಿರಬಹುದು ಎಂಬುದು ಅವರಿಗೆ ಬಗೆಹರಿಯಲಿಲ್ಲ. ಹಾಗಾಗಿ ಅಂಗಡಿಯಾತನ ಬಳಿಗೇ ಹೋಗಿ ಕೇಳುವುದು ಎಂದು ನಿರ್ಧರಿಸಿದರು.

ಬೆಳಗಿನಿಂದ ಸಂತೆಯಲ್ಲಿ ಸರಿಯಾಗಿ ವ್ಯಾಪಾರವಾಗದೇ ಸ್ವಲ್ಪ ಸಿಟ್ಟಿನಲ್ಲೇ ಇದ್ದ ಅಂಗಡಿಯಾತ. ಹೀಗಿರುವಾಗ ಶಿಷ್ಯರಿಬ್ಬರು ಬಂದು, ʻನಮಸ್ಕಾರ ಸ್ವಾಮಿ! ನಿಮ್ಮ ಎಡಗಡೆ ಪಕ್ಕದಲ್ಲಿ ಇದೆಯಲ್ಲ, ಆ ದೊಡ್ಡ ಗಾತ್ರದ್ದು- ಅದೇನು?ʼ ಎಂದು ಕೇಳಿದರು. ಮೊದಲೇ ಸಿಟ್ಟಿನಲ್ಲಿದ್ದ ಅಂಗಡಿಯವನಿಗೆ ಈಗಂತೂ ರೇಗಿಹೋಯಿತು. ʻಅದಾ? ಕುದುರೆ ಮೊಟ್ಟೆ! ತಗೊಳಿ ಬೇಕಾದ್ರೆʼ ಎಂದ. ಶಿಷ್ಯರು ಇದನ್ನು ನಿಜಕ್ಕೂ ನಂಬಿದರು! ಮಾತ್ರವಲ್ಲ, ಸಂತೋಷದಿಂದ ಕುಣಿದಾಡಿದರು. ಅವರು ಹುಡುಕುತ್ತಿದ್ದ ಅಪೂರ್ವವಾದ ವಸ್ತು ಅವರಿಗೆ ಸಿಕ್ಕಿತ್ತು.

ʻಈ ಕುದುರೆ ಮೊಟ್ಟೆಗೆಷ್ಟು ಹಣ?ʼ ಎಂದು ಕೇಳುತ್ತಿದ್ದಂತೆ ಅಂಗಡಿಯಾತನಿಗೆ ಸಿಟ್ಟಿನ ನಡುವೆಯೂ ನಗುಬಂತು. ಆದರೂ ಇವರ ಮೂರ್ಖತನವನ್ನು ತನ್ನ ಲಾಭಕ್ಕೆ ಉಯೋಗಿಸಿಕೊಂಡ ಆತ, ಆ ಕುಂಬಳ ಕಾಯಿಗೆ ದುಪ್ಪಟ್ಟು ದರ ಹೇಳಿ ಮಾರಾಟ ಮಾಡಿದ. ಇಬ್ಬರೂ ಅದನ್ನು ಹೊತ್ತು ಖುಷಿಯಿಂದ ಆಶ್ರಮದತ್ತ ಹೆಜ್ಜೆ ಹಾಕಿದರು.

ದಾರಿಯಲ್ಲಿ ಅವರು ಕಾಡೊಂದನ್ನು ದಾಟಬೇಕಿತ್ತು. ದೊಡ್ಡ ಕುಂಬಳಕಾಯಿಯನ್ನು ಹಿಡಿದು ಇಬ್ಬರಿಗೂ ಕೈ ನೋಯಲಾರಂಭಿಸಿತ್ತು. ಅದನ್ನೊಂದು ಮರದಡಿಗೆ ಇಟ್ಟುಕೊಂಡು ವಿಶ್ರಮಿಸಿಕೊಳ್ಳಲು ಕುಳಿತರು. ಅಷ್ಟರಲ್ಲಿ ಒಬ್ಬಾತನಿಗೆ ಸಂಶಯವೊಂದು ಬಂತು. ʻಈ ಮೊಟ್ಟೆಯಿಂದ ಕುದುರೆ ಮರಿ ಬರುವುದಕ್ಕೆ ಇನ್ನೆಷ್ಟು ದಿನ ಬೇಕು ಅಂತಲೇ ಕೇಳಲಿಲ್ಲವಲ್ಲ!ʼ ಎಂದ ಇನ್ನೊಬ್ಬನಲ್ಲಿ. ʻಛೇ! ಹೌದಲ್ಲೋ! ಆದರೆ… ಇದಕ್ಕೆ ಕಾವು ಕೊಡುವುದು ಹೇಗೆ? ಕಾವೇ ಕೊಡದೆ ಮರಿ ಹೇಗೆ ಬರುತ್ತದೆ?ʼ ಎಂದು ಇನ್ನೊಬ್ಬ ಪೇಚಾಡಿಕೊಂಡ. ಇಬ್ಬರಿಗೂ ತಾವೆಂಥ ತಪ್ಪು ಮಾಡಿದೆವು ಎನಿಸಿತು. ಇರಲಿ, ಇವೆಲ್ಲಾ ವಿಷಯಗಳು ಗುರುಗಳಿಗೆ ಗೊತ್ತಿರಬಹುದು ಎಂದು ಒಬ್ಬರನ್ನೊಬ್ಬರು ಸಮಾಧಾನ ಮಾಡಿಕೊಂಡು ಹೊರಟರು.

ಆಶ್ರಮದಿಂದ ಹೊರಟು ಮೂರ್ನಾಲ್ಕು ದಿನಗಳೇ ಕಳೆದಿದ್ದವು. ಅವರು ಇಟ್ಟುಕೊಂಡಿದ್ದ ಬುತ್ತಿಯೆಲ್ಲಾ ಎಂದೋ ಖರ್ಚಾಗಿತ್ತು. ಹಸಿವೆ, ದಣಿವು, ಬಾಯಾರಿಕೆಯಿಂದ ಬಳಲಿದ್ದ ಅವರಿಗೆ ಈ ದೊಡ್ಡ ಕುಂಬಳ ಕಾಯಿ ಹೊತ್ತು ನಡೆಯುವುದು ಕಷ್ಟವಾಗುತ್ತಿತ್ತು. ಕಾಡು ದಾರಿಯಲ್ಲಿ ಹೆಜ್ಜೆ ಹಾಕುವುದೂ ಸುಲಭವಿರಲಿಲ್ಲ. ಇಳಿಜಾರಿನಲ್ಲಿ ಪೊದೆಗಳ ನಡುವೆ ದಾರಿ ಮಾಡಿಕೊಂಡು ನಡೆಯುವಾಗ ಅಚಾನಕ್ಕಾಗಿ ಕುಂಬಳ ಕಾಯಿ ಇವರ ಕೈಯಿಂದ ಕೆಳಗೆ ಬಿತ್ತು. ಇಳಿಯುವ ದಾರಿಯಾದ್ದರಿಂದ, ಬಿದ್ದ ಕುಂಬಳಕಾಯಿ ಉರುಳುತ್ತಾ ಹೊರಟು ಹೋಯಿತು. ದಾರಿಯಲ್ಲಿನ ಬೇರುಗಳನ್ನೆಲ್ಲಾ ತರಚಿಕೊಂಡು ಉರುಳೀ… ಉರುಳಿ, ಒಂದು ಮರಕ್ಕೆ ಢಿಕ್ಕಿ ಹೊಡೆದು ನಿಂತಿತು. ಇವರಿಬ್ಬರೂ ಲಘುಬಗೆಯಿಂದ ಎದ್ದೂಬಿದ್ದು ಓಡೋಡುತ್ತಾ ಬಂದು ನೋಡಿದರೆ, ಕುಂಬಳ ಕಾಯಿ ಮೂರ್ನಾಲ್ಕು ತುಂಡುಗಳಾಗಿ ಒಡೆದು ಹೋಗಿತ್ತು!

ಇದನ್ನೂ ಓದಿ: ಮಕ್ಕಳ ಕಥೆ: ಶಿಷ್ಯ ಕಲಿತ ಪಾಠ- ಭಾಗ 2

ಇಲ್ಲಿಗೇ ಮುಗಿಯಲಿಲ್ಲ- ಈ ಎಲ್ಲಾ ಗದ್ದಲಕ್ಕೆ ಬೆದರಿ ಅಡಗಿದ್ದ ಜಿಂಕೆಯೊಂದು, ಕುಂಬಳ ಕಾಯಿ ಢಿಕ್ಕಿ ಹೊಡೆದಿದ್ದ ಮರದ ಹಿಂದಿನ ಪೊದೆಯಿಂದ ಓಡಿಹೋಯಿತು. ಪೊದೆಯಿಂದ ಓಡಿದ್ದೇನು ಎಂಬುದು ಸ್ಪಷ್ಟವಾಗಿ ಕಾಣದೆ ಇದ್ದಿದ್ದರಿಂದ, ಮೊಟ್ಟೆಯೊಡೆದು ಕುದುರೆ ಮರಿಯೇ ಹೊರಬಂದು ಕಾಡಿನಲ್ಲಿ ಓಡಿಹೋಯಿತು ಎಂದು ಇಬ್ಬರೂ ಭಾವಿಸಿದರು!

ಕೈಯಲ್ಲಿದ್ದ ಹಣವೂ ಖರ್ಚಾಗಿ, ಮೊಟ್ಟೆಯೂ ಒಡೆದುಹೋಗಿ, ಕುದುರೆ ಮರಿಯೂ ಪರಾರಿಯಾಗಿ- ಇದೆಂಥಾ ಅವಸ್ಥೆಯಾಯಿತು, ಆಶ್ರಮದ ಉಳಿದ ಶಿಷ್ಯರ ಕೈಯಿಂದ ಪೆಟ್ಟು ತಿನ್ನಬೇಕಾದೀತು ಎಂದು ಹೆದರಿ ಇಬ್ಬರೂ ಗೋಳಾಡತೊಡಗಿದರು. ಎಷ್ಟು ಅತ್ತರೂ ಮುಂದಿನ ದಾರಿಯೇನು ಎಂಬುದು ತಿಳಿಯಲಿಲ್ಲ ಅವರಿಗೆ. ಕುಂಬಳ ಕಾಯಿಯ ತುಂಡುಗಳನ್ನೇ ಹೊತ್ತು ಆಶ್ರಮದತ್ತ ನಡೆಯತೊಡಗಿದರು. ಅದನ್ನು ಗುರುಗಳ ಎದುರಿಗೇ ಇಟ್ಟು, ನಡೆದ ವಿಷಯವನ್ನೆಲ್ಲಾ ವಿವರಿಸಿದರು.

ತನ್ನ ಶಿಷ್ಯರ ಗುರುಭಕ್ತಿಯನ್ನು ಕಂಡು ಗುರುವಿಗೆ ಸಂತೋಷವಾದರೂ, ಅವರ ಪೆದ್ದುತನವನ್ನು ಕಂಡು ಚಿಂತೆಯೂ ಆಯಿತು. ಹೀಗೇ ಆದರೆ ಇವರೆಲ್ಲಾ ಲೋಕದಲ್ಲಿ ಬದುಕುವುದು ಹೇಗೆ ಎಂದು ಯೋಚಿಸಿದ ಗುರುಗಳು, ಆಶ್ರಮದ ಎಲ್ಲಾ ಶಿಷ್ಯರನ್ನೂ ಬಳಿಗೆ ಕರೆದು, ಎಲ್ಲರ ಕೈಯಲ್ಲೂ ನಾಲ್ಕಾರು ಕುಂಬಳಬೀಜಗಳನ್ನು ಇರಿಸಿ, ಆಶ್ರಮದ ಸುತ್ತಲಿನ ಪ್ರದೇಶದಲ್ಲಿ ಬಿತ್ತುವಂತೆ ತಿಳಿಸಿದರು. ಕೆಲವೇ ದಿನಗಳಲ್ಲಿ ಬೀಜಗಳು ಮೊಳಕೆಯೊಡೆದು, ಬಳ್ಳಿಗಳಾಗಿ ಸುತ್ತೆಲ್ಲಾ ಹಬ್ಬಿದವು. ಇನ್ನೊಂದು ತಿಂಗಳಲ್ಲಿ ಕಾಯಿಗಳನ್ನೂ ಬಿಡಲಾರಂಭಿಸಿದಾಗ ಶಿಷ್ಯಂದಿರಿಗೆಲ್ಲಾ ಅಚ್ಚರಿಯಾಯಿತು. ಇನ್ನೂ ಹಲವಾರು ತಿಂಗಳುಗಳವರೆಗೆ ಆಶ್ರಮದ ಎಲ್ಲರಿಗೂ ಸಾಕಾಗುವಷ್ಟು ಕುಂಬಳಕಾಯಿಗಳು ಬಿಟ್ಟದ್ದವು.

ಸಂತೆಯಲ್ಲಿನ ವ್ಯಾಪಾರಿಯ ಮಾತಿಗೆ ಮರುಳಾದ ಶಿಷ್ಯರ ಮುಗ್ಧತೆಗೆ ಈ ಮೂಲಕ ತಿಳುವಳಿಕೆ ಹೇಳಿದ್ದ ಗುರು. ತರಕಾರಿಯನ್ನು ಕುದುರೆಮೊಟ್ಟೆ ಎಂದು ನಂಬಿಕೊಂಡ ತಮ್ಮ ಮೂರ್ಖತನಕ್ಕೆ ನಾಚಿಕೊಂಡ ಶಿಷ್ಯರಿಗೆ, ಕಲಿಕೆಯತ್ತ ಗಮನ ಸಾಲದು ಅಂತ ಗುರುಗಳು ಹೇಳೋದೇಕೆ ಎನ್ನೋದು ಅರ್ಥವಾಗಿತ್ತು. ಆನಂತರದಿಂದ ಕಲಿಯುವ ಕಡೆಗೆ ಹೆಚ್ಚಿನ ಗಮನ ನೀಡತೊಡಗಿದರು.

ಇದನ್ನೂ ಓದಿ: ಮಕ್ಕಳ ಕಥೆ: ಶಿಷ್ಯ ಕಲಿತ ಪಾಠ (ಭಾಗ 1)

Exit mobile version