Site icon Vistara News

ಮಕ್ಕಳ ಕಥೆ: ಮಕ್ಕಳಿಗೆ ಅಬ್ದುಲ್‌ ಕಲಾಂ ಹೇಳಿದ ಎರಡು ಕತೆಗಳು

children story

ಮಾವಿನ ಹಣ್ಣಿನ ಕತೆ

ಇದೊಂದು ಪುಟ್ಟ ಮಾವಿನ ಹಣ್ಣಿನ ಕತೆ.

ದೊಡ್ಡ ಮಾವಿನ ಮರ. ಅದರಲ್ಲಿ ಪುಟ್ಟ ಪುಟ್ಟ ಹೂಗಳು ಬಿಟ್ಟವು. ಹೂವೊಂದು ಕಾಯಾಯಿತು. ನಿಧಾನವಾಗಿ ದೊಡ್ಡದಾಯಿತು. ಅದರ ಮೈಬಣ್ಣ ನಿಧಾನವಾಗಿ ಹಳದಿಗೆ ತಿರುಗಲು ಆರಂಭವಾಯಿತು.

ಆಗ ಅದಕ್ಕೆ ಚಿಂತೆ ಆರಂಭವಾಯಿತು- ನಾನು ಇನ್ನೂ ದೊಡ್ಡದಾಗಿಬಿಟ್ಟರೆ ಈ ಕೊಂಬೆ ನನ್ನ ಭಾರವನ್ನು ತಡೆದುಕೊಳ್ಳಲಾರದು. ನಾನು ನೆಲಕ್ಕೆ ಬಿದ್ದುಬಿಡುತ್ತೇನೆ. ಹಣ್ಣಾಗಿಬಿಟ್ಟರೆ ನನ್ನ ಹೊಳೆಯುವ ಹಸಿರು ಬಣ್ಣ ಹೋಗಿ ಬಿಡುತ್ತದೆ. ಆಗ ಯಾರೂ ನನ್ನ ಬಳಿ ಬರುವುದಿಲ್ಲ.

ಅದು ಯೋಚಿಸಿದಂತೆಯೇ ಆಯಿತು. ಮಾವು ದೊಡ್ಡದಾದಾಗ ಕೊಂಬೆ ಅದನ್ನು ಆಧರಿಸಲಿಲ್ಲ. ಹಣ್ಣು ನೆಲಕ್ಕೆ ಬಿತ್ತು. ಹಕ್ಕಿಗಳು ಅದನ್ನು ಕುಕ್ಕಿ ತಿರುಳನ್ನು ತಿಂದು ಓಟೆಯನ್ನು ಮಾತ್ರ ಉಳಿಸಿದವು.

ಅದು ತನ್ನ ತಾಯಿ ಮರವನ್ನು ದುಃಖದಿಂದ ನೋಡಿತು. ʼʼಅಮ್ಮಾ, ನನಗೆ ಇದು ಶಿಕ್ಷೆಯೇ?ʼʼ ಎಂದು ಕೇಳಿತು.
ʼʼಅಲ್ಲ ಮಗೂ, ನೀನು ಸಿಹಿಯಾಗಿರುವೆ, ಆದ್ದರಿಂದಲೇ ಎಷ್ಟೊಂದು ಜನ ನಿನ್ನಿಂದ ಸವಿಯನ್ನು ಉಂಡರು. ಈಗ ನೀನು ಮಣ್ಣು ಸೇರಿ ನಿನ್ನಂಥ ಇನ್ನಷ್ಟು ಪರೋಪಕಾರಿಗಳಿಗೆ ಜನನಿಯಾಗುವೆʼʼ ಎಂದು ಮರ ಹೇಳಿತು.

ಹಾಗೇ ಆಯಿತು. ಓಟೆ ಮಣ್ಣಿನಡಿ ಸೇರಿ ಮೊಳಕೆಯೊಡೆಯಿತು. ಗಿಡವಾಗಿ, ಮರವಾಗಿ, ಸವಿಯಾದ ಹಣ್ಣುಗಳನ್ನು ಬಿಡತೊಡಗಿತು.

ಕಷ್ಟಗಳು ನಮಗೆ ಮರುಜನ್ಮ ನೀಡುತ್ತವೆ.

ಚಿಟ್ಟೆಯಾಗದ ಒಂದು ಹುಳ

ಒಬ್ಬ ದಾರಿಹೋಕ ಸಾಗುತ್ತಾ ಇದ್ದ. ಗಿಡದಲ್ಲಿ ನೇತಾಡುತ್ತಿದ್ದ ಒಂದು ಕೋಶ ಅವನ ಗಮನ ಸೆಳೆಯಿತು.
ಅದೊಂದು ಚಿಟ್ಟೆಯ ಕೋಶ. ಅದರೊಳಗೆ ಮರಿಯಿತ್ತು. ಕೋಶವನ್ನು ಒಡೆದು ಹೊರಬರಲು ಸಮಯ ಬಂದಿತ್ತು. ಅದು ನಿಧಾನವಾಗಿ ಕೋಶದ ಮೈಯನ್ನು ನೂಕಿ ನೂಕಿ ತೂತು ಕೊರೆದು ಹೊರಬರಲು ತವಕಿಸುತ್ತಾ ಇತ್ತು.

ಹೊರಬಂದ ಮೇಲೆ ಅದು ಗಾಳಿಯಲ್ಲಿ ಮನಸೆಳೆಯುತ್ತ ಹಾರಾಡುವ ಬಣ್ಣಬಣ್ಣದ ಚಿಟ್ಟೆಯಾಗಲಿತ್ತು.ದಾರಿಹೋಕ ಅದನ್ನು ನೋಡಿದ. ಮರಿ ಇನ್ನೂ ಕಷ್ಟಪಡುತ್ತಲೇ ಇತ್ತು. ಅವನಿಗೆ ಪಾಪ ಎನಿಸಿತು. ಕೋಶವನ್ನು ಬೇಗನೆ ತೆರೆದರೆ ಮರಿ ಇಷ್ಟೊಂದು ಕಷ್ಟಪಡುವುದು ತಪ್ಪುತ್ತದಲ್ಲ ಎನಿಸಿತು. ಒಂದು ಕತ್ತರಿ ತೆಗೆದುಕೊಂಡು ಕೋಶವನ್ನು ಸ್ವಲ್ಪವೇ ಕತ್ತರಿಸಿ ಮರಿಯನ್ನು ಮೆತ್ತಗೆ ಹೊರತೆಗೆದು ಬಿಟ್ಟ.

ಮರಿ ಗಾಬರಿ ಕಂಗಳಿಂದ ಜಗತ್ತನ್ನು ನೋಡಿತು. ಆದರೆ ನಡೆಯಲಿಲ್ಲ, ಹಾರಾಡಲಿಲ್ಲ. ಬೆಳಕು ಅದರ ಕಣ್ಣು ಕುಕ್ಕುತ್ತಿತ್ತು.
ದಾರಿಹೋಕ ತುಂಬಾ ಹೊತ್ತು ಅದನ್ನು ನೋಡಿದ. ಹುಳು ತೆವಳುತ್ತಿತ್ತು. ಹಾರುವ ಯಾವ ಲಕ್ಷಣವನ್ನೂ ತೋರಲಿಲ್ಲ. ಅವನಿಗೆ ವಿಸ್ಮಯವಾಯಿತು. ಅಲ್ಲೇ ಇದ್ದ ರೈತನೊಬ್ಬನನ್ನು ಈ ಬಗ್ಗೆ ಪ್ರಶ್ನಿಸಿದ.

ಪ್ರಕೃತಿಯ ಬಗ್ಗೆ ಚೆನ್ನಾಗಿ ಪರಿಚಯವಿದ್ದ ರೈತ ಹೇಳಿದ- ʼʼನೀವು ಆ ಹುಳವನ್ನು ಜೀವನಪೂರ್ತಿ ಅಂಗವಿಕಲ ಆಗುವಂತೆ ಮಾಡಿಬಿಟ್ಟಿದ್ದೀರಿ. ಹುಳ ಕೋಶವನ್ನು ಕಷ್ಟಪಟ್ಟು ಕೊರೆದು ಕೊರೆದೇ ಹೊರಬರಬೇಕು. ಆಗ ಅದಕ್ಕೆ ಹಾರಾಡುವ ಶಕ್ತಿ, ರೆಕ್ಕೆ ಎಲ್ಲವೂ ಬರುತ್ತದೆ. ನೀವು ಆ ಕಷ್ಟವನ್ನು ಇಲ್ಲವಾಗಿಸಿ ಅದು ಬೆಳೆಯುವ ಸಾಧ್ಯತೆಯನ್ನೇ ನಾಶ ಮಾಡಿದ್ದೀರಿ!ʼʼ ಎಂದ.

ದಾರಿಹೋಕನಿಗೆ ಆಗ ತನ್ನ ತಪ್ಪಿನ ಅರಿವಾಯಿತು.

Exit mobile version