Site icon Vistara News

ಮಕ್ಕಳ ಕಥೆ: ತೇಜಸ್ವಿಯ ಗಿಡ ಏನಾಯಿತು?

kids story king

ಭಾಗ- 1

ಈ ಕಥೆಯನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/05/TejashwiyaGida-Part1-1.mp3

ಒಂದೂರು, ಅಲ್ಲೊಬ್ಬ ರಾಜ. ಅವನಿಗೆ ವಯಸ್ಸಾಗ್ತಾ ಬಂದಿತ್ತು. ಮಕ್ಕಳಿಲ್ಲದೇ ಇದ್ದಿದ್ರಿಂದ ತನ್ನ ನಂತರ ಈ ಸಿಂಹಾಸನಕ್ಕೆ ಯಾರು ಅನ್ನುವ ಚಿಂತೆ ಅವನನ್ನು ಕೊರೀತಾ ಇತ್ತು. ತಮ್ಮ ಊರಿನ ಯಾವುದಾದರೂ ಒಳ್ಳೆಯ ಮತ್ತು ಪ್ರಾಮಾಣಿಕ ಬಾಲಕನನ್ನು ಆಯ್ಕೆ ಮಾಡಿ, ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಿಕೊಳ್ಳಬೇಕು ಅಂತ ರಾಜ ನಿರ್ಧರಿಸಿದ. ಆದರೆ ಅಂಥವನನ್ನು ಆಯ್ಕೆ ಮಾಡೋದು ಹೇಗೆ? ಇದಕ್ಕಾಗಿ ಅರಸ ಒಂದುಪಾಯವನ್ನು ಮಾಡಿದ.

ಆತನಿಗೆ ಗಿಡಗಳು ಅಂದ್ರೆ ಬಹಳ ಪ್ರೀತಿ. ಅರಮನೆಯ ಸುತ್ತಲೂ ಬಹಳ ಚಂದದ ಉದ್ಯಾನವನಗಳನ್ನು ಬೆಳೆಸಲಾಗಿತ್ತು. ಈ ತೋಟಗಳಿಗೆ ರಾಜನ ವಿಶೇಷ ಪ್ರೀತಿಯೂ ದೊರೆಯುತ್ತಿತ್ತು. ಅದ್ಭುತ ಎನ್ನುವಂಥ ಹೂದೋಟಗಳ ಜೊತೆಗೆ ಅರಮನೆಗೆ ಬೇಕಾಗುವ ತರಕಾರಿಗಳ ದೊಡ್ಡ ತೋಟವೂ ಇವುಗಳಲ್ಲಿ ಸೇರಿತ್ತು. ಇದೇ ನಿಟ್ಟಿನಲ್ಲಿ, ಊರಿನ ಎಲ್ಲಾ ಆಸಕ್ತ ಬಾಲಕರಿಗೆ ಒಂದೊಂದು ಬೀಜವನ್ನು ನೀಡಿ, ಯಾರ ಗಿಡ ಅತ್ಯಂತ ಚೆನ್ನಾಗಿ ಬೆಳೆಯುವುದೋ, ಅವರನ್ನೇ ತನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಿಕೊಳ್ಳುವುದು ಎಂದು ಅರಸ ಊರಲ್ಲೆಲ್ಲಾ ಡಂಗುರ ಹೊಡೆಸಿದ. (ಅರಸೊತ್ತಿಗೆಯ ಉತ್ತರಾಧಿಕಾರಿಯನ್ನು ಮಹಾಪ್ರಭುಗಳು ನೇಮಿಸಲಿದ್ದಾರೆ. ಊರಿನ ಅರಸಾಗಲು ಆಸಕ್ತಿ ಇರುವ ಬಾಲಕರು, ಅರಮನೆಗೆ ಬಂದು ರಾಜಬೀಜವನ್ನು ತೆಗೆದುಕೊಳ್ಳಬೇಕು. ಯಾರು ನೆಟ್ಟ ರಾಜಬೀಜದಿಂದ ಚೆನ್ನಾಗಿ ಗಿಡ ಬೆಳೆಯುವುದೋ ಅವರಿಗೇ ಮುಂದಿನ ಸಿಂಹಾಸನ)

ಇದನ್ನೂ ಓದಿ: ಮಕ್ಕಳ ಕಥೆ: ಸ್ವೀಡನ್‌ ದೇಶದ ಜನಪದ ಕಥೆ: ಕಿನ್ನರಿಯ ಕುರಿಗಳು: ಭಾಗ 1

ಇದನ್ನು ಕೇಳಿದ ಪ್ರಜೆಗಳೆಲ್ಲಾ ಕುಣಿದಾಡಿಬಿಟ್ಟರು. ಬಹಳಷ್ಟು ಜನ ತಂತಮ್ಮ ಮಕ್ಕಳನ್ನು ತೋಟಗಾರಿಕೆಯಲ್ಲಿ ತರಬೇತಿ ಪಡೆಯಲು ಕಳುಹಿಸಿದರು. ತಮ್ಮ ಮಗ ರಾಜನಾದರೆ ತಾವೆಲ್ಲ ಅರಮನೆಯಲ್ಲಿ ಏನೇನು ತಿನ್ನಬಹುದು, ಎಂಥೆಂಥಾ ಪಟ್ಟೆವಸ್ತ್ರಗಳನ್ನು ತೊಡಬಹುದು, ಹೇಗೆಲ್ಲಾ ದರ್ಬಾರು ಮಾಡಬಹುದು ಎಂದೆಲ್ಲಾ ಕನಸು ಕಾಣತೊಡಗಿದರು. ಇನ್ನೂ ಕೆಲವರು ಈಗಲೇ ದುಡಿಯುವುದನ್ನು ಬಿಟ್ಟು, ಆರಾಮಾಗಿ ಬದುಕುವುದನ್ನು ರೂಢಿಸಿಕೊಳ್ಳತೊಡಗಿದರು. ಅಂತೂ, ಕೂಸು ಹುಟ್ಟೋಕು ಮುನ್ನವೇ ಎಲ್ಲರೂ ಕುಲಾವಿಯನ್ನು ಹೊಲಿಸುವವರೇ! ಆಸಕ್ತರು ಅರಮನೆಗೆ ಬಂದು ರಾಜಬೀಜಗಳನ್ನು ಪಡೆಯಲು ದಿನವೊಂದನ್ನು ನಿಗದಿ ಮಾಡಲಾಗಿತ್ತು. ಆ ದಿನವಂತೂ ಸೊಂಟಕ್ಕೆ ಹಾಕುವ ಎಳೆಮಕ್ಕಳಿಂದ ಹಿಡಿದು ೧೫-೧೬ರ ಮಕ್ಕಳವರೆಗೆ ಎಲ್ಲರದ್ದೂ ಬೀದಿ-ಬೀದಿಗಳಲ್ಲಿ ಮೆರವಣಿಗೆ. ರಂಗುರಂಗಾದ ಅಂಗಿಯನ್ನು ತೊಟ್ಟು ಚಿಣ್ಣರೆಲ್ಲಾ ತಂತಮ್ಮ ಹೆತ್ತವರೊಂದಿಗೆ ಅರಮನೆಗೆ ಹೊರಟರು. ನೋಡಿದರೆ, ಚಿಣ್ಣರ ದಂಡು ಅರಮನೆಯನ್ನೇ ಮುತ್ತೋದಕ್ಕೆ ಹೊರಟಹಾಗೆ ಕಾಣ್ತಾ ಇತ್ತು. ಮಕ್ಕಳೆಲ್ಲಾ ಈಗಲೇ ನೇರವಾಗಿ ಹೋಗಿ ಸಿಂಹಾಸನದ ಮೇಲೆ ಕುಳಿತೇ ಬಿಡುವ ಹುಮ್ಮಸ್ಸಿನಲ್ಲಿದ್ದರು.

ಆದರೆ ಯಾರಿಗೂ ಅರಮನೆಯೊಳಗೆ ಪ್ರವೇಶವೇ ಇರಲಿಲ್ಲ! ಎಲ್ಲರನ್ನು ಬಾಗಿಲಲ್ಲೇ ತಡೆದಂಥ ಭಟರು, ಮಕ್ಕಳು ಮತ್ತವರ ಸೇನೆಯನ್ನೆಲ್ಲಾ ರಾಜನ ಉದ್ಯಾನವದತ್ತ ಕಳಿಸಿದರು. ಅಲ್ಲಿ ಹಲವಾರು ರೀತಿಯ ಬೀಜಗಳನ್ನು ಇರಿಸಲಾಗಿತ್ತು. ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಲು ಆಸಕ್ತರಿಗೆ ಸೂಚಿಸಲಾಗಿತ್ತು. ಕೆಲವರಂತೂ ಮುಷ್ಟಿ ತುಂಬಾ ಬಾಚಿಕೊಂಡರು. ಆದರೆ ಗಿಡಗಳ ಆರೈಕೆಯನ್ನು ಕಡ್ಡಾಯವಾಗಿ ಮಕ್ಕಳೇ ಮಾಡಬೇಕು, ದೊಡ್ಡವರಲ್ಲ ಎಂಬ ಶರತ್ತನ್ನೂ ವಿಧಿಸಲಾಗಿತ್ತು. ಎಲ್ಲರಿಗೂ ಮುಂದಿನ ಒಂದು ತಿಂಗಳ ಅವಧಿ ನೀಡಲಾಗಿತ್ತು. ಅಷ್ಟರಲ್ಲಿ ಗಿಡಗಳು ಯಾವ ಸ್ಥಿತಿಯಲ್ಲಿ ಇದ್ದರೂ ಅದನ್ನು ಹಾಗೆಯೇ ಹಿಂದೆ ತರಬೇಕು ಎಂದು ಸೂಚಿಸಲಾಗಿತ್ತು. ಎಲ್ಲರೂ ಒಂದು ತಿಂಗಳಲ್ಲಿ ಗಿಡವೇನು, ಮರವನ್ನೇ ಬೆಳೆದುಬಿಡುವ ಉತ್ಸಾಹದಿಂದ ಮರಳಿದರು.

ಇದನ್ನೂ ಓದಿ: ಮಕ್ಕಳ ಕಥೆ: ಸ್ವೀಡನ್‌ ದೇಶದ ಜನಪದ ಕಥೆ: ಕಿನ್ನರಿಯ ಕುರಿಗಳು: ಭಾಗ 2

ಹತ್ತು ವರ್ಷ ಪ್ರಾಯದ ತೇಜಸ್ವಿ ಚೂಟಿಯಾದ ಹುಡುಗ. ಗುರುಗಳ ಹತ್ರ ವಿದ್ಯೆ ಕಲಿಯುವ ಆಸಕ್ತಿ ಇದ್ದರೂ ಮನೆಯಲ್ಲಿ ಅನುಕೂಲ ಇರಲಿಲ್ಲ. ಹಾಗಾಗಿ ಇರುವ ಸಮಯವನ್ನು ಹಾಳು ಮಾಡದೇ ಮನೆಯ ಸುತ್ತಲೂ ಚಂದದ ಕೈತೋಟವನ್ನು ಮಾಡಿದ್ದ ಪೋರ. ಅರಮನೆಯಿಂದ ಬೀಜಗಳನ್ನು ತಂದವರಲ್ಲಿ ಅವನೂ ಒಬ್ಬ. ತನ್ನಲ್ಲಿರುವ ಹೂವಿನ ಕುಂಡಗಳನ್ನೇ ಚಂದದ್ದೊಂದು ಆರಿಸಿಕೊಂಡು ಅದರ ಅಡಿಯಲ್ಲಿ ಒಂದು ಹಾಸು ಸಣ್ಣ ಕಲ್ಲು ಮಿಶ್ರಿತ ಮರಳು, ಮೇಲೆ ಫಲವತ್ತಾದ ಕಪ್ಪು ಮಣ್ಣು, ಅದರ ಮೇಲೆ ಗೊಬ್ಬರ ಎಲ್ಲವನ್ನೂ ಹರಡಿ, ನಡುವಿಗೆ ಆ ಬೀಜವನ್ನು ಬಿತ್ತಿದ. ಅದನ್ನು ಹದವಾದ ಬೆಳಕಿನಲ್ಲಿಟ್ಟು ದಿನವೂ ನೀರು ಹಾಕುತ್ತಿದ್ದ. ಊರಿನ ಉಳಿದೆಲ್ಲ ಹುಡುಗರೂ ಚಂದದ ಹೂಕುಂಡಗಳಲ್ಲಿ ಬೀಜ ಬಿತ್ತಿ, ಅದು ಮೊಳಕೆಯೊಡೆಯುವುದನ್ನೇ ಕಾಯುತ್ತಿದ್ದರು. ತನ್ನ ಗಿಡ ಎಲೆಯೊಡೆದಿದೆ ಎಂದು ಮೊದಲಿಗೆ ಊರಿಗೆಲ್ಲಾ ಸಾರಿದವ ಚಂದ್ರು. ಅರಮನೆಗೆ ಹೋಗಲು ತನ್ನ ಬಟ್ಟೆಗಳನ್ನೆಲ್ಲಾ ಜೋಡಿಸುವುದೊಂದು ಬಾಕಿ ಎಂಬಂತೆ ಸಂಭ್ರಮಿಸಿದ. ಆಮೇಲೆ ಮೋಹನ, ನಂತರ ರಾಜು, ರಾಮು, ಚಿನ್ನು, ಹರಿ… ಹೀಗೆ ಒಬ್ಬೊಬ್ಬರೂ ತಮ್ಮ ಗಿಡದಲ್ಲಿ ಒಂದೆಲೆ ಬಂತು, ಎರಡೆಲೆ ಬಂತು ಎಂದು ದಿನವೂ ವರ್ತಮಾನವನ್ನು ತರುತ್ತಿದ್ದರು. ಆದರೆ ತೇಜಸ್ವಿ ಬಿತ್ತಿದ್ದ ಬೀಜ ಮಾತ್ರ ಜೀವಂತಿಕೆಯನ್ನೇ ತೋರದೆ ಸುಮ್ಮನಿತ್ತು.

ತೇಜಸ್ವಿಯ ಗಿಡ ಏನಾಯಿತು?… ನೋಡಿ ಮುಂದಿನ ಸಂಚಿಕೆಯಲ್ಲಿ!

Exit mobile version