Site icon Vistara News

ಮಕ್ಕಳ ಕಥೆ: ಚಿನ್ನದ ಬಣ್ಣದ ಕುಂಬಳಕಾಯಿ

golden pumpkins kids story

ಈ ಕಥೆಯನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/06/WhatsApp-Audio-2023-06-16-at-130.mp3

ಒಂದೂರಂಚಿನ ತೋಟದಲ್ಲಿ ದೊಡ್ಡ ಹಂಚಿನ ಮನೆಯೊಂದಿತ್ತು. ಅದರಲ್ಲಿ ತಂದೆಯೊಬ್ಬ ತನ್ನಿಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಅಣ್ಣ ಅತಿಯಾಸೆಯವನಾದರೆ ತಮ್ಮ ಚತುರ, ಆದರೆ ನಿರುಪದ್ರವಿ. ಇಬ್ಬರೂ ತಂದೆಯೊಂದಿಗೆ ತೋಟದಲ್ಲಿ ದುಡಿಯುತ್ತಿದ್ದರು. ಕೆಲವು ವರ್ಷಗಳ ನಂತರ ತಂದೆ ತೀರಿಕೊಂಡ. ದುರಾಸೆಯ ಅಣ್ಣ, ತನ್ನ ತಮ್ಮ ಮತ್ತವನ ಸಂಸಾರಕ್ಕೆ ಒಂದಿಷ್ಟು ಹೊಲ ಹಾಗೂ ಕೆಲವು ಮುರುಕು ಪಾತ್ರೆಗಳನ್ನು ನೀಡಿ ಮನೆಯಿಂದ ಹೊರಹಾಕಿದ. ಅಣ್ಣನ ದುರಾಸೆಯ ಬುದ್ಧಿಯನ್ನು ತಿಳಿದಿದ್ದ ತಮ್ಮ, ತನ್ನ ಹೊಲದಲ್ಲಿ ಒಂದು ಸಣ್ಣ ಮನೆ ಕಟ್ಟಿಕೊಂಡು, ಸಂಸಾರದೊಂದಿಗೆ ದುಡಿಯತೊಡಗಿದ. ಬಡವನಾದರೂ ಇರುವುದರಲ್ಲಿ ನೆಮ್ಮದಿಯಿಂದಿದ್ದ.

ಒಮ್ಮೆ ತಮ್ಮನ ಮನೆಮಂದಿಯೆಲ್ಲಾ ಹೊಲದಲ್ಲಿ ದುಡಿಯುತ್ತಿದ್ದಾಗ ಅಜ್ಜಿಯೊಬ್ಬಳು ಅಲ್ಲಿಗೆ ಬಂದಳು. ದಣಿದಿದ್ದ ಆಕೆ ನೀರು ಕೇಳಿದಳು. ತಮ್ಮಲ್ಲಿದ್ದ ನೀರನ್ನೇ ಆಕೆಗೆ ಕುಡಿಸಿದರು ತಮ್ಮನ ಮಕ್ಕಳು. ತಮಗಿದ್ದ ಬುತ್ತಿಯಲ್ಲೇ ಸ್ವಲ್ಪ ಆಕೆಗೂ ನೀಡಿದ ತಮ್ಮ. ನೀರು-ಆಹಾರ ದೊರೆತ ನಂತರ ಚೇತರಿಸಿಕೊಂಡ ಅಜ್ಜಿ, ತನ್ನ ಸೆರಗಿನ ಗಂಟಿನಿಂದ ನಾಲ್ಕು ಕುಂಬಳಕಾಯಿ ಬೀಜಗಳನ್ನು ತೆಗೆದು ತಮ್ಮನಿಗೆ ನೀಡಿದಳು. ಹಸಿದು-ದಣಿದು ಬಂದಿದ್ದ ತನಗೆ ಆಹಾರ ನೀಡಿದಿರಿ, ಸಂತೋಷವಾಯ್ತು. ಈ ಬೀಜಗಳನ್ನು ಹೊಲದಲ್ಲಿ ಬಿತ್ತಿದರೆ, ನಿಮ್ಮೆಲ್ಲರಿಗೆ ಒಳ್ಳೆಯದಾಗುತ್ತದೆ ಎಂದು ಹೇಳಿ ಹೊರಟುಹೋದಳು. ಆಕೆ ನೀಡಿದ್ದ ನಾಲ್ಕು ಕುಂಬಳ ಬೀಜಗಳನ್ನು ಹೊಲದ ನಾಲ್ಕು ದಿಕ್ಕುಗಳಿಗೂ ಬಿತ್ತಿದರು. ಕೆಲವೇ ದಿನಗಳಲ್ಲಿ ಆ ಬೀಜಗಳಿಂದ ಹೊರಟ ಬಳ್ಳಿಗಳು ಹೊಲವನ್ನೆಲ್ಲಾ ತುಂಬಿದವು. ಬಂಗಾರ ಬಣ್ಣದಲ್ಲಿದ್ದ ನೂರಾರು ಕುಂಬಳ ಕಾಯಿಗಳು ಹೊಲದ ತುಂಬಾ ನಳನಳಿಸಿದವು.

ಅಪರೂಪದ ಚಿನ್ನದ ಬಣ್ಣದ ಕುಂಬಳ ಕಾಯಿಗೆ ಸಂತೆಯಲ್ಲಿ ಚಿನ್ನದ ಬೆಲೆಯೇ ದೊರೆಯಿತು. ತಮ್ಮ ಯಾವುದೇ ಬೆಲೆ ಹೇಳಿದರೂ, ಅಷ್ಟು ದುಡ್ಡು ಕೊಟ್ಟು ಜನ ಸಂತೆಯಲ್ಲಿ ಖರೀದಿಸಿದರು. ಹೊಲದಲ್ಲಿ ಬೆಳೆದಿದ್ದ ಅರ್ಧಕ್ಕರ್ಧ ಕುಂಬಳಕಾಯಿಗಳನ್ನು ಮಾರಾಟ ಮಾಡುವಷ್ಟರಲ್ಲಿ ಬಹಳಷ್ಟು ಹಣ ತಮ್ಮನ ಕೈಸೇರಿತು. ಬೇಡಿಕೆ ಹೆಚ್ಚಾದಂತೆ ಆತ ಕುಂಬಳಕಾಯಿಗಳನ್ನು ಬಳ್ಳಿಯಿಂದ ಕಿತ್ತು ಮಾರತೊಡಗಿದ ತಮ್ಮ. ಅಲ್ಲಿಯವರೆಗೂ ಕುಂಬಳ ಕಾಯಿಗಳು ಬೆಳೆಯದೆ, ಕೊಳೆಯದೆ, ಹಾಳಾಗದೆ ಉಳಿಯುತ್ತಿದ್ದವು. ಹಾಗಾಗಿ ದಿನದಿಂದ ದಿನಕ್ಕೆ ತಮ್ಮನ ಆದಾಯ ಹೆಚ್ಚಾಯಿತು.
ಸಣ್ಣ ಮನೆಯಲ್ಲಿ ಹೇಗೋ ದಿನ ಕಳೆಯುತ್ತಿದ್ದ ತಮ್ಮನ ಬದುಕು ಸುಧಾರಿಸಿರುವುದು ಅಣ್ಣನ ಗಮನಕ್ಕೆ ಬಂತು.

ಉಪಾಯದಿಂದ ತಮ್ಮನನ್ನು ಕರೆದು ಮಾತನಾಡಿದ. ಅಜ್ಜಿಯೊಬ್ಬಳ ವೃತ್ತಾಂತದಿಂದ ಹಿಡಿದು, ಚಿನ್ನದ ಕುಂಬಳಕಾಯಿಯ ವಿಷಯದವರೆಗೆ ಎಲ್ಲವೂ ಅಣ್ಣನಿಗೆ ತಿಳಿಯಿತು. ಇಷ್ಟಾದ ಮೇಲೆ ಬಿಡುವವನೇ ಅಣ್ಣ? ರಾತ್ರಿ ಬೆಳಗಾಗುವಷ್ಟರಲ್ಲಿ ತಮ್ಮನ ಹೊಲವನ್ನೆಲ್ಲಾ ಸುಟ್ಟುಬಿಟ್ಟ! ಹೊಲದಲ್ಲಿ ಇನ್ನೂ ಬೆಳೆಯದೆ ಉಳಿದಿದ್ದ ಕುಂಬಳ ಕಾಯಿಗಳೆಲ್ಲಾ ಬಳ್ಳಿಯೊಂದಿಗೇ ಬೂದಿಯಾದವು. ತಮ್ಮ ಬೇಸರದಿಂದ ಕಣ್ಣೀರಿಟ್ಟ. ಆದರೆ ಪ್ರಯತ್ನ ಬಿಡಲಿಲ್ಲ.
ಹೊಲದ ಬೂದಿಗೆ ಒಂದು ವಿಚಿತ್ರವಾದ ಹೊಳಪಿತ್ತು. ಅದನ್ನೇ ತೆಗೆದುಕೊಂಡು ಹೋಗಿ ಸಂತೆಯಲ್ಲಿ ಮಾರಿದ.

ಇದನ್ನೂ ಓದಿ: ಮಕ್ಕಳ ಕಥೆ: ಭೂದೇವತೆಗಳು ಮತ್ತು ಸಹೋದರರು

ಳಫಳ ಹೊಳೆಯುವ ಬೂದಿಯನ್ನು ಕಂಡು ಕುತೂಹಲಗೊಂಡ ಧನಿಕನೊಬ್ಬ, ಅದನ್ನು ತನ್ನ ಜಮೀನಿಗೆ ಗೊಬ್ಬರವಾಗಿ ಹಾಕುವುದಕ್ಕೆ ದುಬಾರಿ ಬೆಲೆಯನ್ನೇ ಕೊಟ್ಟು ಖರೀದಿಸಿದ. ಒಂದೆರಡು ದಿನಗಳಲ್ಲಿ ತಮ್ಮ ಮತ್ತಿಷ್ಟು ಬೂದಿಯನ್ನು ಸಂತೆಗೆ ತೆಗೆದುಕೊಂಡು ಹೋದರೆ, ಆ ಧನಿಕ ಮತ್ತೆ ಭೇಟಿಯಾದ. ಹೊಳೆಯುವ ಬೂದಿಯನ್ನು ಹಾಕುತ್ತಿದ್ದಂತೆ ತನ್ನ ಜಮೀನಿನಿಗೆ ಬಡಿದಿದ್ದ ರೋಗವೆಲ್ಲಾ ತೊಲಗಿ, ಬೆಳೆಗಳು ಆರೋಗ್ಯವಾಗಿವೆ ಎಂದು ಹೇಳಿ, ಇನ್ನಷ್ಟು ಬೂದಿಯನ್ನು ಹೊತ್ತೊಯ್ದ. ಸುದ್ದಿ ಬಾಯಿಂದ ಬಾಯಿಗೆ ಹರಡಿ, ತಮ್ಮನ ಹೊಲದ ಬೂದಿಗೂ ಭಾರೀ ಬೇಡಿಕೆ ಬಂತು.
ಅಣ್ಣನಿಗೆ ಮತ್ತೆ ತಲೆಬಿಸಿಯಾಯಿತು. ಹೊಲವನ್ನೆಲ್ಲಾ ಸುಟ್ಟುಹಾಕಿದರೂ ಈತನ ಬಳಿ ಸಂಪತ್ತು ಹೆಚ್ಚುತ್ತಿರುವುದು ಹೇಗೆ? ಸಂತೆಗೆ ಹೋಗಿ ಈತ ಏನನ್ನು ಮಾರುತ್ತಾನೆ ಎಂದು ಯೋಚಿಸಿ, ತಮ್ಮನ ಬೆನ್ನಿಗೆ ಗುಟ್ಟಾಗಿ ತನ್ನ ಆಳೊಬ್ಬನನ್ನು ಸಂತೆಗೆ ಕಳುಹಿಸಿದ. ಆತ ಬೂದಿಯನ್ನು ಮಾರುತ್ತಿದ್ದಾನೆ ಎಂಬುದು ತಿಳಿಯಿತು. ಯಾವ ಬೂದಿ, ಹೇಗೆ ಬಂತು ಎಂಬುದು ತಿಳಿಯದೆ ಮತ್ತೆ ತಮ್ಮನ ಮನೆಗೆ ಬಂದ ಅಣ್ಣ. ತನ್ನ ಹೊಲವನ್ನೆಲ್ಲಾ ಹಾಳು ಮಾಡಿದ್ದನೆಂಬ ಕೋಪ ಅಣ್ಣನ ಮೇಲೆ ತಮ್ಮನಿಗೆ ಇದ್ದಿದ್ದರಿಂದ, ಆತನ ಯಾವುದೇ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸದ ತಮ್ಮ, ತನ್ನ ಹೊಲವನ್ನೆಲ್ಲಾ ಯಾರೋ ದುಷ್ಟರು ಸುಟ್ಟಿದ್ದಾರೆ; ಅದರ ಬೂದಿಯನ್ನು ಮಾರುತ್ತಿದ್ದೇನೆ ಎಂದಷ್ಟೇ ಹೇಳಿದ.

ಹಿಂದೆ-ಮುಂದೆ ಯೋಚಿಸದ ಅಣ್ಣ, ತನ್ನ ತೋಟಕ್ಕೂ ಬೆಂಕಿ ಹಚ್ಚಿಬಿಟ್ಟ. ಆತನ ತೋಟವೂ ಸುಟ್ಟು ಬೂದಿಯಾಯಿತು. ರಾಶಿ ಸಂಪತ್ತು ಗಳಿಸುವ ಯೋಚನೆಯಿಂದ ಸಂತೋಷಗೊಂಡು ಆ ಬೂದಿಯನ್ನು ಸಂತೆಗೆ ಒಯ್ದ. ಆದರೆ ಅದು ಬೂದಿ ಮಾತ್ರ, ರೋಗ ಗುಣಪಡಿಸುವ ಔಷಧಿಯಂತೆ ಕೆಲಸ ಮಾಡಲೇ ಇಲ್ಲ. ಅದನ್ನು ಖರೀದಿಸಿದ ಜನರೆಲ್ಲಾ ಮರುದಿನ ಅಣ್ಣನಿಗೆ ಸಿಟ್ಟಿನಿಂದ ಹೊಡೆಯುವುದಕ್ಕೇ ಬಂದರು. ಅಣ್ಣ ಹೇಗೋ ತಪ್ಪಿಸಿಕೊಂಡ. ಆದರೆ ತನ್ನ ತೋಟದ ಬೂದಿಗೆ ತಮ್ಮನ ಹೊಲದ ಬೂದಿಯಂತೆ ಯಾಕೆ ಬೇಡಿಕೆಯಿಲ್ಲ, ಇದು ಹೇಗೆ ಭಿನ್ನವಾಗಿದೆ ಎಂಬುದೇ ಅಣ್ಣನಿಗೆ ತಿಳಿಯಲಿಲ್ಲ. ಅತ್ತ ತೋಟವೂ ಉಳಿಯದೆ, ಇತ್ತ ಸಂಪತ್ತೂ ಹೆಚ್ಚದೆ, ಅಣ್ಣನ ದುರಾಸೆಗೆ ತಕ್ಕ ಶಾಸ್ತಿಯಾಯಿತು.

ಇದನ್ನೂ ಓದಿ: ಮಕ್ಕಳ ಕಥೆ: ಮನೆಗೆಲಸ ನೋಡಿಕೊಳ್ಳಲು ಮುಂದಾದ ಪತಿಯ ಗತಿ ಏನಾಯ್ತು?

Exit mobile version