Site icon Vistara News

ಮಕ್ಕಳ ಕಥೆ: ಮೂವರನ್ನು ರಕ್ಷಿಸಿದವನ ಕತೆ ಏನಾಯಿತು?

children story

ಇದು ಪಂಚತಂತ್ರದಲ್ಲಿ ಬರುವ ಮಕ್ಕಳ ಕತೆ.

ಆದಿತ್ಯ ಎಂಬ ಹೆಸರಿನ ಯುವಕನೊಬ್ಬ ಗುರುಕುಲದಲ್ಲಿ ಕಲಿಯುತ್ತಿದ್ದ. ಅವನು ತೀರಾ ಬುದ್ಧಿವಂತನೇನಲ್ಲ. ಆದರೆ ಒಳ್ಳೆಯ ಸ್ವಭಾವದವನು. ಕಷ್ಟದಲ್ಲಿ ಇರುವವರನ್ನು ಕಂಡರೆ ಮರುಗುತ್ತಿದ್ದ. ಜಾಣನಲ್ಲದ ಇವನು ಮುಂದೆ ಬದುಕುವುದು ಹೇಗಪ್ಪಾ ಎಂಬ ಚಿಂತೆ ಅವನ ಗುರುಗಳಿಗೆ ಬಂತು. ಗುರುಕುಲದಲ್ಲಿ ವಿದ್ಯಾಭ್ಯಾಸ ಮುಗಿಸಿ ಹೊರಡುವಾಗ ಗುರುಗಳು ಅವನನ್ನು ಕರೆದು ಒಂದು ಕಿವಿಮಾತನ್ನು ಹೇಳಿದರು- ʼʼಹಸಿದ ಹುಲಿಯನ್ನಾದರೂ ನಂಬಬಹುದು, ವಿಷಪೂರಿತ ಹಾವನ್ನಾದರೂ ನಂಬಬಹುದು, ಆದರೆ ವಂಚಕ ಮನುಷ್ಯನನ್ನು ನಂಬಬಾರದು.ʼʼ

ಸರಿಯೆಂದು ಆದಿತ್ಯ ಗುರುಕುಲದಿಂದ ಹೊರಟ. ದೂರದಲ್ಲಿದ್ದ ಮನೆಯ ದಿಕ್ಕಿನ ಕಡೆ ಹೊರಟವನು ಕಾಡಿನಲ್ಲಿ ನಡೆದು ಹೋಗುತ್ತಿದ್ದ. ಅವನಿಗೆ ಬಾಯಾರಿಕೆಯಾಯಿತು. ಕೊಂಚ ದೂರ ಹೋದಾಗ ಒಂದು ಬಾವಿ ಕಂಡಿತು. ಸರಿ, ಬಾವಿಯಿಂದ ನೀರು ಸೇದಿ ಕುಡಿಯೋಣ ಎಂದು ಅದರ ಬಳಿಗೆ ಹೋದವನಿಗೆ ಆಶ್ಚರ್ಯ ಕಾದಿತ್ತು.

ಆ ಬಾವಿಯ ನೀರಿನಲ್ಲಿ ಒಬ್ಬ ಮನುಷ್ಯ, ಒಂದು ಹುಲಿ, ಒಂದು ಹಾವು ಇದ್ದವು. ಮೂವರೂ ಕತ್ತಲಲ್ಲಿ ಕಾಣದೆ ಬಾವಿಗೆ ಬಿದ್ದುಬಿಟ್ಟಿದ್ದರು. ಆದಿತ್ಯನನ್ನು ನೋಡಿದ್ದೇ ತಡ ʼʼನನ್ನನ್ನು ಬದುಕಿಸಿʼʼ ಎಂದು ಮೂವರೂ ಅಂಗಲಾಚಿದರು.

ಆದಿತ್ಯ ಚಿಂತಿಸಿದ. ಹುಲಿಗೆ ಮನುಷ್ಯ ಆಹಾರ. ಹಾವಿಗೆ ವೈರಿ. ಹುಲಿ ನನ್ನನ್ನು ತಿನ್ನಬಹುದು, ಹಾವು ಕಚ್ಚಬಹುದು. ಮನುಷ್ಯ ಹಾಗೇನೂ ಮಾಡಲಾರ. ಆದ್ದರಿಂದ ಮನುಷ್ಯನನ್ನು ಮಾತ್ರ ಬದುಕಿಸೋಣ.

ಆದಿತ್ಯನ ಚಿಂತನೆಯ ಧಾಟಿಯನ್ನು ಹುಲಿ, ಹಾವು ಗ್ರಹಿಸಿದವು. ಅವು ಹೇಳಿದವು- ʼʼಅಯ್ಯಾ ಮಾನವ! ನಾವು ಪ್ರಾಣಿಗಳು, ಬದುಕುವುದಕ್ಕಾಗಿ ಬೇಟೆಯಾಡುತ್ತೇವೆ, ತಿನ್ನುತ್ತೇವೆ. ಆದರೆ ಉಪಕಾರ ಮಾಡಿದವರಿಗೆ ನಾವು ಜೀವನಪೂರ್ತಿ ಕೃತಜ್ಞರಾಗಿ ಇರುತ್ತೇವೆ. ಅದು ನಮ್ಮ ಗುಣ. ಮನುಷ್ಯರಂತೆ ನಾವು ಎಂದೂ ಕೃತಘ್ನರಾಗುವುದಿಲ್ಲ. ನಿನಗೆ ನಮ್ಮಿಂದಾದ ಉಪಕಾರವನ್ನು ಮಾಡುತ್ತೇವೆ ಎಂದು ಮಾತು ಕೊಡುತ್ತೇವೆ.ʼʼ

ಆದಿತ್ಯ ಇವರ ಮಾತನ್ನು ನಂಬಿದ. ಮೂವರನ್ನೂ ನೀರಿನಿಂದ ಮೇಲಕ್ಕೆ ಎತ್ತಿದ. ಹುಲಿ ಮತ್ತು ಹಾವುಗಳು ʼʼನೀನು ನಮ್ಮ ಜೀವವನ್ನು ಉಳಿಸಿದ್ದೀಯಾ. ಈ ಉಪಕಾರವನ್ನ ಎಂದೂ ಮರೆಯಲಾರೆವು. ನೀನು ಎಂದಾದರೂ ನಮ್ಮ ಮನೆಗೆ ಬಾʼʼ ಎಂದು ಆಮಂತ್ರಿಸಿ ಅಲ್ಲಿಂದ ಹೊರಟುಹೋದವು.

ಬಾವಿಯಿಂದ ಮೇಲೆ ಬಂದ ಮನುಷ್ಯ ʼʼನಾನು ಉಜ್ಜಯಿನಿ ನಗರದಲ್ಲಿ ಇರುವ ಅಕ್ಕಸಾಲಿಗ. ಮುಂದೆ ಎಂದಾದರೂ ನನ್ನ ಮನೆಗೆ ಬಾʼʼ ಎಂದು ಆಹ್ವಾನಿಸಿ ಅವನೂ ಹೊರಟುಹೋದ.

ಕೆಲವು ದಿನಗಳು ಕಳೆದವು. ಆದಿತ್ಯ ಮತ್ತೆ ಅದೇ ದಾರಿಯಲ್ಲಿ ಹಾದು ಹೋಗುತ್ತಿದ್ದಾಗ ಅವನಿಗೆ ತಾನು ರಕ್ಷಿಸಿದ ಹುಲಿಯ ನೆನಪಾಯಿತು. ನೇರವಾಗಿ ಹುಲಿಯ ಮನೆಗೆ ಹೋದ. ಹುಲಿ ಸಂತಸಪಟ್ಟಿತು. ಆ ದಿನ ಅವನನ್ನು ತನ್ನ ಗುಹೆಯಲ್ಲೇ ಉಳಿಸಿಕೊಂಡು, ಸವಿಯಾದ ತಿನಿಸುಗಳನ್ನು ನೀಡಿತು. ಮರುದಿನ ಆದಿತ್ಯ ಅಲ್ಲಿಂದ ಹೊರಟ. ಆಗ ಹುಲಿ ಅವನಿಗೆ ಒಂದು ಗಂಟು ಚಿನ್ನದ ಆಭರಣಗಳನ್ನು ಕೊಟ್ಟಿತು. ʼʼನನ್ನ ಜೀವ ಉಳಿಸಿದ್ದಕ್ಕೆ ಕೃತಜ್ಞತೆಯಾಗಿ ಇದನ್ನು ಕೊಡುತ್ತಿದ್ದೇನೆ, ಇಟ್ಟುಕೋʼʼ ಎಂದಿತು. ಆದಿತ್ಯ ಧನ್ಯವಾದ ಹೇಳಿ ಅಲ್ಲಿಂದ ಹೊರಟ.
ನಂತರ ಅವನಿಗೆ ದಾರಿಯಲ್ಲಿ ಉಜ್ಜಯಿನಿ ನಗರ ಸಿಕ್ಕಿತು. ಅವನಿಗೆ ಅಕ್ಕಸಾಲಿಗನ ನೆನಪಾಯಿತು. ಅವನಲ್ಲಿಗೆ ಹೋದ. ಅಕ್ಕಸಾಲಿಗ ಕೂಡ ಅವನನ್ನು ಕರೆದು ಸತ್ಕರಿಸಿದ.

ಮರುದಿನ ಆದಿತ್ಯ ಹೊರಡುವಾಗ ಅವನಿಗೆ ಹುಲಿ ನೀಡಿದ ಚಿನ್ನಾಭರಣಗಳ ನೆನಪಾಯಿತು. ಈ ಆಭರಣಗಳನ್ನು ಕರಗಿಸಿ ನಾಣ್ಯಗಳನ್ನಾಗಿಸಿದರೆ, ನಾನು ಅವುಗಳನ್ನು ಉಪಯೋಗಿಸಿ ಏನಾದರೂ ವ್ಯಾಪಾರ ಶುರುಮಾಡಬಹುದು ಎಂದುಕೊಂಡ. ಹಾಗೇ ಆ ಚಿನ್ನಾಭರಣಗಳನ್ನು ಅಕ್ಕಸಾಲಿಗನ ಕೈಗೆ ಕೊಟ್ಟು, ಇದನ್ನು ಕರಗಿಸಿ ನಾಣ್ಯವಾಗಿಸಿ ಕೊಡು ಎಂದ.

ಅಕ್ಕಸಾಲಿಗನಿಗೆ ಈ ಆಭರಣಗಳನ್ನು ಕಂಡು ಆಘಾತವಾಯಿತು. ಅವುಗಳು ಆ ರಾಜ್ಯವನ್ನು ಆಳುವ ದೊರೆಯ ಮಗನ ಮೇಲಿದ್ದ ಆಭರಣಗಳಾಗಿದ್ದವು. ಅವುಗಳನ್ನು ಈ ಅಕ್ಕಸಾಲಿಗನೇ ಮಾಡಿಸಿ ಕೊಟ್ಟಿದ್ದ. ಆದ್ದರಿಂದ ಅವನಿಗೆ ಅವುಗಳ ಗುರುತು ಇತ್ತು. ಹಲವಾರು ದಿನಗಳ ಹಿಂದೆ ರಾಜನ ಮಗ ಮೈಮೇಲಿದ್ದ ಆಭರಣಗಳ ಸಹಿತ ಕಾಣೆಯಾಗಿದ್ದ. ನಂತರ ರಾಜ ʼʼನನ್ನ ಮಗನನ್ನು ಹುಡುಕಿ ಕೊಟ್ಟವರಿಗೆ ಕೋಟ್ಯಂತರ ವರಹ ಹಣ ಕೊಡುತ್ತೇನೆʼʼ ಎಂದು ಡಂಗುರ ಹೊಡೆಸಿದ್ದ.

ಆಭರಣಗಳನ್ನು ಕಂಡು ಅಕ್ಕಸಾಲಿಗನ ಮನದಲ್ಲಿ ದುಷ್ಟ ಯೋಚನೆ ಸುಳಿಯಿತು. ಈ ಆದಿತ್ಯನೇ ಆಭರಣದ ಆಸೆಗೆ ರಾಜಕುಮಾರನನ್ನು ಕೊಂದಿರಬಹುದು ಎಂದು ರಾಜನಿಗೆ ಹೇಳಿ ಈ ಆಭರಣಗಳನ್ನು ಕೊಟ್ಟರೆ, ಭಾರಿ ಹಣ ನನ್ನ ಪಾಲಾಗಲಿದೆ ಎಂದು ದುರಾಸೆಪಟ್ಟ. ಕೂಡಲೇ ಆದಿತ್ಯನನ್ನು ಅಲ್ಲೇ ನಿಲ್ಲಿಸಿ, ರಾಜನ ಅರಮನೆಗೆ ಹೋಗಿ, ಅಂದುಕೊಂಡಿದ್ದನ್ನೆಲ್ಲ ಹೇಳಿ ಆಭರಣಗಳನ್ನು ನೀಡಿದ.

ಸಿಟ್ಟಿನಿಂದ ಕಿಡಿಕಿಡಿಯಾದ ರಾಜ, ಆದಿತ್ಯನನ್ನು ರಾಜಭಟರ ಮೂಲಕ ಹಿಡಿತರಿಸಿ ಜೈಲಿಗೆ ದೂಡಿದ. ಆದಿತ್ಯನ ಮಾತುಗಳನ್ನು ಕೇಳಿಸಿಕೊಳ್ಳುವ ಗೋಜಿಗೇ ಹೋಗಲಿಲ್ಲ.

ಆದಿತ್ಯ ಸೆರೆಮನೆಯಲ್ಲಿ ಕೊಳೆಯುತ್ತ ಕೊರಗತೊಡಗಿದ. ಈ ಬಿಕ್ಕಟ್ಟಿನಿಂದ ಪಾರಾಗುವುದು ಹೇಗೆ ಎಂದು ಚಿಂತಿಸಿದ. ಇದ್ದಕ್ಕಿದ್ದಂತೆ ಅವನಿಗೆ ತಾನು ರಕ್ಷಿಸಿ ಹಾವಿನ ನೆನಪಾಯಿತು. ಅದನ್ನು ನೆನೆದ. ಕೂಡಲೇ ಅದು ಅಲ್ಲಿಗೆ ಬಂತು. ʼʼಯಾಕೆ ನೆನೆದೆ?ʼʼ ಎಂದು ಕೇಳಿತು. ಆದಿತ್ಯ ತನಗೆ ಒದಗಿದ ಸಂಕಟವನ್ನು ತಿಳಿಸಿದ. ಸರ್ಪ ಅವನ ಕಿವಿಯಲ್ಲಿ ಏನನ್ನೋ ಗುಟ್ಟಾಗಿ ಹೇಳಿ, ಅಲ್ಲಿಂದ ಮಾಯವಾಯಿತು.

ಅದೇ ರಾತ್ರಿ ಮಹಾರಾಣಿಗೆ ಒಂದು ಹಾವು ಕಚ್ಚಿತು. ವಿಷವೇರಿ ಮಹಾರಾಣಿ ವಿಲವಿಲ ಒದ್ದಾಡತೊಡಗಿದಳು. ರಾಜಪಂಡಿತರಿಗೂ ವಿಷವನ್ನು ಇಳಿಸುವುದು ಸಾಧ್ಯವಾಗಲಿಲ್ಲ. ಆಕೆ ಸಾಯುವುದು ಖಚಿತ ಎಂಬಂತಾಯಿತು. ಆಕೆಯನ್ನು ಬದುಕುಳಿಸಿದವರಿಗೆ ಕೇಳಿದ್ದನ್ನು ಕೊಡುತ್ತೇನೆ ಎಂದು ಮಹಾರಾಜ ಘೋಷಿಸಿದ.

ʼʼಮಹಾರಾಣಿಯನ್ನು ನಾನು ಬದುಕಿಸುತ್ತೇನೆʼʼ ಎಂದು ಆದಿತ್ಯ ಸೆರೆಮನೆಯ ಕಾವಲುಗಾರರಿಗೆ ಹೇಳಿದ. ಅವರು ಅವನನ್ನು ಮಹಾರಾಣಿಯ ಬಳಿಗೆ ಒಯ್ದರು. ʼʼಕೋಣೆಯ ಒಳಗೆ ರಾಣಿ ಮತ್ತು ನಾನು ಬಿಟ್ಟರೆ ಇನ್ಯಾರೂ ಇರಬಾರದುʼʼ ಎಂದು ಆದಿತ್ಯ ಶರತ್ತು ವಿಧಿಸಿದ. ಮಹಾರಾಜನೂ ಸೇರಿದಂತೆ ಎಲ್ಲರೂ ಹೊರಹೋದರು. ಆದಿತ್ಯ ಸರ್ಪವನ್ನು ನೆನೆದ. ಅದು ಅಲ್ಲಿಗೆ ಬಂದಿತು. ರಾಣಿಯ ಕಾಲಿನಲ್ಲಿದ್ದ ಗಾಯಕ್ಕೆ ಹಲ್ಲು ಹಚ್ಚಿ ವಿಷವನ್ನೆಲ್ಲ ಹೀರಿಕೊಂಡು, ಬಂದ ಹಾಗೇ ಮಾಯವಾಯಿತು.

ಸ್ವಲ್ಪ ಹೊತ್ತಿನಲ್ಲಿ ರಾಣಿ ಚೇತರಿಸಿಕೊಂಡಳು. ರಾಜನಿಗೆ ಆನಂದವೂ ಆಯಿತು, ಆಶ್ಚರ್ಯವೂ ಆಯಿತು. ʼʼಯಾರು ನೀನು, ನಿನ್ನ ಕತೆ ಹೇಳುʼʼ ಎಂದು ಆದಿತ್ಯನನ್ನು ವಿಚಾರಿಸಿದ. ಆದಿತ್ಯ ನಡೆದ ಕತೆಯನ್ನೆಲ್ಲಾ ತಿಳಿಸಿ, ಅಕ್ಕಸಾಲಿಗನ ದ್ರೋಹವನ್ನು ವಿವರಿಸಿದ. ಅಕ್ಕಸಾಲಿಗನಿಗೆ ಶಿಕ್ಷೆಯಾಯಿತು. ಆದಿತ್ಯನಿಗೆ ಮಹಾರಾಜ ತುಂಬಾ ಧನಕನಕಗಳನ್ನು, ಪದವಿಯನ್ನೂ ಕೊಡಿಸಿದ.

ಗುರುಗಳು ಹಿಂದೆ ಎಂದೋ ಆಡಿದ್ದ ಮಾತಿನ ಪೂರ್ತಿ ಅರ್ಥ ಅಂದು ಅವನಿಗೆ ಆಗಿತ್ತು.

ಇದನ್ನೂ ಓದಿ: Book Excerpt: ದೇವೇಂದ್ರನ ಮೀಸೆ ಹಸುರಾದುದು ಹೇಗೆ?

Exit mobile version