Site icon Vistara News

ಮಕ್ಕಳ ಕಥೆ | ಇದು ಬುದ್ಧ ಹೇಳಿದ್ದು; ನಾವು ಕೊಟ್ಟಿದ್ದು ಯಾರಿಗೆ ಸಲ್ಲುತ್ತದೆ?

Kids story
https://vistaranews.com/wp-content/uploads/2023/01/WhatsApp-Audio-2023-01-15-at-3.28.56-PM-1.mp3

ಗೌತಮ ಬುದ್ಧನ ಬಗ್ಗೆ ಇರುವ ಬಹಳಷ್ಟು ಕಥೆಗಳಲ್ಲಿ ಇದೂ ಒಂದು. ಭಿಕ್ಷಾಪಾತ್ರೆಯನ್ನು ಹಿಡಿದು ಆಹಾರ ಸಂಗ್ರಹಿಸುವುದು ಬುದ್ಧನ ದಿನಚರಿಗಳಲ್ಲಿ ಒಂದಾಗಿತ್ತು. ಮನೆಗಳ ಮುಂದೆ ನಿಂತು, ಬೇಡಿ, ಅವರು ಕೊಟ್ಟಿದ್ದನ್ನು ಸಂತೋಷದಿಂದ ಉಣ್ಣುವುದು ಬುದ್ಧ ಮತ್ತು ಅವನ ಅನುಯಾಯಿ ಭಿಕ್ಕುಗಳು ಬದುಕಿನ ಭಾಗದಂತಿತ್ತು.
ಒಂದು ದಿನ ಏನಾಯಿತೆಂದರೆ, ಯಾವುದೋ ಹೊಸ ಊರೊಂದರಲ್ಲಿ ಮನೆಯೊಂದರ ಮುಂದೆ ನಿಂತು ಎಂದಿನಂತೆ ಭಿಕ್ಷಾ ಪಾತ್ರೆಯೊಡ್ಡಿದ ಬುದ್ಧ. ಆ ಮನೆಯೊಡತಿ ಅಂದು ಬಹಳ ಕೋಪದಲ್ಲಿದ್ದಳು. ಅದೇ ಸಮಯಕ್ಕೆ ಮನೆಯ ಮುಂದೆ ಗೌತಮ ಬುದ್ಧ ಕಾಣಿಸಿಕೊಂಡ. ಆತನನ್ನು ಕಂಡ ಆ ಗೃಹಿಣಿಯ ಪಿತ್ತ ಇನ್ನಷ್ಟು ಕೆರಳಿತು. ಆತ ಬುದ್ಧ ಎಂಬುದನ್ನು ತಿಳಿಯದ ಆಕೆಯ ಗಮನಕ್ಕೆ ಬಂದಿದ್ದು, ಭಿಕ್ಕುವೊಬ್ಬ ಭಿಕ್ಷಾಪಾತ್ರೆ ಹಿಡಿದು ನಿಂತಿದ್ದಷ್ಟೇ. ʻನನ್ನ ತಲೆ ತಿನ್ನುವುದಕ್ಕೆ ನೀನೊಬ್ಬ ಕಡಿಮೆ ಇದ್ದೆ!ʼ ಎನ್ನುತ್ತಾ ಬುದ್ಧನನ್ನು ದುರುಗುಟ್ಟಿ ನೋಡಿದಳು.

https://vistaranews.com/wp-content/uploads/2023/01/WhatsApp-Audio-2023-01-15-at-3.28.56-PM-1-1.mp3

ಏನೂ ಮಾತನಾಡದ ಬುದ್ಧ ಶಾಂತವಾಗಿ ಅವಳ ಮುಖವನ್ನೇ ನೋಡುತ್ತಿದ್ದ. ಮೊದಲೇ ಕೋಪದಲ್ಲಿದ್ದ ಆಕೆಗೆ ಈಗಂತೂ ಮೈಯೆಲ್ಲಾ ಉರಿಯುವಷ್ಟು ಸಿಟ್ಟುಬಂತು. ʻಅಬ್ಬಾ ಸೋಮಾರಿ ಭಿಕ್ಕುವೇ! ಕೈ-ಕಾಲೆಲ್ಲಾ ಗಟ್ಟಿಯಿದ್ದು, ನೋಡುವುದಕ್ಕೆ ಗುಂಡು ಕಲ್ಲಿನಂತಿರುವ ನೀನು ಭಿಕ್ಷೆ ಬೇಡುತ್ತೀಯಾ? ಸ್ವಲ್ಪನಾದರೂ ನಾಚಿಕೆ ಬೇಡವೆ ಇಷ್ಟೊಂದು ಮೈಗಳ್ಳತನ ಮಾಡಲು! ಒಂದೆರಡು ದಿನವಲ್ಲ, ಜೀವನವಿಡೀ ಹೀಗೆಯೇ ಸೋಮಾರಿಯಾಗಿ ಕಳೆಯಬೇಕೆಂದರೆ… ಹೇಗಾದರೂ ಮನಸ್ಸಾಗುತ್ತದೆ ನಿನಗೆ? ಹೋಗು, ದುಡಿದು ತಿನ್ನುʼ ಎಂದು ಕಿರುಚಿದಳು ಆ ಗೃಹಿಣಿ.

ಈಗಲೂ ಏನೂ ಮಾತನಾಡದೆ ಶಾಂತಮೂರ್ತಿಯಂತೆ ಕಿರುನಗೆಯೊಂದಿಗೆ ಸುಮ್ಮನೆ ನಿಂತೇ ಇದ್ದ ಬುದ್ಧ. ʻನಿನಗೇನು ಭಾಷೆ ಬರುವುದಿಲ್ಲವೇ? ಮಾತಾಡುವುದಕ್ಕೇನು ಕಷ್ಟ? ಅಷ್ಟಕ್ಕೂ ಸೋಮಾರಿತನವೇ, ಮೂರ್ಖ ಭಿಕ್ಕುವೇ! ಮಾತಾಡುʼ ಎಂದು ಮೂದಲಿಸಿದಳು ಆಕೆ.

ʻತಾಯಿ…ʼ ಆಕೆಯನ್ನು ಸಾವಧಾನದಿಂದ ಕರೆದ ಬುದ್ಧ, ʻನಿವೇದನೆ ಮಾಡಿಯಾಗಿದೆ. ಅದನ್ನು ಈಗ ಯಾರೂ ಒಪ್ಪಿಕೊಳ್ಳದಿದ್ದರೆ, ಅದು ಯಾರಿಗೆ ಸೇರುತ್ತದೆಯಮ್ಮ?ʼ ಎಂದು ಪ್ರಶ್ನಿಸಿದ. ʻಎಂಥಾ ನಿವೇದನೆ? ನೀನು ನಿವೇದಿಸಿಕೊಂಡಿದ್ದಕ್ಕೆ ನಾನಂತೂ ಏನನ್ನೂ ಕೊಡಲಾರೆ. ಮೈಗಳ್ಳರನ್ನು ಸಾಕುವುದಕ್ಕೆ ನಾನು ಜನ ಅಲ್ಲ!ʼ ಎಂದು ಸಿಡುಕಿದಳು ಮನೆಯೊಡತಿ.

ʻನಾನು ನಿವೇದಿಸಿದ್ದನ್ನು ನೀವು ಒಪ್ಪಲಿಲ್ಲ. ಬದಲಿಗೆ, ನಾನು ಬಾಗಿಲಿಗೆ ಬಂದು ನಿಂತ ಘಳಿಗೆಯಿಂದ ನಿಮ್ಮಲ್ಲಿ ಏನಿದೆಯೋ ಅದನ್ನು ನೀವು ಕೊಡುತ್ತಿದ್ದಿರಿ…ʼ ಬುದ್ಧನ ಮಾತಿನ ಇಂಗಿತ ಅರಿತವಳಂತೆ ಥಟ್ಟನೆ ಮೌನವಾದಳು ಆ ಗೃಹಿಣಿ.

ʻಈಗ ನೀವು ಕೊಟ್ಟಿದ್ದನ್ನು ನಾನು ಒಪ್ಪದಿದ್ದರೆ…?ʼ ಮತ್ತೆ ಕೇಳಿದ ಬುದ್ಧ. ʻಅದು ಯಾರಿಗೆ ಸಲ್ಲುತ್ತದೆ ಎಂದಲ್ಲವೇ ನಿನ್ನ ಪ್ರಶ್ನೆ?ʼ ಕೇಳಿದಳು ಮನೆಯೊಡತಿ. ಬುದ್ಧ ಮುಗುಳ್ನಕ್ಕ. ತನ್ನ ನಡವಳಿಕೆಯ ಬಗ್ಗೆ ಅತೀವ ಬೇಸರವಾಗಿತ್ತು ಅವಳಿಗೆ. ನೇರವಾಗಿ ಬುದ್ಧನ ಕಾಲಿಗೆರಗಿ ಕ್ಷಮೆ ಕೇಳಿದಳು. ತನ್ನ ಮನೆಯಲ್ಲಿ ಉಣ್ಣುವುದಕ್ಕೇನಿದೆ ಅದನ್ನೇ ಭಿಕ್ಷಾಪಾತ್ರೆಗೆ ಹಾಕಿದಳು.

ಅವಳಿಗೆ ಧನ್ಯವಾದ ಹೇಳಿದ ಬುದ್ಧ, ತನ್ನ ದಾರಿ ಹಿಡಿದು ಮುಂದೆ ಹೋದ.

ಇದನ್ನೂ ಓದಿ | ಮಕ್ಕಳ ಕಥೆ | ಏಳು ಬೀಳು ಕಂಡ ವರ್ತಕ

Exit mobile version