ನವದೆಹಲಿ: ಟೆರೇಸ್‌ನಲ್ಲಿ ನಿಂತು ಹೊಡೆದಾಟವನ್ನು ನೋಡುತ್ತಿದ್ದ ಮಹಿಳೆಗೆ ಆಕಸ್ಮಿಕವಾಗಿ (Accident) ಗುಂಡು (shot) ತಾಗಿರುವ ಘಟನೆ ಉತ್ತರ ದೆಹಲಿಯ (north delhi) ದಯಾಲ್‌ಪುರದಲ್ಲಿ ನಡೆದಿದೆ. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಗುಂಡು ಹಾರಿಸಿದಾಗ ಅದು ತಪ್ಪಿ ಟೆರೇಸ್ ಮೇಲೆ ನಿಂತು ಇವರ ಜಗಳ ನೋಡುತ್ತಿದ್ದ ಮಹಿಳೆಗೆ ತಗುಲಿದೆ ಎನ್ನಲಾಗಿದೆ.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಈಶಾನ್ಯ ದೆಹಲಿಯ ದಯಾಲ್‌ಪುರ್‌ನಲ್ಲಿ ಜುಲೈ 2ರಂದು ಶನಿವಾರ ಇಬ್ಬರ ನಡುವೆ ಜಗಳವಾಗಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ, 17 ಲಕ್ಷ ರೂಪಾಯಿಗಾಗಿ ಇವರ ನಡುವೆ ನಡೆದ ವಾದವು ಜಗಳಕ್ಕೆ ತಿರುಗಿತ್ತು. ಈ ನಡುವೆ ಒಬ್ಬ ವ್ಯಕ್ತಿ ಪಿಸ್ತೂಲ್ ಎಳೆದು ಮತ್ತೊಬ್ಬ ವ್ಯಕ್ತಿಯತ್ತ ಗುಂಡು ಹಾರಿಸಿದ್ದಾನೆ. ಆದರೆ, ಬುಲೆಟ್ ತಪ್ಪಿ ಟೆರೇಸ್‌ನಿಂದ ಜಗಳವನ್ನು ಗಮನಿಸುತ್ತಿದ್ದ 48 ವರ್ಷದ ಮಹಿಳೆಗೆ ಹೊಡೆದಿದೆ.
ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ ಗುಂಡೇಟಿನಿಂದ ಗಾಯಗೊಂಡಿದ್ದ ಮಹಿಳೆಯನ್ನು ಆಕೆಯ ಕುಟುಂಬದವರು ಜಿಟಿಬಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆರೋಪಿಗಳ ಪೈಕಿ ಬಬ್ಲು ಎಂಬಾತನಿಗೆ 17 ಲಕ್ಷ ರೂ.ಗಳನ್ನು ಸಾಲವಾಗಿ ನೀಡಿದ್ದಾಗಿ ದೂರುದಾರ ಹಾಶಿಮ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆತ ಬಬ್ಲುವನ್ನು ವಿಚಾರಿಸಲು ಹೋದಾಗ ವಾದವು ವಿಕೋಪಕ್ಕೆ ತಿರುಗಿದೆ. ಬಬ್ಲು ತನ್ನ ಸಹಚರರಾದ ಕಮರುಲ್, ಸುಹಾಲೆ ಮತ್ತು ಸಮ್ರುನ್‌ನೊಂದಿಗೆ ಬಂದಿದ್ದು, ಹಾಶಿಮ್ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ನಡುವೆ ಕಮರುಲ್ ಎಂಬಾತ ಹಾಶಿಮ್ ಮೇಲೆ ಗುಂಡು ಹಾರಿಸಿದ ಎನ್ನಲಾಗಿದೆ. ಆದರೆ ಇದು ಗುರಿ ತಪ್ಪಿ ಮಹಿಳೆಗೆ ಹೊಡೆದಿದೆ. ಗುಂಡಿನ ದಾಳಿಯ ಅನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ: Self Harming : ನಿದ್ದೆ ಇಲ್ಲದೇ ಒದ್ದಾಟ; ಬೇವಿನ ಮರಕ್ಕೆ ನೇಣು ಬಿಗಿದುಕೊಂಡ ಆಟೋ ಚಾಲಕ
ಪೊಲೀಸರು ದೆಹಲಿಯ ಬ್ರಿಜ್‌ಪುರಿ ನಿವಾಸಿಗಳಾದ ಬಬ್ಲು (38) ಮತ್ತು ಕಮರುಲ್ (26) ಎಂಬವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಪಿಸ್ತೂಲ್, ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುದ್ಧಿ ಹೇಳಿದ್ದಕ್ಕೆ ಶಿಕ್ಷಕನನ್ನೇ ಕೊಂದ ವಿದ್ಯಾರ್ಥಿ
ವಿದ್ಯೆ ಕಲಿಸಿದ ಗುರುವನ್ನೇ ವಿದ್ಯಾರ್ಥಿಯೊಬ್ಬ ಇರಿದು ಕೊಂದಿ ಘಟನೆ ಅಸ್ಸಾಂನ ಶಿವಸಾಗರ್ ಜಿಲ್ಲೆಯ ಶಾಲೆಯೊಂದರಲ್ಲಿ ನಡೆದಿದೆ. 11 ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನನ್ನು ತರಗತಿಯಲ್ಲಿ ಇರಿದು ಕೊಂದಿದ್ದಾನೆ. ಕಳಪೆ ಸಾಧನೆಗಾಗಿ ಬೈದಿದ್ದಕ್ಕಾಗಿ ರಸಾಯನಶಾಸ್ತ್ರ ಶಿಕ್ಷಕ ರಾಜೇಶ್ ಬರುವಾ ಬೆಜವಾಡ (55) ಮೇಲೆ ಹಲ್ಲೆ ನಡೆಸಿ ಕೊಂದ 16 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಜವಾಡ ಅವರು ರಸಾಯನಶಾಸ್ತ್ರವನ್ನು ಕಲಿಸುತ್ತಿದ್ದರು. ಜೊತೆಗೆ ಖಾಸಗಿ ಒಡೆತನದ ಶಾಲೆಯಲ್ಲಿ ನಿರ್ವಹಣಾ ಜವಾಬ್ದಾರಿಗಳನ್ನು ಸಹ ಹೊಂದಿದ್ದರು. ರಸಾಯನಶಾಸ್ತ್ರದಲ್ಲಿನ ಕಲಿಕೆಯ ಬಗ್ಗೆ ಶಿಕ್ಷಕರು ವಿದ್ಯಾರ್ಥಿಯನ್ನು ಗದರಿಸಿದ್ದರು. ಅಲ್ಲದೇ ಪೋಷಕರ ಸಭೆಗಾಗಿ ಪೋಷಕರನ್ನು ಶಾಲೆಗೆ ಕರೆದುಕೊಂಡು ಬಾ ಎಂದು ಹೇಳಿದ್ದರು ಎನ್ನಲಾಗಿದೆ.
ದಿನದ ನಂತರ ವಿದ್ಯಾರ್ಥಿ ಕ್ಯಾಶುಯಲ್ ಬಟ್ಟೆಗಳಲ್ಲಿ ತರಗತಿಗೆ ಬಂದಿದ್ದ. ಶಿಕ್ಷಕರು ಅವನನ್ನು ಹೊರಹೋಗುವಂತೆ ಕೇಳಿದರು. ಇದ್ದಕ್ಕಿದ್ದಂತೆ ವಿದ್ಯಾರ್ಥಿ ಬೆಜವಾಡ ಅವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಪದೇ ಪದೇ ಇರಿದಿದ್ದಾನೆ.
ಇನ್ನು ಘಟನೆ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದು, ಕೋಚಿಂಗ್ ಸೆಂಟರ್‌ನಲ್ಲಿ ಕೊಲೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಬಂದು ನೋಡಿದಾಗ ತರಗತಿಯಲ್ಲಿ ರಕ್ತದ ಮಡುವಿನಲ್ಲಿ ಶಿಕ್ಷಕ ಬಿದ್ದಿದ್ದರು. ಅಲ್ಲೇ ಚಾಕು ಕೂಡ ಇತ್ತು.
ಶಿಕ್ಷಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿಲಾಯಿತಾದರೂ ಆತ ಸಾವನ್ನಪ್ಪಿರುವುದನ್ನು ವೈದ್ಯರು ಖಚಿತಪಡಿಸಿದರು. ಇನ್ನು ವಿದ್ಯಾರ್ಥಿಯನ್ನು ಈಗಾಗಲೇ ವಶಕ್ಕೆ ಪಡೆದಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಇತರ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದಾಗ ಶಿಕ್ಷಕ ವಿದ್ಯಾರ್ಥಿಗೆ ಈ ಹಿಂದೆ ಬೈದಿದ್ದರು ಎಂಬುದು ಬಯಲಾಗಿದೆ ಎಂದು ಹೇಳಿದ್ದಾರೆ.