Site icon Vistara News

Accident Case: ಕಾರು ಡಿಕ್ಕಿ ರಭಸಕ್ಕೆ ಹತ್ತಾರು ಅಡಿ ದೂರ ಹಾರಿ ಬಿದ್ದ ಮಹಿಳೆ; ಭಯಾನಕ ವಿಡಿಯೊ

Accident Case

ಮಹಾರಾಷ್ಟ್ರ : ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು (Accident Case ) ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ದಿನದಲ್ಲಿ ಒಂದಲ್ಲ ಒಂದು ಕಡೆ ರಸ್ತೆ ಅಪಘಾತ ಸಂಭವಿಸುತ್ತಿರುತ್ತದೆ. ಅದರಲ್ಲೂ ಡಬಲ್ ರೋಡ್ ಆದ ಮೇಲಂತೂ ವಾಹನಗಳ ವೇಗಕ್ಕೆ ಮಿತಿಯೇ ಇಲ್ಲ, ಮನುಷ್ಯರ ಜೀವಕ್ಕೂ ಬೆಲೆಯೇ ಇಲ್ಲದಂತಾಗಿದೆ. ಶಾಲಾ ಮಕ್ಕಳು ಓಡಾಡುವ ಸ್ಥಳ, ಜನಸಂದಣಿ ಹೆಚ್ಚಾಗಿರುವ ಸ್ಥಳ, ತಿರುವುಗಳಲ್ಲಿ ಕೂಡ ನಿಧಾನವಾಗಿ ಚಲಿಸುವ ಬದಲು ವೇಗವಾಗಿ ಬಂದು ಡಿಕ್ಕಿ ಹೊಡೆದು ಹೋಗುತ್ತಿರುತ್ತಾರೆ. ಟ್ರಾಫಿಕ್ ರೂಲ್ಸ್ ಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಇದೀಗ ಅಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ರಸ್ತೆ ದಾಟುತ್ತಿದ್ದ ಮಹಿಳೆಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಆಕೆ ಹತ್ತಾರು ಅಡಿ ದೂರ ಹಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಸ್ವರಾಜ್ ಚೌಕ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಮಹಿಳೆ ರಸ್ತೆ ದಾಟುವಾಗ ಬಿಳಿ ಬಣ್ಣದ ವ್ಯಾಗನ್ ಆರ್ ಕಾರೊಂದು ಅತಿವೇಗವಾಗಿ ಬಂದು ಆಕೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಕೆ ಸುಮಾರು ದೂರದವರೆಗೆ ಹಾರಿ ಬಿದ್ದು ರಸ್ತೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಆಗ ಅಲ್ಲಿದ್ದವರು ಆಕೆಯ ಸಹಾಯಕ್ಕೆ ಧಾವಿಸಿದರು. ನಂತರ ಚಾಲಕನೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದದಿದ್ದಾನೆ. ಗಂಭೀರವಾಗಿ ಗಾಯಗೊಂಡ ಆಕೆ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.


ಸಂತ್ರಸ್ತೆಯ ಹೆಸರು ರೇಖಾ ಎಂದು ತಿಳಿದು ಬಂದಿದೆ. ಆರೋಪಿ ಚಾಲಕ 24 ವರ್ಷ ವಯಸ್ಸಿನ ವಿನಯ್ ವಿಲಾಸ್ ನಾಯಕ್, ಆತ ಪೊಲೀಸ್ ಅಧಿಕಾರಿಯ ಮಗ ಎಂದು ವರದಿಯಾಗಿದೆ. ಈ ಪ್ರಕರಣ ಪಿಂಪ್ರಿ-ಚಿಂಚ್‌ವಾಡ್‌ನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 ಮತ್ತು 337 ಮತ್ತು ವೋಟಾರು ವಾಹನ ಕಾಯ್ದೆಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಆರೋಪಗಳು ದಾಖಲಾಗಿದೆ.

ಇದನ್ನೂ ಓದಿ: Akira Nandan: ಅಕಿರಾ ನಂದನ್‌; ಆರೂವರೆ ಅಡಿ ಎತ್ತರದ ಪವನ್ ಕಲ್ಯಾಣ್ ಪುತ್ರನಿಗೆ ಭಾರಿ ಡಿಮ್ಯಾಂಡ್‌!

ವರದಿಗಳ ಪ್ರಕಾರ ಚಾಲಕ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡು ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪಿಂಪ್ರಿ-ಚಿಂಚ್‌ವಾಡ್‌ನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎನ್ನಲಾಗಿದೆ. ಇದು ಕುಡಿದು ವಾಹನ ಚಲಾಯಿಸಿದ ಪ್ರಕರಣವಲ್ಲ ಎಂದು ಅವರು ತಿಳಿಸಿದ್ದಾರೆ.

Exit mobile version