ಗ್ರಾಹಕರು ಬ್ರ್ಯಾಂಡೆಡ್ ವಸ್ತುಗಳಿಗೆ ಹೆಚ್ಚು ಬೆಲೆ ಕೊಟ್ಟು ಖರೀದಿಸುತ್ತಾರೆ. ಯಾಕೆಂದರೆ ಅದರ ಗುಣಮಟ್ಟ, ವಿನ್ಯಾಸ ಉತ್ತಮವಾಗಿರುತ್ತದೆ ಮತ್ತು ಅದು ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಹಾಗೂ ಅದನ್ನು ಪ್ರತಿಷ್ಠಿತ ಕಂಪನಿಗಳು ತಯಾರಿಸಿರುತ್ತಾರೆ ಎಂಬ ಕಾರಣಕ್ಕಾಗಿ ಅದಕ್ಕೆ ಎಷ್ಟೇ ಬೆಲೆಯಿದ್ದರೂ ಕೂಡ ಅದನ್ನು ಖರೀದಿಸುತ್ತಾರೆ. ಗ್ರಾಹಕರ ಈ ಮನಸ್ಥಿತಿಯನ್ನು ದುರುಪಯೋಗಪಡಿಸಿಕೊಂಡ ಬ್ರ್ಯಾಂಡೆಡ್ ಕಂಪೆನಿಗಳು (Branded Company) ಇದೀಗ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಗ್ರಾಹಕರಿಗೆ ಮಾರಾಟಮಾಡುತ್ತಿರುವುದಾಗಿ ತಿಳಿದುಬಂದಿದೆ.
ಮಿಲನ್‌ನಲ್ಲಿ ಐಷಾರಾಮಿ ಬ್ಯಾಗ್‌ಗಳನ್ನು ಮಾರಾಟ ಮಾಡುವ ಎಲ್‌ವಿಎಂಹೆಚ್‌ನ ಡಿಯಾರ್ ಬ್ರ್ಯಾಂಡ್ ಕಂಪೆನಿಯ ಮೇಲೆ ಇಟಲಿ ಪೊಲೀಸರು ದಾಳಿ ನಡೆಸಿದ್ದಾರೆ. ಡಿಯಾರ್ ಪೂರೈಕೆದಾರರಿಂದ ಪ್ರತಿ ಬ್ಯಾಗ್‌ಗೆ ಸುಮಾರು 4,700 ರೂ. ಪಾವತಿಸಿ ನಂತರ ಅದನ್ನು ತನ್ನ ಅಂಗಡಿಗಳಲ್ಲಿ 2.34 ಲಕ್ಷ ರೂ.ಗೆ ಮಾರಾಟ ಮಾಡುತ್ತಿದೆ ಎಂಬುದಾಗಿ ತಿಳಿದುಬಂದಿದೆ. ಅದೇರೀತಿ ಇನ್ನೊಂದು ಬ್ರ್ಯಾಂಡ್ ಕಂಪೆನಿ ಅರ್ಮಾನಿ ಕೂಡ ಬ್ಯಾಗ್‌ಗಳನ್ನು ಪೂರೈಕೆದಾರರಿಂದ 8400 ರೂ.ಗಳಿಗೆ ಖರೀದಿಸಿ ತನ್ನ ಅಂಗಡಿಗಳಲ್ಲಿ 1.6ಲಕ್ಷ ರೂ. ಗೆ ಮಾರಾಟ ಮಾಡುತ್ತಿರುವುದು ತನಿಖೆಯ ವೇಳೆ ತಿಳಿದುಬಂದಿದೆ. ಈ ವೆಚ್ಚಗಳು ಲೇದರ್ ವಸ್ತುಗಳ ವೆಚ್ಚದ ಜೊತೆಗೆ ಅದರ ವಿನ್ಯಾಸ, ವಿತರಣೆ ಮತ್ತು ಮಾರ್ಕೆಟಿಂಗ್ ಗಳಿಗೆ ಸೇರಿಸಿ ಹೆಚ್ಚುವರಿ ವೆಚ್ಚವನ್ನು ಗ್ರಾಹಕರು ಪಾವತಿಸಿದಂತಾಗಿದೆ. ಇಂತಹ ಬ್ರ್ಯಾಂಡೆಡ್ ಕಂಪೆನಿಗಳ ಬಗ್ಗೆ ತೀವ್ರ ಟೀಕೆಗೆ ಕಾರಣವಾಗಿದೆ. ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ಕುರಿತು ಕಂಪೆನಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಲದೇ ಕಂಪೆನಿಗಳು ಈ ಆರೋಪದ ಜೊತೆಗೆ ಅವರ ಕಂಪೆನಿಯಲ್ಲಿ ಕೆಲಸ ಮಾಡುವಂತಹ ಕಾರ್ಮಿಕರನ್ನು ಶೋಷಣೆ ಮಾಡುತ್ತಿದೆ ಮತ್ತು ಸರಿಯಾದ ದಾಖಲೆಗಳಿಲ್ಲದೇ ಕೆಲಸಗಾರರನ್ನು ನೇಮಿಸಿಕೊಂಡ ಆರೋಪವನ್ನು ಎದುರಿಸುತ್ತಿದೆ. ಈ ತನಿಖೆಯ ವೇಳೆ ಕಂಪೆನಿಯಲ್ಲಿ ಇಬ್ಬರು ಅಕ್ರಮ ವಲಸಿಗರು ಮತ್ತು 7 ಉದ್ಯೋಗಿಗಳಿಗೆ ಸರಿಯಾದ ದಾಖಲೆಗಳಿಲ್ಲ ಎಂಬುದನ್ನು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ ಎನ್ನಲಾಗಿದೆ.
ಇಟಲಿ ಪೊಲೀಸರು ನಡೆಸಿದ ತನಿಖೆಯಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಇಲ್ಲಿನ ಕಾರ್ಮಿಕರು ನೈರ್ಮಲ್ಯ ಸಮಸ್ಯೆಯಿಂದ ಅನಾರೋಗ್ಯಕ್ಕೊಳಗಾಗಿರುವುದಾಗಿ ತಿಳಿದುಬಂದಿದೆ. ಉತ್ಪಾದನಾ ಯಂತ್ರಗಳಲ್ಲಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದಿರುವುದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಹಾಗೇ ಇಲ್ಲಿನ ಕಾರ್ಮಿಕರಿಗೆ ಸರಿಯಾದ ವಸತಿ ವ್ಯವಸ್ಥೆ ಇಲ್ಲ ಹಾಗೂ ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಬೆಳಗ್ಗೆಯಿಂದ ರಾತ್ರಿ 9 ಗಂಟೆಯವರೆಗೆ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಕಳ್ಳರು ಬ್ಯಾಗ್ ಕಸಿದು ಓಡುತ್ತಾರೆ! ಪೋಲಿಸ್ರು ಏನ್ ಮಾಡ್ತಿದ್ದಾರೋ!
ಈ ಬಗ್ಗೆ ಡಿಯಾರ್ ಕಂಪೆನಿ ಯಾವುದೇ ಪ್ರತಿಕ್ರಿಯ ನೀಡಿಲ್ಲ. ಆದರೆ ಅರ್ಮಾನಿ ಕಂಪೆನಿ ಈ ದುರುಪಯೋಗವನ್ನು ತಡೆಗಟ್ಟಲು ಕ್ರಮ ಕೈಗೊಂಡಿದೆ ಮತ್ತು ಈ ಬಗ್ಗೆ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದೆ ಎಂಬುದಾಗಿ ತಿಳಿದುಬಂದಿದೆ.