Site icon Vistara News

Charminar Clock: 135 ವರ್ಷ ಇತಿಹಾಸ ಇರೋ ಚಾರ್‌ಮಿನಾರ್ ಗಡಿಯಾರ ಸೌಂದರ್ಯಕ್ಕೆ ಪಾರಿವಾಳಗಳಿಂದ ಧಕ್ಕೆ

Charminar Clock


ಹೈದರಾಬಾದ್: ಐತಿಹಾಸಿಕ ಸ್ಥಳವಾದ ಹೈದರಾಬಾದ್ ಚಾರ್ ಮಿನಾರ್‌ನ ಪೂರ್ವ ಭಾಗದಲ್ಲಿರುವ 135 ವರ್ಷ ಹಳೆಯ ಗಡಿಯಾರ ಭಾಗಶಃ ಹಾನಿಯಾಗಿರುವುದು ಕಂಡುಬಂದಿದೆ. ಸೋಮವಾರ ಸ್ಮಾರಕಕ್ಕೆ ಭೇಟಿ ನೀಡಿದ ಸಂದರ್ಶಕರೊಬ್ಬರು ಗಡಿಯಾರ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ಗಡಿಯಾರದ ಹಾನಿಗೊಳಗಾದ ಭಾಗದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ (Charminar Clock)ಆಗಿದೆ.

ಬಿಳಿ ಬಣ್ಣದ ಪದರವನ್ನು ಹೊಂದಿರುವ ಗಡಿಯಾರದಲ್ಲಿ ಕಪ್ಪು ರಂಧ್ರಗಳು ಬಿದ್ದಿರುವುದು ಎದ್ದು ಕಾಣುತ್ತಿದೆ. ಅದರಲ್ಲೂ 25 ನಿಮಿಷಗಳ ಗುರುತಿಸುವಲ್ಲಿ ರಂಧ್ರ ಇರುವುದನ್ನು ಗಮನಿಸಲಾಗಿದೆ. ಪಾರಿವಾಳಗಳು ಗಡಿಯಾರದಲ್ಲಿ ಯಾವಾಗಲೂ ಬೀಡುಬಿಟ್ಟಿರುತ್ತವೆ. ಹಾಗಾಗಿ ಪಾರಿವಾಳಗಳು ಗಡಿಯಾರವನ್ನು ಹಾನಿಗೊಳಿಸಿವೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆಯ (ಎಎಸ್ಐ) ಸಿಬ್ಬಂದಿ ಹೇಳಿದ್ದಾರೆ. ಅಲ್ಲದೇ ಗಡಿಯಾರವನ್ನು ಸ್ಥಾಪಿಸಿದ ವಾಹಿದ್ ವಾಚ್ ಕಂಪನಿಯ ಕುಟುಂಬ ಸದಸ್ಯರೊಂದಿಗೆ ಹಾನಿಯ ಬಗ್ಗೆ ತಿಳಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಚಾರ್‌ ಮಿನಾರ್ ಹೈದರಾಬಾದ್‍ನಲ್ಲಿರುವ ಅತ್ಯಂತ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾಗಿದೆ. ರಾಜಧಾನಿಯನ್ನು ಗೋಲ್ಕೊಂಡದಿಂದ ಹೈದರಾಬಾದ್‍ಗೆ ಸ್ಥಳಾಂತರಿಸಿದ ನಂತರ, ಕುತುಬ್ ಶಾಹಿ ರಾಜವಂಶದ ಐದನೇ ರಾಜನು ಇದನ್ನು 1591 ರಲ್ಲಿ ನಿರ್ಮಿಸಿದನು. ಅದಕ್ಕೆ ನಾಲ್ಕು ಮಿನಾರ್‌ಗಳಿರುವ ಕಾರಣ , ಇದನ್ನು “ಚಾರ್ ಮಿನಾರ್” ಎಂದು ಹೆಸರಿಸಲಾಯಿತು. ತನ್ನ ನಗರವನ್ನು ಹಾಳುಗೆಡವುತ್ತಿದ್ದ ಪ್ಲೇಗ್ ರೋಗದ ಅಂತ್ಯಕ್ಕಾಗಿ ರಾಜನು ತನ್ನ ದೇವರನ್ನು ಪ್ರಾರ್ಥಿಸಿದ ಮತ್ತು ತಾನು ಪ್ರಾರ್ಥಿಸುತ್ತಿದ್ದ ಅದೇ ಸ್ಥಳದಲ್ಲಿಯೇ ಮಸ್ಜಿದ್ (ಇಸ್ಲಾಮಿನ ಮಸೀದಿ) ಒಂದನ್ನು ನಿರ್ಮಿಸುವುದಾಗಿ ಅವನು ಹರಸಿಕೊಂಡ ಎಂದು ಹೇಳಲಾಗುತ್ತದೆ. ಹಾಗಾಗಿ ಆ ಸ್ಥಳದಲ್ಲಿ 1591ರಲ್ಲಿ ಚಾರ್ ಮಿನಾರ್‌ಗೆ ಅಡಿಪಾಯವನ್ನು ಹಾಕಿದ್ದಾನೆ.

ಈ ಕಟ್ಟಡ ರಚನೆಯು ಗ್ರಾನೈಟ್, ಸುಣ್ಣ, ಗಾರೆಯಿಂದ ಮಾಡಲ್ಪಟ್ಟಿದೆ, ಮತ್ತು ಕೆಲವೊಬ್ಬರು ಹೇಳುವ ಪ್ರಕಾರ, ಪುಡಿಮಾಡಲ್ಪಟ್ಟ ಅಮೃತಶಿಲೆಯನ್ನೂ ಇದಕ್ಕೆ ಬಳಸಲಾಗಿದೆ ಎನ್ನಲಾಗಿದೆ. ಆಗ್ರಾದಲ್ಲಿನ ತಾಜ್‍ಮಹಲ್ ಮತ್ತು ಪ್ಯಾರಿಗಳಲ್ಲಿ ಐಫೆಲ್ ಟವರ್ ಗೆ ಸಮಾನವಾದ ಪ್ರಾಮುಖ್ಯತೆ ಚಾರ್ ಮಿನಾರ್ ಗೆ ಇದೆ ಎಂದು ಹೇಳಬಹುದು. ಭಾರತದ ಟಾಪ್ 10 ಐತಿಹಾಸಿಕ ಸ್ಥಳಗಳಲ್ಲಿ ಚಾರ್ಮಿನಾರ್ ಕೂಡ ಸೇರಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ; ಬಾಲಿವುಡ್‌ ಬಾದ್‌ಶಾಗೆ ಕಾಡುತ್ತಿರುವ ಸಮಸ್ಯೆ ಏನು?

ಪ್ರಸ್ತುತ, ಎಎಸ್ಐ ಈ ಐತಿಹಾಸಿಕ ಸ್ಮಾರಕವನ್ನು ನೋಡಿಕೊಳ್ಳುತ್ತಿದೆ. 2014 ರಲ್ಲಿ ತೆಲಂಗಾಣ ರಾಜ್ಯ ರಚನೆಯಾದ ನಂತರ, ಸರ್ಕಾರವು ವಾರಂಗಲ್‌ನ ಕಾಕತೀಯ ಕಲಾ ತೋರಣಂ ಜೊತೆಗೆ ಈ ಸ್ಮಾರಕವನ್ನು ರಾಜ್ಯದ ಅಧಿಕೃತ ಲಾಂಛನದಲ್ಲಿ ಸೇರಿಸಿತು.

Exit mobile version