ಬರ್ಗರ್, ಪಿಜ್ಜಾ ತಿನ್ನುವುದೆಂದರೆ ಮಕ್ಕಳಿಗೆ ಮಾತ್ರವಲ್ಲ ಈಗಿನ ಯುವಕ-ಯುವತಿಯರು ಕೂಡ ಇಷ್ಟಪಡುತ್ತಾರೆ. ಯಾವುದೇ ಹೋಟೆಲ್ ರೆಸ್ಟೋರೆಂಟ್‌ಗೆ ಹೋದರೂ ಕೂಡ ಅಲ್ಲಿ ಅವರು ಪಿಜ್ಜಾ, ಬರ್ಗರ್ ಮೊದಲು ಆರ್ಡರ್ ಮಾಡುತ್ತಾರೆ. ಇವುಗಳು ತುಂಬಾ ರುಚಿಯಾಗಿರುವ ಕಾರಣ ಇದಕ್ಕೆ ಎಷ್ಟೇ ಬೆಲೆಯಿದ್ದರೂ ಕೂಡ ಅವರು ಅದನ್ನು ಲೆಕ್ಕಿಸದೆ ಪಿಜ್ಜಾ, ಬರ್ಗರ್ ತಿನ್ನುವುದಕ್ಕೆ ಚಡಪಡಿಸುತ್ತಿರುತ್ತಾರೆ. ಸಾಮಾನ್ಯವಾಗಿ ಬರ್ಗರ್‌ನ ಬೆಲೆ ನೂರರಿಂದ ಸಾವಿರ ಇರಬಹುದು. ಆದರೆ ಇದೀಗ ವಿಶ್ವದ ಅತ್ಯಂತ ದುಬಾರಿ ಬರ್ಗರ್‌ವೊಂದು ಬೆಳಕಿಗೆ ಬಂದಿದೆ. ಈ ಬರ್ಗರ್‌ನ (Costly Burger) ಬೆಲೆ ಕೇಳಿದರೆ ನೀವು ಶಾಕ್ ಆಗುವುದಂತು ಖಂಡಿತ.
ಈ ಬರ್ಗರ್ ಅದರ ಅತಿಯಾದ ಬೆಲೆಗಾಗಿ ಮಾತ್ರವಲ್ಲದೆ ಅದರ ರುಚಿಗಳು ಮತ್ತು ಅದಕ್ಕೆ ಮಿಶ್ರಣ ಮಾಡಿದ ವಿಶಿಷ್ಟ ಪದಾರ್ಥಗಳಿಂದ ಅದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಇದಕ್ಕೆ ಗೋಲ್ಡನ್ ಬಾಯ್ ಬರ್ಗರ್ ಎಂದು ಹೆಸರಿಡಲಾಗಿದೆ. ಮತ್ತು ಇದಕ್ಕೆ ಉತ್ತಮ ಗುಣಮಟ್ಟದ ಪದಾರ್ಥಗಳಾದ ಎ 5 ವಾಗ್ಯು ಬೀಫ್, ಕಿಂಗ್ ಏಡಿ, ಬೆಲುಗಾ ಕ್ಯಾವಿಯರ್, ಕೋಪಿ ಲುವಾಕ್ (ವಿಶ್ವದ ಅತ್ಯಂತ ದುಬಾರಿ ಕಾಫಿ), ಕಾಫಿ ಬಿಬಿಕ್ಯು ಸಾಸ್, ಜಪಾನೀಸ್ ಮಚ್ಚಾ ಟೀ, ಟೊಮೆಟೊ, ಬಾತುಕೋಳಿ ಮೊಟ್ಟೆ, ವೈಟ್ ಟ್ರಫಲ್, ವಿಂಟೇಜ್ ಐಬೇರಿಯನ್ ಹ್ಯಾಮ್, ಮತ್ತು ಡೊಮ್ ಪೆರಿಗ್ನಾನ್ ಬನ್ ತಯಾರಿಸಲಾಗಿದೆ.
ಈ ಪದಾರ್ಥಗಳು ಬರ್ಗರ್‌ಗೆ ಉತ್ತಮ ರುಚಿಯನ್ನು ನೀಡುತ್ತದೆ. ಈ ಬರ್ಗರ್ ಬೆಲೆ 4.5 ಲಕ್ಷ ರೂಗಳೆಂದು ಹೇಳಲಾಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಪ್ರಕಾರ, ಇದು ಸಿಹಿ, ಹುಳಿ, ಉಪ್ಪು, ಕಹಿ ಮತ್ತು ಉಮಾಮಿ ಎಂಬ ರುಚಿಗಳ ಮೊಗ್ಗುಗಳಿಂದ ಅಲಂಕರಿಸಿದ್ದರಿಂದ ಇದು ಹೆಚ್ಚು ಪ್ರಶಂಸೆಗೆ ಒಳಗಾಗಿದೆಯಂತೆ. ಆದರೆ ಮೆಚ್ಚುಗೆಯ ಹೊರತಾಗಿಯೂ, ಈ ಬರ್ಗರ್ ಆನ್‌ಲೈನ್‌ನಲ್ಲಿ ವಿವಾದವನ್ನು ಹುಟ್ಟುಹಾಕಿದೆ. ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಜಗತ್ತಿನಲ್ಲಿ ಇಂತಹ ದುಂದುವೆಚ್ಚದ ಬರ್ಗರ್ ತಯಾರಿಕೆಗೆ ಕಾರಣವೇನು ಎಂದು ಅನೇಕರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆದ 5 ವಿಡಿಯೊಗಳು ಇಲ್ಲಿವೆ; ಮಿಸ್ ಮಾಡದೇ ನೋಡಿ!
‘ದಿ ಗೋಲ್ಡನ್ ಬಾಯ್’ ಹೆಸರಿನ ಈ ಬರ್ಗರ್ ಅನ್ನು ಡಚ್‌ನ ಒರೆಗಾನ್ ರೆಸ್ಟೋರೆಂಟ್‌ನಲ್ಲಿ ರಾಬರ್ಟ್ ಜಾನ್ ಡಿ ವೀನ್ ಅವರು ತಯಾರಿಸಿದ್ದಾರೆ. ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ ರೆಸ್ಟೋರೆಂಟ್ ಉದ್ಯಮ ತೀವ್ರವಾಗಿ ಹಾನಿಗೊಳಗಾಗುವುದನ್ನು ನೋಡಿದ ನಂತರ ಈ ಬರ್ಗರ್ ತಯಾರಿಸುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. “ಗೋಲ್ಡನ್ ಬಾಯ್‌ನ ಆರಂಭಿಕ ಮಾರಾಟದಿಂದ ಬಂದ ಆದಾಯವನ್ನು ಸಮಸ್ಯೆಯಲ್ಲಿ ಬಳಲುತ್ತಿರುವ ಕುಟುಂಬಗಳಿಗೆ 1,000 ಆಹಾರ ಪ್ಯಾಕೇಜುಗಳನ್ನು ಒದಗಿಸಲು ಮೀಸಲಿಡಲಾಯಿತು ಎಂಬುದಾಗಿ ತಿಳಿದುಬಂದಿದೆ.