Site icon Vistara News

Dog Attacks: ಬಡಪಾಯಿ ಡೆಲಿವರಿ ಮ್ಯಾನ್‌ನನ್ನು ಭೀಕರವಾಗಿ ಕಚ್ಚಿದ ಶ್ರೀಮಂತರ ಮನೆಯ ನಾಯಿಗಳು; ವಿಡಿಯೊ ಇದೆ

Dog Attacks

ವೈದ್ಯರೊಬ್ಬರ ಮನೆಗೆ ಫುಡ್ ಡೆಲಿವರಿ ಮಾಡಲು ಬಂದ ಡೆಲಿವರಿ ಮ್ಯಾನ್ ಮೇಲೆ ಅವರ ಮನೆಯಲ್ಲಿ ಸಾಕಿದ ಎರಡು ಪಿಟ್‌ ಬುಲ್‌ ನಾಯಿಗಳು ದಾಳಿ ಮಾಡಿದ ಘಟನೆ ಛತ್ತೀಸ್‌ಗಢದ ರಾಯ್ಪುರದ ಖಮರ್ದಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ಅನುಪಮ್ ನಗರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Dog Attacks) ಆಗಿದೆ. ಇಷ್ಟಾಗಿಯೂ ಆ ನಾಯಿಗಳ ಮಾಲಕಿ, ಡೆಲಿವರ್‌ ಮ್ಯಾನ್‌ನದ್ದೇ ತಪ್ಪು ಎಂದು ಆರೋಪಿಸಿದ್ದಾಳೆ. ಇದು ಜನಾಕ್ರೋಶಕ್ಕೆ ಕಾರಣವಾಗಿದೆ.

ನಾಯಿಗಳ ದಾಳಿಗೆ ಒಳಗಾದ ಡೆಲಿವರಿ ಮ್ಯಾನ್ ಸಲ್ಮಾನ್ ಎಂಬುದಾಗಿ ತಿಳಿದು ಬಂದಿದೆ. ವಿಡಿಯೊದಲ್ಲಿ ಸಲ್ಮಾನ್‌ ಅನ್ನು ನಾಯಿಗಳು ಕಚ್ಚುತ್ತಿರುವುದು ಕಂಡುಬಂದಿದೆ. ಈ ವೇಳೆ ಅವನು ನೋವಿನಿಂದ ನರಳುತ್ತಿದ್ದು, ಹಾಗೂ ನಾಯಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ದುರದೃಷ್ಟವಶಾತ್, ಅಲ್ಲಿ ಯಾರೂ ಕೂಡ ಸಲ್ಮಾನ್‌ ಸಹಾಯಕ್ಕೆ ಬರಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೇ ಹೊರಗೆ ಓಡಿ ನಾಯಿಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಅಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಹತ್ತಿ ಕುಳಿತು ಜೀವ ಉಳಿಸಿಕೊಂಡಿದ್ದಾನೆ. ನಾಯಿಗಳು ಹೊರಟುಹೋದ ನಂತರ, ಯಾರೋ ಒಬ್ಬ ವ್ಯಕ್ತಿ ಸಲ್ಮಾನ್‌ಗೆ ಕುಡಿಯಲು ನೀರಿನ ಬಾಟಲಿಯನ್ನು ನೀಡಿದ್ದಾರೆ. ಹಾಗೂ ನಂತರ ಸಲ್ಮಾನ್ ಅವರ ಕೈ ಮತ್ತು ಕಾಲುಗಳು ರಕ್ತಸಿಕ್ತವಾಗಿದ್ದು, ಅವರಿಗೆ ರಕ್ತವನ್ನು ಒರೆಸಿಕೊಳ್ಳುವಂತೆ ಮಹಿಳೆಯೊಬ್ಬರು ಬಟ್ಟೆ ತಂದು ಕೊಟ್ಟಿದ್ದಾರೆ.

ಈ ವಿಡಿಯೊ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದಾರೆ. ನಾಯಿಯ ಮಾಲೀಕನನ್ನು ಜೈಲಿಗೆ ಕಳುಹಿಸಿಬೇಕೆಂದು ಒಬ್ಬರು ಹೇಳಿದ್ದಾರೆ. ಹಾಗೇ ಮತ್ತೊಬ್ಬರು ಅವರು ವೈದ್ಯಕೀಯ ಶುಲ್ಕಗಳನ್ನು ಡೆಲಿವರಿ ಮ್ಯಾನ್‌ಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವರದಿ ಪ್ರಕಾರ, ಸಂಧ್ಯಾ ರಾವ್ ಎಂಬ ಮಹಿಳೆ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಡಾ. ಸಂಧ್ಯಾ ರಾವ್ ಅವರು ತಮ್ಮ ಮನೆಯಲ್ಲಿ 3 ನಾಯಿಗಳನ್ನು ಸಾಕಿದ್ದಾರೆ. ಮೂರು ನಾಯಿಗಳಲ್ಲಿ ಎರಡು ಅಪಾಯಕಾರಿ ಪಿಟ್‌ ಬುಲ್‌ ತಳಿಯಾಗಿವೆ. ಶುಕ್ರವಾರ ಡೆಲಿವರಿ ಮ್ಯಾನ್ ಸಂಧ್ಯಾ ರಾವ್ ಅವರ ಮನೆಗೆ ಆಟೋದಲ್ಲಿ ಬಂದಿದ್ದಾಗ ಅವರು ಮನೆಯೊಳಗೆ ಹೋಗಲು ಬಾಗಿಲನ್ನು ತಲುಪಿದ ಕೂಡಲೇ 2 ಪಿಟ್ಬುಲ್ ನಾಯಿಗಳು ಸಲ್ಮಾನ್‌ ಮೇಲೆ ದಾಳಿ ಮಾಡಿದವು. ನಾಯಿಗಳು ಆತನ ಕೈ ಮತ್ತು ಕಾಲುಗಳನ್ನು ತೀವ್ರವಾಗಿ ಕಚ್ಚಿವೆ.

ಇದನ್ನೂ ಓದಿ: 8 ವರ್ಷದ ಮಗನ ತಲೆ ನೆಲಕ್ಕೆ ಅಪ್ಪಳಿಸಿ, ಮೈಕೈಯೆಲ್ಲ ಕಚ್ಚಿದ ತಾಯಿ; ವಿಡಿಯೊ ನೋಡಿ ಜನಾಕ್ರೋಶ

ದಾಳಿಯ ನಂತರ ನೆರೆಹೊರೆಯವರು ಸಲ್ಮಾನ್ ಅನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ವರದಿಗಳು ತಿಳಿಸಿವೆ. ಅಲ್ಲದೇ ನಾಯಿ ಮಾಲೀಕರು ತಮ್ಮನ್ನು ಕರೆಯದೇ ಒಳಗೆ ಬಂದಿದ್ದಕ್ಕೆ ಹೀಗೆ ಆಗಿರುವುದಾಗಿ ಸಲ್ಮಾನ್‌ ಅನ್ನೇ ದೂಷಿಸಿದ್ದಾರೆ! ಸಲ್ಮಾನ್ ಅವರ ದೂರಿನ ನಂತರ ಸೋಮವಾರ ಬೆಳಗ್ಗೆ ಮುನ್ಸಿಪಲ್ ಕಾರ್ಪೊರೇಷನ್ ತಂಡವು ವೈದ್ಯರ ಮನೆಗೆ ನಾಯಿಗಳನ್ನು ಹಿಡಿಯಲು ಬಂದಿದ್ದರು. ಆದರೆ ಬರಿಗೈಯಲ್ಲಿ ವಾಪಸ್‌ ಹೋಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Exit mobile version