Site icon Vistara News

Fraud Case: 20ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಚಿನ್ನಾಭರಣ ಎಗರಿಸಿದ್ದ ವಂಚಕ ಪೊಲೀಸ್‌ ಬಲೆಗೆ ಬಿದ್ದಿದ್ದು ಹೇಗೆ?

Fraud Case


ಈ ಕಾಲದಲ್ಲಿ ಮೋಸಗಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಜನರು ತಮ್ಮ ದುರಾಸೆಗೆ ಜನರ ಜೀವ, ಜೀವನಕ್ಕೂ ಎಳ್ಳುಕಾಳಿನಷ್ಟು ಪ್ರಾಮುಖ್ಯತೆ ನೀಡುತ್ತಿಲ್ಲ. ಬೆಲೆಬಾಳುವ ವಸ್ತುಗಳಿಗಾಗಿ ಜನರ ಜೀವನವನ್ನು ಹಾಳುಮಾಡುತ್ತಿದ್ದಾರೆ. ಅಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಬೆಲೆಬಾಳುವ ವಸ್ತುಗಳನ್ನು ಕದಿಯಲು ಅನೇಕ ಮಹಿಳೆಯರನ್ನು ಮದುವೆಯಾಗಿ ಅವರಿಗೆ ಮೋಸ ಮಾಡಿ ಅವರ ಜೀವನವನ್ನು (Fraud Case) ಹಾಳು ಮಾಡಿದ್ದಾನೆ.

ದೇಶಾದ್ಯಂತ 20ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಅವರ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ವಂಚಿಸಿದ ಆರೋಪದ ಮೇಲೆ 43 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಬ್ಬಳು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಎಂಬಿವಿವಿ ಪೊಲೀಸರು ಜುಲೈ 23ರಂದು ಥಾಣೆ ಜಿಲ್ಲೆಯ ಕಲ್ಯಾಣ್‍ನಿಂದ ಆರೋಪಿ ಫಿರೋಜ್ ನಿಯಾಜ್ ಶೇಖ್‍ನನ್ನು ಬಂಧಿಸಿದ್ದಾರೆ. ಆರೋಪಿಯು ಮ್ಯಾರೇಜ್ ವೆಬ್‍ಸೈಟ್‌ನಲ್ಲಿ ಅವಳೊಂದಿಗೆ ಸ್ನೇಹ ಬೆಳೆಸಿ ಮದುವೆಯಾಗಿದ್ದ.

2023ರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಶೇಖ್ ಮಹಿಳೆಯಿಂದ 6.5 ಲಕ್ಷ ರೂ.ಗಳ ನಗದು, ಲ್ಯಾಪ್‍ಟಾಪ್ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡಿದ್ದಾನೆ. ಹಾಗಾಗಿ ಮಹಿಳೆ ಪೊಲೀಸರಿಗೆ ಆತನ ಬಗ್ಗೆ ದೂರು ನೀಡಿದ್ದು, ಆಕೆಯ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ನಂತರ ಆರೋಪಿಯನ್ನು ಬಂದಿಸಿ, ಆತನಿಂದ ಲ್ಯಾಪ್‍ಟಾಪ್, ಮೊಬೈಲ್ ಪೋನ್‍ಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳು, ಚೆಕ್‍ಬುಕ್‍ಗಳು ಮತ್ತು ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಪತ್ನಿಗೆ ಮಕ್ಕಳಾಗಿಲ್ಲ ಎಂದು ಮಾವನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ!

ಶೇಖ್ ಮ್ಯಾರೇಜ್ ವೆಬ್‍ಸೈಟ್‌ಗಳಲ್ಲಿ ವಿಚ್ಛೇದಿತರು ಮತ್ತು ವಿಧವೆಯರನ್ನು ಗುರಿಯಾಗಿಸಿಕೊಂಡು, ಅವರನ್ನು ಮದುವೆಯಾಗಿ ಅವರ ಬೆಲೆಬಾಳುವ ವಸ್ತುಗಳನ್ನು ಎಗರಿಸುತ್ತಿದ್ದ ಎಂಬ ಸಂಗತಿ ತನಿಖೆಯಿಂದ ತಿಳಿದು ಬಂದಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ ಮತ್ತು ಗುಜರಾತ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಆರೋಪಿ 2015ರಿಂದ 20ಕ್ಕೂ ಹೆಚ್ಚು ಮಹಿಳೆಯರಿಗೆ ಈ ರೀತಿಯಲ್ಲಿ ಮೋಸ ಮಾಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

Exit mobile version