Site icon Vistara News

Fraud Case: ಪತ್ನಿಗೆ ಮಕ್ಕಳಾಗಿಲ್ಲ ಎಂದು ಮಾವನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ!

Fraud Case


ಅಹ್ಮದಾಬಾದ್: ಕೆಲವೊಮ್ಮೆ ದಂಪತಿಗಳಿಗೆ ಮದುವೆಯಾಗಿ ಹಲವು ವರ್ಷಗಳೇ ಕಳೆದರೂ ಮಕ್ಕಳಾಗುವುದಿಲ್ಲ. ಇದಕ್ಕೆ ವಯಸ್ಸು, ಹಾರ್ಮೋನ್ ಸಮಸ್ಯೆ, ಅಥವಾ ಸಂತಾನೋತ್ಪತ್ತಿ ಅಂಗಗಳಲ್ಲಿನ ಸಮಸ್ಯೆ ಕಾರಣವಾಗಿರುತ್ತದೆ. ಹಾಗಾಗಿ ತಮಗೆ ಮಕ್ಕಳಾಗಬೇಕೆಂದು ಹಲವು ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಾರೆ. ಇದೀಗ ಮದುವೆಯಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲವಾದರೂ ತನ್ನ ಪತ್ನಿಗೆ ಗರ್ಭಧರಿಸಲು ಸಾಧ್ಯವಾಗದಿದ್ದಾಗ ಆಕೆಯನ್ನು ವೈದ್ಯರ ಬಳಿಗೆ ಕರೆದೊಯ್ದ 34 ವರ್ಷದ ವ್ಯಕ್ತಿ, ಇದಕ್ಕೆ ಕಾರಣ ಪತ್ತೆ ಹಚ್ಚಿದ್ದಾನೆ. ಇದೀಗ ಆತ ಪತ್ನಿಯ ಕುಟುಂಬದವರ ವಿರುದ್ಧ ವಂಚನೆ (Fraud Case) ದಾಖಲಿಸಿದ್ದಾನೆ.

ಈ ಘಟನೆ ಅಹಮದಾಬಾದ್‍ನಲ್ಲಿ ನಡೆದಿದ್ದು, ಸೋನೋಗ್ರಫಿ ಮಾಡಿದ ವೈದ್ಯರು, ಆ ದಂಪತಿ ನೈಸರ್ಗಿಕವಾಗಿ ಗರ್ಭಧರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಆಕೆಯ ವಯಸ್ಸು 40 ದಾಟಿದ್ದರಿಂದ ಮಕ್ಕಳಾಗುವ ಸಾಧ್ಯತೆ ಇಲ್ಲ ಎಂದಿದ್ದಾರೆ. ಈ ವಿಚಾರ ತಿಳಿದು ಕೋಪಗೊಂಡ ವ್ಯಕ್ತಿ ವೆಜಲ್ಪುರ ಪೊಲೀಸರನ್ನು ಸಂಪರ್ಕಿಸಿ ತನ್ನ ಪತ್ನಿ, ಆಕೆಯ ತಂದೆ ಮತ್ತು ಸಂಬಂಧಿಕರು ಸೇರಿದಂತೆ ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ನಂಬಿಕೆ ದ್ರೋಹ, ಫೋರ್ಜರಿ, ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಬೆದರಿಕೆಗೆ ಸಂಬಂಧಿಸಿದ ಐಪಿಸಿಯ ಅನೇಕ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಮದುವೆ ನಿಶ್ಚಯವಾಗುವ ಮೊದಲು ಆಕೆಯ ಬಯೋಡೇಟಾದಲ್ಲಿ ಆಕೆಯ ಜನ್ಮ ದಿನಾಂಕವನ್ನು ಮೇ 18, 1991 ಎಂದು ತೋರಿಸಲಾಗಿತ್ತು. ಇದರಿಂದಾಗಿ ಅವಳು ತನಗಿಂತ 18 ತಿಂಗಳು ಚಿಕ್ಕವಳಾಗಿದ್ದಾಳೆ ಎಂದು ತಿಳಿದ ವ್ಯಕ್ತಿ ಆಕೆಯ ಕುಟುಂಬವನ್ನು ಭೇಟಿಯಾದ ನಂತರ ಜೂನ್ 19, 2023ರಂದು ಮದುವೆಯಾಗಿದ್ದರು. ಮದುವೆಯ ದಿನದಂದು, ಅವರು ಅವಳ ಶಾಲಾ ಪ್ರಮಾಣಪತ್ರ ಮತ್ತು ಪಾಸ್‍ಪೋರ್ಟ್‌ ಪ್ರತಿಗಳನ್ನು ಸಲ್ಲಿಸಿದ್ದರು. ಮದುವೆ ರಿಜಿಸ್ಟರ್‌ನಲ್ಲಿ ಆಕೆಯ ಜನ್ಮ ದಿನಾಂಕವನ್ನು ಮೇ 18, 1991ಎಂದು ನಮೂದಿಸಿದ್ದರು. ಆದರೆ ಅವಳು ಗರ್ಭಧರಿಸಲು ಸಾಧ್ಯವಾಗದಿದ್ದಾಗ ವ್ಯಕ್ತಿಯ ತಾಯಿ ಮತ್ತು ಸಹೋದರಿ ತಪಾಸಣೆಗಾಗಿ ಜುಹಾಪುರದ ವೈದ್ಯರ ಬಳಿಗೆ ಕರೆದೊಯ್ದರು. ನಂತರ, ಸೆಪ್ಟೆಂಬರ್ 2023ರಲ್ಲಿ ಅವರು ಪಾಲ್ಡಿಯ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿದರು.

ಇದನ್ನೂ ಓದಿ: ಬೀದಿ ನಾಯಿ ದಾಳಿಯಿಂದ ಮಗುವನ್ನು ರಕ್ಷಿಸಿದ ಸಾಕು ನಾಯಿ! ಅಪರೂಪದ ವಿಡಿಯೊ

ವೈದ್ಯರ ಪ್ರಕಾರ, ಸೋನೋಗ್ರಫಿ ವರದಿಯಲ್ಲಿ ಅವರ ಹೆಂಡತಿಗೆ 40ರಿಂದ 42 ವರ್ಷ ವಯಸ್ಸಾಗಿರುವುದಾಗಿ ತಿಳಿಸಲಾಗಿದೆ. ಹಾಗಾಗಿ ಅವಳು ಸ್ವಾಭಾವಿಕವಾಗಿ ಗರ್ಭ ಧರಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಆತ ಆಕೆಯ ಮನೆಯವರನ್ನು ಭೇಟಿ ಮಾಡಿ ವಿಚಾರಿಸಿದಾಗ ಆಕೆಯ ಸಹೋದರರು ಅಧಿಕೃತ ದಾಖಲೆಗಳಲ್ಲಿ ಆಕೆಯ ಜನ್ಮ ದಿನಾಂಕವನ್ನು ತಿರುಚಿದ್ದು ಕಂಡು ಬಂತು. ಅದನ್ನು ಮೇ 18, 1985ರಿಂದ ಮೇ 18, 1991ಕ್ಕೆ ಬದಲಾಯಿಸಲಾಗಿತ್ತು ಎಂಬುದು ತಿಳಿದು ಬಂತು. ಹಾಗಾಗಿ ಆತ ಆಕೆಯ ಕುಟುಂಬದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Exit mobile version