ಲಕ್ನೋ: ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ (Hathras Case) ಕಾಲ್ತುಳಿತಕ್ಕೆ ಸಿಲುಕಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ 121 ಜನರು ಸಾವನ್ನಪ್ಪಿದ ಘಟನೆಯ ನಂತರ, ಈ ದುರಂತಕ್ಕೆ ಕಾರಣವಾಗಿದ್ದ ಸ್ವಯಂ ಘೋಷಿತ ದೇವಮಾನವ ಭೋಲೆ ಬಾಬಾ ಅಲಿಯಾಸ್ ನಾರಾಯಣ್ ಸಾಕರ್ ಹರಿ ಬಗ್ಗೆ ಹೆಚ್ಚಿನ ಕುತೂಹಲಕಾರಿ ಮಾಹಿತಿಗಳು ಹೊರಬರುತ್ತಿವೆ.
ಬಾಬಾನ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣಗಳಿರುವ ಬಗ್ಗೆ ಬಹಿರಂಗವಾದ ಕೆಲವೇ ಗಂಟೆಗಳಲ್ಲಿ, ಉತ್ತರ ಪ್ರದೇಶದ ಮೈನ್ಪುರಿಯಲ್ಲಿರುವ 13 ಎಕರೆ “ಪಂಚತಾರಾ” ಆಶ್ರಮ ಸೇರಿದಂತೆ ಅವರ ಅಪಾರ ಸಂಪತ್ತಿನ ಬಗ್ಗೆ ವಿವರ ನೀಡುವಂತಹ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಉತ್ತರ ಪ್ರದೇಶದ ಮೈನ್ಪುರಿಯಲ್ಲಿರುವ 13 ಎಕರೆ “ಪಂಚತಾರಾ” ಆಶ್ರಮದ ಜಮೀನಿನ ಮೌಲ್ಯ 4 ಕೋಟಿ ರೂ. ಎಂಬುದಾಗಿ ತಿಳಿದುಬಂದಿದೆ. ಇನ್ನು ಮೈನ್ಪುರಿ ಆಶ್ರಮವು ಪಂಚತಾರಾ ಹೋಟೆಲ್‌ನಲ್ಲಿರುವ ಸೌಲಭ್ಯಗಳನ್ನು ಹೊಂದಿವೆ ಎನ್ನಲಾಗಿದೆ. ಈ ಆಶ್ರಮದಲ್ಲಿ ವಾಸವಾಗಿದ್ದ, ದೇವತಾಮಾನ ಎಂದು ಕರೆಯುವ ಬಾಬಾರಿಗೆ ಈ ಆಶ್ರಮದಲ್ಲಿ ಆರು ಕೊಠಡಿಗಳನ್ನು ಮೀಸಲಿಡಲಾಗಿದೆ. ಇನ್ನೂ ಆರು ಕೊಠಡಿಗಳನ್ನು ಸಮಿತಿಯ ಸದಸ್ಯರು ಮತ್ತು ಅವರ ಸಂಸ್ಥೆಯ ಸ್ವಯಂಸೇವಕರಿಗೆ ಮೀಸಲಿಡಲಾಗಿದೆ. ಆಶ್ರಮವು ಖಾಸಗಿ ರಸ್ತೆಯನ್ನು ಮಾತ್ರವಲ್ಲದೆ ಅತ್ಯಾಧುನಿಕ ಕೆಫೆಟೇರಿಯಾವನ್ನು ಸಹ ಹೊಂದಿದೆ ಎನ್ನಲಾಗಿದೆ.
ಆಶ್ರಮಕ್ಕಾಗಿ ಭೂಮಿಯನ್ನು 3-4 ವರ್ಷಗಳ ಹಿಂದೆ ತನಗೆ ಉಡುಗೊರೆಯಾಗಿ ನೀಡಲಾಗಿದೆ ಎಂದು ಬಾಬಾ ಹೇಳಿದ್ದಾರೆ. ಆದರೆ ದಾಖಲೆಗಳು ಅವರು ಕೋಟಿಗಟ್ಟಲೆ ಮೌಲ್ಯದ ಹಲವಾರು ಆಸ್ತಿಗಳನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸುತ್ತವೆ. ದೇಶದ ಇತರ ಸ್ಥಳಗಳಲ್ಲಿನ ಹೆಚ್ಚಿನ ಆಶ್ರಮಗಳು ಈ ಆಸ್ತಿಗಳ ವ್ಯಾಪ್ತಿಯಲ್ಲಿ ಬರುತ್ತದೆ ಎನ್ನಲಾಗಿದೆ.
ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ಬಾಬಾ ಮತ್ತು ಅವರ ಸಂಸ್ಥೆ ಆಯೋಜಿಸಿದ್ದ ‘ಸತ್ಸಂಗ’ (ಧಾರ್ಮಿಕ ಕಾರ್ಯಕ್ರಮ) ದಲ್ಲಿ ಕಾಲ್ತುಳಿತದಿಂದ ಕನಿಷ್ಠ ಏಳು ಮಕ್ಕಳು ಸೇರಿದಂತೆ 121 ಜನರ ಸಾವು ಸಂಭವಿಸಿದೆ. 80,000 ಜನರಿಗೆ ಅನುಮತಿ ನೀಡಲಾಗಿದ್ದು, 2.5 ಲಕ್ಷ ಜನರು ಕಾರ್ಯಕ್ರಮಕ್ಕೆ ಜಮಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಾಬಾ ತನ್ನ ಕಾರಿನಲ್ಲಿ ಹೊರಟಾಗ, ಜನಸಮೂಹವು ಅವರ ಆಶೀರ್ವಾದ ಪಡೆಯಲು ಅವರ ಹಿಂದೆ ಓಡಿದ್ದಾರೆ. ಜನಸಂದಣಿಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿ, ಸ್ವಯಂಸೇವಕರು ಮತ್ತು ಬಾಬಾ ಅವರ ಭದ್ರತಾ ಪಡೆ ಜನರನ್ನು ಹಿಂದಕ್ಕೆ ತಳ್ಳಲು ಪ್ರಾರಂಭಿಸಿದರು. ಇದರಿಂದ ಹಲವಾರು ಭಕ್ತರು ಕೆಳೆಗೆ ಬಿದ್ದು ಕಾಲ್ತುಳಿತಕ್ಕೆ ಒಳಗಾದರು.
ಈ ಪ್ರಕರಣದ ಬಗ್ಗೆ ಮಾತನಾಡಿದ ಬಾಬಾ ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದರು ಮತ್ತು ಈ ದುರಂತದ ಹಿಂದೆ ಸಮಾಜ ವಿರೋಧಿ ಶಕ್ತಿಗಳ ಕೈವಾಡವಿದೆ ಎಂದು ಹೇಳಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: 34 ವರ್ಷಗಳ ಬಳಿಕ ತಾಯ್ನಾಡಿಗೆ ಮರಳಿದ ಕಾಶ್ಮೀರಿ ಪಂಡಿತ; ಪಾಳುಬಿದ್ದ ಮನೆ ನೋಡಿ ಭಾವುಕ
ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಹಾಗೇ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಗಾಯಾಳುಗಳು ಬೇಗನೆ ಗುಣಮುಖರಾಗುವಂತೆ ಹಾರೈಸಿದ್ದಾರೆ ಎನ್ನಲಾಗಿದೆ.