Site icon Vistara News

Health Tips Kannada: ನೆನಪಿಡಿ, ನಾಲಿಗೆ ಬಯಸುವ ಆಹಾರಗಳನ್ನೆಲ್ಲ ನಿಮ್ಮ ಮಿದುಳು ಬಯಸದು!

Health Tips Kannada

ಬಗೆಬಗೆಯ (Health Tips Kannada) ಐಸ್‌ಕ್ರೀಂ, ಚಾಕೋಲೇಟ್‌, ಬ್ರೌನಿ ಡೋನಟ್‌ಗಳು, ಕೇಕ್‌-ಪೇಸ್ಟ್ರಿಗಳು, ಪಿಜ್ಜಾ ಬರ್ಗರ್‌ಗಳು ಬಾಯಲ್ಲಿ ನೀರೂರಿಸುವ ತಿನಿಸುಗಳೇ ಎಂಬುದರಲ್ಲಿ ಎರಡು ಮಾತಿಲ್ಲ. ಇವೆಲ್ಲ ನಮಗಿಷ್ಟವಿಲ್ಲ ಎಂದು ಹೇಳುವ ಮಂದಿ ಸಿಗುವುದು ಬಹಳ ಕಷ್ಟ. ಪುಟಾಣಿ ಮಕ್ಕಳಿಂದ ಹಿಡಿದು, ಮುದುಕರವರೆಗೆ ಎಲ್ಲರೂ ಇಂತಹ ಆಹಾರದ ಹೆಸರು ಕೇಳುತ್ತಲೇ ಬಾಯಿ ಚಪ್ಪರಿಸುವವರೇ. ಗೆಳೆಯರೆಲ್ಲ ಜೊತೆ ಸೇರಿದಾಗ, ಯಾಕೋ ಬೇಸರವೆನಿಸಿದಾಗ, ಬೇಸಿಗೆಯ ಬಿಸಿಲಿಗೆ, ಮಳೆಗಾಲದ ಚಳಿಗೆ ಅಥವಾ ʻಯಾರು ಅಡುಗೆ ಮಾಡುತ್ತಾರೆʼ ಎಂದೆನಿಸುವ ಉದಾಸೀನದ ಸಂಜೆಗಳಲ್ಲಿ ಈ ಎಲ್ಲ ತಿನಿಸುಗಳೂ ನಮ್ಮನ್ನು ತಮ್ಮ ಬಳಿಗೆ ಕರೆಯುತ್ತವೆ. ಆಧುನಿಕ ಜೀವನಶೈಲಿಯೂ ಕೂಡಾ ಇಂತಹ ಒಂದಿಲ್ಲೊಂದು ಬಗೆಯ ತಿನಿಸುಗಳನ್ನು ವಾರಕ್ಕೆರಡು ಬಾರಿಯಾದರೂ ತಿನ್ನುವಂತೆ ಮಾಡುತ್ತವೆ. ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ತಿಳಿದಿದ್ದರೂ ಇವನ್ನು ನೋಡಿದಾಗ,, ನೆನೆಸಿಕೊಂಡಾಗ ಬಾಯಲ್ಲಿ ನೀರೂರುವಂತೆ ಮಾಡುತ್ತವೆ. ಈ ಎಲ್ಲ ಆಹಾರಗಳು ನಮಗೆ ಆಯಾ ಕ್ಷಣಕ್ಕೆ ಸಂತೋಷವನ್ನು ನೀಡಬಲ್ಲವಾದರೂ, ನಿಜಕ್ಕೂ ನಮ್ಮ ಮಿದುಳಿಗೆ ಸಂತೋಷ ನೀಡಬಲ್ಲವೇ?

ಖಿನ್ನತೆಗೆ ದೂಡಬಹುದು:

ಖಂಡಿತಾ ಇಲ್ಲ. ಇವಾವುವೂ ನಿಮ್ಮ ಮಿದುಳಿಗೆ ಸಂತೋಷ ನೀಡುವ ಆಹಾರಗಳಲ್ಲ. ಬದಲಾಗಿ ನಿಮ್ಮ ದುಃಖವನ್ನು, ಬೇಸರವನ್ನು, ಏಕತಾನತೆಯ ಭಾವವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ಹೌದು. ಆ ಕ್ಷಣದಲ್ಲಿ, ಸಂತೋಷ ಸಿಕ್ಕರೂ, ಖುಷಿಯೆನಿಸದರೂ, ಇಂತಹ ಆಹಾರಗಳಿಗೆ ನಮ್ಮನ್ನು ಬೇಸರಕ್ಕೆ ತಳ್ಳುವ ಗುಣವಿದೆ. ಇನ್ನಷ್ಟು ಮತ್ತಷ್ಟು ಇಂತಹ ಆಹಾರವನ್ನು ಬಯಸುವ ನಮ್ಮ ಮನಸ್ಸು ನಮ್ಮನ್ನು ಮತ್ತಷ್ಟು ಖಿನ್ನತೆಗೆ ದೂಡುತ್ತದೆ.

ಒಂದು ಅಧ್ಯಯನದ ಪ್ರಕಾರ, ಇಂತಹ ಆಹಾರಗಳನ್ನು ಅಥವಾ, ಪೋಷಕಾಂಶಗಳ ಕೊರತೆಯಿರುವ ಆಹಾರವನ್ನೇ ತಿಂದ ಮಂದಿಯ ಮಿದುಳಿನ ಆರೋಗ್ಯ ದಿನೇದಿನೇ ಹದಗೆಟ್ಟಿವೆ. ಅಷ್ಟೇ ಅಲ್ಲ, ಕಾಲಕ್ರಮೇಣ ಇಂತಹ ಆಹಾರ ತಿಂದವರು ಬಹುಬೇಗನೆ ಖಿನ್ನತೆ ಹಾಗೂ ಮಾನಸಿಕ ಒತ್ತಡದಂತಹ ಸಮಸ್ಯೆಗಳಿಗೆ ಒಳಗಾಗಿರುವುದು ಅದ್ಯಯನಗಳಿಂದ ತಿಳಿದುಬಂದಿದೆ.

ನಮಗೆ ಖುಷಿಯೆನಿಸುವ ಆಹಾರ ನಮ್ಮ ಮಿದುಳಿಗೆ ಖುಷಿಕೊಡಬೇಕೆಂದೇನಿಲ್ಲ. ಮಿದುಳಿಗೆ ಖುಷಿ ಕೊಡುವ ಆಹಾರಗಳೇ ಬೇರೆ. ತಾಜಾ ಹಣ್ಣುಗಳು ಹಾಗೂ ತರಕಾರಿಗಳು, ಬೇಳೆ ಕಾಳುಗಳು, ಹಿತಮಿತವಾಗಿ ಎಣ್ಣೆ (ಒಳ್ಳೆಯ ಎಣ್ಣೆ), ಮೊಳಕೆ ಕಾಳುಗಳು, ಮೀನು, ಒಣ ಬೀಜಗಳು, ಹಾಲು ಹಾಗೂ ಹಾಲಿನ ಉತ್ಪನ್ನಗಳು, ಮೊಟ್ಟೆ, ಕೋಳಿ ಇತ್ಯಾದಿ ನಮ್ಮ ಮಿದುಳನ್ನೂ ಆರೋಗ್ಯವಾಗಿ ಖಷಿಯಾಗಿ ಇಡುವಂತಹ ಆಹಾರಗಳು ಎಂದು ಅದ್ಯಯನ ಹೇಳುತ್ತದೆ.

ಮಿದುಳಿನ ಮೇಲೆ ಪರಿಣಾಮ:

ಈ ಎಲ್ಲ ಆಹಾರಗಳೂ ನಮ್ಮ ಮಿದುಳನ್ನು ಇದ್ದಕ್ಕಿದ್ದಂತೆ ಉಲ್ಲಾಸದಾಯಕವನ್ನಾಗಿ ಮಾಡಲಾಗದಿದ್ದರೂ, ಇವು ದೀರ್ಘಕಾಲಿಕವಾಗಿ ಮಿದುಳಿನ ಮೇಲೆ ಉತ್ತಮ ಪರಿಣಾಮ ಬೀರುವ ಸಾಮರ್ಥ್ಯ ಉಳ್ಳವಾಗಿವೆ. ಸಂಸ್ಕರಿಸಿದ ಆಹಾರಗಳು ಹಾಗೂ ಫಟಾಫಟ್‌ ಆಧುನಿಕ ತಿನಿಸುಗಳು ನಮ್ಮನ್ನು ದಿಢೀರ್‌ ಸೆಳೆವ ಹಾಗೂ ಉಲ್ಲಾಸದಾಯಕವನ್ನಾಗಿ ಮಾಡುವ ಗೂಣ ಹೊಂದಿದ್ದರೂ ನಮ್ಮ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವಂತೆಯೇ ಮಿದುಳಿನ ಮೇಲೆಯೂ ಕೆಟ್ಟ ಪರಿಣಾಮ ಬೀರಬಲ್ಲವು.

ಇದನ್ನೂ ಓದಿ:Video Viral: ಮಹಿಳೆಯನ್ನು ತಿವಿದು ರಸ್ತೆಯುದ್ದಕ್ಕೂ ಎಳೆದೊಯ್ದ ಎಮ್ಮೆ! ವಿಡಿಯೊ ಇದೆ

ಮಾನಸಿಕವಾಗಿ ಖಿನ್ನತೆ ಹಾಗೂ ಇನ್ನಿತರ ಸಮಸ್ಯೆಗಳಿಂದ ಬಳಲುವ ಮಂದಿಯ ಆಹಾರಕ್ರಮ ಗಮನಿಸಿದರೂ ಇದಕ್ಕೆ ಪುಷ್ಟಿ ದೊರೆಯುತ್ತದೆ. ನಿಮ್ಮ ನಾಲಿಗೆ ಬಯಸುವ ಆಹಾರಗಳನ್ನು ನಿಮ್ಮ ಮಿದುಳು ಬಯಸದು ಎಂಬುದನ್ನು ನೆನಪಿನಲ್ಲಿಡಿ. ಪ್ಯಾಕೇಜ್ಡ್‌ ಸ್ನ್ಯಾಕ್‌ಗಳು, ಆಲ್ಕೋಹಾಲ್‌, ಸೋಡಾ ಹಾಗೂ ಮಾರುಕಟ್ಟೆಯ ಇತರ ಪ್ಯಾಕೇಜ್ಡ್‌ ಡ್ರಿಂಕ್‌ಗಳು, ಪ್ರೆಂಚ್‌ ಫ್ರೈಗಳು, ಡೋನಟ್‌, ವೈಟ್‌ ಬ್ರೆಡ್‌, ಸಂಸ್ಕರಿಸಿದ ಮಾಂಸ, ಬೆಣ್ಣೆ ಹಾಗೂ ಫುಲ್‌ ಕೊಬ್ಬಿರುವ ಚೀಸ್‌, ಕೆಚಪ್‌, ಸಿರಪ್‌, ಡಿಪ್‌ ಹಾಗೂ ಡ್ರೆಸ್ಸಿಂಗ್‌ಗಳು ಎಲ್ಲವೂ ಮಿದುಳಿಗೆ ನಿಜಕ್ಕೂ ಖುಷಿ ಕೊಡದ ಆಹಾರಗಳು ಎಂಬುದನ್ನು ನೆನಪಿಡಿ.

Exit mobile version