ಅಹಮದಾಬಾದ್: ಅಪ್ಪನ ದೌರ್ಜನ್ಯಕ್ಕೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ತನ್ನ ತಾಯಿಯನ್ನು ಏಳು ವರ್ಷದ ಬಾಲಕಿಯೊಬ್ಬಳು ಸಮಯ ಪ್ರಜ್ಞೆ ಹಾಗೂ ಚಾತುರ್ಯದ (Girl Saved Mother ) ಮೂಲಕ ಬದುಕುಳಿಸಿದ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದೆ. ಅಂದ ಹಾಗೆ ಬಾಲಕಿಗೆ ನೆರವಾಗಿದ್ದು ಆಕೆ ತರಗತಿಯಲ್ಲಿ ಕಲಿತ ಪಾಠ. ಅಂದರೆ ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿಗೆ ಕರೆ ಮಾಡಬೇಕು ಎಂಬ ಶಿಕ್ಷಕರ ಹಿತನುಡಿ. ಹಾಗೆಯೇ ಕೈಯ ರಕ್ತನಾಳ ಕತ್ತರಿಸಿಕೊಂಡು ಅಸ್ವಸ್ಥಗೊಂಡು ಬಿದ್ದಿದ್ದ ತಾಯಿಯನ್ನು ನೋಡಿಯೂ ಗಾಬರಿಯಾಗದ ಆಕೆ ಸಹಾಯವಾಣಿಗೆ ಕರೆ ಮಾಡಿ ಆಂಬ್ಯುಲೆನ್ಸ್ ಕರೆಸಿ ಪ್ರಾಣ ಉಳಿಸಿದ್ದಾಳೆ.
ಕಳೆದ ಗುರುವಾರ ರಾತ್ರಿ ಘಟನೆ ನಡೆದಿದೆ ಎಂದು ಗುಜರಾತ್ನ ಅಭಯಂ 181 ಸಹಾಯವಾಣಿ ಅಧಿಕಾರಿಗಳು ಹೇಳಿದ್ದಾರೆ. ಮಣಿಕಟ್ಟು ಸೀಳಿ ಬಿದ್ದಿರುವ ತಾಯಿಗೆ ತೀವ್ರ ರಕ್ತಸ್ರಾವವಾಗುತ್ತಿದೆ ಎಂದು ಬಾಲಕಿಯೊಬ್ಬಳು ಕರೆ ಅವರಿಗೆ ಕರೆ ಮಾಡಿದ್ದರು ತಕ್ಷಣ ಅವರ ಅಲ್ಲಿಗೆ ಹೋಗಿದ್ದಾಗ ಮಹಿಳೆ ಚಿಂತಾಜನಕ ಸ್ಥಿತಿಯಲ್ಲಿ ಬಿದ್ದಿದ್ದರು. ಬಳಿಕ ಅವರು ಮಹಿಳೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಿದ್ದಾರೆ.
ಆತ್ಮಹತ್ಯೆ ಮಾಡಲು ಮುಂದಾಗಿರುವ ಮಹಿಳೆಯ ಗಂಡ ಅಪರಾಧವೊಂದರಲ್ಲಿ ಜೈಲು ಸೇರಿದ್ದ. ಅಲ್ಲಿಂದ ಬಿಡುಗಡೆಯಾಗಿ ಬಂದ ಬಳಿಕವೂ ಸಣ್ಣ ವಿಷಯಗಳಿಗೆ ಜಗಳವಾಡಲು ಪ್ರಾರಂಭಿಸಿದ್ದ. ಆಗಾಗ್ಗೆ ನಡೆಯುವ ಜಗಳಗಳಿಂದ ಬೇಸತ್ತ ಮಹಿಳೆ ತನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದಳು. ಪುತ್ರಿಯ ಸಮಯೋಚಿತ ಕರೆಯಿಂದ ಅವರೀಗ ಬದುಕಿದ್ದರೆ. ಶಾಲೆಯಲ್ಲಿ ಪಡೆದ ತರಬೇತಿಯನ್ನು ನೆನಪು ಮಾಡಿಕೊಂಡ ಬಾಲಕಿ ನಮ್ಮ ಸಹಾಯವಾಣಿ ಮತ್ತು 108 ಆಂಬ್ಯುಲೆನ್ಸ್ ಸೇವೆಗಳ ತುರ್ತು ಸಂಖ್ಯೆಗಳನ್ನು ನೆನಪಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಲಿಬಿಲಿಗೊಳ್ಳದ ಬಾಲಕಿ
ಸಾಮಾನ್ಯವಾಗಿ ಸಣ್ಣ ಮಕ್ಕಳು ಕಠಿಣ ಪರಿಸ್ಥಿತಿಯಲ್ಲಿ ಹೆಚ್ಚು ಗಲಿಬಿಲಿಗೆ ಒಳಗಾಗುತ್ತಾರೆ. ಅವರಿಗೆ ಮುಂದೇನು ಮಾಡಬೇಕು ಎಂಬ ಯೋಚನೆಯೇ ಇರುವುದಿಲ್ಲ. ಅಲ್ಲದೆ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಸಾಧ್ಯವಾಗದೇ ಜೋರಾಗಿ ಅಳುವುದಕ್ಕೆ ಆರಂಭಿಸುತ್ತಾರೆ. ಆದರೆ ಈ ಏಳು ವರ್ಷದ ಬಾಲಕಿ ಆ ರೀತಿ ಮಾಡಿಲ್ಲ. ತಾಯಿ ರಕ್ತ ಸಿಕ್ತ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿಯೂ ತಕ್ಷಣವೇ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಆಕೆಯ ಕರೆಯಿಂದಾಗಿ ಜೀವವೊಂದು ಉಳಿದಿದೆ.
ಬದುಕಿನ ಪಾಠ ಅಗತ್ಯ
ಆಧುನಿಕ ಜಗತ್ತಿನಲ್ಲಿ ಜನರಿಗೆ ತುರ್ತು ಪರಿಸ್ಥಿತಿಗಳು ಹೆಚ್ಚಾಗಿ ಎದುರಾಗುತ್ತವೆ. ಆದರೆ, ಬಹುತೇಕ ಸಂದರ್ಭದಲ್ಲಿ ಅವುಗಳನ್ನು ನಿರ್ವಹಿಸಲು ಸಾಧ್ಯವಾಗದೇ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತವೆ. ಹೀಗಾಗಿ ತುರ್ತು ಸಂದರ್ಭದಲ್ಲಿ ಪ್ರಾಣ ಉಳಿಸಲು ಅಥವಾ ಆ ಕ್ಷಣದಿಂದ ಬಚಾವಾಗಲು ಏನು ಮಾಡಬೇಕು ಎಂಬ ತರಬೇತಿ ಅಗತ್ಯವಾಗಿದೆ. ಅದರಲ್ಲೂ ಶಾಲಾ ಮಕ್ಕಳಿಗೆ ಈ ನಿಟ್ಟಿನಲ್ಲಿ ತರಬೇತಿ ಕಡ್ಡಾಯ.
ಇದನ್ನೂ ಓದಿ: Usman Ghani: ಪ್ರಧಾನಿ ಮೋದಿಯನ್ನು ಟೀಕಿಸಿದ್ದ ಬಿಜೆಪಿ ಉಚ್ಛಾಟಿತ ನಾಯಕ ಅರೆಸ್ಟ್
ಜನಜಂಗುಳಿ ತುಂಬಿರುವ ಪೇಟೆ ಮತ್ತು ಏಕಾಂಗಿಯಾಗಿರುವ ವೇಳೆ ನಾನಾ ಆತಂಕಗಳನ್ನು ಇಂದಿನ ಮಕ್ಕಳು ಎದುರಿಸುತ್ತಾರೆ. ಆದರೆ, ಅದನ್ನು ನಿಭಾಯಿಸಲು ಸಾಧ್ಯವಾಗದೇ ಮಕ್ಕಳು ದುರ್ಘಟನೆಗಳ ಬಲಿಪಶು ಆಗುತ್ತಾರೆ. ಹೀಗಾಗಿ ಶಾಲಾ ಹಂತದಲ್ಲಿಯೇ ಇಂಥ ಸಂದರ್ಭಗಳನ್ನು ನಿಭಾಯಿಸುವ ತಂತ್ರಗಳನ್ನು ಹೇಳಿಕೊಡಬೇಕಾಗುತ್ತದೆ.
ಶಾಲಾ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಈಗ ಲೈಂಗಿಕ ದೌರ್ಜನ್ಯದ ವಿರುದ್ಧ ಹೇಗೆ ಹೋರಾಡಬೇಕು ಎಂಬ ಪಾಠವನ್ನು ಹೇಳಿಕೊಡಲಾಗುತ್ತದೆ. ಅದು ಬಹುತೇಕ ಸಾಫಲ್ಯ ಕಾಣುತ್ತಿದೆ. ಆದರೆ, ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಕೆಲವು ತಂತ್ರಗಳನ್ನು ಕೆಲವೊಂದು ಶಾಲೆಗಳಲ್ಲಿ ಮಾತ್ರ ಕಲಿಸಲಾಗುತ್ತದೆ. ಇಲ್ಲಿ ಗಂಡು ಹಾಗೂ ಹೆಣ್ಣು ಎಂಬ ಭೇದವಿಲ್ಲದೇ ಎಲ್ಲ ಮಕ್ಕಳಿಗೂ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಪಾಠ ಹೇಳಿಕೊಡಬೇಕಾದ ಅಗತ್ಯವಿದೆ.
ಮೇಲಿನ ಪ್ರಕರಣದಲ್ಲಿ ಬಾಲಕಿಗೆ ಸಹಾಯವಾಣಿಗೆ ಕರೆ ಮಾಡಬೇಕು ಎಂದು ಶಾಲೆಯಲ್ಲಿ ಹೇಳಿಕೊಟ್ಟಿದ್ದ ಕಾರಣ ಆಕೆಯ ತಾಯಿಯ ಪ್ರಾಣ ಉಳಿದಿದೆ. ಒಂದು ವೇಳೆ ಆಕೆ ಅಂಥದ್ದೊಂದು ಪರಿಸ್ಥಿತಿಯನ್ನು ಎದುರಿಸಲು ಸಿದ್ಧಗೊಳ್ಳದೇ ಹೋಗಿದ್ದರೆ ತಬ್ಬಲಿಯಾಗಬೇಕಾಗಿತ್ತು.