ಬೆಂಗಳೂರು: ಎಲ್ಲರಿಗೂ ಕೈಗೆಟಕುವ ದರದಲ್ಲಿ ಹೃದಯ ಆರೋಗ್ಯ ಸೇವೆಯನ್ನು ನೀಡಲು ಹಾಗೂ ಆಡಳಿತ ವಿಕೇಂದ್ರೀಕರಣ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಲಾಗಿದೆ. ಜಯದೇವ ಹೃದಯರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಎಸ್‌ಜೆಐಸಿಎಸ್ ಮತ್ತು ಆರ್) ಶುಕ್ರವಾರ ಪಶ್ಚಿಮ ಬೆಂಗಳೂರಿನ ಗೋವಿಂದರಾಜನಗರದಲ್ಲಿ 100 ಹಾಸಿಗೆಗಳ ಜಯದೇವ ಘಟಕವನ್ನು ಸ್ಥಾಪಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.
ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಬಿ. ದಿನೇಶ್ ಮತ್ತು ಜಿಬಿಎ ಮುಖ್ಯ ಆಯುಕ್ತ ಎನ್. ಮಹೇಶ್ವರ ರಾವ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್, ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ, ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸೀನ್, ಪಶ್ಚಿಮ ಮಹಾನಗರ ಪಾಲಿಕೆ ಆಯುಕ್ತ ಕೆ.ವಿ. ರಾಜೇಂದ್ರ ಸಮ್ಮುಖದಲ್ಲಿ ವಿಕಾಸ ಸೌಧದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
“ಹೃದಯ ಆರೈಕೆ ಸೇವೆಯನ್ನು ಬೆಂಗಳೂರಿನ ಪಶ್ಚಿಮ ಭಾಗದ ಜನರಿಗೂ ಒದಗಿಸಲು ಇದು ಒಂದು ಉತ್ತಮ ಹೆಜ್ಜೆಯಾಗಿದೆ. ಗೋವಿಂದರಾಜನಗರದಲ್ಲಿರುವ ಜಿಬಿಎಯ ಅಸ್ತಿತ್ವದಲ್ಲಿರುವ ಮಲ್ಟಿಸ್ಪೆಷಾಲಿಟಿ ಕಟ್ಟಡದಲ್ಲಿ ಸ್ಥಾಪಿಸಲಾಗುವ ಹೊಸ ಘಟಕವು ವಿಜಯನಗರ, ರಾಜಾಜಿನಗರ, ಯಶವಂತಪುರ, ರಾಜರಾಜೇಶ್ವರಿನಗರ, ದಾಸರಹಳ್ಳಿ, ಪೀಣ್ಯ ಮತ್ತು ಬೆಂಗಳೂರು ಗ್ರಾಮಾಂತರ ನಿವಾಸಿಗಳಿಗೆ ಹಾಗೂ ರಾಮನಗರ, ಮಂಡ್ಯ, ತುಮಕೂರು ಮತ್ತು ಹಾಸನ ಜಿಲ್ಲೆಗಳ ರೋಗಿಗಳಿಗೆ ಅನುಕೂಲವಾಗಲಿದೆ” ಎಂದು ಸಚಿವ ಡಾ. ಪಾಟೀಲ್ ಹೇಳಿದರು.
100 ಹಾಸಿಗೆಗಳ ಘಟಕವನ್ನು ಸ್ಥಾಪಿಸಲು ರಾಜ್ಯ ಸರ್ಕಾರವು ₹15 ಕೋಟಿ ಮೀಸಲಿರಿಸಲಿದೆ. ಪಶ್ಚಿಮ ಮಹಾನಗರ ಪಾಲಿಕೆ ಮೂಲಕ ಹಣಕಾಸು ಒದಗಿಸಲು ಮತ್ತು ಸಿಎಸ್ಆರ್ ನಿಧಿಯ ಅಡಿಯಲ್ಲಿ ಕ್ಯಾಥ್‌ಲ್ಯಾಬ್ ಸೌಲಭ್ಯವನ್ನು ಸ್ಥಾಪಿಸಲು ನಾವು ಬದ್ಧರಾಗಿದ್ದೇವೆ ಎಂದು ಶಾಸಕ ಪ್ರಿಯಕೃಷ್ಣ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಾದ್ಯಂತ ಜಯದೇವ ಜಾಲವನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ದಿನೇಶ್ ಘೋಷಿಸಿದರು. ಬೆಂಗಳೂರಿನ ಮಧ್ಯ, ಉತ್ತರ ಮತ್ತು ಪೂರ್ವ ಭಾಗದಲ್ಲಿ ಜಯದೇವ ಘಟಕಗಳನ್ನು ಸ್ಥಾಪಿಸುವ ಯೋಜನೆ ಇದೆ. ಉತ್ತರ ಬೆಂಗಳೂರಿನ ಘಟಕಕ್ಕೆ ಈಗಾಗಲೇ ಸ್ಥಳವನ್ನು ಗುರುತಿಸಲಾಗಿದ್ದು, ಬ್ಯಾಟರಾಯನಪುರ ಶಾಸಕ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿ&ಆರ್‌ಐ) ಹೊಸ ಕ್ಯಾಂಪಸ್ ಅನ್ನು ಬೆಂಗಳೂರು ಪಶ್ಚಿಮ ಸ್ಥಾಪಿಸಲು ಕನಿಷ್ಠ ಐದು ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸುವಂತೆ ಪಶ್ಚಿಮ ಮಹಾನಗರ ಪಾಲಿಕೆ ಆಯುಕ್ತರಿಗೆ ಇದೇ ಸಂದರ್ಭದಲ್ಲಿ ಸೂಚನೆ ನೀಡಲಾಗಿದೆ. ಕಲಬುರಗಿ ಮತ್ತು ಮೈಸೂರಿನಲ್ಲಿ ಈಗಾಗಲೇ ಪ್ರತ್ಯೇಕ ಘಟಕಗಳನ್ನು ಆರಂಭಿಸಲಾಗಿದೆ. ಜಯದೇವ ಮುಖ್ಯ ಆಸ್ಪತ್ರೆಯಲ್ಲಿ ರೋಗಿಗಳ ಕಡಿಮೆ ಮಾಡಲು ಈ ಘಟಕಗಳು ನೆರವಾಗಲಿವೆ.
ಶೀಘ್ರದಲ್ಲೇ ಪಶ್ಚಿಮ ಬೆಂಗಳೂರಿನಲ್ಲಿ ಜಯದೇವ 100 ಹಾಸಿಗೆ ಕಾರ್ಡಿಯಾಕ್ ಹಬ್: ಒಪ್ಪಂದಕ್ಕೆ ಸಹಿ

