Site icon Vistara News

Members of Parliament: ಸಂಸದರು ಪ್ರಮಾಣ ವಚನ ಸ್ವೀಕರಿಸದಿದ್ದರೆ ಏನಾಗುತ್ತದೆ? ಜೈಲಿನಲ್ಲಿದ್ದವರ ಕತೆಯೇನು?

Members of Parliament

18ನೇ ಲೋಕಸಭೆಯ (loksabha election) ಮೊದಲ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಹೊಸದಾಗಿ ಚುನಾಯಿತರಾದ ಸಂಸತ್ ಸದಸ್ಯರು (Members of Parliament) ಸೋಮವಾರದಿಂದ ಪ್ರಮಾಣ ವಚನ (taking oath) ಸ್ವೀಕರಿಸಲು ಆರಂಭಿಸಿದ್ದಾರೆ. ಎರಡು ದಿನಗಳಲ್ಲಿ ಕೆಳಮನೆಯ (lower house) 543 ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಜೂನ್ 26ರಂದು ನೂತನ ಲೋಕಸಭಾ ಸ್ಪೀಕರ್ (Speaker) ಆಯ್ಕೆ ನಡೆಯಲಿದೆ.

ಪ್ರಮಾಣ ವಚನ ಬೋಧಿಸುವವರು ಯಾರು?

ಸಂಸದೀಯ ಪದ್ಧತಿಗಳ ಪ್ರಕಾರ ಪ್ರತಿ ಸಾರ್ವತ್ರಿಕ ಚುನಾವಣೆಯ ಅನಂತರ ಲೋಕಸಭೆಗೆ ಹೊಸದಾಗಿ ಚುನಾಯಿತರಾದ ಸದಸ್ಯರಿಗೆ ಹಂಗಾಮಿ ಸ್ಪೀಕರ್ ಪ್ರಮಾಣ ವಚನ ಸ್ವೀಕರಿಸುವ ಹೊಣೆ ನಿರ್ವಹಿಸುತ್ತಾರೆ. ಲೋಕಸಭೆಯ ನೂತನ ಸ್ಪೀಕರ್ ಆಯ್ಕೆಯನ್ನು ನಡೆಸುವ ಜವಾಬ್ದಾರಿ ಕೂಡ ಈ ಹಂಗಾಮಿ ಸ್ಪೀಕರ್‌ದೇ ಆಗಿರುತ್ತದೆ.

ಸಂವಿಧಾನದಲ್ಲಿ ಸ್ಪಷ್ಟವಾಗಿ ನಿರ್ದಿಷ್ಟಪಡಿಸದಿದ್ದರೂ ಸಂಸದೀಯ ಪಾತ್ರವನ್ನು ಪೂರೈಸುವಲ್ಲಿ ಪ್ರಮಾಣ ವಚನ ಸ್ವೀಕಾರವು ಮೊದಲ ಹೆಜ್ಜೆಯಾಗಿದೆ. ಆದರೂ ಕೆಲವು ಸಂಸದರು ಅನಾರೋಗ್ಯದ ಕಾರಣ ಅಥವಾ ಅವರ ಸ್ಥಳದಿಂದ ತೆರಳಲು ಸಾಧ್ಯವಾಗದ ಕಾರಣ ಪ್ರಮಾಣ ವಚನ ಸ್ವೀಕರಿಸದಿರುವ ಸಾಧ್ಯತೆಯಿದೆ.

ಸಂಸದರು ಪ್ರಮಾಣ ವಚನ ಸ್ವೀಕರಿಸದಿದ್ದರೆ ಏನಾಗುತ್ತದೆ?

1. ಮೊದಲ ದಿನ ಪ್ರಮಾಣ ವಚನ ಅಥವಾ ದೃಢೀಕರಣವನ್ನು ಮಾಡದ ಚುನಾಯಿತ ಸಂಸದರು ಸದನದ ಅಧಿವೇಶನದ ಪ್ರಾರಂಭದಲ್ಲಿ ಅದೇ ಅಧಿವೇಶನದಲ್ಲಿ ಅಥವಾ ಅನಂತರದ ಅಧಿವೇಶನದಲ್ಲಿ ಯಾವುದೇ ನಂತರದ ದಿನದಲ್ಲಿ ಪ್ರಮಾಣ ವಚನ ಸ್ವೀಕರಿಸಬಹುದು.

2. ಸಂಸದರ ಕೋರಿಕೆಯ ಮೇರೆಗೆ ಸಭಾಧ್ಯಕ್ಷರ ಚೇಂಬರ್‌ನಲ್ಲಿ ಮಧ್ಯಂತರ ಅವಧಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಲಾಗುತ್ತದೆ.

3. ಅನಾರೋಗ್ಯದಿಂದ ಬಳಲುತ್ತಿರುವವರು, ಸದನಕ್ಕೆ ಬರಲು ಸಾಧ್ಯವಾಗದ ಸಂದರ್ಭದಲ್ಲಿ ಅವರು ಬಯಸಿದಲ್ಲಿ ಪ್ರಮಾಣ ಅಥವಾ ದೃಢೀಕರಣವನ್ನು ಮಾಡಬಹುದು. ಈ ಸಂದರ್ಭದಲ್ಲಿ ಸಂಬಂಧಿತ ಅಧಿಕಾರಿಯು ಸದಸ್ಯರಿಗೆ ಸಂಬಂಧಿತ ಪ್ರಮಾಣ ಅಥವಾ ದೃಢೀಕರಣ ಕಾರ್ಡ್ ಅನ್ನು ನೀಡುತ್ತಾರೆ.

4. ಸಂವಿಧಾನದ ಪ್ರಕಾರ ಚುನಾಯಿತ ಸಂಸದರು 60 ದಿನಗಳವರೆಗೆ ಸಂಸತ್ತಿಗೆ ಹಾಜರಾಗದಿದ್ದರೆ ಅವರ ಸ್ಥಾನವನ್ನು ಖಾಲಿ ಎಂದು ಘೋಷಿಸಬಹುದು. ಇದೇ ಆಧಾರದಲ್ಲಿ ನ್ಯಾಯಾಲಯಗಳು ಜೈಲಿನಲ್ಲಿರುವ ಸಂಸದರಿಗೆ ಪ್ರಮಾಣ ವಚನ ಸ್ವೀಕರಿಸುವುದಕ್ಕಾಗಿ ಸಂಸತ್‌ಗೆ ಬರಲು ಅವಕಾಶ ನೀಡಬಹುದು. ಆದರೆ ಪ್ರಮಾಣ ವಚನ ಸ್ವೀಕರಿಸಿದ ಅನಂತರ ಅವರು ಮತ್ತೆ ಜೈಲಿಗೆ ಮರಳಬೇಕಾಗುತ್ತದೆ.

5. ದೃಷ್ಟಿ ಸಮಸ್ಯೆಯಿಂದ ಸದಸ್ಯರಿಗೆ ಸಹಿ ಮಾಡಲು, ಪ್ರಮಾಣ ಪತ್ರ ಓದಲು ಸಾಧ್ಯವಾಗದೇ ಇದ್ದರೆ ಇನ್ನೊಬ್ಬ ಸದಸ್ಯರು ಇವರಿಗೆ ಓದಿ ಹೇಳಬಹುದಾಗಿದೆ.

6. ನ್ಯಾಯಾಲಯದ ಆದೇಶದ ಪರಿಣಾಮವಾಗಿ ಒಬ್ಬ ವ್ಯಕ್ತಿಯು ಸದಸ್ಯರಾಗುವುದನ್ನು ತಡೆದರೆ ಮತ್ತು ಅವರ ಸ್ಥಾನದಲ್ಲಿ ಇನ್ನೊಬ್ಬರು ಚುನಾಯಿತರೆಂದು ಘೋಷಿಸಲ್ಪಟ್ಟರೆ ಮತ್ತೆ ಹೊಸದಾಗಿ ಪ್ರಮಾಣವಚನ ಅಥವಾ ದೃಢೀಕರಣವನ್ನು ಮಾಡಬೇಕು.

7. ಮೊದಲ ಸುತ್ತಿನಲ್ಲಿ ಪ್ರಮಾಣವಚನಕ್ಕೆ ಹಾಜರಾಗದ ಸದಸ್ಯರ ಹೆಸರನ್ನು ಕೊನೆಯಲ್ಲಿ ಮತ್ತೆ ಕರೆಯಲಾಗುತ್ತದೆ.

ಯಾವ ಪ್ರಮಾಣ ವಚನ ಸ್ವೀಕರಿಸುತ್ತಾರೆ?

ಸಂವಿಧಾನದ ಮೂರನೇ ಶೆಡ್ಯೂಲ್ ಸಂಸತ್ತಿನ ಪ್ರಮಾಣ ವಚನದ ಪಠ್ಯವನ್ನು ಒಳಗೊಂಡಿದೆ. ಅದು ಹೀಗೆ ಹೇಳುತ್ತದೆ: ನಾನು…. ಚುನಾಯಿತನಾದ ಅಥವಾ ನಾಮನಿರ್ದೇಶನಗೊಂಡ ಸದಸ್ಯರ ಸಂಸತ್‌ ಸದಸ್ಯನಾಗಿ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ. ನಾನು ಕಾನೂನಿನ ಮೂಲಕ ಸ್ಥಾಪಿಸಿದಂತೆ ಭಾರತದ ಸಂವಿಧಾನಕ್ಕೆ ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದುತ್ತೇನೆ ಎಂದು ಸ್ಪಷ್ಟವಾಗಿ ದೃಢಪಡಿಸುತ್ತೇನೆ. ನಾನು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುತ್ತೇನೆ. ನನ್ನ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ.

ಪ್ರಮಾಣ ವಚನ ಏಕೆ ಮಹತ್ವದ್ದಾಗಿದೆ?

ಲೋಕಸಭೆಯಲ್ಲಿ ಚರ್ಚೆ ಮತ್ತು ಮತ ಚಲಾಯಿಸುವ ಅಧಿಕಾರವನ್ನು ಪಡೆಯಲು ಸಂವಿಧಾನದಲ್ಲಿ (ಆರ್ಟಿಕಲ್ 99) ಸೂಚಿಸಿದಂತೆ ಸಂಸದರು ಪ್ರಮಾಣ ವಚನ ಸ್ವೀಕರಿಸಬೇಕು.

ಕೇವಲ ಚುನಾವಣೆಯಲ್ಲಿ ಗೆದ್ದು ಅವಧಿಯನ್ನು ಪ್ರಾರಂಭಿಸುವುದರಿಂದ ಅವರು ಸದನದ ಕಲಾಪಗಳಲ್ಲಿ ಭಾಗವಹಿಸಲು ಸ್ವಯಂಚಾಲಿತವಾಗಿ ಸಾಧ್ಯವಾಗುವುದಿಲ್ಲ.

ಹೇಗೆ ಪ್ರಮಾಣ ವಚನ ಸ್ವೀಕರಿಸುತ್ತಾರೆ?

ಸಂಸದರು ಮೊದಲು ತಮ್ಮ ಚುನಾವಣಾ ಪ್ರಮಾಣಪತ್ರವನ್ನು ಲೋಕಸಭೆಯ ಸಿಬ್ಬಂದಿಗೆ ಸಲ್ಲಿಸಬೇಕಾಗುತ್ತದೆ. 1957ರಲ್ಲಿ ನಡೆದ ಘಟನೆಯ ಅನಂತರ ಸಂಸತ್ತು ಈ ಸುರಕ್ಷತೆಯನ್ನು ಸೇರಿಸಿತು. ಮಾನಸಿಕವಾಗಿ ಅಸ್ವಸ್ಥ ವ್ಯಕ್ತಿಯೊಬ್ಬರು ಸಂಸದರೆಂದು ಪೋಸ್ ನೀಡಿ ಸದನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು!

ಪ್ರಮಾಣಪತ್ರದ ಜೊತೆಗೆ ಸಂಸದರು ಪ್ರಮಾಣ ವಚನ ಅಥವಾ ದೃಢೀಕರಣವನ್ನು ಮಾಡಲು ಬಯಸಿದ ಭಾಷೆಯನ್ನು ಸಹ ನಮೂದಿಸಬೇಕು.

ಸದಸ್ಯರು ಪ್ರಮಾಣ ವಚನ ಮಾಡುವಾಗ ಹಂಗಾಮಿ ಸ್ಪೀಕರ್ ಜೊತೆ ಹಸ್ತಲಾಘವ ಮಾಡುತ್ತಾರೆ. ಅನಂತರ ಅವರು ಸದನದಲ್ಲಿ ತಮ್ಮ ಆಸನದಲ್ಲಿ ಕುಳಿತುಕೊಳ್ಳಲು ಸದಸ್ಯರಿಗೆ ಸ್ಪೀಕರ್‌ ಅನುಮತಿ ನೀಡುತ್ತಾರೆ. ಸದಸ್ಯರು ದಾಖಲಾತಿ ಪುಸ್ತಕದಲ್ಲಿ ಸಹಿ ಮಾಡುತ್ತಾರೆ.

ಯಾವ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸಬಹುದು?

ಸಂಸದರು ಇಂಗ್ಲಿಷ್ ಅಥವಾ ಅಸ್ಸಾಮಿ, ಬೆಂಗಾಲಿ, ಬೋಡೋ, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಮತ್ತು ಉರ್ದು.. ಹೀಗೆ 22 ಭಾಷೆಗಳಲ್ಲಿ ಪ್ರಮಾಣವಚನವನ್ನು ಸ್ವೀಕರಿಸಬಹುದು.

ಅರ್ಧದಷ್ಟು ಸಂಸದರು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಹಿಂದಿನ ಎರಡು ಲೋಕಸಭೆಯಲ್ಲಿ ಸಂಸ್ಕೃತವು ಜನಪ್ರಿಯ ಭಾಷೆಯಾಗಿ ಮಾರ್ಪಟ್ಟಿದ್ದು, ಹಲವು ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: Bansuri Swaraj: ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿ ಸುಷ್ಮಾ ಸ್ವರಾಜ್‌ರನ್ನು ನೆನಪಿಸಿದ ಮಗಳು! ವಿಡಿಯೊ ನೋಡಿ

ಯಾವಾಗ ಸದನದ ಸದಸ್ಯರಾಗುತ್ತಾರೆ?

ಒಬ್ಬ ವ್ಯಕ್ತಿಯು ಚುನಾವಣಾ ಅಧಿಕಾರಿಯಿಂದ ಚುನಾಯಿತರೆಂದು ಘೋಷಿಸಲ್ಪಟ್ಟ ದಿನಾಂಕದಿಂದ ಸದನದ ಸದಸ್ಯರಾಗುತ್ತಾರೆ. ಸದನವನ್ನು ರಚಿಸುವ ಚುನಾವಣಾ ಆಯೋಗದ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ಅವರು ಸಂಸದರಾಗಿ ಸಂಬಳವನ್ನು ಸ್ವೀಕರಿಸಲು ಪ್ರಾರಂಭಿಸುತ್ತಾರೆ. ಸಂಸದರು ಸದನದ ಅಧಿವೇಶನಗಳಿಗೆ ಗೈರುಹಾಜರಿಯನ್ನು ಕೇಳಬಹುದಾಗಿದೆ.

Exit mobile version