ಹಣಕ್ಕಾಗಿ ಜನರು ಯಾರನ್ನು ಬೇಕಾದರೂ ಕೊಲೆ ಮಾಡಲು ಮುಂದಾಗಿದ್ದಾರೆ. ಕೇವಲ ಹಣಕ್ಕಾಗಿ ಜನರನ್ನು ಪ್ರಾಣಿಗಳಂತೆ ಎಲ್ಲೆಂದರಲ್ಲಿ ಸಾಯಿಸುತ್ತಿದ್ದಾರೆ. ಇದೀಗ ಹಣದ ಮೇಲಿನ ಆಸೆಗೆ ವ್ಯಕ್ತಿಯೊಬ್ಬನನ್ನು ಪ್ಲ್ಯಾನ್ ಮಾಡಿ ಕೊಲೆ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆರಂಭದಲ್ಲಿ ವೃದ್ಧರೊಬ್ಬರ ಸಾವು ರಸ್ತೆ ಅಪಘಾತ ಎಂದು ಪರಿಗಣಿಸಿದ್ದ ಪೊಲೀಸರಿಗೆ ಅದು ಪ್ರಿಪ್ಲ್ಯಾನ್ ಮರ್ಡರ್ ಎಂಬುದು ತಿಳಿದುಬಂದಿದೆ. ಹಾಗಾಗಿ 82 ವರ್ಷದ ನಿವೃತ್ತ ಬಿಎಸ್ಎನ್ಎಲ್ ಎಂಜಿನಿಯರ್ ಸಿ ಪಪ್ಪಚನ್ ಅವರ ಕೊಲೆ (Murder Case)ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಲಂ ಪೂರ್ವ ಪೊಲೀಸರು ಖಾಸಗಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.
ಮೇ 26ರಂದು ಇಲ್ಲಿನ ಆಶ್ರಮದ ಮೈದಾನದ ಬಳಿ ಸೈಕಲ್‍ನಲ್ಲಿ ಹೋಗುತ್ತಿದ್ದ ಪಪ್ಪಚನ್ ಅವರು ಕಾರು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದರು. ಡಿಕ್ಕಿ ಹೊಡೆದ ನಂತರ ಚಾಲಕ ಕಾರಿನ ಸಮೇತ ಅಲ್ಲಿಂದ ಪರಾರಿಯಾಗಿದ್ದ. ದಾರಿಹೋಕರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸಿ ಕಾರು ಅಪಘಾತದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಪಘಾತವು ಪ್ರಿಪ್ಲ್ಯಾನ್ ಮರ್ಡರ್ ಎಂಬುದು ತಿಳಿಯಿತು. ಈ ಪ್ರಕರಣದಲ್ಲಿ ಮ್ಯಾನೇಜರ್ ಸರಿತಾ (45) ಸೇರಿದಂತೆ ಅನೂಪ್ (37) ಸಂಸ್ಥೆಯ ಅಕೌಂಟ್ ಎಕ್ಸಿಕ್ಯೂಟಿವ್; ಮಾಹೀನ್ (47), ಹಾಶಿಫ್ ಅಲಿ (27) ಮತ್ತು ಅನಿಮೋನ್ (44) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿ ಸರಿತಾ ಕೆಲಸ ಮಾಡುತ್ತಿದ್ದ ಖಾಸಗಿ ಬ್ಯಾಂಕ್‍ನಲ್ಲಿ 90 ಲಕ್ಷ ರೂ.ಗಳ ಠೇವಣಿ ಹೊಂದಿದ್ದ ಪಪ್ಪಚನ್, ತನ್ನ ಠೇವಣಿಯಿಂದ 40 ಲಕ್ಷ ರೂ. ನಾಪತ್ತೆಯಾಗಿರುವುದರ ಬಗ್ಗೆ ಸರಿತಾ ಅವರನ್ನು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸರಿತಾ, ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿ, ಖಾತೆಗಳನ್ನು ಪರಿಶೀಲಿಸಿ ಇನ್ನೊಂದು ದಿನ ಭೇಟಿಯಾಗುವುದಾಗಿ ಭರವಸೆ ನೀಡಿ ವಾಪಸ್ ಕಳುಹಿಸಿದರು.
ಆದರೆ ಸರಿತಾ ಮತ್ತು ಅವಳ ಸಹಚರರು ಪಪ್ಪಚನ್ ಅವರನ್ನು ಕೊಲ್ಲಲು ಸಂಚು ರೂಪಿಸಿದರು. ಕೊಲೆಯನ್ನು ಕಾರ್ಯಗತಗೊಳಿಸಲು ಅನಿಮೋನ್ ಎಂಬಾತನ್ನು ಆಯ್ಕೆ ಮಾಡಿದರು. ಈ ಕೃತ್ಯ ಎಸಗಲು ಬಾಡಿಗೆ ಕಾರನ್ನು ಬಳಸಿದರು. ಅನೂಪ್ ಕಾರನ್ನು ಬಾಡಿಗೆಗೆ ಪಡೆದಿದ್ದರು. ಪಪ್ಪಚನ್ ಬಗ್ಗೆ ಚೆನ್ನಾಗಿ ತಿಳಿದಿದ್ದ ಸರಿತಾಗೆ ಅವರು ತನ್ನ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲ ಎಂದು ಗೊತ್ತಿತ್ತು. ಅವರು ಸತ್ತರೆ ಹಣವನ್ನು ಪಡೆಯಲು ಯಾರೂ ಬರುವುದಿಲ್ಲ ಎಂಬ ತಿಳುವಳಿಕೆಯಿಂದ ಅವರು ಈ ಪಿತೂರಿ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪಪ್ಪಚನ್ ಅವರು ಕೊಲ್ಲಂನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಪ್ರಣಯಕ್ಕೆ ಡಿಸ್ಟರ್ಬ್ ಆಯಿತೆಂದು ಕೋಪಗೊಂಡ ಪ್ರಿಯತಮ ಮಹಿಳೆಯ ಮಗುವನ್ನು ನೆಲಕ್ಕೆ ಬಡಿದು ಕೊಂದ!
ಪಪ್ಪಚನ್ ಅವರ ದೇಹವನ್ನು ಅವರ ಹುಟ್ಟೂರಾದ ಪಂದಲಂನಲ್ಲಿ ಸಮಾಧಿ ಮಾಡಲಾಯಿತು. ಬಂಧಿತರನ್ನು ಬಿಎನ್ಎಸ್‍ನ ಸೆಕ್ಷನ್ 103 (ಕೊಲೆ) ಮತ್ತು ಸೆಕ್ಷನ್ 61 (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.