ನವದೆಹಲಿ: ಪರೀಕ್ಷೆ ಹತ್ತಿರ ಬರುತ್ತಿದೆ ಓದು, ಮಾರ್ಕ್ಸ್ ಇಷ್ಟು ಕಡಿಮೆ ಯಾಕೆ ಬಂತು? ಇಂತಹದ್ದೇ ಪ್ರಶ್ನೆಗಳ ಸುರಿಮಳೆ ಸುರಿಸಿ ಮಕ್ಕಳ ಜೀವ ತಿನ್ನುವ ತಂದೆ-ತಾಯಿಗಳನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬರು ತಂದೆ ಮಗಳಿಗಾಗಿ ಮಾಡಿದ ಕೆಲಸವನ್ನು ಕೇಳಿದ್ರೆ ನೀವು ಆಶ್ವರ್ಯಕ್ಕೆಗೊಳಗಾಗುತ್ತೀರಿ. ತಂದೆ (Father Love) ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಏನೂ ಬೇಕಾದರೂ ಮಾಡಲು ಸಿದ್ಧರಿರುತ್ತಾರೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. 50 ವರ್ಷದ ತಂದೆಯೊಬ್ಬರು ತಮ್ಮ ಮಗಳನ್ನು ಪ್ರೋತ್ಸಾಹಿಸಲು ನೀಟ್ ಯುಜಿ 2024ರ (NEET UG 2024 ) ಪರೀಕ್ಷೆಯಲ್ಲಿ ಮಗಳ ಜೊತೆ ತಾವೂ ಕೂಡ ಪರೀಕ್ಷೆ ಬರೆದು ಒಟ್ಟಿಗೆ ತೇರ್ಗಡೆ ಆಗಿದ್ದಾರೆ.
50 ವರ್ಷದ ತಂದೆ ವಿಕಾಸ್ ಮಂಗೋತ್ರಾ ತಮ್ಮ ಮಗಳಾದ ಮೀಮಾನ್ಸಾ (18) ಜೊತೆ ನೀಟ್ ಪರೀಕ್ಷೆ ಬರೆದಿದ್ದಾರೆ. ಇವರು ದೆಹಲಿಯಲ್ಲಿ ಕಾರ್ಪೋರೇಟ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
‘ನೀಟ್ ಅತ್ಯಂತ ಸ್ಫರ್ಧಾತ್ಮಕ ಪರೀಕ್ಷೆಯಾಗಿದೆ. ಹಾಗಾಗಿ ನಾನು ನನ್ನ ಮಗಳಿಗೆ ಬೆಂಬಲ ನೀಡುವುದಕ್ಕಾಗಿ ಅವಳ ಜೊತೆಯಲ್ಲಿ ನಾನು ಪರೀಕ್ಷೆಗೆ ಹಾಜರಾದೆ’ ಎಂದು ಮಂಗೋತ್ರಾ ಹೇಳಿದ್ದಾರೆ.
ಇನ್ನು ಕಲಿಕೆಯ ವಿಷಯದ ಕುರಿತು ಮಾತನಾಡಿದ ಅವರು “ನಾನು ನನ್ನ ಮಗಳಿಗೆ ತುಂಬಾ ಸರಳ ರೀತಿಯಲ್ಲಿ ಕಲಿಸುತ್ತೇನೆ. ಹಾಗಾಗಿ ನನ್ನ ಮಗಳು ನನ್ನಿಂದ ಕಲಿಯಲು ಇಷ್ಟಪಡುತ್ತಾಳೆ. ಒಮ್ಮೆ ಅವಳಿಗೆ ಪ್ರಶ್ನೆಯೊಂದು ತುಂಬಾ ಕಷ್ಟವಾಗಿತ್ತು, ಅದನ್ನು ಪರಿಹರಿಸಲು ಅವಳಿಗೆ ನಾನು ಸಹಾಯ ಮಾಡಿದೆ. ಆಗ ಅವಳಿಗೆ ನನ್ನನ್ನು ನೋಡಿ ಆಶ್ಚರ್ಯವಾಯಿತು” ಎಂದು ಖುಷಿಯಿಂದ ಹೇಳಿಕೊಂಡರು.
ತನ್ನ ಆತ್ಮವಿಶ್ವಾಸ ಹಾಗೂ ಸ್ವಂತ ಸಾಮರ್ಥ್ಯವನ್ನು ಪರೀಕ್ಷಿಸಲು 2022ರಲ್ಲಿ ಪರೀಕ್ಷೆ ಬರೆದಿದ್ದರು. 2024ರಲ್ಲಿ ಮಗಳನ್ನು ಬೆಂಬಲಿಸುವುದಕ್ಕಾಗಿ ಪರೀಕ್ಷೆ ಬರೆದಿದ್ದಾರೆ. ವಿಕಾಸ್ ಅವರಿಗೆ ವೈದ್ಯರಾಗಬೇಕು ಎಂಬ ಆಸೆ ಇದ್ದಿತಂತೆ. ಅವರು ಸಾಕಷ್ಟು ಅಂಕಗಳನ್ನು ಪಡೆದಿದ್ದರೂ ಕೂಡ ಕೆಲವು ವೈಯಕ್ತಿಕ ಸಮಸ್ಯೆಗಳಿಂದ ಅವರು ಎಂಜಿನಿಯರಿಂಗ್‌ಗೆ ಹೋಗಬೇಕಾಯಿತಂತೆ.
ವಿಕಾಸ್ ನೀಟ್ ಮಾತ್ರವಲ್ಲ ಸುಮಾರು ಎರಡು ದಶಕಗಳ ಹಿಂದೆ ಗೇಟ್, ಜೆಕೆಸಿಇಟಿ ಮತ್ತು ಯುಪಿಎಸ್ ಸಿ, ಸಿಎಸ್ ಇಯಂತಹ ಇತರ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದರು. ಇದೀಗ ಮಗಳನ್ನು ಪ್ರೇರೆಪಿಸಲು ಅವರು ಎರಡನೇ ಬಾರಿ ನೀಟ್ ಪರೀಕ್ಷೆ ಬರೆದಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Viral News: ವಿದ್ಯಾರ್ಥಿಗಳಿಗೆ ಬಡಿಸಿದ್ದ ಊಟದ ತಟ್ಟೆಯಲ್ಲಿತ್ತು ಸತ್ತ ಹಾವು! ವಿಡಿಯೊ ನೋಡಿ
ಪೋಷಕರು ನಿಜವಾಗಿಯೂ ತಮ್ಮ ಮಕ್ಕಳನ್ನು ಪರೀಕ್ಷೆಗೆ ಸಿದ್ಧತೆ ಮಾಡಲು ಬಯಸಿದರೆ, ಮಕ್ಕಳಿಗೆ ಪಠ್ಯಪುಸ್ತಕವನ್ನು ಓದಲು ಪೋಷಕರು ಸಹಾಯ ಮಾಡಬೇಕು ಎಂದು ಅವರು ಎಲ್ಲಾ ಪೋಷಕರಿಗೆ ಸಲಹೆ ನೀಡಿದ್ದಾರೆ.
ಹಾಗೇ ಗ್ರೇಸ್ ಮಾರ್ಕ್ ನೀತಿಯ ಬಗ್ಗೆ ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ. ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಇಂತಹ ನೀತಿಯ ಬಗ್ಗೆ ತಾನು ಎಂದೂ ಕೇಳಿಲ್ಲ, ಇದು ಸರಿಯಲ್ಲ ಎಂದು ಶಿಕ್ಷಣ ನೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.