ಬೆಂಗಳೂರು : ಪಾನಿಪುರಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರೂ ಶಾಪಿಂಗ್‌ಗೆಂದು ಹೊರಗೆ ಹೊರಟರೆ ಬೀದಿ ಬದಿಯಲ್ಲಿ ಪಾನೀಪುರಿ ಮಾರುತ್ತಿದ್ದರೆ ಅದನ್ನು ತಿನ್ನದೇ ಮುಂದೆ ಹೋಗಲು ಇಷ್ಟವಾಗುವುದಿಲ್ಲ. ಪತಿ ತಮ್ಮ ಪತ್ನಿಯನ್ನು ಓಲೈಸಲು, ಪೋಷಕರು ತಮ್ಮ ಮಕ್ಕಳಿಗೆ ಖುಷಿ ಪಡಿಸಲು ಹಾಗೂ ಯುವಕರು ತಮ್ಮ ಪ್ರೇಯಸಿಯ ಪ್ರೀತಿಯನ್ನು ಗಳಿಸಲು ಒಂದು ಪ್ಲೇಟ್ ಪಾನೀಪುರಿ ಕೊಡಿಸುವುದಂತು ಖಂಡಿತ. ಇದೀಗ ಪಾನಿಪುರಿ ಪ್ರಿಯರಿಗೆ ಖುಷಿ ವಿಚಾರ. ಅದೇನೆಂದರೆ ಈಗ ಪಾನಿಪುರಿ ( Pani Puri Machine) ವಿತರಿಸುವ ಮೆಷಿನ್ ಬಂದಿದೆಯಂತೆ. ಅದರಿಂದ ನಿಮಗಿಷ್ಟವಾದ ಫ್ಲೇವರ್ಸ್‍ನಲ್ಲಿ ಪಾನಿಪುರಿಯನ್ನು ಸವಿಯಬಹುದು. ಈ ಸ್ವಯಂಚಾಲಿತ ಪಾನಿಪುರಿ ಮೆಷಿನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹೌದು. ಬೆಂಗಳೂರಿನ ಎಚ್ಎಸ್ಆರ್ ಲೇಔಟ್‍ನಲ್ಲಿ ಸ್ವಯಂಚಾಲಿತ ಪಾನಿಪುರಿ ಮಾರಾಟ ಯಂತ್ರ ಕಂಡುಬಂದಿದೆ. “ಡಬ್ಲ್ಯುಟಿಎಫ್ – ವಾಟ್ ದಿ ಫ್ಲೇವರ್ಸ್” ಎಂದು ಹೆಸರಿಸಲಾದ ಈ ಯಂತ್ರದ ಪಾನಿಪುರಿ ಎಲ್ಲರ ಗಮನ ಸೆಳೆದಿದೆ. ಬೆನೆಡಿಕ್ಟ್ ಎಂಬ ಬಳಕೆದಾರರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಮೆಷಿನ್‌ನ ಪೋಟೊವನ್ನು ಪೋಸ್ಟ್ ಮಾಡಿದ್ದಾರೆ. ಈ ಯಂತ್ರವು ಗ್ರಾಹಕರಿಗೆ ಆಯ್ಕೆ ಮಾಡಲು ವಿವಿಧ ಪರಿಮಳಯುಕ್ತ ಪಾನೀಯವನ್ನು ವಿತರಿಸುವ ಅನೇಕ ನಲ್ಲಿಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ ಸಂಜೆಯ ವೇಳೆ ಫುಡ್ ಕೌಂಟರ್‌ಗಳಲ್ಲಿ ಕಿಕ್ಕಿರಿದ ಜನಸಂದಣಿಯಿಂದ ತುಂಬಿರುವ ಸ್ಥಳಗಳಲ್ಲಿ ಇಂತಹ ಮೆಷಿನ್ ಬಂದಿದ್ದು ಬಹಳ ಅನುಕೂಲಕರವಾಗಿದೆ ಎಂದೇ ಹೇಳಬಹುದು.
ಆದರೆ ಈ ಸ್ವಯಂಚಾಲಿತ ಪಾನಿಪುರಿ ಮಾರಾಟ ಯಂತ್ರದ ಬಗ್ಗೆ ಆನ್‍ಲೈನ್‍ನಲ್ಲಿ ಅನೇಕ ಚರ್ಚೆಗಳು ಹುಟ್ಟಿಕೊಂಡಿವೆ. ಅನೇಕರು ಈ ಯಂತ್ರ ಬೆಂಗಳೂರಿಗೆ ಮಾತ್ರವೇ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು “ಇದು ಕೊನೆಯಲ್ಲಿ ಸುಕ್ಕಾ ಪುರಿಯನ್ನು ನೀಡುತ್ತದೆಯೇ?” ಎಂದು ತಮಾಷೆಯ ಪ್ರಶ್ನೆ ಕೇಳಿದ್ದಾರೆ.
ಕರ್ನಾಟಕದಲ್ಲಿ ಬೀದಿ ಆಹಾರದ ಗುಣಮಟ್ಟದ ಬಗ್ಗೆ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: ಅಂಬಾನಿ ಮದುವೆ ಸಮಾರಂಭದೊಳಗೆ ನುಸುಳಿದ್ದ ಇಬ್ಬರು ʼನಕಲಿ ಅತಿಥಿʼಗಳ ಬಂಧನ!
ಈ ಆಹಾರದಿಂದ ಅನೇಕ ಕಾಯಿಲೆಗಳು ಹರಡುತ್ತದೆ ಮತ್ತು ಇಲ್ಲಿ ಸ್ವಚ್ಛತೆ ಕಡಿಮೆ ಎಂದು ಹೇಳಲಾಗಿದೆ. ಅಲ್ಲದೇ ಆಹಾರ ಸುರಕ್ಷತಾ ಅಧಿಕಾರಿಗಳ ಇತ್ತೀಚಿನ ಆಹಾರ ತಪಾಸಣೆಗಳಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿ ಕೃತಕ ಬಣ್ಣಗಳು ಮತ್ತು ಕ್ಯಾನ್ಸರ್ ಕಾರಕಗಳ ಉಪಸ್ಥಿತಿಯನ್ನು ಬಹಿರಂಗಪಡಿಸಿವೆ, ಇದು ಪಾನಿಪುರಿ ಮಳಿಗೆಗಳ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಕಳವಳವನ್ನು ಹೆಚ್ಚಿಸಿದೆ ಎನ್ನಲಾಗಿದೆ.