Site icon Vistara News

Ram Mandir Watch: 34 ಲಕ್ಷ ರೂ.ಗೆ ಮಾರಾಟವಾಯಿತು ʼರಾಮ ಜನ್ಮಭೂಮಿʼ ಸ್ಪೆಷಲ್‌ ವಾಚ್!

Ram Mandir Watch


ನವದೆಹಲಿ: ಅಯೋಧ್ಯೆಯಲ್ಲಿ ಈ ವರ್ಷದ ಆರಂಭದಲ್ಲಿ ಹಿಂದೂಗಳ ಆರಾಧ್ಯ ದೇವರಾದ ಶ್ರೀರಾಮ ಮಂದಿರದ ಉದ್ಘಾಟನೆಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಗಿತ್ತು. ಲಕ್ಷಾಂತರ ಹಿಂದೂಗಳು ದೂರದೂರಿನಿಂದ ಶ್ರೀರಾಮನ ದರ್ಶನಕ್ಕೆ ಬಂದಿದ್ದರು. ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಬಳಿಕ ಇದೀಗ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭವನ್ನು ನೆನಪಿಸುವಂತಹ ವಾಚ್ (Ram Mandir Watch) ಒಂದನ್ನು ಬಿಡುಗಡೆ ಮಾಡಲಾಗಿದೆ.

ಸ್ವಿಸ್ ವಾಚ್ ತಯಾರಕ ಕಂಪನಿಯೊಂದು ಭಾರತೀಯ ರಿಟೇಲ್‌ ಉದ್ದಿಮೆಯ ಸಹಯೋಗದೊಂದಿಗೆ ರಾಮ ಜನ್ಮಭೂಮಿ ಲಿಮಿಟೆಡ್ ಎಡಿಷನ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ವಾಚ್ ಎರಡು ಆವೃತ್ತಿಗಳಲ್ಲಿ ಬರುತ್ತದೆ. ಇದೀಗ ಈ ವಾಚ್ 34 ಲಕ್ಷ ರೂ.ಗೆ ಮಾರಾಟವಾಗಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಿಗ್ನೇಚರ್ ಎಪಿಕ್ ಎಸ್ಕ್‌ಸ್ಕೆಲೆಟನ್ ಸೀರಿಸ್ ಅನ್ನು ಆಧರಿಸಿ ಎಥೋಸ್ ಮತ್ತು ಜಾಕೋಬ್ ಅಂಡ್ ಕೋ ಸಹಯೋಗದೊಂದಿಗೆ ಈ ಐಷಾರಾಮಿ ವಾಚ್ ಅನ್ನು ಬಿಡುಗಡೆ ಮಾಡಲಾಗಿದೆ. “ಈ ವಾಚ್ ಅನ್ನು ಭಾರತದ ಆಳವಾದ ಸಾಂಸ್ಕೃತಿಕ ಪರಂಪರೆಗೆ ಗೌರವ ಸಲ್ಲಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಇದು ಇದುವರೆಗೆ ಮಾಡಿದ ಅತ್ಯಂತ ವಿಶಿಷ್ಟವಾದ ಸಹಯೋಗದ ವಾಚ್‍ಗಳಲ್ಲಿ ಒಂದಾಗಿದೆ” ಎಂದು ಕಂಪನಿ ಹೇಳಿಕೊಂಡಿದೆ.

ಈ ವಾಚ್‍ನಲ್ಲಿ ಮುಳ್ಳು 9 ಗಂಟೆಗೆ ಬಂದಾಗ ರಾಮ ಮಂದಿರವನ್ನು ತೋರಿಸಿದರೆ, 6 ಗಂಟೆಗೆ “ಜೈ ಶ್ರೀ ರಾಮ್” ಎಂದು ಹೇಳುತ್ತದೆ! ಕೇಸರಿ ಬಣ್ಣದ ಬೆಲ್ಟ್ ಹೊಂದಿರುವ ಈ ವಾಚ್‍ನಲ್ಲಿ ಭಗವಾನ್ ರಾಮ ಮತ್ತು ಭಗವಾನ್ ಹನುಮಂತನ ಚಿತ್ರ ಸಹ ಕಾಣಿಸುತ್ತದೆ. ಈ ವಾಚ್‍ಗಾಗಿ ಆಯ್ಕೆ ಮಾಡಿದ ಬಣ್ಣವು ಆಧ್ಯಾತ್ಮಿಕತೆ, ಶುದ್ಧತೆ ಮತ್ತು ಭಕ್ತಿಯ ಸಾರವನ್ನು ಪ್ರತಿನಿಧಿಸುತ್ತದೆ. ಇದು ಹಿಂದೂ ಧರ್ಮದ ಮೌಲ್ಯಗಳನ್ನು ಬಿಂಬಿಸುತ್ತದೆ. ಈ ವಾಚ್‍ನ ಪ್ರತಿಯೊಂದು ವಿವರವನ್ನು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಕಂಪನಿಯ ಪ್ರಕಾರ, ಕೇವಲ 49 ಸೀಮಿತ ಆವೃತ್ತಿಯ ವಾಚ್‍ಗಳನ್ನು ತಯಾರಿಸಲಾಗಿದ್ದು, ಅದರಲ್ಲಿ 35 ವಾಚುಗಳು ಈಗಾಗಲೇ ಮಾರಾಟಕ್ಕೆ ಸಿದ್ಧವಾಗಿವೆ ಎನ್ನಲಾಗಿದೆ.

ಹಲವು ವರ್ಷಗಳ ನ್ಯಾಯಾಂಗ ಹೋರಾಟ ಮತ್ತು ಹಲವಾರು ವಿವಾದಗಳು, ಸಂಘರ್ಷದ ನಂತರ ಸುಪ್ರೀಂ ಕೋರ್ಟ್ 2019ರಲ್ಲಿ ದೇವಾಲಯವನ್ನು ನಿರ್ಮಿಸಲು ಹಿಂದೂಗಳಿಗೆ ವಿವಾದಿತ ಭೂಮಿಯನ್ನು ಹಸ್ತಾಂತರಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 2020ರಲ್ಲಿ ರಾಮಮಂದಿರಕ್ಕೆ (ಭೂಮಿ ಪೂಜೆ) ಅಡಿಪಾಯ ಹಾಕಿದ್ದರು. ನಾಲ್ಕು ವರ್ಷಗಳ ನಂತರ ಭವ್ಯ ದೇವಾಲಯವನ್ನು ನಿರ್ಮಿಸಿ ಗರ್ಭಗುಡಿಯಲ್ಲಿ ರಾಮ್ ಲಲ್ಲಾರನ್ನು ಸ್ಥಾಪಿಸಿ ಭರ್ಜರಿಯಾಗಿ ಪ್ರತಿಷ್ಠಾಪನಾ ಸಮಾರಂಭ ನಡೆಸಿದ್ದರು.

ಇದನ್ನೂ ಓದಿ: ‘ಮಿಸ್ಟರ್ ಬೀನ್’ ಖ್ಯಾತಿಯ ರೋವನ್ ಅಟ್ಕಿನ್ಸನ್ ಹಾಸಿಗೆ ಹಿಡಿದಿದ್ದಾರೆಯೇ? ಭಾರೀ ವೈರಲಾಗ್ತಿದೆ ಈ ಫೋಟೊ

ಈ ದೇವಾಲಯವು ಹಿಂದೂಗಳ ನಂಬಿಕೆಯ ಕೇಂದ್ರ ಬಿಂದುವಾಗಿದೆ. ಇಡೀ ಸಂಕೀರ್ಣವನ್ನು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಅಯೋಧ್ಯೆಯ ರಾಮ ಮಂದಿರಕ್ಕೆ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.

Exit mobile version