Site icon Vistara News

Self Harming: ಶಿಕ್ಷಕಿ, ಸಹಪಾಠಿಗಳ ಕಿರುಕುಳ ತಾಳಲಾರದೆ ನೇಣಿಗೆ ಶರಣಾದ ಬಾಲಕ

Self Harming


ವಿದ್ಯೆಯನ್ನು ಮಕ್ಕಳಿಗೆ ಪ್ರೀತಿಯಿಂದ ಕಲಿಸಬೇಕು. ಆಗ ಮಕ್ಕಳು ಬಹಳ ಬೇಗನೆ ಅರ್ಥಮಾಡಿಕೊಳ್ಳುತ್ತಾರೆ. ಆದರೆ ಅದಕ್ಕಾಗಿ ಅವರ ಮೇಲೆ ಒತ್ತಡ ಹೇರಿದಾಗ ಅದು ಅವರ ಮೇಲೆ ಕೆಟ್ಟ ಪರಿಣಾಮ ಬೀರಿ ಇದರಿಂದ ಅವರು ಜೀವ ಕಳೆದುಕೊಳ್ಳಬಹುದು. ಅಲ್ಲದೇ ಶಾಲೆಯಲ್ಲಿ ಮಕ್ಕಳಿಗೆ ಸಹಪಾಠಿಗಳಿಂದ, ಶಿಕ್ಷಕರಿಂದ ಕಿರುಕುಳ ಉಂಟಾಗುವುದು ಸಹಜ. ಆದರೆ ಇಂದಿನ ವಿದ್ಯಾರ್ಥಿಗಳು ಬಹಳ ಸೂಕ್ಷ್ಮ ಮನಸ್ಸಿನವರಾಗಿರುವ ಕಾರಣ ಅದನ್ನು ಸಹಿಸದೆ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಅನೇಕ ಬಾರಿ ನಡೆದಿದೆ. ಇದೀಗ ಅಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಕಲ್ಯಾಣ್‍ನ ಶಾಲೆಯ 13 ವರ್ಷದ ಬಾಲಕನೊಬ್ಬ ಶಿಕ್ಷಕಿ ಮತ್ತು ಸಹಪಾಠಿಗಳ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 8ನೇ ತರಗತಿ ವಿದ್ಯಾರ್ಥಿಯಾಗಿದ್ದ ಈ ಬಾಲಕ ತನ್ನ ಸಾವಿಗೆ ಶಿಕ್ಷಕ ಮತ್ತು ಕೆಲವು ಸಹಪಾಠಿಗಳ ಕಾರಣ ಎಂದು ಪತ್ರದಲ್ಲಿ ಬರೆದಿದ್ದಾನೆ ಎಂಬುದಾಗಿ ವರದಿಯಾಗಿದೆ. ಮುಂಬೈ ಬಳಿಯ ಕಲ್ಯಾಣ್ ಪೂರ್ವದ ಪ್ರಸಿದ್ಧ ಶಾಲೆಯಲ್ಲಿ ಓದುತ್ತಿದ್ದ ಬಾಲಕ ಭಾನುವಾರ ಸಂಜೆ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಮತ್ತು ಆ ಸಮಯದಲ್ಲಿ ಅವನ ಕುಟುಂಬ ಸದಸ್ಯರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಇದೇ ಮೊದಲಲ್ಲ. ಇದಕ್ಕೂ ಮೊದಲು ಜುಲೈ 26ರಂದು ಪುಣೆಯಲ್ಲಿ 15 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಲಕ ತನ್ನ ಸಾವನ್ನು ಬಹಳ ಎಚ್ಚರಿಕೆಯಿಂದ ಪ್ಲ್ಯಾನ್ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಆತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಾನು ಯಾವ ರೀತಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಕಾರ್ಯವಿಧಾನಗಳನ್ನು ನೋಟ್‍ಬುಕ್‍ನಲ್ಲಿ ಬರೆದು ಪ್ಲ್ಯಾನ್ ಮಾಡಿದ್ದನ್ನು ಕಂಡು ಅಧಿಕಾರಿಗಳು ಮತ್ತು ಪೋಷಕರು ಬೆಚ್ಚಿಬಿದ್ದಿದ್ದಾರೆ.

ಹಾಗೆಯೇ ಪುಣೆಯ ಪಿಂಪ್ರಿ-ಚಿಂಚ್ವಾಡ್ ನೆರೆಹೊರೆಯ ಅಪಾರ್ಟ್ಮೆಂಟ್ ಸಂಕೀರ್ಣದ 14ನೇ ಮಹಡಿಯಿಂದ ಬಿದ್ದು 10ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಅಧಿಕಾರಿಗಳು ಆತ ಆತ್ಮಹತ್ಯೆಗೂ ಮುನ್ನ ಬರೆದ ಆತ್ಮಹತ್ಯೆ ಪತ್ರದ ಜೊತೆಗೆ ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಫೋಟೊ ಮುಂತಾದ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.

ಇದನ್ನೂ ಓದಿ: ದಂತ ಕಸಿ ಮಾಡಲು ಮೂಳೆಗಳಿಗಾಗಿ ಸಾವಿರಾರು ಶವಗಳನ್ನು ಕದ್ದ ಚೀನಾ ಕಂಪನಿ!

ಅದೇರೀತಿ ಜೂನ್‍ನಲ್ಲಿ ಅರುಣಾಚಲ ಪ್ರದೇಶದ 15 ವರ್ಷದ ಬಾಲಕನೊಬ್ಬ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಶಾಲೆಯಿಂದ ಹೊರಹಾಕಲ್ಪಟ್ಟ ಕಾರಣ ಘಟನೆ ನಡೆದ ಒಂದು ದಿನದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಅಂಜಾವ್ ಜಿಲ್ಲೆಯ ಅಮ್ಲಿಯಾಂಗ್‍ನಲ್ಲಿರುವ ಶಾಲೆಯ ಬಳಿ 10 ನೇ ತರಗತಿ ವಿದ್ಯಾರ್ಥಿ ಚಿರಾಂಗ್ ಕ್ರಿ, ಲೋಹಿತ್ ನದಿಯ ಬಳಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version