Site icon Vistara News

Self Harming: ಸಾಮೂಹಿಕ ಅತ್ಯಾಚಾರ; ಕ್ರಮ ಕೈಗೊಳ್ಳದ ಪೊಲೀಸರು; ಮನ ನೊಂದು ಬಾಲಕಿ ಆತ್ಮಹತ್ಯೆ

Self Harming


ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚು ನಡೆಯುತ್ತಿದೆ. ಇದೀಗ ಉತ್ತರ ಪ್ರದೇಶದ ಕನೌಜ್‍ನಲ್ಲಿ ಇಬ್ಬರು ಯುವಕರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ 17 ವರ್ಷದ ಬಾಲಕಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ. ಪೊಲೀಸರು ಪ್ರಕರಣದ ಬಗ್ಗೆ ಸರಿಯಾಗಿ ತನಿಖೆ ಮಾಡದ ಕಾರಣ ನೊಂದ ಅತ್ಯಾಚಾರ ಸಂತ್ರಸ್ತೆ ತನ್ನ ಜೀವನವನ್ನು ಕೊನೆಗೊಳಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಹಾಗಾಗಿ ಸೌಖ್ ಪೊಲೀಸ್ ಠಾಣೆಯ ತನಿಖಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ.

ನೆರೆಯ ಹಳ್ಳಿಯ ಇಬ್ಬರು ಯುವಕರು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ, ಆಕೆಯನ್ನು ಅವಳ ಮನೆಗೆ ತಂದು ಬಿಟ್ಟು ಈ ವಿಚಾರವನ್ನು ಹೊರಗಡೆ ಹೇಳದಂತೆ ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಸಂತ್ರಸ್ತೆಯ ತಂದೆ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಆರೋಪಿಗಳು ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಿ ದೂರು ನೀಡದಂತೆ ಒತ್ತಡ ಹಾಕಿದ್ದಾರೆ. ಹಾಗಾಗಿ ನೊಂದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಸ್ಥಳೀಯ ಜನರ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.

ಜುಲೈ 11ರಂದು ಸಂತ್ರಸ್ತೆ ಹತ್ತಿರದ ಹೊಲದಲ್ಲಿ ಶೌಚಕ್ಕೆ ಹೋಗಿದ್ದಾಗ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಆ ಬಳಿಕ ನೆರೆಯ ಗ್ರಾಮದ ಇಬ್ಬರು ಯುವಕರು ಬೈಕ್‍ನಲ್ಲಿ ಬಂದು ಆಕೆಯನ್ನು ಅಪಹರಿಸಿ ದೆಹಲಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ, ಅವರು ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬಾಲಕಿಗೆ ಬೆದರಿಕೆ ಹಾಕಿ ನಾಲ್ಕು ದಿನಗಳ ನಂತರ ಅವಳನ್ನು ಅವಳ ಮನೆಯ ಬಳಿ ಬಿಟ್ಟು ಹೋಗಿದ್ದರು. ಆದರೆ ಬಾಲಕಿ ತನ್ನ ಕುಟುಂಬ ಸದಸ್ಯರಿಗೆ ಈ ವಿಚಾರ ತಿಳಿಸಿದ ಕಾರಣ ಅವರು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: ಮಗ ಸತ್ತು ಶವ ಕೊಳೆಯುತ್ತಿದ್ದರೂ ಮಲಗಿದ್ದಾನೆಂದು ಮನೆಯಲ್ಲೇ ಇರಿಸಿಕೊಂಡಿದ್ದ ತಾಯಿ-ಮಗಳು!

ಆರೋಪಿಗಳು ದೂರನ್ನು ಹಿಂತೆಗೆದುಕೊಳ್ಳುವಂತೆ ಕುಟುಂಬದ ಮೇಲೆ ಒತ್ತಡ ಹೇರಿದ್ದಾರೆ ಮತ್ತು ತಾವು ಹೇಳಿದಂತೆ ಪಾಲಿಸದಿದ್ದರೆ ಬಾಲಕಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಈ ಬಗ್ಗೆ ಪೊಲೀಸರು ಯಾವುದೇ ತ್ವರಿತ ಕ್ರಮ ಕೈಗೊಂಡಿಲ್ಲ. ಇದರಿಂದ ಸಂತ್ರಸ್ತೆ ಭಯಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಹಾಗಾಗಿ ಸೌಖ್ ಪೊಲೀಸ್ ಠಾಣೆಯ ತನಿಖಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Exit mobile version