ಗಾಜಿಯಾಬಾದ್‍ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಜೂನ್ 24ರಂದು ಮೀರತ್‍ನ ಮೊಹಿಯುದ್ದೀನ್‌ಪುರದಿಂದ ಬಾಲಕಿಯನ್ನು ಅಪಹರಿಸಲಾಗಿತ್ತು. ಇದಾದ ಬಳಿಕ ಆಕೆಯನ್ನು ಜಮ್ಮುವಿಗೆ ಕರೆದೊಯ್ಯಲಾಯಿತು. ಮೀರತ್ ಮತ್ತು ಜಮ್ಮುವಿನ ವಿವಿಧ ಹೋಟೆಲ್‍ಗಳಲ್ಲಿ ನಾಲ್ವರು ಯುವಕರು ಬಾಲಕಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ಅತ್ಯಾಚಾರ (Sexual Abuse) ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಮಯದಲ್ಲಿ, ಆರೋಪಿಗಳು ಅವಳ ಅಶ್ಲೀಲ ವಿಡಿಯೊವನ್ನು ಮಾಡಿದಲ್ಲದೇ ಅವಳು ವಿರೋಧಿಸಿದರೆ ಕೊಲ್ಲುವುದಾಗಿ ಮತ್ತು ವಿಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಮೋದಿನಗರ ಪ್ರದೇಶದ ಹಳ್ಳಿಯೊಂದರ ನಿವಾಸಿಯಾಗಿರುವ ಬಾಲಕಿ ಮೀರತ್‍ನ ಕಾಲೇಜೊಂದರಲ್ಲಿ ಓದುತ್ತಿದ್ದಾಳೆ. ಜೂನ್ 24ರಂದು ಕಾಲೇಜಿಗೆ ಹೋಗಲು ಮನೆಯಿಂದ ಹೊರಟಿದ್ದ ಆಕೆ ಅಂದಿನಿಂದ ನಾಪತ್ತೆಯಾಗಿದ್ದಳು. ಕುಟುಂಬವು ಸಾಕಷ್ಟು ಹುಡುಕಿತು ಮತ್ತು ಕಾಣೆಯಾದ ದೂರನ್ನು ಸಹ ದಾಖಲಿಸಿತು. ಆದರೆ, ಅವಳ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಇದರ ನಡುವೆ ಆರೋಪಿಗಳು ಜುಲೈ 6 ರಂದು ಬಾಲಕಿಯನ್ನು ಭೋಜ್ಪುರ ಪೊಲೀಸ್ ಠಾಣೆಯ ಬಳಿ ಬಿಟ್ಟಿದ್ದಾರೆ. ಪೊಲೀಸರು ಬಾಲಕಿ ಚೇತರಿಸಿಕೊಂಡ ನಂತರ ಆಕೆಯ ಕುಟುಂಬ ಸದಸ್ಯರನ್ನು ಕರೆದು ಮನೆಗೆ ಕಳುಹಿಸಿದ್ದಾರೆ.
ಜೂನ್ 24ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಮೊಹಿಯುದ್ದೀನ್ ಪರ್ತಾಪುರದಿಂದ ಅದೇ ಗ್ರಾಮದ ಇಬ್ಬರು ಯುವಕರು ತನ್ನನ್ನು ಅಪಹರಿಸಿರುವುದಾಗಿ ಬಾಲಕಿ ಕುಟುಂಬಕ್ಕೆ ಬಹಿರಂಗಪಡಿಸಿದ್ದಾಳೆ. ಆರೋಪಿಗಳು ತನ್ನನ್ನು ಮೀರತ್‍ನಿಂದ ಅಪಹರಿಸಿ ಜಮ್ಮುವಿಗೆ ಕರೆದೊಯ್ದು ಅಲ್ಲಿನ ಹೋಟೆಲ್‍ನಲ್ಲಿ ಆರು ದಿನಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಅಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಬಾಲಕಿ ಆರೋಪಿಸಿದ್ದಾರೆ. ಇದರ ನಂತರ, ಆರೋಪಿಗಳು ಅವಳನ್ನು ಸಹರಾನ್ಪುರ ಮೂಲಕ ಮೀರತ್‍ಗೆ ಕರೆತಂದು ಹೆದ್ದಾರಿಯಲ್ಲಿರುವ ಹೋಟೆಲ್‍ನಲ್ಲಿ ಆರು ದಿನಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡರು ಮತ್ತು ಅಲ್ಲಿ ನಾಲ್ವರು ಯುವಕರು ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು ಎಂಬುದಾಗಿ ತಿಳಿಸಿದ್ದಾಳೆ.
ಜುಲೈ 6ರಂದು ಆರೋಪಿಗಳು ಬಾಲಕಿಯನ್ನು ಗಾಜಿಯಾಬಾದ್‍ನ ಭೋಜ್ಪುರ ಪೊಲೀಸ್ ಠಾಣೆಯ ಬಳಿ ಬಿಟ್ಟಿದ್ದರು. ಸಂತ್ರಸ್ತೆಯ ಪೋಷಕರು ಈ ಬಗ್ಗೆ ಮೋದಿನಗರ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಈ ಘಟನೆ ಮೀರತ್‍ನಲ್ಲಿ ನಡೆದಿದೆ ಎಂದು ಅವರು ಕೇಸು ದಾಖಲಿಸಲು ನಿರಾಕರಿಸಿದರು. ಅದೇ ಸಮಯದಲ್ಲಿ, ಪರ್ತಾಪುರ ಪೊಲೀಸರು ಸಹ ಪ್ರಕರಣ ದಾಖಲಿಸಲಿಲ್ಲ. ಈ ಪ್ರಕರಣದಲ್ಲಿ, ಗಾಜಿಯಾಬಾದ್ ಮತ್ತು ಮೀರತ್ ಪೊಲೀಸರು ಪರಸ್ಪರ ಕೇಸನ್ನು ವರ್ಗಾಯಿಸುತ್ತಲೇ ಇದ್ದರು.
ಇದನ್ನೂ ಓದಿ: ಬಿಸ್ಕೆಟ್‌ಗೆ ಆಸೆ ಪಟ್ಟು ಹೋಗಿದ್ದ ಪುಟ್ಟ ಬಾಲಕಿ ಕಾಮುಕನ ಕೈಗೆ ಸಿಕ್ಕಿ ಕೊಲೆಯಾದಳು
ಹಾಗಾಗಿ ಸಂತ್ರಸ್ತೆಯ ಕುಟುಂಬವು ಮೀರತ್ ಎಸ್ಎಸ್‌ಪಿಗೆ ದೂರು ನೀಡಿದೆ. ಅವರ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಹೋಟೆಲ್‍ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಮೀರತ್ ನಗರ ಎಸ್ ಪಿ ಆಯುಷ್ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.