ಹಾವುಗಳು ಎಲ್ಲೆಂದರಲ್ಲಿ ಕಂಡು ಬರುವುದು ಸಹಜ. ಕೆಲವು ಹಾವುಗಳ ವಿಷ ಕೂಡ ಜೀವಕ್ಕೆ ಬಹಳ ಅಪಾಯಕಾರಿ. ಹಾವಿನ ಬಗ್ಗೆ ಜನ ಸಾಮಾನ್ಯವಾಗಿ ಹೆಚ್ಚಿನ (Snake Bite) ಎಚ್ಚರ ವಹಿಸುತ್ತಾರೆ. ಕೃಷಿ ಕೆಲಸ ಮಾಡುವವರು ಕೂಡ ಸಾಮಾನ್ಯವಾಗಿ ಜೀವನದಲ್ಲಿ ಹೆಚ್ಚೆಂದರೆ ಒಂದು ಬಾರಿ ಹಾವು ಕಡಿತಕ್ಕೆ ಒಳಗಾಗಬಹುದು. ಇಲ್ಲೊಬ್ಬ ಯುವಕ ಒಂದೂವರೆ ತಿಂಗಳಿನಲ್ಲಿ ಹಾವಿನಿಂದ 6 ಬಾರಿ ಕಚ್ಚಿಸಿಕೊಂಡಿದ್ದಾನೆ. ಇದನ್ನು ಕೇಳಿದವರಿಗೆ ಆಶ್ಚರ್ಯವಾಗುವುದು ಖಂಡಿತ.
ಹೌದು. ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಸೌರಾ ಗ್ರಾಮದ 24 ವರ್ಷದ ವಿಕಾಸ್ ದುಬೆ ಎಂಬ ಯುವಕನಿಗೆ ಒಂದೂವರೆ ತಿಂಗಳಲ್ಲಿ ಆರು ಬಾರಿ ಹಾವು ಕಚ್ಚಿದ್ದು, ಆತ ಪ್ರತಿ ಬಾರಿ ಹಾವಿನ ಕಡಿತದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾನೆ ಎನ್ನಲಾಗಿದೆ. ಆತ ಜೂನ್ 2 ಮತ್ತು ಜುಲೈ 6ರ ನಡುವೆ ಮನೆಯ ಬಳಿ ಆರು ಬಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದಾನೆ. ಮೊದಲ ಬಾರಿ ಜೂನ್ 2ರಂದು ವಿಕಾಸ್ ದುಬೆ ತನ್ನ ಮನೆಯಲ್ಲಿ ಮಲಗಿದ್ದಾಗ ಹಾಸಿಗೆಯಲ್ಲಿದ್ದ ಹಾವಿನಿಂದ ಕಚ್ಚಿಸಿಕೊಂಡಿದ್ದಾನೆ. ಆಗ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು.
ಅದೇರೀತಿ ಮತ್ತೊಮ್ಮೆ ಮನೆಯ ಬಳಿ ಮೂರು ಬಾರಿ ಹಾವಿನಿಂದ ಕಚ್ಚಿಸಿಕೊಂಡು ಚಿಕಿತ್ಸೆ ಪಡೆದಿದ್ದನು. ನಾಲ್ಕನೇ ಬಾರಿ ಮನೆಯ ಬಳಿ ಹಾವು ಕಚ್ಚಿದ ನಂತರ, ದುಬೆಗೆ ತನ್ನ ಮನೆಯನ್ನು ಬಿಟ್ಟು ಬೇರೆಡೆ ಉಳಿಯಲು ಸಲಹೆ ನೀಡಲಾಯಿತು. ಹಾಗಾಗಿ ಆತ ರಾಧಾನಗರದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಹೋಗಿದ್ದನು, ಆದರೆ ಅಲ್ಲಿ ಆತ ಮತ್ತೆ ಐದನೇ ಬಾರಿಗೆ ಹಾವಿನ ಕಡಿತಕ್ಕೆ ಒಳಗಾದ. ನಂತರ ದುಬೆಯ ಪೋಷಕರು ಅವನನ್ನು ಮನೆಗೆ ಕರೆತಂದರು. ಜುಲೈ 6 ರಂದು, ಅವರ ಮೇಲೆ ಮತ್ತೊಮ್ಮೆ ಹಾವು ದಾಳಿ ಮಾಡಿತು. ಇದರಿಂದ ಅವನ ಸ್ಥಿತಿ ಹದಗೆಟ್ಟಿತು. ಅವನ ಆರೋಗ್ಯದ ಬಗ್ಗೆ ಭಯಗೊಂಡ ಪೋಷಕರು ಅವನನ್ನು ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಅವನಿಗೆ ಚಿಕಿತ್ಸೆ ನೀಡಲಾಯಿತು. ಈಗ ಆತ ಚೇತರಿಸಿಕೊಂಡಿದ್ದಾನೆ ಎಂಬುದಾಗಿ ತಿಳಿದುಬಂದಿದೆ.
ಈತನಿಗೆ ಪದೇ ಪದೇ ಹಾವು ಕಚ್ಚಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ ಹಾವು ಕಡಿತವು ಯಾವಾಗಲೂ ಶನಿವಾರ ಅಥವಾ ಭಾನುವಾರದಂದು ನಡೆಯುತ್ತದೆ. ಕಚ್ಚುವ ಮೊದಲು ಪ್ರತಿ ಬಾರಿಯೂ ತನಗೆ ಮುನ್ಸೂಚನೆ ಸಿಗುತ್ತಿತ್ತು ಎಂದು ವಿಕಾಸ್ ದುಬೆ ಆಶ್ಚರ್ಯಕರ ವಿಚಾರವನ್ನು ತಿಳಿಸಿದ್ದಾನೆ.
ಇದನ್ನೂ ಓದಿ: ಸಿನಿಮೀಯ ಲವ್ ಸ್ಟೋರಿ; ಜೀವ ಉಳಿಸಿಕೊಳ್ಳಲು ಎಸ್‍ಪಿ ಕಚೇರಿಗೆ ಓಡಿದ ಪ್ರೇಮಿಗಳು! ವಿಡಿಯೊ ನೋಡಿ