ನವದೆಹಲಿ: ದೇಶ ಕಾಯುವ ಯೋಧರು ಅಲ್ಲಿ ನಡೆಯುವ ಶತ್ರು ದೇಶದ ದಾಳಿಗೆ ಬಲಿಯಾಗುತ್ತಲೇ ಇರುತ್ತಾರೆ. ದೇಶಕ್ಕಾಗಿ ಹುತಾತ್ಮರಾಗುತ್ತಾರೆ. ತಮ್ಮ ಮಕ್ಕಳನ್ನು ಕಳೆದುಕೊಂಡ ಅನೇಕ ಯೋಧರ ಕುಟುಂಬಗಳ ಗೋಳಾಟ ನೋಡಲು ಸಾಧ್ಯವಾಗುವುದಿಲ್ಲ. ತಮ್ಮ ಮಗ ವೀರ ಮರಣ ಹೊಂದಿದ ಎಂಬ ಹೆಮ್ಮೆ ಒಂದು ಕಡೆಯಾದರೆ, ತಮಗೆ ವೃದ್ಧಾಪ್ಯದಲ್ಲಿ ಆಸರೆಯಾಗಬೇಕಾಗಿದ್ದ ಮಗ ಇನ್ನಿಲ್ಲ ಎಂಬ ದುಃಖ ಇನ್ನೊಂದು ಕಡೆ ಇರುತ್ತದೆ. ಇದೀಗ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ಮಕ್ಕಳನ್ನು ಕಳೆದುಕೊಂಡ ಯೋಧರ (Soldier Death) ಕುಟುಂಬದ ಆಕ್ರಂದನ ಕೇಳಿದರೆ ಕಂಬನಿ ಉಕ್ಕಿ ಬರುವುದಂತೂ ಖಂಡಿತ.
ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ 33 ವರ್ಷದ ಪ್ರಣಯ್ ನೇಗಿಯನ್ನು ಕಳೆದುಕೊಂಡು ದುಃಖದಿಂದ ಹೊರಬರಲು ಹೆಣಗಾಡುತ್ತಿದ್ದ ಕುಟುಂಬಕ್ಕೆ ಸೋಮವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಮಿಲಿಟರಿ ಬೆಂಗಾವಲು ವಾಹನದ ಮೇಲೆ ನಡೆದ ದಾಳಿಯಲ್ಲಿ ಅವರ ಸೋದರ ಸಂಬಂಧಿ ಆದರ್ಶ್ ನೇಗಿ (26) ಸಾವನ್ನಪ್ಪಿದ್ದು ಮತ್ತೊಂದು ದೊಡ್ಡ ಆಘಾತ ಎದುರಾದಂತಾಗಿದೆ.
ಮೇಜರ್ ಪ್ರಣಯ್ ನೇಗಿ 2018ರಲ್ಲಿ ಗರ್ವಾಲ್ ರೈಫಲ್ಸ್‌ಗೆ ಸೇರಿದರು ಮತ್ತು ಲೇಹ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಏಪ್ರಿಲ್ 30ರಂದು ನಿಧನರಾಗಿದ್ದರು. ಇವರು ತಂದೆಯಾದ ರೈತ ಬಲ್ವಂತ್ ನೇಗಿ, ತಾಯಿ, ಸಹೋದರ ಮತ್ತು ಹಿರಿಯ ಸಹೋದರಿಯನ್ನು ಅಗಲಿದ್ದಾರೆ. ಇದೀಗ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಮಚೆಡಿ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಭಯೋತ್ಪಾದಕರು ಮಿಲಿಟರಿ ಬೆಂಗಾವಲು ಮೇಲೆ ದಾಳಿ ನಡೆಸಿದಾಗ ಆದರ್ಶ್ ನೇಗಿ ಸೇರಿದಂತೆ ಐವರು ಸೈನಿಕರು ಸಾವನ್ನಪ್ಪಿದ್ದಾರೆ. ಆದರ್ಶ್ ನೇಗಿ ಕೂಡ ಪ್ರಣಯ್ ನೇಗಿ ಅವರ ಸೋದರ ಸಂಬಂಧಿಯಾಗಿದ್ದು, ಇದೀಗ ಇಬ್ಬರು ಪುತ್ರರನ್ನು ಕಳೆದುಕೊಂಡು ಆ ಕುಟುಂಬ ದುಃಖಿಸುತ್ತಿದೆ.
ಈ ಬಗ್ಗೆ ತಮ್ಮ ದುಃಖವನ್ನು ತೋಡಿಕೊಂಡ ಮೇಜರ್ ಪ್ರಣಯ್ ನೇಗಿ ತಂದೆ ಬಲ್ವಂತ್ ನೇಗಿ, “ಕೇವಲ ಎರಡು ತಿಂಗಳ ಹಿಂದೆ, ನಾವು ತನ್ನ ದೇಶಕ್ಕೆ ಸೇವೆ ಸಲ್ಲಿಸುತ್ತ ಸಾವನ್ನಪ್ಪಿದ ಮಗನನ್ನು ಕಳೆದುಕೊಂಡಿದ್ದೇವೆ. ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಬೆಂಗಾವಲು ಪಡೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಪೌರಿ-ಗರ್ವಾಲ್ ಪ್ರದೇಶದ ಐದು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ನಮಗೆ ತಿಳಿಯಿತು. ಇದರಲ್ಲಿ ಆದರ್ಶ್ ಸೇರಿದಂತೆ ನಮ್ಮ ಪ್ರದೇಶದ ಐದು ಜನರು ಸಾವನ್ನಪ್ಪಿದ್ದಾರೆ. ಇದರಿಂದ ನಾವು ಎರಡು ತಿಂಗಳಲ್ಲಿ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡಿದ್ದೇವೆ” ಎಂದು ನೋವಿನಿಂದ ಹೇಳಿದರು.
ಇದನ್ನೂ ಓದಿ: ಮದುವೆ ಆಗೋದೇ ಇವಳ ಬ್ಯುಸಿನೆಸ್! ಪೊಲೀಸ್ ಅಧಿಕಾರಿ ಸೇರಿ 50 ಮಂದಿ ಜತೆ ವಿವಾಹ!
ಭಾನುವಾರ ರಜೌರಿಯಲ್ಲಿ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಸೈನಿಕನೊಬ್ಬ ಗಾಯಗೊಂಡಿದ್ದ. ಈ ದಾಳಿ ನಡೆದ 48 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಿಂದ 150 ಕಿ.ಮೀ ದೂರದಲ್ಲಿರುವ ಮಚೇಡಿ-ಕಿಂಡ್ಲಿ-ಮಲ್ಹಾರ್ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದು ನಂತರ ಗುಂಡು ಹಾರಿಸಿದರು. ಈ ದಾಳಿಯಲ್ಲಿ ಆದರ್ಶ್ ನೇಗಿ ಸೇರಿದಂತೆ ಐವರು ಸೈನಿಕರು ಸಾವನ್ನಪ್ಪಿದ್ದಾರೆ.