Site icon Vistara News

Stop Drinking: ಗಂಡನ ಕುಡಿತ ನಿಲ್ಲಿಸಬೇಕೆ? ಹಾಗಾದ್ರೆ ಬಿಜೆಪಿ ಸಚಿವರೊಬ್ಬರ ಈ ಟಿಪ್ಸ್‌ ಟ್ರೈ ಮಾಡಿ ನೋಡಿ!

Stop Drinking

ಕುಡಿತ ತಮ್ಮ ಜೀವನದ ಜೊತೆಗೆ ನಮ್ಮ ಕುಟುಂಬದವರ ಜೀವನವನ್ನು ಹಾಳು ಮಾಡುತ್ತದೆ ಎಂದು ತಿಳಿದರೂ ಕೂಡ ಹಲವು ಗಂಡಸರು ಕುಡಿತದ ದಾಸರಾಗಿದ್ದಾರೆ. ಕುಡುಕ ಗಂಡನಿಂದ ಕಿರುಕುಳಕ್ಕೆ ಒಳಗಾಗುವಂತಹ ಮಹಿಳೆಯರು ಇನ್ನೂ ನಮ್ಮ ದೇಶದಲ್ಲಿ ಇದ್ದಾರೆ. ಹಾಗಾಗಿ ಇಂತಹ ಕುಡುಕ ಗಂಡನನ್ನು ಸರಿಮಾಡುವುದು ಹೇಗೆ, ಅವರ ಕುಡಿತ ನಿಲ್ಲಿಸುವುದು ಹೇಗೇ (Stop Drinking) ಎಂದು ಒದ್ದಾಡುತ್ತಿರುವ ಮಹಿಳೆಯರಿಗೆ ಮಧ್ಯಪ್ರದೇಶದ ಸಚಿವರೊಬ್ಬರು ಸಲಹೆ ನೀಡಿದ್ದಾರೆ.

ಮಾದಕ ದ್ರವ್ಯ ಮತ್ತು ಮದ್ಯಪಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಭೋಪಾಲ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ, ಬಿಜೆಪಿ ನಾಯಕ ನಾರಾಯಣ್ ಸಿಂಗ್ ಕುಶ್ವಾಹ ಅವರು ಭಾಗವಹಿಸಿದ್ದರು. ಈ ವೇಳೆ ಅವರು ಪುರುಷರ ಕುಡಿತದ ಅಭ್ಯಾಸವನ್ನು ನಿಗ್ರಹಿಸಲು ಮಹಿಳೆಯರಿಗೆ ಅಸಾಮಾನ್ಯ ವಿಧಾನವೊಂದನ್ನು ತಿಳಿಸಿದ್ದಾರೆ. ಅದೇನೆಂದರೆ ಮಹಿಳೆಯರು ತಮ್ಮ ಗಂಡಂದಿರಿಗೆ ಮನೆಯಲ್ಲಿ ಕುಡಿಯಲು ಹೇಳಬೇಕಂತೆ. ಯಾಕೆಂದರೆ ಪುರುಷರು ತಮ್ಮ ಹೆಂಡತಿ ಮತ್ತು ಮಕ್ಕಳ ಮುಂದೆ ಕುಡಿಯಲು ನಾಚಿಕೆಪಡುತ್ತಾರೆ ಎಂದು ಅವರು ತಿಳಿಸಿದ್ದಾರೆ.

“ತಾಯಂದಿರು ಮತ್ತು ಸಹೋದರಿಯರು ತಮ್ಮ ಗಂಡಂದಿರು ಕುಡಿಯುವುದನ್ನು ನಿಲ್ಲಿಸಬೇಕೆಂದು ಬಯಸಿದರೆ, ಮೊದಲು ಹೊರಗೆ ಕುಡಿಯಬೇಡಿ ಎಂದು ಹೇಳಿ. ಆಲ್ಕೋಹಾಲ್ ಅನ್ನು ಮನೆಗೆ ತಂದು ನಿಮ್ಮ ಮುಂದೆ ಕುಡಿಯಲು ಅವರಿಗೆ ತಿಳಿಸಿ. ಅವರು ತಮ್ಮ ಕುಟುಂಬಗಳ ಮುಂದೆ ಕುಡಿದರೆ, ಅವರ ಸೇವನೆ ಕ್ರಮೇಣ ಕಡಿಮೆಯಾಗುತ್ತದೆ, ಮತ್ತು ಕೊನೆಯಲ್ಲಿ ಅವರು ಕುಡಿಯುವುದನ್ನು ನಿಲ್ಲಿಸುತ್ತಾರೆ. ಅವರು ತಮ್ಮ ಹೆಂಡತಿ ಮಕ್ಕಳ ಮುಂದೆ ಕುಡಿಯಲು ನಾಚಿಕೆಪಡುತ್ತಾರೆ. ಅಲ್ಲದೆ, ಅವರ ಉದಾಹರಣೆಯನ್ನು ಅನುಸರಿಸುವ ಮೂಲಕ ಅವರ ಮಕ್ಕಳು ಕುಡಿಯಲು ಪ್ರಾರಂಭಿಸಬಹುದು ಎಂದು ಅವರಿಗೆ ನೆನಪಿಸಿ. ಈ ವಿಧಾನವು ಪ್ರಾಯೋಗಿಕವಾಗಿದೆ, ಮತ್ತು ಗಂಡಂದಿರು ಕುಡಿತವನ್ನು ತ್ಯಜಿಸುತ್ತಾರೆ” ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ:ನಡುರಸ್ತೆಯಲ್ಲಿ ಬಟ್ಟೆ ಕಳಚಿ ಬೆತ್ತಲೆಯಾಗಿ ನಡೆದ ಮಹಿಳೆ; ಪುರುಷರು ಕಕ್ಕಾಬಿಕ್ಕಿ!

ಆದರೆ ಸಚಿವರ ಹೇಳಿಕೆಗೆ ತಕ್ಷಣ ಪ್ರತಿಕ್ರಿಯಿಸಿದ ಕಾಂಗ್ರೆಸ್, ಅವರ ಮಾತನ್ನು ಟೀಕಿಸಿದೆ. ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಮುಖೇಶ್ ನಾಯಕ್, “ಸಚಿವರ ಉದ್ದೇಶ ಸರಿಯಾಗಿದೆ, ಆದರೆ ಅದನ್ನು ತಿಳಿಸುವ ಅವರ ವಿಧಾನ ತಪ್ಪು. ಮನೆಯಲ್ಲಿ ಮದ್ಯಪಾನ ಮಾಡುವುದರಿಂದ ಮನೆಯಲ್ಲಿ ಸಂಘರ್ಷ ಮತ್ತು ಕೌಟುಂಬಿಕ ಹಿಂಸಾಚಾರ ಶುರುವಾಗಬಹುದು. ಅವರು ಜನರಿಗೆ ಕುಡಿಯದಂತೆ ಸಲಹೆ ನೀಡಬೇಕಿತ್ತು” ಎಂದು ಸಚಿವರ ಹೇಳಿಕೆಯನ್ನು ಟೀಕಿಸಿದ್ದಾರೆ.

Exit mobile version