Site icon Vistara News

Stuck in Lift: ಫ್ಯಾನಿಲ್ಲ, ಲೈಟಿಲ್ಲ, ಆಹಾರವಿಲ್ಲ; 2 ದಿನ ಲಿಫ್ಟ್‌ನಲ್ಲಿ ಸಿಲುಕಿದ್ದವನ ಸ್ಥಿತಿ ಹೇಗಿರಬಹುದು ಊಹಿಸಿ!

Stuck in Lift

ವ್ಯಕ್ತಿ ಲಿಫ್ಟ್‌ನೊಳಗೆ ಸಿಲುಕಿಕೊಂಡು ಒದ್ದಾಡುವಂತಹ ದೃಶ್ಯಗಳನ್ನು ನಾವು ಹೆಚ್ಚು ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ ಆಸ್ಪತ್ರೆಯೊಂದರಲ್ಲಿ 59 ವರ್ಷದ ವ್ಯಕ್ತಿಯೊಬ್ಬರು ಭರ್ತಿ 42 ಗಂಟೆಗಳ ಕಾಲ ಲಿಫ್ಟ್ (Stuck in Lift) ಒಳಗೆ ಸಿಲುಕಿಕೊಂಡಿದ್ದು, ಸುಮಾರು ಎರಡು ದಿನಗಳ ಕಾಲ ಅವರು ಲಿಫ್ಟ್‌ನೊಳಗೆ ಪರದಾಡಿದ ರೀತಿ ಕೇಳಿದರೆ ಯಾರಿಗಾದರೂ ಗಾಬರಿಯಾಗುವುದು ಖಂಡಿತ.

ಸ್ಥಳೀಯ ಸಿಪಿಐ ನಾಯಕ ಮತ್ತು ಸ್ಥಳೀಯ ಶಾಸಕರ ಹಾಸ್ಟೆಲ್‍ನ ಸಿಬ್ಬಂದಿ ರವೀಂದ್ರನ್ ಅವರು ಬೆನ್ನುನೋವಿನ ಚಿಕಿತ್ಸೆಗಾಗಿ ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದರು. ಎಕ್ಸ್-ರೇ ನಂತರ, ಅವರು ಲಿಫ್ಟ್‌ ಮೂಲಕ ವೈದ್ಯರ ಬಳಿಗೆ ಹೋಗುತ್ತಿದ್ದಾಗ ಅದು ಸಡನ್ ಆಗಿ ನಿಂತಿದೆ. ಆಗ ಅವರು ತಮ್ಮ ಫೋನ್ ಬಳಸಿ ಲಿಫ್ಟ್ ಒಳಗೆ ಬರೆದ ಹಲವಾರು (ಸಹಾಯವಾಣಿ) ಸಂಖ್ಯೆಗಳಿಗೆ ಕಾಲ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಅವರ ಫೋನ್ ಕೆಳಗೆ ಬಿದ್ದು ಹಾಳಾಗಿದೆ. ನಂತರ ಅವರು ಲಿಫ್ಟ್‌ನ ಒಂದು ಮೂಲೆಯಲ್ಲಿ ಕುಳಿತು ಯಾರಾದರೂ ಬರುತ್ತಾರೆ ಎಂದು ಕಾಯತೊಡಗಿದ್ದಾರೆ.

ಅನಿವಾರ್ಯವಾದಾಗ ಲಿಫ್ಟ್‌ನ ಒಂದು ಮೂಲೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ಅವರಿಗೆ ಬಾಯಾರಿಕೆ, ಹಸಿವು ಆದ ಕಾರಣ ನಿದ್ರೆ ಕೂಡ ಬರಲಿಲ್ಲ. ಅವರು ನಿಯಮಿತವಾಗಿ ಆಲರಂ ಬೆಲ್ ಅನ್ನು ಒತ್ತುತ್ತಲೇ ಇದ್ದರಂತೆ. ಲಿಫ್ಟ್ ಚೇಂಬರ್‌ನಲ್ಲಿ ಫ್ಯಾನ್ ಮತ್ತು ಬೆಳಕು ಎರಡೂ ಇರಲಿಲ್ಲ. ಸ್ವಲ್ಪ ಗಾಳಿ ಒಳಗೆ ಬರುತ್ತಿದ್ದರಿಂದ ಅವರ ಜೀವ ಉಳಿದಿದೆ. ಕೊನೆಗೆ ಅವರು ತಮ್ಮ ನೈತಿಕ ಸ್ಥೈರ್ಯವನ್ನು ಉಳಿಸಿಕೊಳ್ಳಲು, ತಮ್ಮ ಹೆಂಡತಿ ಬರೆದು ಪ್ರಕಟಿಸಿದ ಕವಿತೆಗಳನ್ನು ಮೆಲುಕು ಹಾಕಿದರಂತೆ. ಎರಡು ದಿನ ಲಿಫ್ಟ್‌ನಲ್ಲಿ ಸಿಕ್ಕಿ ಬಿದ್ದು ಹೊರ ಬಂದಿರುವ ರವೀಂದ್ರನ್ ಆ ಸಂಕಷ್ಟದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

ಇತ್ತ ಅವರ ಪತ್ನಿ ಮತ್ತು ಮಕ್ಕಳು ಅವರು ಮನೆಗೆ ಬರದಿದ್ದರೂ ತಲೆಕೆಡಿಸಿಕೊಂಡಿರಲಿಲ್ಲ. ಯಾಕೆಂದರೆ ಅವರು ಆಗಾಗ ಕೆಲಸದ ನಿಮಿತ್ತ ಮನೆಗೇ ಬರುತ್ತಿರಲಿಲ್ಲವಂತೆ. ಆದರೆ ಭಾನುವಾರ ಅವರು ಮನೆಗೆ ಹಿಂತಿರುಗದಿದ್ದಾಗ ಮತ್ತು ಅವರ ಪೋನ್‌ಗೆ ಕರೆ ಮಾಡಿದರೂ ಅದು ಸಿಗದಿದ್ದಾಗ ಅವರಿಗೆ ಚಿಂತೆ ಶುರುವಾಗಿದೆ. ಹಾಗಾಗಿ ಶಾಸಕರ ಹಾಸ್ಟೆಲ್ ಮತ್ತು ಸಿಪಿಐ ಕಚೇರಿಗೆ ಕರೆ ಮಾಡಿದಾಗ ರವೀಂದ್ರನ್ ಶನಿವಾರ ಮಧ್ಯಾಹ್ನದಿಂದ ಕಾಣೆಯಾಗಿರುವುದು ತಿಳಿದುಬಂದಿದೆ.

ಇದನ್ನೂ ಓದಿ:  ಕಾಮುಕರ ಹಾವಳಿ ಮಿತಿ‌ ಮೀರಿದೆ; ಬೀದಿ ನಾಯಿಯನ್ನೂ ಇವರು ಬಿಡುತ್ತಿಲ್ಲ! ಆಘಾತಕಾರಿ ವಿಡಿಯೊ

Stuck in Lift

ಭಾನುವಾರ ಮಧ್ಯಾಹ್ನದ ವೇಳೆಗೆ, ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದರು ಮತ್ತು ಹಾಗಾಗಿ ಅವರನ್ನು ಪೊಲೀಸರು ಹುಡುಕಾಡಿದ್ದಾರೆ. ಕೊನೆಯಲ್ಲಿ ಸೋಮವಾರ ಬೆಳಗ್ಗೆ ಲಿಫ್ಟ್ ಆಪರೇಟರ್ ನಿಧಾನವಾಗಿ ಕರ್ತವ್ಯಕ್ಕೆ ಹಾಜರಾದಾಗ ರವೀಂದ್ರನ್ ಲಿಫ್ಟ್‌ನಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದ್ದು, ಲಿಫ್ಟ್ ಆಪರೇಟರ್‌ಗಳು ಸೇರಿದಂತೆ ಮೂವರನ್ನು ಅಮಾನತುಗೊಳಿಸಲಾಗಿದೆ.

Exit mobile version