Site icon Vistara News

T20 World Cup : ಪಾಕಿಸ್ತಾನಕ್ಕೆ ಸಂಕಷ್ಟ ತಂದಿಟ್ಟ ಭಾರತ; ಸೂಪರ್ 8 ಹಂತ ಪ್ರವೇಶವೂ ಕಷ್ಟ!

T20 World Cup

ನ್ಯೂಯಾರ್ಕ್​: ಇಲ್ಲಿ ಭಾನುವಾರ ರಾತ್ರಿ ನಡೆದ ಟಿ 20 ವಿಶ್ವಕಪ್ 2024ರ (T20 World Cup) 19 ನೇ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಪಾಕಿಸ್ತಾನ (Pakistan Cricket Team) ಮುಖಾಮುಖಿಯಾದಾಗ ಟೂರ್ನಿಯ ಕೇಂದ್ರ ಬಿಂದು ಎಂದು ಹೇಳಲಾಯಿತು. ಅದು ಸಾಕ್ಷಿ ಸಮೇತ ಸಾಬೀತು ಕೂಡ ಆಗಿದೆ. ಟಾಸ್ ಗೆದ್ದ ನಂತರ ನಾಯಕ ಬಾಬರ್ ಅಜಮ್ ಭಾರತ ತಂಡಕ್ಕೆ ಬ್ಯಾಟ್ ಮಾಡಲು ಆಹ್ವಾನ ಕೊಟ್ಟರು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬೇಗ ಔಟಾದಾಗ ಇದು ಸರಿ ಎನಿಸಿತು. ಆದರೆ, ಸಿಕ್ಕ ಅವಕಾಶವನ್ನು ಕಳೆದುಕೊಂಡ ಪಾಕಿಸ್ತಾನ ತಂಡ ಕೊನೆಯಲ್ಲಿ 6 ರನ್​ಗಳಿಂದ ಸೋತಿತು. ಈ ಮೂಲಕ ಪರಿತಪಿಸಲು ಆರಂಭಿಸಿದೆ. ಭಾರತ ತಂಡದ ಪಾಕಿಸ್ತಾನದ ಸೂಪರ್-8 ಹಂತದ ಪ್ರವೇಶಕ್ಕೆ ಮುಳ್ಳಾಗಿದೆ.

ಪಂದ್ಯದಲ್ಲಿ ಭಾರತ ಪರ ಯುವ ಬ್ಯಾಟರ್​ ರಿಷಭ್ ಪಂತ್ 41 ರನ್ ಬಾರಿಸಿದರು. ಅವರ ರನ್​ ಭಾರತ ಪರ ಗರಿಷ್ಠ ಸ್ಕೋರ್. ಆದರೆ ನಸೀಮ್ ಶಾ ಮತ್ತು ಮೊಹಮ್ಮದ್ ಅಮೀರ್ ಅವರ ಬೌಲಿಂಗ್ ಸ್ಪೆಲ್​ಗಳು ಭಾರತದ ಬ್ಯಾಟಿಂಗ್ ಘಟಕವನ್ನು ಧೂಳಿಪಟ ಮಾಡಿದರು. ಒಂದು ಬಾರಿ ಕುಸಿದ ಭಾರತ ಚೇತರಿಸಿಕೊಳ್ಳಲೇ ಇಲ್ಲ. ಅಂತಿಮವಾಗಿ 18.3 ಓವರ್​ಗಳಲ್ಲಿ 119 ರನ್​ಗಳಿಗೆ ಆಲ್​ಔಟ್ ಆಯಿತು.

ಉತ್ತರವಾಗಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಎಚ್ಚರಿಕೆಯಿಂದ ಇನಿಂಗ್ಸ್​​ ಪ್ರಾರಂಭಿಸಿದರು. ಆದರೆ ಶೀಘ್ರದಲ್ಲೇ ಜಸ್ಪ್ರೀತ್ ಬುಮ್ರಾ ಭಾರತಕ್ಕೆ ಪ್ರಗತಿ ತಂದುಕೊಟ್ಟರು. ಆದಾಗ್ಯೂ, ರಿಜ್ವಾನ್ ತಳವೂರಿ ಆಡಿ ಸ್ಕೋರ್ ಬೋರ್ಡ್ ಹಿಗ್ಗಿಸಲು ಯತ್ನಿಸಿದರು. ಆದರೆ ಮೊಹಮ್ಮದ್ ಸಿರಾಜ್ ಮತ್ತು ನಂತರ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವರ ಕೆಲವು ಬಿಗಿಯಾದ ಸ್ಪೆಲ್​ಗಳು ಪಾಕಿಸ್ತಾನಕ್ಕೆ ರನ್​ ಗಳಿಸಲು ಕೊಂಚವೂ ಅವಕಾಶ ಕೊಡಲಿಲ್ಲ. ನಂತರ, ಬುಮ್ರಾ 19 ನೇ ಓವರ್​ನಲ್ಲಿ ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ಭಾರತ ತಂಡ ಪರ ತಿರುಗಿಸಿದರು. ಅಲ್ಲದೆ ಮತ್ತೊಮ್ಮೆ ತಾವು ಮ್ಯಾಚ್ ವಿನ್ನರ್ ಎಂಬುದನ್ನು ಸಾಬೀತುಪಡಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಆಡಿರುವ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ನಾಲ್ಕು ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಇದು ಅವರ ನೆಟ್ ರನ್ ರೇಟ್ (ಎನ್ಆರ್ಆರ್) ಅನ್ನು +1.455 ಕ್ಕೆ ಹೆಚ್ಚಿಸಿದೆ. ಭಾರತದಷ್ಟೇ ಅಂಕ ಹೊಂದಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ನಂತರದ ಸ್ಥಾನದಲ್ಲಿದೆ. ಅವರ ನೆಟ್ ರನ್ ರೇಟ್ ಪ್ರಸ್ತುತ +0.626 ಆಗಿದೆ. ಇದಲ್ಲದೆ, ಆರಂಭಿಕ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಸೋತ ನಂತರ ಐರ್ಲೆಂಡ್ ಅನ್ನು ಸೋಲಿಸಿದ ಕೆನಡಾ ಮೂರನೇ ಸ್ಥಾನದಲ್ಲಿದೆ. ಪಾಕಿಸ್ತಾನ ಮತ್ತು ಐರ್ಲೆಂಡ್ ಪ್ರಸ್ತುತ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿವೆ. ಪಾಕ್​ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಇನ್ನೂ ಖಾತೆ ತೆರೆದಿಲ್ಲ. ಹೀಗಾಗಿ ಸೂಪರ್ 8 ರೌಂಡ್ ಅರ್ಹತೆಯ ಬೇಟೆಯಲ್ಲಿ ಆ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ.

ಪಾಕಿಸ್ತಾನದ ಪರಿಸ್ಥಿತಿ ಏನು?

ಮುಂದಿನ ಪಂದ್ಯಗಳಲ್ಲಿ ನೆಟ್ ರನ್ ರೇಟ್ (ಎನ್ಆರ್​ಆರ್​) ವಿಷಯದಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ಪಾಕಿಸ್ತಾನ ತಂಡವು ಈಗ ಇತರ ತಂಡಗಳನ್ನು ಅವಲಂಬಿಸಬೇಕಾಗಿದೆ. ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಲು ಪಾಕ್​ ಮೊದಲು ಗ್ರೂಪ್ ಹಂತದ ಉಳಿದ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಇದೇ ವೇಳೆ ಅಮೆರಿಕ ಮತ್ತು ಐರ್ಲೆಂಡ್​​ ಭಾರತ ವಿರುದ್ಧ ಸೋಲಲೇಬೇಕು. ಹಾಗಾದರೆ ಮಾತ್ರ ಯುಎಸ್ಎ ತಂಡ ಆರು ಅಂಕಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ:IND vs PAK : ಪಾಕಿಸ್ತಾನದ ಬೌಲರ್​ ವಿರುದ್ಧ ವಿಶೇಷ ದಾಖಲೆ ಮಾಡಿದ ರೋಹಿತ್ ಶರ್ಮಾ

ಕುತೂಹಲಕಾರಿ ಸಂಗತಿಯೆಂದರೆ, ಐರ್ಲೆಂಡ್ ಯುಎಸ್ಎ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ, ಇದು ಪಾಕಿಸ್ತಾನಕ್ಕೆ ಅವಕಾಶ ಕೊಡಲಿದೆ. ತಮ್ಮ ಉಳಿದ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದು ಮತ್ತು ಭಾರತ ಅಥವಾ ಯುಎಸ್ಎಗಿಂತ ಉತ್ತಮ ರನ್ ರೇಟ್ ಹೊಂದಿದರೆ ಟಿ 20 ವಿಶ್ವಕಪ್ 2024 ರ ಸೂಪರ್ 8 ಸುತ್ತಿಗೆ ಪ್ರವೇಶಿಸಬಹುದು. ಇಲ್ಲದಿದ್ದರೆ ಪಾಕಿಸ್ತಾನ ಗುಂಪು ಹಂತದಿಂದಲೇ ಹೊರಕ್ಕೆ ಹೋಗುವುದು ಖಚಿತ.

ಟೀಮ್ ಇಂಡಿಯಾದ ಹೇಳುವುದಾದರೆ ಈಗಾಗಲೇ ಮುಂಚೂಣಿ ಸ್ಥಾನ ಪಡೆದುಕೊಂಡಿದೆ. ಗುಂಪಿನ ಅಗ್ರಸ್ಥಾನಿಗಳಾಗಿ ಉಳಿಯಲು ಇನ್ನೂ ಒಂದು ಪಂದ್ಯ ಗೆಲ್ಲಬೇಕು. ಆದ್ದರಿಂದ ಜೂನ್ 12 ರಂದು ಯುಎಸ್ಎ ವಿರುದ್ಧ ಗೆದ್ದರೆ ಸಾಕು. ಭಾರತಕ್ಕೆ ಕೆನಡಾ ವಿರುದ್ಧ ಇನ್ನೊಂದು ಪಂದ್ಯವಿದೆ. ಆದಾಗ್ಯೂ ಅಮೆರಿಕ ಮಣಿಸಿದರೆ ಸೂಪರ್8 ಸ್ಥಾನ ಖಾತರಿ.

Exit mobile version