Site icon Vistara News

Train Accident: ಹಳಿ ಮೇಲೆ ಬಿದ್ದ ಮಹಿಳೆ; ರೈಲೇ ರಿವರ್ಸ್‌! ಆದರೆ ಎರಡೂ ಕಾಲು ಕಟ್‌

Train Accident

ನವದೆಹಲಿ: ನವಿ ಮುಂಬೈನಲ್ಲಿ ಸೋಮವಾರ ಆಯತಪ್ಪಿ ರೈಲ್ವೆ ಹಳಿಯ ಮೇಲೆ ಬಿದ್ದ 50 ವರ್ಷದ ಮಹಿಳೆಗೆ ಚಲಿಸುತ್ತಿದ್ದ ರೈಲು ಡಿಕ್ಕಿ ಹೊಡೆದ ಪರಿಣಾಮ ಆಕೆ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್ (Train Accident) ಆಗಿದೆ. ಈ ವಿಡಿಯೊ ನೋಡಿ ಅನೇಕರು ದಂಗಾಗಿದ್ದಾರೆ.

ಥಾಣೆಗೆ ಹೋಗಲು ರೈಲಿಗಾಗಿ ಕಾಯುತ್ತಿದ್ದ ಮಹಿಳೆ ಬೆಳಗ್ಗೆ 10 ಗಂಟೆ ಸುಮಾರಿಗೆ ಬೇಲಾಪುರ ನಿಲ್ದಾಣದಲ್ಲಿ ಆಯತಪ್ಪಿ ರೈಲು ಹಳಿಗಳ ಮೇಲೆ ಬಿದ್ದಿದ್ದಾಳೆ. ಆಗ ಚಲಿಸುತ್ತಿದ್ದ ರೈಲು ಆಕೆಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಆಕೆಯ ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಆ ಮಹಿಳೆಯ ಜೀವ ಉಳಿಸಲು ಬೇಲಾಪುರ ನಿಲ್ದಾಣದ ಪ್ಲಾಟ್‌ಫಾರ್ಮ್‌ ಸಂಖ್ಯೆ 3 ರಲ್ಲಿ ಪನ್ವೇಲ್-ಥಾಣೆ ರೈಲನ್ನು ಹಿಂದಕ್ಕೆ ಚಲಿಸುವಂತೆ ಹೇಳಿ ನಂತರ ಮಹಿಳೆಯನ್ನು ಹಳಿಯಿಂದ ಮೇಲಕ್ಕೆತ್ತಿ ಹತ್ತಿರದ ಎಂಜಿಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವಪ್ನಿಲ್ ನೀಲಾ ಅವರು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊವನ್ನು ಸಹ ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದು,ಇದರಲ್ಲಿ ರೈಲು ನಿಧಾನವಾಗಿ ಹಿಂದಕ್ಕೆ ಚಲಿಸುತ್ತಿರುವಾಗ ಮಹಿಳೆ ಹಳಿಯ ಮೇಲೆ ಮಲಗಿರುವುದನ್ನು ತೋರಿಸುತ್ತದೆ. ಆಕೆಯ ಕಾಲುಗಳು ರಕ್ತಸಿಕ್ತವಾಗಿರುವುದು ಕಾಣಿಸುತ್ತದೆ. ಪೊಲೀಸರು ಜನರನ್ನು ನಿಯಂತ್ರಿಸುತ್ತಾ ಮಹಿಳೆಯನ್ನ ರಕ್ಷಿಸಲು ತೆರಳುತ್ತಿರುವುದು ಕಂಡುಬಂದಿದೆ. ಮಹಿಳೆಯನ್ನು ರೈಲ್ವೆ ಪೊಲೀಸ್ ಅಧಿಕಾರಿಗಳು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು ಆಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಪ.ಬಂಗಾಳದಲ್ಲಿ ಮತ್ತೊಬ್ಬ ಮಹಿಳೆ ಮೇಲೆ ಬರ್ಬರ ಹಲ್ಲೆ; ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ‌ ಮೇಲೆ ಕಿಡಿಕಾರಿದ ಜನ

ಮುಂಬೈ ಮತ್ತು ಅದರ ಉಪನಗರ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ ನಿರಂತರ ಮಳೆಯಾಗಿದ್ದು, ರೈಲು ಸಂಚಾರದ ಮೇಲೂ ಇದು ಪರಿಣಾಮ ಬೀರಿದೆ. ಹಳಿಗಳು ನೀರಿನಲ್ಲಿ ಮುಳುಗಿದ್ದರಿಂದ ಸ್ಥಳೀಯ ರೈಲುಗಳನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಗಿತ್ತು ಎನ್ನಲಾಗಿದೆ. ಹಳಿಗಳಲ್ಲಿ ನೀರು ನಿಂತು ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ವಡಾಲಾ ಮತ್ತು ಮನ್ಖುರ್ದ್ ನಿಲ್ದಾಣಗಳ ನಡುವೆ ಹಾರ್ಬರ್ ಲೈನ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.

Exit mobile version