ಕಸದಿಂದಲೇ ರಸ ಎಂಬ ಮಾತಿದೆ. ಕಸದಿಂದಲೂ ಜೀವನ ನಡೆಸುವವರು ಹಲವರಿದ್ದಾರೆ. ಇದೀಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ 30 ವರ್ಷದ ಯುವಕನೊಬ್ಬ ಒಬ್ಬ ಮನುಷ್ಯ ಎಸೆಯುವ ಕಸವು ಇನ್ನೊಬ್ಬ ಮನುಷ್ಯನಿಗೆ ಸಂಪತ್ತನ್ನು ತಂದು ಕೊಡುತ್ತದೆ ಎನ್ನುವುದನ್ನು ಸಾರಿ ಹೇಳಿದ್ದಾನೆ. ಈ ಸುದ್ದಿ ಎಲ್ಲೆಡೆ ವೈರಲ್ (Viral News) ಆಗಿದೆ.
ಲಿಯೊನಾರ್ಡೊ ಉರ್ಬಾನೊ ಕಳೆದ ವರ್ಷ ಸಿಡ್ನಿಯಲ್ಲಿ ಕಸದ ರಾಶಿಯ ಮೂಲಕ ಅತ್ಯುಮೂಲ್ಯ ವಸ್ತುಗಳನ್ನು ಸಂಗ್ರಹಿಸಿ 100,000 ಆಸ್ಟ್ರೇಲಿಯನ್ ಡಾಲರ್ ಅಂದರೆ 56.20 ಲಕ್ಷ ರೂ ಗಳಿಸಿದ್ದಾನೆ. ಅವನಿಗೆ ಕಸದ ರಾಶಿಯಲ್ಲಿ ಚೀಲಗಳು, ಕಾಫಿ ಯಂತ್ರಗಳು, ಚಿನ್ನದ ಆಭರಣಗಳು ಮತ್ತು ನಗದು ಸೇರಿದಂತೆ ಇತರ ವಸ್ತುಗಳು ಸಿಕ್ಕಿವೆ ಎನ್ನಲಾಗಿದೆ. ಪ್ರತಿದಿನ ಈತ ಬೆಳಿಗ್ಗೆ ಉಪಾಹಾರದ ನಂತರ, ತನ್ನ ಬೈಸಿಕಲ್ ಅಥವಾ ಕಾರಿನಲ್ಲಿ ಹೋಗಿ ಸಿಡ್ನಿಯ ಬೀದಿಗಳಲ್ಲಿ ಕಸದ ರಾಶಿಗಾಗಿ ಹುಡುಕುತ್ತಿದ್ದನಂತೆ, ಮತ್ತು ಅದರಿಂದ ಅವನಿಗೆ ಪ್ರತಿದಿನ ವಿಭಿನ್ನ ವಸ್ತುಗಳು ಸಿಗುತ್ತಿದ್ದವು ಎನ್ನಲಾಗಿದೆ. ಕೆಲವೊಮ್ಮೆ ಅಲ್ಲಿ ಫ್ರಿಡ್ಜ್, ವಾರ್ಡ್‌ರೋಬ್, ಮತ್ತು ಮಂಚಗಳಂತಹ ದೊಡ್ಡ ವಸ್ತುಗಳು ಇರುತ್ತವೆ ಎಂದು ಅವನು ಹೇಳಿದ್ದಾನೆ.
ಆಸ್ಟ್ರೇಲಿಯಾದಲ್ಲಿ ಜನರು ಸಾಮಾನ್ಯವಾಗಿ ಪೀಠೋಪಕರಣಗಳು ಮತ್ತು ಬೃಹತ್ ಸರಕುಗಳನ್ನು ಬೀದಿಗಳಲ್ಲಿ ಎಸೆಯುತ್ತಾರೆ. ಕಂಪ್ಯೂಟರ್‌ಗಳು, ಡೈಸನ್ ವ್ಯಾಕ್ಯೂಮ್ ಕ್ಲೀನರ್‌ಗಳು ಮತ್ತು ಟೆಲಿವಿಷನ್ ಸೆಟ್‍ಗಳು ಇತರ ವಸ್ತುಗಳು ಇರುತ್ತವೆ. ಕೆಲವು ಶ್ರೀಮಂತ ಕುಟುಂಬದವರು ಕೆಲವೊಂದು ವಸ್ತುಗಳು ಸರಿಯಾಗಿ ಕೆಲಸ ಮಾಡುತ್ತಿದ್ದರೂ ಹೊಸದನ್ನು ಖರೀದಿಸಲು ಹಳೆಯದನ್ನು ಕಸಕ್ಕೆ ಎಸೆಯುತ್ತಾರೆ. ಅಂಥವುಗಳನ್ನು ಹುಡುಕಿ ತೆಗೆದು ಮನೆಗೆ ತಂದು ಸ್ವಚ್ಛಗೊಳಿಸಿ ಮತ್ತು ಅದನ್ನು ಸರಿಪಡಿಸಿ ಅದರಲ್ಲಿ ತನಗೆ ಬೇಕಾದನ್ನು ಇಟ್ಟುಕೊಂಡು ಉಳಿದವುಗಳನ್ನು ಫೇಸ್ ಬುಕ್, ಮಾರ್ಕೆಟಿಂಗ್ ಪ್ಲಾಟ್‍ಫಾರ್ಮ್‌ಗಳಲ್ಲಿ ಮಾರಾಟ ಮಾಡುವುದಾಗಿ ಆತ ತಿಳಿಸಿದ್ದಾನೆ.
ಅಲ್ಲದೇ ಕೆಲವೊಮ್ಮೆ ಕಸದಲ್ಲಿ ಸಿಕ್ಕಿದ ಬಟ್ಟೆಗಳು ಮತ್ತು ಬ್ಯಾಗ್‌ಗಳ ಜೇಬಿನಲ್ಲಿ ಜನರು ಮರೆತು ಇಟ್ಟ ಹಣವು ಸಿಕ್ಕಿರುವುದಾಗಿ ತಿಳಿಸಿದ್ದಾನೆ. ಉರ್ಬಾನೊ ಅವರು ಇತ್ತೀಚೆಗೆ ಸಣ್ಣ ಚೀಲವನ್ನು ಸುಮಾರು $ 200 ಕ್ಕೆ ಮಾರಾಟ ಮಾಡಿರುವುದಾಗಿ ಹೇಳಿದ್ದಾನೆ. ಕೆಲವು ಐಷಾರಾಮಿ ವಸ್ತುಗಳನ್ನು ಮಾರಾಟ ಮಾಡುವ ತನ್ನ ಸ್ನೇಹಿತರನ್ನು ಸಹ ಸಂಪರ್ಕಿಸುವುದಾಗಿ ತಿಳಿಸಿದ್ದಾನೆ.
ಕಳೆದ ವರ್ಷ ಅವರಿಗೆ ಕಸದಲ್ಲಿ 50ಕ್ಕೂ ಹೆಚ್ಚು ಟೆಲಿವಿಷನ್ ಸೆಟ್‍ಗಳು, 30 ಫ್ರಿಡ್ಜ್‌ಗಳು, 20ಕ್ಕೂ ಹೆಚ್ಚು ವಾಷಿಂಗ್ ಮಷಿನ್‌ಗಳು, 50 ಕಂಪ್ಯೂಟರ್‌ಗಳು/ಲ್ಯಾಪ್‍ಟಾಟ್‍ಗಳು, 15 ಮಂಚಗಳು, 150ಕ್ಕೂ ಹೆಚ್ಚು ಮಡಿಕೆಗಳು ಮತ್ತು 100ಕ್ಕೂ ಹೆಚ್ಚು ದೀಪಗಳು ಮತ್ತು ಅಲಂಕಾರಿಕ ವರ್ಣಚಿತ್ರಗಳು ಹಾಗೂ $ 849 ಮೌಲ್ಯದ ನಗದು ಕೂಡ ಸಿಕ್ಕಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಗನ ಮದುವೆ ಗಡಿಬಿಡಿಯಲ್ಲಿ ನೀತಾ ಅಂಬಾನಿ ಪಾಪರಾಜಿಗಳಿಗೆ ಹೇಳಿದ್ದೇನು? ವಿಡಿಯೊ ವೈರಲ್
ಉರ್ಬಾನೊ ತನ್ನನ್ನು “ದಿ ತ್ರ್ಯಾಶ್ ಲಾಯರ್” (The Trash Lawyer) ಎಂದು ಕರೆದುಕೊಂಡಿದ್ದಾರೆ. ಏಕೆಂದರೆ ಅವರು ಮುಂದೆ ಬದುಕಲು ಕಸದ ಅವಶ್ಯಕತೆ ಇದೆ ಎಂದು ವಾದಿಸುತ್ತಾರಂತೆ.