ವಿಲ್ಲುಪುರಂ: ಬಹಳಷ್ಟು ಜನ ಈಗ ಹೋಟೆಲ್‍ಗಳಿಂದ ಊಟದ ಪಾರ್ಸೆಲ್‍ಗಳನ್ನು ಖರೀದಿಸುತ್ತಾರೆ. ಆದರೆ ಅವರಲ್ಲಿ ಎಲ್ಲಾ ಪಲ್ಯಗಳನ್ನು ಸೇರಿಸಲಾಗಿದೆಯೇ ಎಂದು ಕೆಲವೇ ಜನ ಮಾತ್ರ ಪರಿಶೀಲಿಸುತ್ತಾರೆ. ಒಂದು ವೇಳೆ ಆ ಊಟ ಚೆನ್ನಾಗಿಲ್ಲದಿದ್ದರೆ ಅಥವಾ ಅದರಲ್ಲಿ ಯಾವುದಾದರೂ ಪದಾರ್ಥವನ್ನು ಸೇರಿಸಿಲ್ಲವಾದರೆ ಅದಕ್ಕೆ ಹೋಟೆಲ್ ಕೆಲಸಗಾರರನ್ನು ಅಥವಾ ಮಾಲೀಕರನ್ನು ಬೈಯುತ್ತಾರೆ. ಆದರೆ ಖರೀದಿಸಿದ ಊಟದ ಪಾರ್ಸೆಲ್ನಲ್ಲಿ ಉಪ್ಪಿನಕಾಯಿ ಹಾಕದ ಕಾರಣ ಹೋಟೆಲ್ ಮಾಲೀಕರು ಗ್ರಾಹಕರಿಗೆ 35,000 ರೂ.ಗಳ ದಂಡವನ್ನು ಪಾವತಿಸಬೇಕಾದ ಘಟನೆ ಮಾತ್ರ ವಿರಳ. ಈ ಸುದ್ದಿ ಈಗ ಎಲ್ಲೆಡೆ ವೈರಲ್ (Viral News) ಆಗಿದೆ.
ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವಲುದರೆಡ್ಡಿಯ ಆರೋಗಸ್ವಾಮಿ ಎಂಬ ವ್ಯಕ್ತಿ ವಿಲ್ಲುಪುರಂ ಹೋಟೆಲ್ ನೀಡಿದ ಊಟದಲ್ಲಿ ಉಪ್ಪಿನಕಾಯಿ ಇಲ್ಲವೆಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಆತನಿಗೆ 35,000 ರೂ. ದಂಡ ತೆರಬೇಕಾಗಿದೆ. ಈ ಘಟನೆ ನವೆಂಬರ್ 28, 2022ರಂದು ನಡೆದಿತ್ತು. ಆರೋಗಸ್ವಾಮಿ ತನ್ನ ಸಂಬಂಧಿಯ ಪುಣ್ಯತಿಥಿಯಂದು ವೃದ್ಧಾಶ್ರಮಕ್ಕೆ ನೀಡಲು ಆಹಾರ ಪ್ಯಾಕೆಟ್‍ಗಳನ್ನು ಪಾರ್ಸೆಲ್‍ಗಳಾಗಿ ಖರೀದಿಸಲು ನಿರ್ಧರಿಸಿದ್ದರು. ಇದಕ್ಕಾಗಿ ಅವರು ವಿಲ್ಲುಪುರಂನ ಬಾಲಮುರುಗನ್ ರೆಸ್ಟೋರೆಂಟ್‍ಗೆ ತೆರಳಿ ಊಟದ ದರ ವಿಚಾರಿಸಿದ್ದರು. ಹೋಟೆಲ್ ಮಾಲೀಕರು ಊಟಕ್ಕೆ 70 ರೂಪಾಯಿ, ಪ್ರತಿ ಪಾರ್ಸೆಲ್ ಊಟಕ್ಕೆ 80 ರೂಪಾಯಿ ಎಂದು ಮಾಹಿತಿ ನೀಡಿದ್ದರು. ಪಾರ್ಸೆಲ್‍ನಲ್ಲಿ 11 ರೀತಿಯ ಭಕ್ಷ್ಯಗಳು ಇರುತ್ತವೆ ಎಂದೂ ಅವರಿಗೆ ತಿಳಿಸಲಾಯಿತು.
ಅದರಂತೆ 25 ಊಟದ ಪ್ಯಾಕ್‍ಗಳನ್ನು ಆರ್ಡರ್ ಮಾಡಿದ್ದರು. 2000 ರೂ.ಗಳನ್ನು ಮುಂಗಡವಾಗಿ ಪಾವತಿಸಿದ್ದರು. ಅದರಂತೆ ಮರುದಿನ, ಪಾರ್ಸೆಲ್ ಅನ್ನು ಸಹ ತಲುಪಿಸಲಾಯಿತು. ಬಿಲ್ ಕೇಳಿದಾಗ, ಅಂಗಡಿಯವರು ಅದನ್ನು ಕಾಗದದಲ್ಲಿ ಬರೆದು ನೀಡಿದರು. ಆದರೆ ವೃದ್ಧಾಶ್ರಮದಲ್ಲಿ ಪಾರ್ಸೆಲ್‍ಗಳನ್ನು ತಲುಪಿಸುವಾಗ, ಊಟದಲ್ಲಿ ಉಪ್ಪಿನಕಾಯಿ ಇಲ್ಲ ಎಂದು ಅವರಿಗೆ ತಿಳಿಯಿತು. ಆರೋಗಸ್ವಾಮಿ ತಕ್ಷಣ ಹೋಟೆಲ್‍ಗೆ ಬಂದು ವಿಚಾರಿಸಿದರು.
ಉಪ್ಪಿನಕಾಯಿಯನ್ನು ಪಾರ್ಸೆಲ್‍ನಿಂದ ಕೈಬಿಡಲಾಗಿದೆ ಎನ್ನುವುದನ್ನು ಹೋಟೆಲ್ ಮಾಲೀಕರು ಒಪ್ಪಿಕೊಂಡರು. ಆಗ ಆರೋಗಸ್ವಾಮಿ 25 ಪ್ಯಾಕೆಟ್ ಉಪ್ಪಿನಕಾಯಿಯ ಬೆಲೆಯನ್ನು ಮರುಪಾವತಿಸಲು ಕೇಳಿದರು. ಆದರೆ ಹೋಟೆಲ್ ಮಾಲೀಕರು ಪಾವತಿಸಲು ನಿರಾಕರಿಸಿದರು. ಇದು ಅವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಆರೋಗಸ್ವಾಮಿ ವಿಲ್ಲುಪುರಂ ಜಿಲ್ಲಾ ಗ್ರಾಹಕರ ಕುಂದುಕೊರತೆ ಸಮಿತಿಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ಅಧ್ಯಕ್ಷ ಸತೀಶ್ ಕುಮಾರ್, ಸದಸ್ಯರಾದ ಮೀರಾ ಮೊಯಿಟೀನ್ ಮತ್ತು ಅಮಲಾ, ಪಾರ್ಸೆಲ್ ಆಗಿ ಖರೀದಿಸಿದ ಊಟದಲ್ಲಿ ಉಪ್ಪಿನಕಾಯಿ ಇಲ್ಲದಿರುವುದು ಹೋಟೆಲ್ ಸೇವೆಯಲ್ಲಾದ ಕೊರತೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಅದಕ್ಕಾಗಿ ಪರಿಹಾರವಾಗಿ 30,000 ರೂ., ವ್ಯಾಜ್ಯ ವೆಚ್ಚಕ್ಕಾಗಿ 5,000 ರೂ., ಉಪ್ಪಿನಕಾಯಿಗೆ 25 ರೂ. ಪರಿಹಾರದ ಮೊತ್ತವನ್ನು ಪಾವತಿಸಲು ಹೋಟೆಲ್ ಮಾಲೀಕರಿಗೆ ಆದೇಶಿಸಿದ್ದಾರೆ. ಮತ್ತು ಅದನ್ನು ಪಾವತಿಸಲು 45 ದಿನಗಳ ಕಾಲಾವಕಾಶ ನೀಡಲಾಗಿದೆ.
ಇದನ್ನೂ ಓದಿ: ಸಿಂಧೂರ ಹಚ್ಚುವಾಗ ಕುಸಿದುಬಿದ್ದ ವಧು; ಎದ್ದೂಬಿದ್ದು ಓಡಿದ ವರ!
ಇದನ್ನು ಪಾವತಿಸದಿದ್ದರೆ, ತಿಂಗಳಿಗೆ ಶೇಕಡಾ 9ರಷ್ಟು ಹೆಚ್ಚುವರಿ ಬಡ್ಡಿ ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಗ್ರಾಹಕರ ಕುಂದುಕೊರತೆ ಸಮಿತಿ ಎಚ್ಚರಿಸಿದೆ. ಈ ಆರೋಗಸ್ವಾಮಿ ಅವರು ಗ್ರಾಹಕರ ಕಲ್ಯಾಣ ಸಂಘದ ರಾಜ್ಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.