Site icon Vistara News

Viral News: ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೇಳೆ ಅಚಾತುರ್ಯ; ದೃಷ್ಟಿ ಕಳೆದುಕೊಂಡ 16 ರೋಗಿಗಳು

Viral News

ಕೋಲ್ಕೊತಾ: ಕಣ್ಣು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದುದು. ಕಣ್ಣು ಕಾಣದಿದ್ದರೆ ಜೀವನದಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಇದರಿಂದ ನಾವು ಬೇರೆಯವರ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಹಾಗಾಗಿ ಕಣ್ಣು ಇಲ್ಲದ ಜೀವನ ನರಕ ಎನ್ನಬಹುದು. ಹಾಗಾಗಿ ಕಣ್ಣಿನ ಶಸ್ತ್ರಚಿಕಿತ್ಸೆಗೆ (Eye Surgery) ಒಳಗಾಗುವವರು ತುಂಬಾ ಎಚ್ಚರಿಕೆಯಿಂದಿರಬೇಕು. ಅದಕ್ಕಾಗಿ ಉತ್ತಮ ಆಸ್ಪತ್ರೆಗಳನ್ನೇ ಆಯ್ಕೆ ಮಾಡಿ. ಇಲ್ಲವಾದರೆ ಸಮಸ್ಯೆಯಾಗಬಹುದು. ಅಂತಹದೊಂದು ಆಘಾತಕಾರಿ ಘಟನೆ ಇದೀಗ ಕೋಲ್ಕೊತಾ (Calcutta) ಆಸ್ಪತ್ರೆಯೊಂದರಲ್ಲಿ ಬೆಳಕಿಗೆ ಬಂದಿದೆ. ಈ ಸುದ್ದಿ ವೈರಲ್‌ (Viral News) ಆಗಿದೆ.

ಪಶ್ಚಿಮ ಬಂಗಾಳದ ಕೋಲ್ಕತಾದ ಮೆಟಿಯಾಬುರೋಜ್ ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ, ಸುಮಾರು 16 ಜನರು ದೃಷ್ಟಿ ಕಳೆದುಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದರಲ್ಲಿ ಕೆಲವು ರೋಗಿಗಳಿಗೆ ಸರಿಯಾಗಿ ನೋಡಲು ಸಹ ಸಾಧ್ಯವಾಗುತ್ತಿಲ್ಲ. ಆದರೆ ಈ ರೋಗಿಗಳ ಕಣ್ಣುಗಳಲ್ಲಿ ಶಿಲೀಂಧ್ರಗಳ ಸೋಂಕು ಕಾಣಿಸಿಕೊಂಡಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆದಾಗ್ಯೂ, ಈ ಸೋಂಕು ಹೇಗೆ ಸಂಭವಿಸಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಪರಿಸ್ಥಿತಿ ಆರೋಗ್ಯ ಇಲಾಖೆಯಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಾದ ಕೇವಲ ನಾಲ್ಕು ದಿನಗಳ ನಂತರ ರೋಗಿಗಳಲ್ಲಿ ಸೋಂಕುಗಳು ಕಾಣಿಸಿಕೊಂಡಿವೆ. ಆಸ್ಪತ್ರೆಯ ಹೊರಗೆ ಸೋಂಕು ತಗುಲಿದ್ದರೆ, ಸುಮಾರು ಮೂರು ವಾರಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದವು. ಹಾಗಾಗಿ ಶಸ್ತ್ರಚಿಕಿತ್ಸೆ ಸಮಯದಲ್ಲಿ ಬಳಸಿದ ಯಾವುದರಿಂದಾದರೂ ಉಪಕರಣಗಳಿಂದ ಸೋಂಕು ಬಂದಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸೋಂಕಿನ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ. ಆಸ್ಪತ್ರೆಯ ಆಪರೇಟಿಂಗ್ ಥಿಯೇಟರ್ ಅತ್ಯಾಧುನಿಕವಾಗಿದ್ದು, ಅಲ್ಲಿ ಸೋಂಕು ಹುಟ್ಟುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆದರೆ, ಶಿಲೀಂಧ್ರಗಳ ಸೋಂಕಿನ ನಿಖರವಾದ ಕಾರಣ ತಿಳಿದುಬಂದಿಲ್ಲ.ಇದಕ್ಕೆ ಕಾರಣವನ್ನು ಕಂಡುಹಿಡಿಯಲು ಮತ್ತು ಇಂತಹ ಘಟನೆಗಳು ಮತ್ತೆ ಆಗದಂತೆ ತಡೆಯಲು ಆರೋಗ್ಯ ಇಲಾಖೆ ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ಈ ಮಧ್ಯೆ, ಕಣ್ಣಿನ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಬ್ರಾಂಡೆಡ್‌ ಬ್ಯಾಗ್‌ ಕಂಪನಿಗಳ ಲೂಟಿ; ಸಾವಿರಕ್ಕೆ ಖರೀದಿಸಿ ಲಕ್ಷಕ್ಕೆ ಸೇಲ್‌!

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಆರೋಗ್ಯ ಕಾರ್ಯದರ್ಶಿ ನಾರಾಯಣ್ ಸ್ವರೂಪ್ ನಿಗಮ್ ಜುಲೈ 5ರಂದು ಮಧ್ಯಾಹ್ನ ತುರ್ತು ವಿಡಿಯೊ ಕಾನ್ಫರೆನ್ಸ್ ಅನ್ನು ಆಯೋಜಿಸಿದ್ದಾರೆ. ಈ ಸಭೆಗೆ ರಾಜ್ಯಾದ್ಯಂತ 104 ಕಣ್ಣಿನ ಆಸ್ಪತ್ರೆಗಳ ಅಧಿಕಾರಿಗಳು ಮತ್ತು ರಾಷ್ಟ್ರೀಯ ಅಂಧತ್ವ ನಿರ್ಮೂಲನಾ ಯೋಜನೆಯ ಸದಸ್ಯರು ಭಾಗವಹಿಸಿದ್ದರು. ನೇತ್ರಶಾಸ್ತ್ರ ಮತ್ತು ಮೈಕ್ರೋಬಯಾಲಜಿ ವಿಭಾಗಗಳ ಮುಖ್ಯಸ್ಥರು ಹಾಗೂ ನರ್ಸ್‍ಗಳು ಸಹ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.

Exit mobile version