ಕುಡಿದ ಮತ್ತಿನಲ್ಲಿ ಜನರು ಏನೇನೋ ಮಾತನಾಡುತ್ತಾರೆ. ಅವರು ಏನು ಹೇಳುತ್ತಿದ್ದಾರೆ ಎಂದು ಯಾರಿಗೂ ಅರ್ಥವಾಗುವುದಿಲ್ಲ! ಕುಡುಕರು ಮಾತನಾಡುವ ಶೈಲಿ ಯಾವ ರೀತಿ ಇರುತ್ತದೆ ಎಂದರೆ ಕೆಲವು ಜನರಿಗೆ ಅರ್ಥವಾಗದೆ ಇರುವ ಇಂಗ್ಲೀಷ್ ಭಾಷೆ ಮಾತನಾಡಿದ ಹಾಗೆಯೇ ಅನಿಸುತ್ತದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಮದ್ಯದ ಅಂಗಡಿಯೊಂದು ಗ್ರಾಹಕರನ್ನು ಆಕರ್ಷಿಸಲು ಜಾಹೀರಾತನ್ನು ನೀಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿ ಇದೀಗ ಮದ್ಯದಂಗಡಿ ಮಾಲೀಕನಿಗೆ ಸಂಕಷ್ಟವನ್ನುಂಟುಮಾಡಿದೆ.
ಕುಡಿದ ಮತ್ತಿನಲ್ಲಿ ಜನರು ತೊದಲು ಮಾತನಾಡುವುದನ್ನೇ ಇಂಗ್ಲಿಷ್‍ನಲ್ಲಿ ಮಾತನಾಡುವ ಶೈಲಿಯಂದು ಹೇಳಿ ಜಾಹೀರಾತನ್ನು ಹಾಕಿದ್ದಕ್ಕಾಗಿ ಮಧ್ಯಪ್ರದೇಶದ ಮದ್ಯದಂಗಡಿ ಮಾಲೀಕರಿಗೆ 10,000 ರೂ.ಗಳ ದಂಡ ವಿಧಿಸಲಾಗಿದೆ. ಬುರ್ಹಾನ್ಪುರ ಜಿಲ್ಲೆಯ ನಚನ್‍ಖೇಡಾದಲ್ಲಿರುವ ಮದ್ಯದಂಗಡಿಯ ಬಳಿ ಮಾಲೀಕ ” ಇಂಗ್ಲಿಷ್ ಬೋಲ್ನಾ ಸೀಖೇʼʼ (ಇಂಗ್ಲಿಷ್ ಮಾತನಾಡಲು ಕಲಿಯಿರಿ) ಎಂಬ ಸಂದೇಶವನ್ನು ಬರೆದಿರುವ ಬ್ಯಾನರ್ ಹಾಕಿದ್ದ. ಈ ಸಂದೇಶದ ಕೆಳಗೆ ಬಾಣವೊಂದನ್ನು ಬಿಡಿಸಿದ್ದು, ಅದು ಮದ್ಯದಂಗಡಿಯನ್ನು ತೋರಿಸುತ್ತಿತ್ತು. ಈ ಬ್ಯಾನರ್ ನ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಜಿಲ್ಲಾಡಳಿತದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಬುರ್ಹಾಂಪುರ ಜಿಲ್ಲಾಧಿಕಾರಿ ಶನಿವಾರ ಮದ್ಯದಂಗಡಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಅಬಕಾರಿ ಇಲಾಖೆ ಮದ್ಯದಂಗಡಿ ಮಾಲೀಕನಿಗೆ ನೋಟಿಸ್ ನೀಡಿದೆ.
ಇದಕ್ಕೆ ಉತ್ತರಿಸಿದ ಅಂಗಡಿ ಮಾಲೀಕ, ತನ್ನ ಅಂಗಡಿಯಿಂದ 40-5೦ ಅಡಿ ದೂರದಲ್ಲಿರುವ ಇನ್ನೊಬ್ಬ ವ್ಯಕ್ತಿಯ ಖಾಸಗಿ ಜಮೀನಿನಲ್ಲಿ ಬ್ಯಾನರ್ ಹಾಕಲಾಗಿದೆ. ಹಾಗಾಗಿ ಇದು ಬೇರೆ ಯಾರೋ ಪಿತೂರಿ ಮಾಡಿ ಹೀಗೆ ಮಾಡಿದ್ದಾರೆ ಎಂದು ಸಮರ್ಥನೆ ನೀಡಿದ್ದಾನೆ. ಆದರೆ ಅಧಿಕಾರಿಗಳು ಆತ ಮದ್ಯದ ಪರವಾನಗಿಯ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ 10,000 ರೂ.ಗಳ ದಂಡ ವಿಧಿಸಿದರು ಎಂಬುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ಪತ್ನಿಗೆ ಮಕ್ಕಳಾಗಿಲ್ಲ ಎಂದು ಮಾವನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ!
ಈ ಬ್ಯಾನರ್ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಯುವಕರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ, ಅವರು “ಇಂಗ್ಲಿಷ್ ಕಲಿಯಿರಿ” ಎಂಬ ಸಂದೇಶದಿಂದ ಪ್ರಭಾವಿತರಾಗಬಹುದು ಮತ್ತು ಮದ್ಯದಂಗಡಿಗೆ ಪ್ರವೇಶಿಸಿ ಮದ್ಯಪಾನ ಮಾಡಬಹುದು ಎಂದು ಕಿಡಿಕಾರಿದ್ದಾರೆ. ಅಲ್ಲದೇ ಇದು ಸ್ಪೋಕನ್ ಇಂಗ್ಲಿಷ್ ಕೋಚಿಂಗ್ ಸೆಂಟರ್‌ನ ಜಾಹೀರಾತಿನಂತೆ ಕಾಣುವುದರಿಂದ ಇದು ಜನರನ್ನು ದಾರಿತಪ್ಪಿಸುವ ಸಂಚು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಪೋಟೊ ನೆಟ್ಟಿಗರಲ್ಲಿ ನಗುವನ್ನುಂಟುಮಾಡಿದೆ ಎನ್ನಲಾಗಿದೆ.