ಕೆಲವು ಹಳ್ಳಿ ಪ್ರದೇಶಗಳಲ್ಲಿ ಹಸು, ಎಮ್ಮೆ, ಮುಂತಾದ ಪ್ರಾಣಿಗಳನ್ನು ಕಳ್ಳತನ ಮಾಡುವುದು ಸಾಮಾನ್ಯ. ಇಂತಹ ಪ್ರಕರಣಗಳಲ್ಲಿ ಆ ಪ್ರಾಣಿ ಯಾರದೆಂದು ಪತ್ತೆ ಹಚ್ಚುವುದು ಬಹಳ ಕಷ್ಟದ ಕೆಲಸ. ಯಾಕೆಂದರೆ ಎಲ್ಲಾ ಪ್ರಾಣಿಗಳು ನೋಡಲು ಬಹುತೇಕ ಒಂದೇ ರೀತಿ ಇರುತ್ತವೆ. ಆದರೆ ಉತ್ತರ ಪ್ರದೇಶದ ಮಹೇಶ್‍ಗಂಜ್ ಠಾಣಾ ಪೊಲೀಸರು ಇಂತಹ ಪ್ರಕರಣವನ್ನು ಬಹಳ ಸುಲಭವಾಗಿ ಬಗೆಹರಿಸಿದ್ದಾರೆ. ಠಾಣೆಯಲ್ಲಿ ಎಮ್ಮೆ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು ಎಮ್ಮೆ ಮಾಲೀಕನೆಂದು ಕಿತ್ತಾಡುತ್ತಿದ್ದ ಹಿನ್ನೆಲೆಯಲ್ಲಿ ಎಮ್ಮೆ ಯಾರದೆಂದು ಎಂದು ಕಂಡುಕೊಳ್ಳಲು ಪೊಲೀಸರು ಹೊಸ ತಂತ್ರವನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಇದು ಈಗ ಎಲ್ಲಾ ಕಡೆ ವೈರಲ್ (Viral News) ಆಗಿದೆ.
ಉತ್ತರ ಪ್ರದೇಶದ ಪ್ರತಾಪ್‍ಗಢ ಜಿಲ್ಲೆಯ ಮಹೇಶ್‍ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಯ್ ಅಸ್ಕರನ್ಪುರ ಗ್ರಾಮದ ನಿವಾಸಿ ನಂದಲಾಲ್ ಸರೋಜ್ ಅವರ ಎಮ್ಮೆ ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದು, ದಾರಿ ತಪ್ಪಿದ ಎಮ್ಮೆಯನ್ನು ಪುರೆ ಹರಿಕೇಶ್ ಗ್ರಾಮದ ನಿವಾಸಿ ಹನುಮಾನ್ ಸರೋಜ್ ಎಂಬವರು ಕಟ್ಟಿಹಾಕಿಕೊಂಡಿದ್ದರು.
ಮೂರು ದಿನಗಳ ನಂತರ ನಂದಲಾಲ್ ತಮ್ಮ ಎಮ್ಮೆಯನ್ನು ಹನುಮಾನ್ ಮನೆಯಲ್ಲಿ ಪತ್ತೆಹಚ್ಚಿದ್ದರು. ಆದರೆ ಹನುಮಾನ್ ಎಮ್ಮೆಯನ್ನು ಹಿಂದಿರುಗಿಸಲು ನಿರಾಕರಿಸಿದರು. ನಂತರ ನಂದಲಾಲ್ ಮಹೇಶ್‍ಗಂಜ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಹನುಮಾನ್ ಸರೋಜ್ ವಿರುದ್ಧ ದೂರು ದಾಖಲಿಸಿದ್ದಾರೆ. ಆಗ ಪೊಲೀಸರು ಗುರುವಾರ ಇಬ್ಬರೂ ಹಕ್ಕುದಾರರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದಾರೆ. ಆದರೆ ಈ ವಿಷಯದ ಬಗ್ಗೆ ಹಲವಾರು ಗಂಟೆಗಳ ಕಾಲ ಪಂಚಾಯತಿ ನಡೆದಿದ್ದರೂ, ಇಬ್ಬರೂ ಎಮ್ಮೆಯನ್ನು ತಮ್ಮದು ಎಂದು ಹೇಳಿಕೊಳ್ಳುತ್ತಲೇ ಇದ್ದರು. ಆಗ ಮಹೇಶ್‍ಗಂಜ್ ಪೊಲೀಸ್ ಠಾಣೆಯ ಎಸ್ಎಚ್ಒ ಶ್ರವಣ್ ಕುಮಾರ್ ಸಿಂಗ್ ಅವರು ಈ ವಿವಾದವನ್ನು ಪರಿಹರಿಸಲು ಒಂದು ಮಾರ್ಗವನ್ನು ಸೂಚಿಸಿದರು.
ಇದನ್ನೂ ಓದಿ: ಕದ್ದುಮುಚ್ಚಿ ಸರಸವಾಡುತ್ತಿದ್ದ ಮಹಿಳೆ ಸಿಕ್ಕಿಬಿದ್ದಾಗ ಗಂಡನನ್ನೇ ಕೊಂದಳು!
ಪಂಚಾಯತಿಯಿಂದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದ ಕಾರಣ, ಪೊಲೀಸರು ತಮ್ಮ ಮಾಲೀಕನನ್ನು ಪತ್ತೆಹಚ್ಚುವ ನಿರ್ಧಾರವನ್ನು ಎಮ್ಮೆಗೆ ಬಿಟ್ಟರು ಮತ್ತು ಇದಕ್ಕೆ ಗ್ರಾಮಸ್ಥರು ಸಹ ಒಪ್ಪಿಗೆ ನೀಡಿದರು. ನಂತರ ಎಮ್ಮೆಯನ್ನು ಒಂಟಿಯಾಗಿ ರಸ್ತೆಯಲ್ಲಿ ಬಿಟ್ಟರು. ಸ್ವಲ್ಪ ಸಮಯದ ನಂತರ, ಎಮ್ಮೆ ತನ್ನ ಮಾಲೀಕರಾದ ನಂದಲಾಲ್ ಸರೋಜ್ ಮನೆಗೆ ನಡೆದುಕೊಂಡು ಹೋಯಿತು. ಆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ.
ಈ ಪ್ರಕರಣದಲ್ಲಿ ಎಮ್ಮೆ ತನ್ನದೆಂದು ಸುಳ್ಳು ಹೇಳಿದ ಹನುಮಾನ್ ಅವರನ್ನು ಗ್ರಾಮಸ್ಥರು ಮತ್ತು ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ.