Site icon Vistara News

Viral News: ಮದುವೆಯಾದ ಮೂರೇ ಮೂರು ನಿಮಿಷದೊಳಗೆ ವಿಚ್ಛೇದನ! ಕಾರಣ ವಿಚಿತ್ರ!

Viral News


ಮದುವೆ ಎನ್ನುವುದು ಹೆಣ್ಣು ಗಂಡು ಇಬ್ಬರ ಜೀವನದಲ್ಲಿ ಬಹಳ ವಿಶೇಷವಾದುದು. ಹೆಣ್ಣು ಗಂಡು ಇಬ್ಬರೂ ದಂಪತಿಯಾಗಿ ಒಬ್ಬರನೊಬ್ಬರು ಅರಿತುಕೊಂಡು ಕಷ್ಟ ಸುಖ ಹಂಚಿಕೊಂಡು ದೀರ್ಘ ಕಾಲ ಜೀವನ ನಡೆಸಲೆಂದು ನಮ್ಮ ಹಿರಿಯರು ಮದುವೆ ಮಾಡಿಸುತ್ತಾರೆ. ಆದರೆ ಇಂದಿನ ಕಾಲದಲ್ಲಿ ನೂರು ದಿನ ಬಾಳುವುದನ್ನು ಬಿಡಿ, ಮೂರು ದಿನವೂ ಕೂಡ ಈ ಸಂಬಂಧ ಉಳಿಯುತ್ತಿಲ್ಲ. ಅಂತಹದೊಂದು ಘಟನೆ ಇದೀಗ ಕುವೈತ್‌ನಲ್ಲಿ ನಡೆದಿದೆ. ಮದುವೆ ಸಮಾರಂಭ ಮುಗಿಸಿ ಹೊರಹೋಗುವಾಗ ವರನು ವಧುವನ್ನು ಅವಮಾನಿಸಿದ ಕಾರಣ ಗಂಡ ಮತ್ತು ಹೆಂಡತಿ ಇಬ್ಬರು ಮದುವೆಯಾದ ಕೇವಲ ಮೂರು ನಿಮಿಷಗಳಲ್ಲೇ ವಿಚ್ಛೇದನ ಪಡೆದಿದ್ದಾರೆ. ಈ ಘಟನೆ 2019ರಲ್ಲಿ ನಡೆದಿದ್ದು ಎನ್ನಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈಗ ಮತ್ತೆ ವೈರಲ್(Viral News) ಆಗುತ್ತಿದೆ.

ಮದುವೆಯ ಆಚರಣೆಗಳು ಮುಗಿದ ನಂತರ, ದಂಪತಿ ನ್ಯಾಯಾಲಯದಿಂದ ಹೊರಗೆ ಹೋಗುತ್ತಿರುವಾಗ ವಧು ಕಾಲು ಜಾರಿಬಿದ್ದಳು. ಆಗ ವರನು ಅವಳ ಕೈ ಹಿಡಿದು ಮೇಲೆತ್ತುವ ಬದಲು ಕೆಳಗೆ ಬಿದ್ದಿದ್ದಕ್ಕಾಗಿ ‘ಸ್ಟುಪಿಡ್’ ಎಂದು ಹೇಳಿದ್ದಾನೆ. ಇದನ್ನು ಕೇಳಿದ ವಧು ಕೋಪಗೊಂಡು ತಕ್ಷಣ ತಮ್ಮ ಮದುವೆಯನ್ನು ರದ್ದುಗೊಳಿಸುವಂತೆ ನ್ಯಾಯಾಧೀಶರನ್ನು ಕೇಳಿದ್ದಾಳೆ. ನ್ಯಾಯಾಧೀಶರು ಇದಕ್ಕೆ ಒಪ್ಪಿಗೆ ನೀಡಿದ್ದು, ಅವರು ಮದುವೆಯಾದ ಕೇವಲ ಮೂರು ನಿಮಿಷಗಳ ನಂತರ ವಿಚ್ಛೇದನ ಪಡೆದಿದ್ದಾರೆ.

ಮೈಕ್ರೋಬ್ಲಾಗಿಂಗ್ ಪ್ಲಾಟ್‍ಫಾರ್ಮ್‍ನಲ್ಲಿ ಈ ಸುದ್ದಿಯನ್ನು ಹಂಚಿಕೊಳ್ಳಲಾಗಿದ್ದು. ಇದಕ್ಕೆ ಹಲವು ಕಾಮೆಂಟ್‌ಗಳು ಬಂದಿವೆ. ಅದರಲ್ಲಿ ಪತಿ ಪತ್ನಿ ಒಬ್ಬರಿಗೊಬ್ಬರು ಗೌರವ ನೀಡದಿದ್ದರೆ ಆ ಸಂಬಂಧ ದೀರ್ಘಕಾಲ ಇರುವುದಿಲ್ಲ ಎಂದು ನೆಟ್ಟಿಗರು ಬರೆದಿದ್ದಾರೆ. ಹಾಗೇ ಕೆಲವರು ಪತಿ ಆರಂಭದಲ್ಲಿ ತನ್ನ ಪತ್ನಿಯ ಜೊತೆ ಈ ರೀತಿ ವರ್ತಿಸಿದರೆ, ಅಂತವನನ್ನು ಬಿಡುವುದು ಉತ್ತಮ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಕ್ಕಳ ಹಸಿವು ನೀಗಿಸಲು ಸೈನಿಕರೆದುರು ಬೆತ್ತಲಾಗುತ್ತಿರುವ ಮಹಿಳೆಯರು!

ಇಂತಹ ಘಟನೆ ಇದೇ ಮೊದಲಲ್ಲ. ಈ ಹಿಂದೆ 2004ರಲ್ಲಿ ಯುನೈಟೆಡ್ ಕಿಂಗ್‌ಡಮ್‍ನಲ್ಲಿ ದಂಪತಿ ಮದುವೆಯಾದ ಕೇವಲ 90 ನಿಮಿಷಗಳ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಗ್ರೇಟರ್ ಮ್ಯಾಂಚೆಸ್ಟರ್‌ನ ಸ್ಟಾಕ್ಪೋರ್ಟ್ ರಿಜಿಸ್ಟರ್ ಕಚೇರಿಯಲ್ಲಿ ಸ್ಕಾಟ್ ಮೆಕಿ ಮತ್ತು ವಿಕ್ಟೋರಿಯಾ ಆಂಡರ್ಸನ್ ಮದುವೆ ಆಚರಣೆ ಮುಗಿದ 90ನಿಮಿಷಗಳ ನಂತರ, ಸಂಬಂಧವನ್ನು ಕೊನೆಗೊಳಿಸಿದ್ದಾರೆ. ವಧುವಿಗೆ ತಿನ್ನಲು ವರ ಟೋಸ್ಟ್ ನೀಡಿದ್ದರಿಂದ ಕೋಪಗೊಂಡ ಆಕೆ ಆರತಕ್ಷತೆಯಲ್ಲಿ ಅವನ ತಲೆಗೆ ಹೊಡೆದಿದ್ದಾಳೆ. ಇದರಿಂದ ಇಬ್ಬರ ನಡುಗೆ ಜಗಳವಾಗಿ ಅದು ವಿಚ್ಛೇದನಕ್ಕೆ ಕಾರಣವಾಯ್ತು ಎನ್ನಲಾಗಿದೆ.

Exit mobile version