ಇತ್ತೀಚಿನ ದಿನಗಳಲ್ಲಿ ಜನರಿಗೆ ಫೋಟೊ, ಸೆಲ್ಫಿ ಹುಚ್ಚು ಹೆಚ್ಚಾಗಿದೆ. ಯಾವುದೇ ಸ್ಥಳಗಳಿಗೆ ಭೇಟಿ ನೀಡಿದರೂ ಕೂಡ ಸ್ಥಳವನ್ನು ನೋಡುವ ಬದಲು ಸೆಲ್ಫಿ ತೆಗೆದುಕೊಳ್ಳುವುದರಲ್ಲೇ ಬ್ಯುಸಿಯಾಗಿರುತ್ತಾರೆ. ಆ ಫೋಟೊವನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡುವ ತನಕ ಅವರಿಗೆ ಸಮಾಧಾನ ಇರುವುದಿಲ್ಲ. ಇದೀಗ ದಂಪತಿ ಇಬ್ಬರು ಫೋಟೊಶೂಟ್ ಮಾಡಲು ಹೋಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video )ಆಗಿದೆ.
ಜುಲೈ 12ರಂದು ದಂಪತಿ ರಾಜಸ್ಥಾನದ ಪಾಲಿಯಲ್ಲಿರುವ ಹೆರಿಟೇಜ್ ಸೇತುವೆಯ ರೈಲು ಹಳಿಯಲ್ಲಿ ಫೋಟೊಶೂಟ್ ಮಾಡಲು ಹೋಗಿ 90 ಅಡಿ ಆಳದ ಕಮರಿಗೆ ಹಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಹುಲ್ ಮೇವಾಡಾ (22) ಮತ್ತು ಅವರ ಪತ್ನಿ ಜಾಹ್ನವಿ (20) ಗಾಯಗೊಂಡ ದಂಪತಿ. ಬಾಗ್ಡಿ ನಗರದ ಕಲಾಲ್ ಕಿ ಪಿಪಾಲಿಯಾನ್ ನಿವಾಸಿಗಳಾದ ಈ ದಂಪತಿ ಬೈಕಿನಲ್ಲಿ ಗೋರ್ಮ್ಘಾಟ್‍ಗೆ ಪ್ರಯಾಣಿಸುತ್ತಿದ್ದರು. ಆಗ ಮೀಟರ್-ಗೇಜ್ ರೈಲು ಸೇತುವೆಯಲ್ಲಿ ತಮ್ಮ ಫೋಟೋಶೂಟ್ ಮಾಡಿಕೊಳ್ಳಲು ಮುಂದಾಗಿದ್ದಾರೆ, ಆ ವೇಳೆ ರೈಲು ಬಂದಿದ್ದು, ಅವರು ಸಮೀಪಿಸುತ್ತಿರುವ ರೈಲನ್ನು ನೋಡಿ ಭಯಭೀತರಾಗಿ ಕಮರಿಗೆ ಹಾರಿದ್ದಾರೆ. ರಾಹುಲ್ ಅವರ ಬೆನ್ನುಮೂಳೆಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜೋಧಪುರಕ್ಕೆ ಸ್ಥಳಾಂತರಿಸಲಾಗಿದೆ.
राजस्थान के पाली जिले में एक बड़ा हादसा हुआ। राहुल मेवड़ा अपनी पत्नी जाह्नवी संग हेरिटेज पुल पर फोटो शूट करा रहे थे। तभी ट्रेन आ गई। ट्रेन से बचने को दोनों 90 फीट गहरी खाई में कूद गए। दोनों का इलाज जारी है।
— Sachin Gupta (@SachinGuptaUP) July 14, 2024
🚨Disturbing Visual🚨 pic.twitter.com/WwDSTd5jrW
ಹಾಗೇ ಪತ್ನಿ ಜಾಹ್ನವಿ ಬಂಗಾರ್ ಅವರ ಕಾಲು ಮುರಿತಕ್ಕೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೊಂದಿಗೆ ಇದ್ದ ರಾಹುಲ್ ಅವರ ಸಹೋದರಿ ಮತ್ತು ಸೋದರ ಮಾವ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎನ್ನಲಾಗಿದೆ.
ಅಜ್ಮೀರ್ ರೈಲ್ವೆ ವಿಭಾಗದ ಹಿರಿಯ ವಾಣಿಜ್ಯ ವಿಭಾಗೀಯ ವ್ಯವಸ್ಥಾಪಕ ಸುನಿಲ್ ಕುಮಾರ್ ಮಹಾಲಾ ಅವರು ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ರೈಲಿನ ಲೋಕೋ ಪೈಲಟ್ ದಂಪತಿಯನ್ನು ಕಂಡಾಗ ಬ್ರೇಕ್ ಹಾಕಲು ಪ್ರಾರಂಭಿಸಿದರು, ಆದರೆ ಅವರು ಭಯದಿಂದ ಜಿಗಿದಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಫೋಟೊಶೂಟ್‍ಗಳಿಗಾಗಿ ರೈಲ್ವೆ ಸೇತುವೆಗಳಿಗೆ ಅನಧಿಕೃತವಾಗಿ ಪ್ರವೇಶಿಸುವವರ ವಿರುದ್ಧ ಸ್ಥಳೀಯ ಆಡಳಿತವು ಕಠಿಣ ಎಚ್ಚರಿಕೆ ನೀಡಿದ್ದು, ಉಲ್ಲಂಘಿಸುವವರಿಗೆ ಕಠಿಣ ಪರಿಣಾಮಗಳನ್ನು ವಿಧಿಸುವುದಾಗಿ ತಿಳಿಸಿದೆ.
ಇದನ್ನೂ ಓದಿ: ರಸ್ತೆಯಲ್ಲಿ ಬಾಲಕನನ್ನು ಅಟ್ಟಾಟಿಸಿ ದಾಳಿ ಮಾಡಿದ ಕೋತಿಗಳು; ಆತಂಕ ಮೂಡಿಸುವ ವಿಡಿಯೊ
ಈ ಘಟನೆಯ ವೀಡಿಯೊ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಂತಹ ಫೋಟೋಶೂಟ್‍ಗಳ ಸಮಯದಲ್ಲಿ ಸುರಕ್ಷತೆ ಮತ್ತು ಜವಾಬ್ದಾರಿಯ ಬಗ್ಗೆ ಆನ್‍ಲೈನ್‍ನಲ್ಲಿ ಚರ್ಚೆಗಳು ನಡೆಯುತ್ತಿವೆ. ಅಪಾಯಕಾರಿ ಸ್ಥಳಗಳಲ್ಲಿ ಫೋಟೊಗಳನ್ನು ತೆಗೆಯುವಾಗ ತಮ್ಮ ಸುರಕ್ಷತೆಗೆ ಆದ್ಯತೆ ನೀಡುವಂತೆ ಮತ್ತು ಜೀವವನ್ನು ಅಪಾಯಕ್ಕೆ ತಳ್ಳುವುದನ್ನು ತಪ್ಪಿಸಬೇಕೆಂದು ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದ್ದಾರೆ.