ಮುಂಬೈ: ಸೋಷಿಯಲ್ ಮೀಡಿಯಾಗಳಿಗಾಗಿ ರೀಲ್ಸ್ ಮಾಡುವ ಚಟ ಯುವಕ ಯುವತಿಗೆ ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ಇನ್ನೊಂದು ಘಟನೆ ಸಾಕ್ಷಿಯಾಗಿದೆ. ಇತ್ತೀಚೆಗಷ್ಟೇ ಪಾಳುಬಿದ್ದ ಕಟ್ಟಡದ ಮೇಲಿಂದ ಸ್ನೇಹಿತನ ಕೈಹಿಡಿದು ಇಳಿದು ಯುವತಿಯೊಬ್ಬಳು ರೀಲ್ ಮಾಡಿದ್ದು, ಈಗಾಗಲೇ ಆಕೆ ಹಾಗೂ ಆಕೆಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಚಲಿಸುವ ರೈಲಿನ ಕಂಪಾರ್ಟ್‌ಮೆಂಟ್ ತುದಿಯಲ್ಲಿ ನಿಂತು ಹುಡುಗಿಯೊಬ್ಬಳು ಉತ್ಸಾಹದಿಂದ ನೃತ್ಯ ಮಾಡುತ್ತಾ ರೀಲ್ಸ್ ಮಾಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಇದನ್ನು ನೋಡಿದವರು ಶಾಕ್ ಆಗಿದ್ದಾರೆ.
ಈ ವಿಡಿಯೊವನ್ನು ಮಿಥಿಲಾ ವಾಲಾ ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೇ ಅದಕ್ಕೆ ‘ರೀಲ್ ಮಾಡುವುದು ಜೀವನಕ್ಕಿಂತ ಮುಖ್ಯ’ ಎಂದು ವ್ಯಂಗ್ಯವಾಗಿ ಶೀರ್ಷಿಕೆ ನೀಡಿದ್ದಾರೆ. ಒಂದು ವೇಳೆ ಆಕೆ ರೈಲಿನಿಂದ ಕೆಳಗೆ ಬಿದ್ದು ಸತ್ತರೆ ಆಕೆಯ ಕುಟುಂಬದವರು ರೈಲ್ವೆ ಸಚಿವರನ್ನು ದೂಷಿಸುತ್ತಾರೆ ಮತ್ತು ಸರ್ಕಾರದಿಂದ ಭಾರೀ ಪರಿಹಾರವನ್ನು ಸಹ ತೆಗೆದುಕೊಳ್ಳುತ್ತಾರೆ. ಅಂತವರನ್ನು ಪತ್ತೆ ಹಚ್ಚಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಬೇಕು ಎಂದು ಅವರು ಬರೆದಿದ್ದಾರೆ. ಈ ವಿಡಿಯೊ ಪೋಸ್ಟ್ ಮಾಡಿದ 24 ಗಂಟೆಗಳಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ.
Making Reel is more important than life !!
— Amitabh Chaudhary (@MithilaWaala) June 20, 2024
If she fall down from the train and die, her family will blame Indian Railways and Rail Minister @AshwiniVaishnaw for the same and will even take heavy compensation from the govt .
Such people must be found and fined plus jailed… pic.twitter.com/CXkJU1HGKj
ಈ ವಿಡಿಯೊದಲ್ಲಿ ನೃತ್ಯ ಮಾಡಿದ ಹುಡುಗಿಗೆ ಚಲಿಸುವ ರೈಲಿನಲ್ಲಿ ನೃತ್ಯ ಮಾಡುವಾಗ ಆಕೆಯ ಮುಖದಲ್ಲಿ ಯಾವ ಭಯವೂ ಕಾಣಿಸುತ್ತಿರಲಿಲ್ಲ. ಆಕೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ರೀಲ್ ಮಾಡುವುದರಲ್ಲೇ ತಲ್ಲೀನಳಾಗಿದ್ದಾಳೆ. ಆಕೆ ಈಗ ಸುರಕ್ಷಿತವಾಗಿದ್ದರೂ ಕೂಡ ಸೋಷಿಯಲ್ ಮೀಡಿಯಾಗಳಿಗಾಗಿ ಇಂತಹ ಅಪಾಯಕಾರಿ ಸಾಹಸಗಳನ್ನು ಮಾಡುವುದು ತಪ್ಪು. ಈ ವಿಡಿಯೊ ನೋಡಿದ ವೀಕ್ಷಕರು ಶಾಕ್ ಆಗಿದ್ದು, ಆಕೆಯ ಕೃತ್ಯಕ್ಕೆ ಅನೇಕರು ಆಕೆಯ ಮೇಲೆ ಟೀಕೆಗಳ ಸುರಿಮಳೆ ಸುರಿಸಿದ್ದಾರೆ. ಅನೇಕರು ಆಕೆಗೆ ದಂಡ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡುತ್ತಾ ರೀಲ್ಸ್ ಮಾಡಿದ ಯುವತಿ ಅರೆಸ್ಟ್!
ಒಂದು ತಿಂಗಳ ಹಿಂದೆ ರಾಜಸ್ಥಾನದ ಕೋಟಾದಲ್ಲಿ ಇದೇರೀತಿಯ ಸೋಷಿಯಲ್ ಮೀಡಿಯಾದ ರೀಲ್ಸ್ ಅವಾಂತರವೊಂದು ನಡೆದಿದೆ. ಇದರಲ್ಲಿ 22 ವರ್ಷದ ಯುವಕನೊಬ್ಬ ರೀಲ್ಸ್ ಮಾಡಲು ಪಿಸ್ತೂಲನ್ನು ತಲೆಗೆ ಗುರಿಯಾಗಿಟ್ಟುಕೊಂಡು ಆಕಸ್ಮಿಕವಾಗಿ ಗುಂಡು ಹಾರಿ ಸಾವನಪ್ಪಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ.