Site icon Vistara News

Viral Video: ಪಿಸ್ತೂಲ್ ಹಿಡಿದು ಚಿನ್ನ ದೋಚಲು ಬಂದವರನ್ನು ಕೋಲು ಹಿಡಿದು ಓಡಿಸಿದ ಅಂಗಡಿ ಮಾಲೀಕ!

Viral Video


ಇತೀಚಿಗೆ ದರೋಡೆಕೋರರ ಹಾವಳಿ ಹೆಚ್ಚಾಗಿದ್ದು, ಹಾಡಹಗಲಿನಲ್ಲಿಯೇ ಚಿನ್ನದ ಅಂಗಡಿಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದಾರೆ. ಈ ಹಿಂದೆ ಅನೇಕ ಬಾರಿ ಚಿನ್ನದ ಅಂಗಡಿಗಳ ಮೇಲೆ ದಾಳಿ ಮಾಡಿ ಪಿಸ್ತೂಲ್ ತೋರಿಸಿ ದರೋಡೆ ಮಾಡಿದ ಪ್ರಕರಣಗಳು ಹಲವು ಬೆಳಕಿಗೆ ಬಂದಿದ್ದವು. ಆದರೆ ಇತ್ತೀಚೆಗೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿನ ಚಿನ್ನದ ಅಂಗಡಿಯ ಮೇಲೆ ನಡೆದ ಪ್ರಕರಣದಲ್ಲಿ ಮಾಲೀಕನ ಧೈರ್ಯ, ಸಾಹಸದಿಂದ ಕಳ್ಳರ ದರೋಡೆ ಪ್ರಯತ್ನ ವಿಫಲವಾಗಿದೆ ಎಂಬುದಾಗಿ ತಿಳಿದುಬಂದಿದೆ. ಮಾಲೀಕ ಬಂದೂಕು ಹಿಡಿದ ನಾಲ್ವರು ಕಳ್ಳರನ್ನು ನೋಡಿ ಹೆದರದೆ ಧೈರ್ಯಮಾಡಿ ಅವರ ಮೇಲೆ ಮರದ ಕೋಲಿನಿಂದ ಹಲ್ಲೆ ನಡೆಸಿದ ಕಾರಣ ಕಳ್ಳರು ಬಂದ ದಾರಿಗೆ ಸುಂಕವಿಲ್ಲ ಎಂದು ಓಡಿಹೋಗಿದ್ದಾರೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಪೊಲೀಸ್ ಮಾಹಿತಿ ಪ್ರಕಾರ, ತಮ್ಮ ಗುರುತನ್ನು ಮರೆಮಾಚಲು ಮುಖವಾಡ ಮತ್ತು ಹೆಲ್ಮೆಟ್ ಧರಿಸಿದ ನಾಲ್ವರು ಕಳ್ಳರು ಬುಧವಾರ ಬೆಳಿಗ್ಗೆ ಥಾಣೆಯ ಕಪುರ್ಬಾವಾಡಿ ಪ್ರದೇಶದ ಆಭರಣ ಅಂಗಡಿಗೆ ಪ್ರವೇಶಿಸಿದರು. ದರೋಡೆಕೋರರು ಬಂದೂಕುಗಳನ್ನು ಹೊಂದಿದ್ದು, ಅದರಿಂದ ಅಂಗಡಿ ಮಾಲೀಕರನ್ನು ಬೆದರಿಸಲು ಮತ್ತು ಚಿನ್ನದ ಆಭರಣಗಳನ್ನು ಕದಿಯಲು ಪ್ರಯತ್ನಿಸಿದರು.

ಆದರೆ, ಅಂಗಡಿ ಮಾಲೀಕರು ಧೈರ್ಯದಿಂದ ಬಿದಿರಿನ ಕೋಲನ್ನು ಹಿಡಿದು ಹಲ್ಲೆಕೋರರ ಮೇಲೆ ದಾಳಿ ಮಾಡಿದ್ದಾರೆ. ಬೆಳಿಗ್ಗೆ 11:30 ರ ಸುಮಾರಿಗೆ ಅಂಗಡಿ ಮಾಲೀಕರು ಅಂಗಡಿಯಲ್ಲಿ ಒಬ್ಬರೇ ಇದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ದರೋಡೆಕೋರರನ್ನು ಹೆದರಿಸುವುದನ್ನು ಬಿಟ್ಟು ಅಂಗಡಿ ಮಾಲೀಕನಿಗೆ ಬೇರೆ ದಾರಿ ಕಾಣಲಿಲ್ಲ. ಹಾಗಾಗಿ ಧೈರ್ಯಮಾಡಿ ಈ ಕೆಲಸಕ್ಕೆ ಮುಂದಾದ ಕಾರಣ ಅದರಿಂದ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ದಲಿತ ಬಾಲಕಿಯನ್ನು ಅಪಹರಿಸಿ ಇಸ್ಲಾಂಗೆ ಮತಾಂತರ; ಮುಸ್ಲಿಂ ಧರ್ಮಗುರು ಬಂಧನ

ಇಡೀ ಘಟನೆ ಅಂಗಡಿಯಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಹಿಡಿಯಲಾಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈಗ ಪೊಲೀಸರು ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಥಾಣೆ ಜಿಲ್ಲಾ ಪೊಲೀಸ್ ಮತ್ತು ಅಪರಾಧ ವಿಭಾಗವು ಶಂಕಿತರನ್ನು ಪತ್ತೆಹಚ್ಚಲು ಈ ವಿಷಯದಲ್ಲಿ ಕೆಲಸ ಮಾಡುತ್ತಿದೆ.

ಇಲ್ಲಿಯವರೆಗೆ, ಯಾರನ್ನೂ ಬಂಧಿಸಲಾಗಿಲ್ಲ, ಆದರೆ ದರೋಡೆ ಪ್ರಯತ್ನಕ್ಕೆ ಕಾರಣರಾದವರನ್ನು ಬಂಧಿಸಲು ಪೊಲೀಸರು ಸುಳಿವುಗಳನ್ನು ಪತ್ತೆ ಮಾಡುತ್ತಿದ್ದಾರೆ ಎನ್ನಲಾಗಿದೆ.

Exit mobile version